‘ಕೊಡಗು ಹಾಗು ಕೋವಿ’ ಪ್ರಬಂಧ ಸ್ಪರ್ಧೆ
ಪ್ರಥಮ ಬಹುಮಾನ ಪಡೆದ ಪ್ರಬಂಧ
ಸಿಡಿಮದ್ದು..
ಮುಂದೆ ಕೋವಿಯ ಆವಿಷ್ಕಾರ ಕ್ಕೆ ಕಾರಣವಾಯಿತು ಎನ್ನಬಹುದು. 9ನೇ ಶತಮಾನದಲ್ಲಿ ಚೀನಾದಲ್ಲಿ ಸಿಡಿಮದ್ದು ಬಳಕೆಯಲ್ಲಿದ್ದ ಬಗ್ಗೆ ಇತಿಹಾಸ ಹೇಳುತ್ತದೆ ಆದರೆ ಅಲ್ಲೋಂದು ಆಕಸ್ಮಿಕ ಇದೆ. ಜೆಂಜಿಸ್ ಖಾನ್ ಎಂಬ ಮಂಗೋಲಿಯನ್ ಬುಡಕಟ್ಟು ನಾಯಕ ಮತ್ತೋಂದು ಆಕಸ್ಮಿಕದಲ್ಲಿ ಮಂಗೋಲಿಯನ್ನರ ರಾಜನಾಗುತ್ತಾನೆ…ನಂತರ ಅತ್ಯಂತ ಮುಂದುವರೆದ ದೇಶವಾದ ಚೀನಾದ ಮೇಲೆ ದಾಳಿ ಮಾಡಿ ತನ್ನ ವಶದಲ್ಲಿಟ್ಟಿದ್ದಾಗ, ಅಲ್ಲಿನ ಪಠಾಕಿ ರೀತಿ ಉಪಯೋಗಿಸಲಾಗುತ್ತಿದ್ದ ಕಪ್ಪು ಬಣ್ಣದ ಪುಡಿ ಬೆಂಕಿ ಆಕಸ್ಮಿಕ ದಲ್ಲಿ ದೊಡ್ಡ ಸದ್ದು ಮಾಡಿದ್ದನ್ನು, ಜಾಣತನದಿಂದ ಸಿಡಿಮದ್ದು ಬಳಕೆಯ ತಂತ್ರಜ್ಞಾನ ಸಿದ್ದಪಡಿಸಿದ. ಇದು ನಡೆದದ್ದು 12ನೇ ಶತಮಾನದಲ್ಲಿ.
ಅರ್ದ ಜಗತ್ತನ್ನು (ಅಂದಿನ ಕಾಲದಲ್ಲಿ ಭಾರತ ಬಿಟ್ಟು, ಅಮೇರಿಕಾ ಇರಲಿಲ್ಲ,)ಗೆದ್ದಕೀರ್ತಿ ಹೊಂದಿದ್ದ ಇದೇ ಜೆಂಜಿಸ್ ಖಾನ್, ಮುಂದೆ ಪಿರಂಗಿ ಹಾಗು ಕೋವಿ ತಂತ್ರಜ್ಞಾನಕ್ಕೆ ನಾಂದಿ ಹಾಡಿದ ಎನ್ನಬಹುದು.
ಮೊದಲು ಪಿರಂಗಿಯಂತೆ ಸಣ್ಣ ಕೊಳವೆಗೆ ಸಿಡಿಮದ್ದು ತುಂಬಿಸಿ ಬೆಂಕಿ ಇಟ್ಟು ಮುಂದಿನ ಭಾಗದಲ್ಲಿ ಕಬ್ನಿಣದ ಉಂಡೆಯನ್ನಿಟ್ಟು ದೂರಕ್ಕೆ ಚಿಮ್ಮಿಸುವ ಕೇಪಿನ ಕೋವಿಯಿಂದ ಹಿಡಿದು ತೋಟ, ಬುಲೆಟ್/ ಸೀಸದ ಗುಂಡು ಬಳಕೆಯವರೆಗೆ ಆಧುನಿಕತೆ ಬಂದಿತು.
ಭಾರತದಲ್ಲಿ, ಕೋವಿಯ ಕುರುಹು, ಇದೇ ಮಂಗೋಲಿಯನ್ನರು ಆಳಿದ ಟರ್ಕಿ/ಪರ್ಷಿಯನ್ ಕಡೆಯಿಂದ ಮೊಗಲರು, 16ನೇ ಶತಮಾನದಲ್ಲಿ ಆಮದು ಮಾಡಿಕೊಂಡರೆಂದು ಇತಿಹಾಸಕಾರರ ಅಭಿಪ್ರಾಯ. ಆದರೆ ನಂತರದ ದಿನಗಳಲ್ಲಿ ಯುರೋಪಿನ ಇಂಡಸ್ಟ್ರಿಯಲ್ ರೆವಲ್ಯೂಷನ್ ಕೋವಿಯ ತಂತ್ರಜ್ಞಾನವನ್ನೆ ಬದಲಿಸಿತು. ಭಾರತಕ್ಕೆ ಬರುವ ನೆಪದಲ್ಲಿ ಸಮುದ್ರ ಮಾರ್ಗ ಹುಡುಕಲು ಹೋದ ಯುರೋಪಿಯನ್ನರಿಗೆ ಅಮೇರಿಕಾ ದೊರಕಿ, ಅಲ್ಲಿ ಕೂಡ ಕೋವಿ ಬಳಕೆ ಹಾಗು ತಂತ್ರಜ್ಞಾನ ವೇಗವಾಗಿ ರೂಪುಗೊಂಡಿದೆ.
ಕೊಡಗನ್ನಾಳಿದ ಹಾಲೇರಿ ರಾಜರು ಬೇಟೆ, ಯುದ್ದ ಸಂದರ್ಭದಲ್ಲಿ ಕೇಪಿನ ಕೋವಿ ಉಪಯೋಗಿಸಿರುವ ದಾಖಲೆಗಳು ಕಾಣಬಹುದು. ಸುಮಾರು 18-19ನೇ ಶತಮಾನದಲ್ಲಿ ಪ್ರೆಂಚ್, ಡಚ್ ಹಾಗು ಬ್ರಿಟಿಷರ ಮುಖಾಂತರ .. ಮೊದಲು ಸಂಬಾರ ಪದಾರ್ಥ,ಲೋಹ ಮುಂತಾದ ವಸ್ತುಗಳಿಗೆ ವಿನಿಮಯವಾಗಿ, ಹೊಸ ತಂತ್ರಜ್ಞಾನದ ಕೋವಿ ಮಾದರಿಗಳ ಆಮದು ಮಾಡಿಕೊಳ್ಳುವವರೆಗೆ ಸಾಗಿದೆ.. ನಂತರ ಇಡೀ ಭಾರತ ಬ್ರಿಟಿಷ್ ಆಳ್ವಿಕೆಗೆ ಸಿಡಿಮದ್ದು ಹಾಗು ಕೋವಿ ಯಥೇಚ್ಛವಾಗಿ ಬಳಕೆಯಾಗಿದೆ.
ಕೊಡಗಿನಲ್ಲಿ ಗಮನಿಸಿದರೆ, ಹದಿನೆಂಟನೇ ಶತಮಾನದಲ್ಲಿ ಬಿಲ್ಲು ಬಾಣಗಳನ್ಮು, ಈಟಿ, ಭರ್ಜಿಗಳನ್ಮು ಈ ಕೇಪಿನಕೋವಿ ಆಕ್ರಮಿಸಿದಂತೆ ಕಾಣುತ್ತದೆ. ಬೆಟ್ಟ ಗುಡ್ಡದ ಪ್ರದೇಶವಾದ್ದರಿಂದ ಸಿಡಿಮದ್ದಿನ ಸದ್ದು ಬಹುದೂರದವರೆಗೆ ಅಪ್ಪಳಿಸುವ ಕಾರಣ, ಅಂದಿನ ಕಾಲದ ಬೆಂಕಿ, ಕಹಳೆ…ವಾದ್ಯಗಳ ಬದಲಿಗೆ ದೊಡ್ಡ ಸದ್ದಿನ ಬಹು ದೂರಕ್ಕೆ ಸುಲಭವಾಗಿ ತಲುಪುವ ಸಂಕೇತ ಸಾಧನವಾಗಿ ರೂಪುಗೊಂಡಿತೆಂದು ಹೇಳಬಹುದು. ಇದೇ ಮುಂದೆ ಹುಟ್ಟು ಹಾಗು ಸಾವಿನ ಸೂಚಕವಾಗಿ ಒಂಟಿ ಹಾಗು ಜೋಡಿ ಗುಂಡುಗಳ ಸಂಕೇತ ಸಂದೇಶ ನಮ್ಮ ಸಂಸ್ಕೃತಿ ಯಲ್ಲಿ ಆಳವಾಗಿ ಬೇರೂರಿತು. ಇಲ್ಲಿ ಮತ್ತೋಂದು ಮುಖ್ಯ ವಿಷಯವೆಂದರೆ, ಕೊಡಗನ್ನಾಳಿದ ಹಾಲೇರಿ ವಂಶದ ರಾಜರು ತಮ್ಮ ಗಡಿಯೋಳಗೆ ಕಠೋರ ನಿಯಮಗಳಿಟ್ಟು ಪ್ರಜೆಗಳಿಗೆ ಮನೆಯಲ್ಲಿಯೆ ಆಯುಧಗಳನ್ನಿಟ್ಟುಕೊಳ್ಳಲು ಅವಕಾಶ ಕಲ್ಪಿಸಿದ್ದರು ಎಂದು ತಿಳಿಯಬಹುದು. ಮಲೆನಾಡಿನ ಬಹುತೇಕ ಒಕ್ಕಲಿಗ ಮೂಲದ ರಾಜರು ಪಾಲಿಸಿದ್ದ AgroMarshal ತತ್ವ ಅಂದರೆ, ಬೇಸಾಯ ಮಾಡುತ್ತಾ… ಸಮಯ ಬಂದಾಗ ಸೇನೆಯಲ್ಲಿ ಯೋದ್ದನಾಗಿ ರಾಜ್ಯ ರಕ್ಷಣೆ ಮಾಡಿಕೊಳ್ಳುವುದು ಕೊಡಗಿನ ಪಾಲಿಗೆ ಹೆಚ್ಚು ಸೂಕ್ತವೂ ಹೌದು ಹಾಗು ಇದಕ್ಕಾಗಿ ಗೆರಿಲ್ಲಾ ಮಾದರಿ ಯುದ್ದ ತಂತ್ರ, ಕಡಂಗಗಳ ಪರಿಕಲ್ಪನೆ ಕೂಡ ಪರಿಣಾಮಕಾರಿಯಾಗಿದ್ದ ಕಾಲದಲ್ಲಿ, ಬಾಣಗಳ ಬದಲಿಗೆ ಕೊವಿ ಒಂದು ಆದುನಿಕತೆಯ ನಡೆಯಾಗಿತ್ತೆನ್ನಬಹುದು. ಕೊಡಗಿನಲ್ಲಿ ಹೆಚ್ಚಿನ ಕುಟುಂಬಗಳು ಜಮ್ಮಾ ಹಿಡುವಳಿ ಹಿಟ್ಟಿಬಿಟ್ಟಿ ಚಾಕರಿ ಎನಿಸಿದ್ದರೂ, ಮೇಲುವರ್ಗಕ್ಕೆ ಉನ್ನತ ಮಟ್ಟದ ಅಧಿಕಾರದ ಕಾರಣ ಹೆಚ್ಚಿನ ಗದ್ದೆಗಳು ಕೊಡಲ್ಪಟ್ಟಿದ್ದವು. ಕೋವಿ, ತಮ್ಮ ಆತ್ಮರಕ್ಷಣೆಯ ಜೊತೆಗೆ, ಬೆಳೆಗಳನ್ನು ರಕ್ಷಿಸಲು, ಬೇಟೆಯಾಡಲು, ಕೂಡ ಹೆಚ್ಚಾಗಿ ಉಪಯೋಗವಾಗುತ್ತಿರಲು, ಪ್ರತಿ ಮನೆ ಮನೆಗಳಲ್ಲಿ ಕೋವಿ, ರಾಜನ ಅನುಮತಿಯಿಂದಲೇ ಇರಲ್ಪಡುತಿತ್ತು… ಹಾಗು ಇದೇ ಕಾರಣಕ್ಕೆ ಕಾಲಕ್ಕನುಗುಣವಾಗಿ ಸುಸ್ಥಿತಿಯಲ್ಲಿರಿಸಲು ಅದರ ಸೇವೆ, ಶಸ್ತ್ರ ದ ಪೂಜೆಯಲ್ಲಿ ಹೆಚ್ಚಿನ ಶ್ರದ್ಧೆ, ಕೋವಿ ಉಪಯೋಗದಲ್ಲಿ ಕಟ್ಟುಕಟ್ಟಲೆಗಳು ಜೋಡಣೆಯಾದವು. ಹೆಚ್ಚಿನ ಮುತುವರ್ಜಿ ಬೇಕಾದ ಕೋವಿಗೆ ಮಳೆಗಾಲದ ನಂತರ , ಕೈಲ್ ಮುಹೂರ್ತ ಹಬ್ಬ ಆಯುಧ ಪೂಜೆಯಾಗಿಯೂ ಹೆಚ್ಚಿನ ಮಹತ್ವ ಪಡೆಯಿತು.
ನಂತರ ಬ್ರಿಟೀಷರೂ ಈ ತರ್ಕಕ್ಕೆ ಮಣಿದು, ಸ್ವರಕ್ಷಣೆ ಹಾಗು ಆಸ್ತಿಪಾಸ್ತಿ ರಕ್ಷಣೆಗೆ ರೈತರಿಗೆ ಕೋವಿ ಇಟ್ಟುಕೊಳ್ಳುವ ಅನುಮತಿಯನ್ಮು ಮುಂದುವರೆಸಿದರು. ಇಂದು ಇದೊಂದು ಪ್ರತಿಷ್ಟೆಯ ಚಿಹ್ನೆಯಾಗಿ ಕೊಡಗಿನಲ್ಲಿರುವ ಬಹುತೇಕ ಜನರು ಉಪಯೋಗಿಸುತ್ತಿದ್ದಾರೆ. ಸ್ವತಂತ್ರಾನಂತರ ಸರಕಾರ ಕೂಡ ಮಲೆನಾಡಿನಲ್ಲಿ ಸ್ವರಕ್ಷಣೆ ಹಾಗು ಆಸ್ತಿಪಾಸ್ತಿ ರಕ್ಷಣೆಗೆ ರೈತರಿಗೆ ಕೋವಿ(ಕಡಿಮೆ ಶಕ್ತಿಯ) ಇಟ್ಟುಕೊಳ್ಳುವ ಅನುಮತಿಯನ್ಮು ಮುಂದುವರೆಸಿದರು. ದಟ್ಟಾರಣ್ಯ, ಒಂಟಿ ಮನೆಗಳು ಹೆಚ್ಚಾಗಿದ್ದ ಮಲೆನಾಡಿನ ಭಾಗವಾದ ಕೊಡಗು, ಕೋವಿಗೆ ಬಹುಬೇಗ ಹೊಂದಿಕೊಂಡು ಅದನ್ನು ಸಂಸ್ಕೃತಿ ಯ ಅವಿಭಾಜ್ಯ ಅಂಗವಾಗಿಸಿ, ನಮ್ಮ ಆಚಾರ ವಿಚಾರಗಳ ವಿಶಿಷ್ಟತೆಗೂ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋವಿಗಳಿದ್ದರೂ, ಅದರ ಆಕ್ರಮ ಬಳಕೆ ಇಲ್ಲವೆ ದುರುಪಯೋಗದಿಂದ ನಡೆದ ಅಪರಾಧಗಳೇ ಇಲ್ಲವೇನೋ ಎನ್ನುವಷ್ಟು ಅತ್ಯಂತ ಕಡಿಮೆ ಮಟ್ಟದಲ್ಲಿರುವುದು ದೇಶಕ್ಕೆ ಮಾದರಿ. ಎರ್ ಗನ್, .22, .32 ಕ್ಯಾಲಿಬರ್ ಕೋವಿ, ರಿವಾಲ್ವರ್, ಪಿಸ್ತೂಲ್ ಗಳು ಹೆಚ್ಚಾಗಿ ಬಳಕೆಯಲ್ಲಿವೆ ಹಾಗು, ಕೇವಲ ಸರಕಾರ ಹೊರತಂದ ಮಾದರಿಯನ್ನೇ ಸಾರ್ವಜನಿಕರಿಗೆ ಲೈಸೆನ್ಸ್ ಪಡೆಯಲು ಸಾದ್ಯ. 1959 ಹಾಗು 1962ರ ಶಸ್ತಾಸ್ತ್ರ ಕಾಯಿದೆಯನ್ವಯ ಲೈಸನ್ಸ್ ರಿಯಾಯಿತಿ ಹೊಂದಿರುವ ಪಟ್ಟಿಯಲ್ಲಿ, ಕೊಡಗಿನ ಮೂಲನಿವಾಸಿಗಳು ಹಾಗು ಜಮ್ಮಾ ಹಿಡುವಳಿದಾರರು ಲೈಸನ್ಸ್ ವಿನಾಯಿತಿಗಳನ್ನು ಕೊಡಗಿನ ಗಡಿಯೋಳಗೆ ಹೊಂದಿದ್ದರೂ, ವಿನಾಯಿತಿ ಪ್ರಮಾಣಪತ್ರವನ್ನು ಜಿಲ್ಲಾ ದಂಡಾಧಿಕಾರಿಗಳಿಂದ ಕಾನೂನಾತ್ಮಕ ವಾಗಿ ಪಡೆದಿರಬೇಕು. 2016ರ ಶಸ್ತ್ರಾಸ್ತ್ರ ಕಾಯ್ದೆ ತಿದ್ದುಪಡಿ ನಂತರ ಲೈಸನ್ಸ್ ಗಾಗಿ ನಮೂನೆ ೨,೩,೪ ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಅವಕಾಶವೂ ಇದೆ. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅಪರಾದ ಹಿನ್ನೆಲೆಯ ತನಿಖೆಗೊಳಪಡಬೇಕಾಗುತ್ತದೆ ಹಾಗು ಕೋವಿ ಬಳಕೆಯ ಅವಶ್ಯಕತೆ ಬಗ್ಗೆ ಕಾರಣ ಹಾಗು ಇನ್ನಿತರ ಕಾನೂನಾತ್ಮಕ ಪ್ರಕ್ರಿಯೆಯನ್ನು ಪೂರೈಸಬೇಕಾಗುತ್ತದೆ. ಇತ್ತೀಚೆಗಿನ ಹೊಸ ಕಾನೂನಿನನ್ವಯ ಒಂದು ಲೈಸನ್ಸ್ ದಾರನಿಗೆ ನಿಗದಿತ ಯಾವುದೇ ಎರೆಡು ಶಸ್ತ್ರ ಮಾತ್ರ ಹೊಂದಲು ಅವಕಾಶ ಎಂದಿರುವುದರಿಂದ ಹಳೇಯ ಕಾಲದ, ಉಪಯೋಗಕ್ಕೆ ಬಾರದಂತೆ ಮಾಡಿದ ಶಸ್ತ್ರ ಗಳನ್ನು ಇಟ್ಟು ಕೊಳ್ಳಲು ಅವಕಾಶ ನೀಡಬೇಕೆಂಬ ಕೋರಿಕೆಯನ್ನು ಸರಕಾರದ ಮುಂದಿರಿಸಲಾಗಿದೆ.
ರಾಜೇಶ್ ಕೆದಂಬಾಡಿ