ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ)ವತಿಯಿಂದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ

ಮಡಿಕೇರಿ: ಗಾಳಿಬೀಡು ಸರಕಾರಿ ಪ್ರೌಢಶಾಲೆ 2020-2021 ನೇ ಸಾಲಿನಲ್ಲಿ ಶೇಕಡಾ 100 ಫಲಿತಾಂಶವನ್ನು ಪಡೆದಿದ್ದು ಈ ಸಾಧನೆಗೆ ಕಾರಣರಾದ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರು ಒಂದು ಮಹತ್ವದ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಆದ್ದರಿಂದ ಶಿಕ್ಷಕರ ಈ ತ್ಯಾಗವನ್ನು ಪರಿಗಣಿಸಿ ಡಿ.ಎಸ್.ಎಸ್ ಕೊಡಗಿನಾದ್ಯಂತ ಎಲ್ಲಾ ಸರಕಾರಿ‌ ಶಾಲೆಗಳಲ್ಲಿ ನೂರು ಶೇಕಡಾ ಸಾಧನೆ ಮಾಡಲು ಕಾರಣಕರ್ತರಾದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಕ್ತಿ ಪತ್ರಿಕೆಯ ಉಪಸಂಪಾದಕರಾದ ಕುಡೆಕಲ್ ಸಂತೋಷ್ ಮಾತನಾಡಿ,

‘ಯಾವುದೇ ವ್ಯಕ್ತಿ ಉನ್ನತ ಸ್ಥಾನದಲ್ಲಿದ್ದಾರೆಂದರೆ ಅದಕ್ಕೆ ಮುಖ್ಯ ಕಾರಣ ಗುರುಗಳು. ನಾವು ಏನಾದರು ಒಂದು ಸಾಧನೆಯನ್ನು ಮಾಡಬೇಕೆಂದರೆ ಅದಕ್ಕೆ ಶಿಕ್ಷಣ ಮುಖ್ಯ. ಈ ಶಿಕ್ಷಣವನ್ನು ನಾವು ಕಲಿತದ್ದು ಶಿಕ್ಷಕರಿಂದ. ಆದ್ದರಿಂದ ನಮಗೆ ವಿದ್ಯಾಭ್ಯಾಸ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಲಾಗದು ಎಂದರು. ಹಾಗು ದ.ಸಂ.ಸ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಶ್ರೇಷ್ಠವಾದುದು. ಕಾರ್ಯಕ್ರಮವನ್ನು ನಡೆಸಲು ಮಾಡಿದ ಯೋಜನೆ ಪ್ರಶಂಸನೀಯ’ ಎಂದರು.

ಮುಖ್ಯ ಅಥಿತಿಗಳಾದ ಸುರಯ್ಯ ಅಬ್ರಾರ್ ಮಾತನಾಡಿ
ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಆದರೆ ಫಲಿತಾಂಶದ ವಿಚಾರಕ್ಕೆ ಬಂದಾಗ ಸರಕಾರಿ‌ ಶಾಲೆಗಳು ಯಾವ ಶಾಲೆಗಳಿಗೂ ಕಡಿಮೆ ಇಲ್ಲ ಎಂದರು.

ಜಿಲ್ಲಾ ಜೆ‌.ಡಿ.ಎಸ್ ಅಧ್ಯಕ್ಷರಾದ ಗಣೇಶ್ ಅವರು ಮಾತನಾಡುತ್ತಾ ಸರಕಾರಿ‌ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುವ ಮಕ್ಕಳು ಹೆಚ್ಚಾಗಿ ಸಾಧನೆ ಮಾಡುತ್ತಾರೆ ಎನ್ನುವ ವಿಚಾರ ಸಾರ್ವಕಾಲಿಕ. ವಿದ್ಯಾಭ್ಯಾಸದ ಗುಣಮಟ್ಟದ ವಿಚಾರಕ್ಕೆ ಬಂದಾಗ ಸರಕಾರಿ ಶಾಲೆ ಮೊದಲ ಸಾಲಿನಲ್ಲಿರುತ್ತದೆ ಎಂದರು.

ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಬೇಬಿ ಮ್ಯಾಥ್ಯೂ ಅವರು ಸರಕಾರಿ ಶಾಲೆ, ಶಾಲೆಯ ಶಿಕ್ಷಕರಿಗೆ ವಂದನೆಗಳನ್ನು ಅರ್ಪಿಸಿ ತಮ್ಮ ಮಾತನ್ನು ಆರಂಭಿಸಿದರು. ಸರಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮಾತ್ರ ಕಂಡುಬರುತ್ತದೆ ಆದರೆ ಯಾವುದೇ ಕಾರಣಕ್ಕೂ ಶಿಕ್ಷಣದ ಕೊರತೆ ಎದುರಾಗುವುದಿಲ್ಲ. ಶಿಕ್ಷಕರು ದೇಶದ ಅಭಿವೃದ್ಧಿಯ ಮೂಲ ಎಂದರು.

ಡಿ.ಎಸ್.ಎಸ್ ತಾಲ್ಲೂಕು ಸಂಚಾಲಕ ಎ.ಪಿ ದೀಪಕ್ ಮಾತನಾಡಿ ಶಿಕ್ಷಕರು ದೇವರಿಗೆ ಸಮಾನ. ಮಕ್ಕಳು ಶಿಕ್ಷಕರನ್ನು ಆರಾಧಿಸಬೇಕು ಎಂದರು. ಶಿಕ್ಷಕರಲ್ಲೊಬ್ಬರಾದ ಕುದ್ಮುಲ್ ರಂಗರಾವ್ ತಮ್ಮ ದಿನಮಾನಗಳಲ್ಲಿ ನನ್ನ ವಿದ್ಯಾರ್ಥಿಗಳು ದೊಡ್ಡ ಸರಕಾರಿ ಅಧಿಕಾರಿಯಾಗಿ ನನ್ನ ಊರಿನ ರಸ್ತೆಯಲ್ಲಿ ಕಾರಿನಲ್ಲಿ ಸಾಗಬೇಕು. ಆ ಕಾರು ಸಾಗಿದ ಹಾದಿಯ ಧೂಳು ನನ್ನ ತಲೆಗೆ ತಾಕಬೇಕು ಆಗ ನನ್ನ‌ ಜೀವನ ಸಾರ್ಥಕವಾಗುವುದು ಎಂದಿದ್ದರು. ಈ ಮಾತನ್ನು ದೀಪಕ್ ನೆನಪಿಸಿಕೊಂಡರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಹೆಚ್.ಎಲ್ ದಿವಾಕರ್ ಅವರು ಮಾತನಾಡಿ. ಯಾವುದೇ ಪದವಿ ಪಡೆದರೂ ನಿಮಗೆ ಶಿಕ್ಷಣ ನೀಡಿದ ಗುರುಗಳನ್ನು ಗೌರವಿಸಬೇಕಿದೆ. ಅವರು ನಮ್ಮ ಅಮೂಲ್ಯ ಜೀವನಕ್ಕೆ ದಾರಿ‌ತೋರಿದವರೆಂದರು.
ಕಾರ್ಯಕ್ರಮದಲ್ಲಿ ಸತತ ನೂರು ಶೇಕಡಾ ಫಲಿತಾಂಶ ಪಡೆಯಲು ಕಾರಣರಾದ ಶಿಕ್ಷಕರಿಗೆ ಸನ್ಮಾನವನ್ನು ನೆರವೇರಿಸಲಾಯ್ತು.

ಮುಖ್ಯ ಶಿಕ್ಷಕರು ಸನ್ಮಾನ ಸ್ವೀಕರಿಸಿ ಮಾತನಾಡಿ ತಮಗೆ ಕಲಿಸಿದ ಶಿಕ್ಷಕರನ್ನು ನೆನಪಿಸಿಕೊಂಡರು ಹಾಗು ಆತ್ಮೀಯ ಸನ್ಮಾನಕ್ಕೆ ಕೃತಜ್ಞತೆಯನ್ನರ್ಪಿಸಿ, ಎಲ್ಲರ ಸಹಕಾರದಿಂದ ನಮಗೆ ಮಕ್ಕಳಿಗೆ ಉತ್ತಮ ಪಾಠ ಮಾಡಿ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾದ್ಯವಾಗಿದೆ. ಅದ್ದರಿಂದ ನಮ್ಮ ಈ ಸಾಧನೆಗೆ ನಾವು ಮಾತ್ರವಲ್ಲ ಸರ್ವರೂ ಕಾರಣ ಎಂದರು.

ಇದೇ ಸಂದರ್ಭ ಅಡಿಗೆ ಸಹಾಯಕರಾಗಿ ಹಲವು ವರ್ಷಗಳಿಂದ ಗಾಳಿಬೀಡು ಶಾಲೆಯಲ್ಲಿ ಸೇವೆಸಲ್ಲಿಸುತ್ತಿರುವ ಚೋಂದಮ್ಮ ಹಾಗು ಸುಮಿತ್ರ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕ್ರಿಯೆಟಿವ್ ಖಲೀಲ್, ಮೀನಾಜ್ ಪ್ರವೀಣ್ ಉಪಸ್ಥಿತರಿದ್ದರು.
ಶಿಕ್ಷಕರಾದ ರಮೇಶ್ ಅವರು ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿಯಾದ ಕರುಣಾ ಅವರು ಸರ್ವರನ್ನೂ ವಂದಿಸಿದರು.

error: Content is protected !!