20 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಉಚಿತ ಇಂಟರ್ನೆಟ್ ಸಂಪರ್ಕ!

ತಿರುವನಂತಪುರಂ : ಪ್ರತಿ ಮನೆಗೂ ಹೆಚ್ಚಿನ ವೇಗದ ಮತ್ತು ಕೈಗೆಟುಕುವ ಇಂಟರ್​​ನೆಟೆ ಸಂಪರ್ಕ ಒದಗಿಸುವ ಉದ್ದೇಶಿತ ಕೆಎಫ್‌ಒಎನ್ (ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್)ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕೆಎಫ್‌ಒಎನ್ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಯುಂಟು ಮಾಡಲಿದ್ದು, 20 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಉಚಿತ ಇಂಟರ್​ನೆಟ್​ ಸಂಪರ್ಕವನ್ನು ಒದಗಿಸಲಾಗುವುದು.

ಎಲ್ಲಾ 14 ಜಿಲ್ಲೆಗಳ ಹಳ್ಳಿಗಳನ್ನು ಸಹ ಒಳಗೊಳ್ಳುತ್ತದೆ. ಈ ಹಿಂದೆ ಕೇವಲ ಶೇ 10ರಷ್ಟು ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಅತಿ ವೇಗದ ಇಂಟರ್ನೆಟ್ ಸಂಪರ್ಕವಿತ್ತು. ಕೆಎಫ್‌ಒನ್ ಪ್ರಾರಂಭಿಸುವುದರೊಂದಿಗೆ 30,000 ಸರ್ಕಾರಿ ಸಂಸ್ಥೆಗಳು ಹೆಚ್ಚಿನ ಬ್ರಾಂಡ್ ವ್ಯಾಪ್ತಿಯ ಸಂಪರ್ಕ ಹೊಂದಿವೆ ಎಂದು ಹೇಳಿದರು.

ಕೆಎಫ್‌ಒಎನ್ ಕೇರಳ ರಾಜ್ಯ ಐಟಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಕೇರಳ ರಾಜ್ಯ ವಿದ್ಯುತ್ ಮಂಡಳಿಯ (ಕೆಎಸ್‌ಇಬಿ) ಜಂಟಿ ಉದ್ಯಮವಾಗಿದೆ.

ಯೋಜನೆಯನ್ನು 2019ರ ಮಾರ್ಚ್​​ನಲ್ಲಿ ಕಾರ್ಯಗತಗೊಳಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇತೃತ್ವದ ಒಕ್ಕೂಟವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ರಾಜ್ಯದ 14 ಜಿಲ್ಲೆಗಳಲ್ಲಿ 35,000 ಕಿಲೋಮೀಟರ್ ಉದ್ದದ ಆಪ್ಟಿಕ್ ಫೈಬರ್ ನೆಟ್​​ವರ್ಕ್​ ಹಾಕಲಾಗುತ್ತಿದೆ. ಅದು ಒಮ್ಮೆ ಪೂರ್ಣಗೊಂಡರೆ ದೊಡ್ಡ ನೆಟ್​ವರ್ಕ್​ ಹೊಂದಿದ ಖ್ಯಾತಿಗೆ ಪಾತ್ರವಾಗಲಿದೆ. ಎಲ್ಲಾ ಸೇವಾ ಪೂರೈಕೆದಾರರು ನೆಟ್​ವರ್ಕ್​ ಬಳಸುವ ಆಯ್ಕೆ ಹೊಂದಿರುತ್ತಾರೆ. ಲಭ್ಯವಿರುವ ಇಂಟರ್​​ನೆಟ್​ ವೇಗ 10 Mbps ನಿಂದ 1 Gbps ವರೆಗೆ ಇದೆ ಎಂದು ಸಿಎಂ ಮಾಹಿತಿ ನೀಡಿದರು.

error: Content is protected !!