ಕಾಡಾನೆಗಳಿಗೆ ಎದುರಾಗಲಿದೆ ಮೇವಿನ ಸಮಸ್ಯೆ:ಚಾಮರಾಜನಗರದಲ್ಲಿ ಶುರುವಾಗಿದೆ ಆತಂಕ
ವಿಶೇಷ ವರದಿ:ಗಿರಿಧರ್ ಕೊಂಪುಳೀರ, ಚಿತ್ರ:ಸ್ನೇಹ
ಚಾಮರಾಜನಗರ(ಬಿಆರ್ ಟಿ,ಕಾವೇರಿ ವನ್ಯಧಾಮ): ಬಿದಿರಿಗೆ ಮುಪ್ಪಾಯ್ತು ಎಂದ ತಕ್ಷಣ ಬರಗಾಲ ಎದುರಾಗುತ್ತಿದೆ ಎಂದರ್ಥ ಅದರಂತೆ ಕಾಡಾನೆಗಳ ಪ್ರಮುಖ ಮೇವಾಗಿರುವ ಬಿದಿರು ನೂರಾರು ಏಕರೆಯಲ್ಲಿ ಒಣಗಿ ಅಕ್ಕಿ ಬಿಡುತ್ತಿರುವುದು ಕಂಡು ಬಂದಿದೆ. ಹುಲಿಗಳ ಆವಾಸ ತಾಣ,ಹಚ್ಚಹಸುರಿನ ಕುರುಚಲು ಮತ್ತು ದಟ್ಟ ಅರಣ್ಯದ ಪ್ರದೇಶವಾದ ಚಾಮರಾಜನಗರ ಜಿಲ್ಲೆಯ ಬಹುತೇಕ ಅರಣ್ಯ ಪ್ರದೇಶದಲ್ಲಿ ಈ ದೃಶ್ಯ ಕಂಡು ಬಂದಿದ್ದು ಪರಿಸರವಾದಿಗಳಲ್ಲಿ ಆತಂಕ ಮೂಡಿಸಿದರೆ,ಅರಣ್ಯದಂಚಿನ ಗ್ರಾಮಗಳಲ್ಲಿರುವ ಜಮೀನಿನ ರೈತರು ಮೇವಿಗಾಗಿ ಕಾಡಾನೆಗಳು ಜಮೀನುಗಳಿಗೆ ಲಗ್ಗೆ ಇಡಬಹುದು ಎನ್ನುವ ಸಮಸ್ಯೆ ಎದುರಿಸುತ್ತಿದ್ದಾರೆ.
ಅಪರೂಪದ ಜೀವವೈವಿದ್ಯದಿಂದ ಕೂಡಿರುವ ಚಾಮರಾಜನಗರ ಜಿಲ್ಲೆ ತಮಿಳುನಾಡು,ಕೇರಳ ರಾಜ್ಯ ಇತ್ತ ರಾಜ್ಯದ ಮೈಸೂರು ಜಿಲ್ಲೆಯ ಗಡಿಯನ್ನು ಹೊಂದಿಕೊಂಡಿರುವ ಅರಣ್ಯ ಪ್ರದೇಶಗಳಲ್ಲಿ ಆತಂಕ ಉಂಟುಮಾಡಿದ್ದು ಅದರಲ್ಲೂ ಬಿಳಿಗಿರಿರಂಗನಬೆಟ್ಟ ವನ್ಯಧಾಮದ ಬೈಲೂರು ವಲಯದಲ್ಲಿ ಅತೀ ಹೆಚ್ಚು ಬಿದಿರು ಒಣಗಿರುವುದು ಕಂಡು ಬಂದಿದೆ. 45 ರಿಂದ 50 ವರ್ಷಕ್ಕೆ ಬಿದಿರು ಒಣಗಿ ಅಕ್ಕಿ ಬಿಡುವುದು ಸಹಜ,ಕಾಡಿನ ಮಕ್ಕಳು ಈ ಅಕ್ಕಿ ಸಂಗ್ರಹಿಸಿ ಆಹಾರ ತಯಾರಿಸಿ ಬರಗಲಾ ನೀಗಿಸುವಂತೆ ಕಾಡಿನ ದೇವತೆಗಳಲ್ಲಿ ಹರಕೆ ಹೊತ್ತುಕೊಳ್ಳುವ ಆದಿವಾಸಿಗಳೂ ಇಂದಿಗೂ ಈ ಪ್ರದೇಶದಲ್ಲಿದ್ದರೆ,ಬಿದಿರು ಅಕ್ಕಿಗೂ ಪಟ್ಟಣ ,ನಗರದಲ್ಲೂ ಬೇಡಿಕೆ ಇದೆ.ಆದರೆ ಇವುಗಳನ್ನೇ ನಂಬಿರುವ ಕಾಡಾನೆಗಳ ಗತಿಯೇನು? ಸ್ಥಳೀಯ ಅರಣ್ಯ ಇಲಾಖೆ ಅಕ್ಕಿ ಸಂಗ್ರಹಿಸಿ ಸಸಿ ಮಾಡುವ ಚಿಂತನೆಯಲ್ಲಿದೆ ಎನ್ನುವುದು ಗಮನಾರ್ಹ. ಈ ನಡುವೆ ಸುಡುಬಿಸಿಲಿನಿಂದ ಕೂಡುವ ಬೇಸಿಗೆಯಲ್ಲಿ ಸೊಂಪಾಗಿ ಬೆಳೆದು ಒಣಗಿರುವ ಬಿದಿರು ಕಾಡ್ಗಿಚ್ಚಿಗೂ ಆಹ್ವಾನ ನೀಡಲಿದೆ.ಕಳೆದ ಕೆಲವು ವರ್ಷಗಳ ಹಿಂದೆ,ಕೊಡಗು ಜಿಲ್ಲೆ ನಾಗರಹೊಳೆ ವ್ಯಾಪ್ತಿಯ,ಆನೆಕಾಡು,ತಿತಿಮತಿಯಲ್ಲಿ ಬೆಂಕಿ ಕಾಣಿಸಿಕೊಂಡು ಸಾಕಷ್ಟು ವನ್ಯಜೀವಿ ಸೇರಿದಂತೆ ಅರಣ್ಯ ಸಂಪತ್ತು ನಾಶವಾಗಿದ್ದವು. ಕೆಲವೆಡೆ ಬೆಂಕಿ ಹರಡದಂತೆ ಕ್ರಮ (ಫೈರ್ ಲೈನ್ ) ಮಾಡಲಾಗುತ್ತಿದೆ. ಒಟ್ಟಿನಲ್ಲಿ ಮಳೆಗಾಲ ಆರಂಭದ ವರೆಗೆ ಅರಣ್ಯ ಇಲಾಖೆಗೆ ಸವಾಲಿನ ದಿನಗಂತೂ ಸತ್ಯ.