‘ಕೊಡಗು ಮತ್ತು ಕೋವಿ’ ಪ್ರಬಂಧ ಸ್ಪರ್ಧೆ

ದ್ವಿತೀಯ ಬಹುಮಾನ ಪಡೆದ ಪ್ರಬಂಧ

ಕರ್ನಾಟಕದ ಕಾಶ್ಮೀರ, ಯೋಧರ ನಾಡು, ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧವಾಗಿರುವ ಕಾವೇರಿ ಮಾತೆಯ ಪುಣ್ಯ ನೆಲ ಈ ಕೊಡಗು. ಕ್ರೀಡೆ, ದೇಶ ಸೇವೆಗೆ ಮಾತ್ರವಲ್ಲದೇ ಸಂಸ್ಕೃತಿಯಿಂದಲೂ ದೇಶಕ್ಕೆ ಕೊಡಗಿನ ಕೊಡುಗೆ ಅಪಾರ. ಅನೇಕ ಧರ್ಮ, ಜಾತಿಗಳ ನಡುವೆ ಸಾಮರಸ್ಯ ಸಾರುತ್ತಾ ವಿವಿಧ ಸಂಸ್ಕೃತಿಗಳನ್ನು ಅಡಕವಾಗಿರಿಸಿಕೊಂಡು ಐಕ್ಯತೆ ಮೆರೆಯುತ್ತ, ಕೊಡಗಿನ ಎಲ್ಲಾ ಸಂಸ್ಕೃತಿಗಳಲ್ಲೂ ಪ್ರಧಾನವಾಗಿ ಕಂಡುಬರುವ ಹಿರಿಯರ ಬಳುವಳಿಯ ಒಂದು ವಸ್ತು ಅಥವಾ ಸಂಸ್ಕೃತಿಯ ಒಂದು ಭಾಗವೇ ಕೋವಿ.

ಕೋವಿ ಕೊಡಗಿನ ಜನತೆಯ ಅವಿಭಾಜ್ಯ ಅಂಗ. ಕೋವಿ ಕೇವಲ ಒಂದು ಆಯುಧವಲ್ಲಾ ಅದೆಷ್ಟೋ ಭಾರಿ ದೇಶ ವಿರೋಧಿಗಳ ಎದೆ ಸೀಳಿ ದೇಶ ರಕ್ಷಣೆಯಲ್ಲಿ ಪಾಲು ಪಡೆದ ಪುಣ್ಯ ವಸ್ತು. ಹಿರಿಯರ ಕಾಲದಿಂದಲೂ ತಾವು ಪ್ರೀತಿಯಿಂದ ಸಾಕಿದ ಜಾನುವಾರುಗಳ ಪಾಲಿನ ಯಮನಾಗಿ ಪೀಡಿಸುತ್ತಿದ್ದ ವ್ಯಾಘ್ರಗಳ ಪ್ರಾಣ ತೆಗೆದು ಕೃಷಿಗೆ ಸಹಾಯಕ ವಾದ ಜಾನುವಾರುಗಳ ರಕ್ಷಣೆ ಮಾಡಿದ ಅನ್ನದಾತ. ಹೇಳುತ್ತಾ ಹೋದರೆ ಕೇವಲ ಸಂಸ್ಕೃತಿಗೆ ಮಾತ್ರವಲ್ಲ ಹಿರಿಯರು ಪ್ರಾಣರಕ್ಷಣೆ ಮಾಡಿದ ಆಯುಧಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಈ ಕೋವಿ. ಇಂದಿಗೂ ಕೊಡಗಿನಲ್ಲಿ ಕೋವಿಗೆ ವಿಶೇಷ ಸ್ಥಾನಮಾನವಿದೆ.
ಹುಲಿಮದುವೆ ಪ್ರಸ್ತುತ ಕೊಡಗಿನಲ್ಲಿ ಈ ಆಚರಣೆ ಇಲ್ಲದಿದ್ದರೂ ಹಿಂದಿನ ಕಾಲದಲ್ಲಿದ್ದ ಅಭಿನಂದನಾ ಆಚರಣೆಗಳಲ್ಲಿ ಈ ಹುಲಿ ಮದುವೆಯೂ ಒಂದು. ಹಿಂದಿನ ಕಾಲದಲ್ಲಿ ತಮಗೋ, ತಮ್ಮ ಜಾನುವಾರುಗಳಿಗೋ ತೊಂದರೆ ನೀಡುತಿದ್ದ ಹುಲಿಗಳನ್ನು ಕಾಡಿಗೆ ಹೋಗಿ ಕೊಂದವನನ್ನು ವರನಂತೆ ಸಿಂಗರಿಸಿ ಮೆರವಣಿಗೆ ಮಾಡಿ ಹುಲಿ ಕಡಿದ ದೀರ ಎಂದು ಕೊಂಡಾಡುತಿದ್ದರು. ಇಂತಹ ಪ್ರತಿಷ್ಠೆಯನ್ನು ಪಡೆಯಲು ಸಹಾಯ ಮಾಡುತಿದ್ದದ್ದು ಸಹ ಕೋವಿಯೇ. ಇದು ಕಟ್ಟುಕಥೆ ಎನ್ನುವವರು ಕೊಡಗಿನ ಅನೇಕ ಐನ್ ಮನೆ ಅಥವಾ ದೊಡ್ಡಮನೆ ಗಳಲ್ಲಿ ಹುಲಿಯ ಉಗುರು, ಮೀಸೆ ಮೊದಲಾದವುಗಳನ್ನು ತಮ್ಮ ಹಿರಿಯರ ಶೌರ್ಯತೆಯ ಪ್ರತೀಕವಾಗಿ ಸಂರಕ್ಷಣೆ ಮಾಡಿರುವುದನ್ನು ಕಾಣಬಹುದು.

ವಿಶೇಷ ಆಚರಣೆಗಳಲ್ಲಿ ನಾಡ ಕೋವಿಯ ಮಹತ್ವ

ಕೊಡಗಿನ ಪ್ರಬಲ ಜನಾಂಗಗಳೆಂದು ಹೆಸರು ಪಡೆದಿರುವ ಕೊಡವರು ಮತ್ತು ಅರೆಭಾಷೆ ಗೌಡರ ಬಹುತೇಕ ಎಲ್ಲಾ ಆಚರಣೆಗಲ್ಲೂ ಸಹ ಕೋವಿ ಪ್ರಧಾನ ಆಕರ್ಷಣೆಯಾಗಿದೆ. ಗೃಹಪ್ರವೇಶಗಲ್ಲಿ ಮನೆಗೆ ಸಿರಿಧಾನ್ಯಗಳ ಜೊತೆಗೆ ಕೋವಿಯನ್ನು ಮನೆ ತುಂಬಿಸಿಕೊಳ್ಳುವ ಕ್ರಮ ಕೋವಿಗೆ ಕೊಡಗು ನೀಡಿದ ಸ್ಥಾನವನ್ನು ಎತ್ತಿ ಹಿಡಿಯುತ್ತದೆ. ಇನ್ನು ಕೊಡಗಿನ ಜನರು ಆಚರಿಸುವ ಕೈಲ್ಮುಹೂರ್ತ(ಕೈಲ್ಪೋದು)ಹಬ್ಬದ ಸಂದರ್ಭದಲ್ಲಿ ಕೋವಿಗೆ ಪೂಜೆ ಸಲ್ಲಿಸಲು, ಹುತ್ತರಿಹಬ್ಬ ಹೀಗೆ ಪ್ರತಿಯೊಂದು ಸಂದರ್ಭಗಳಲ್ಲೂ ಕೋವಿ ಕೊಡಗಿನ ಅವಿಭಾಜ್ಯ ಅಂಗವಾಗಿದೆ. ಕೊಡಗಿನ ಊರ ಹಬ್ಬಗಳಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯಲು ಸಹ ಕೋವಿಯ ಸಮರ್ಪಕ ಬಳಕೆ ಚಾಲ್ತಿಯಲ್ಲಿದೆ. ಅದಲ್ಲದೆ ಇಂದಿಗೂ ಕೊಡಗಿನಲ್ಲಿ ಯಾರಾದರೂ ಮೃತಪಟ್ಟರೆ ಮನೆಯಲ್ಲಿದ್ದ ಕೋವಿ ತೆಗೆದು ಆಕಾಶಕ್ಕೆ ಗುಂಡು ಹೊಡೆದು ಮರಣ ವಾರ್ತೆಯನ್ನು ತಿಳಿಸುವ ಕ್ರಮವಿದೆ.

ಕೋವಿಯ ಅಪಬಳಕೆ

ಈಗೀಗ ಜನರ ಕೆಲ ಅವ್ಯವಹಾರಗಳಿಗೆ ಕೋವಿ ಬಳಕೆಯಾಗಿ ಅದರ ಪ್ರಾಮುಖ್ಯತೆ
ಪ್ರಸ್ತುತ ಬೇಟೆ ನಿಷೇದವಾಗಿದ್ದರೂ ಸಹ ಅಕ್ರಮವಾಗಿ ಬೇಟೆಯಾಡಿ ಪೊಲೀಸರಿಗೆ ಅತಿಥಿಗಳಾಗುವ ಜನರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಕೇವಲ ಪ್ರಾಣಿಗಳನಷ್ಟೇ ಅಲ್ಲದೇ ಮನುಷ್ಯನನ್ನು ಕೊಲ್ಲಲು ಸಹ ಕೋವಿಯ ಬಳಕೆಯಾಗುತಿರುವುದು ಮಾನವ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಪೂಜ್ಯ ಸ್ವರೂಪದ, ಮಾನವ ನಿರ್ಮಿತ ವಸ್ತುವೊಂದು ಮಾನವ ವಿನಾಶಕ್ಕೆ ಬಳಕೆಯಾಗುತಿರುವುದು ವಿಪರ್ಯಾಸವೇ ಸರಿ.

ಉಪಸಂಹಾರ
ಜನರ ರಕ್ಷಣೆ ಮಾಡುತ್ತ, ಜಾನುವಾರುಗಳ ಉಳಿವಿಗಾಗಿ ಶ್ರಮಿಸಿ, ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದ ಕೋವಿಯ ಮಹತ್ವ ಅಪಾರವಾದದ್ದು. ವಂಶಪಾರಂಪರ್ಯವಾಗಿ ಬಂದ ಪವಿತ್ರ ಕೋವಿ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಅನಿವಾರ್ಯತೆ ಇದೆ. ಏಕೆಂದರೆ ಆ ಕೋವಿ ಕೇವಲ ಆಯುಧವಲ್ಲ ನಮ್ಮ ಸಂಸ್ಕೃತಿಯ ಭಾಗ. ಹಿರಿಯರಿಂದ ಬಳುವಳಿಯಾಗಿ ಬಂದ ನಾಡ ಬಂದೂಕುಗಳನ್ನು ವರವಾಗಿ ಕಾಪಾಡಿಕೊಳ್ಳುವುದು ಅಥವಾ ಶಾಪವಾಗಿ ಮಾರ್ಪಡಿಸಿಕೊಳ್ಳುವುದು ಮನುಷ್ಯರಾದ ನಮ್ಮ ಕೈಯಲ್ಲಿದೆ.

✍️ಪ್ರತೀಕ್ ಪರಿವಾರ ಮರಗೋಡು

error: Content is protected !!