ದಾರಿಹೋಕನ ಧನಿ
ರಜತ್ ರಾಜ್ ಡಿ.ಹೆಚ್
ಅವನು ಆಗರ್ಭ ಶ್ರೀಮಂತರ ಮನೆತನದ ಒಬ್ಬನೇ ಮಗನಾಗಿದ್ದ ಜಗದೀಶ್ವರ್ ನಗರದ ಗಗನಾಂಭ ಬೆಟ್ಟದ ಅಡಿಯಲ್ಲಿ ಹರಿಯುತ್ತಿದ್ದ ನದಿಯ ಮೇಲಿನ ಸೇತುವೆ ಮೇಲೆ ಕಾರು ನಿಲ್ಲಿಸಿ ಅಳುತ್ತಾ ಸಿಗರೇಟು ಸೇದುತ್ತಾ ದುಖಃಸುತ್ತಿದ್ದ. ದೂರದಲ್ಲಿ ನದಿಯ ದಡದ ಮೇಲೆ ಯಾರೋ ಮನುಷ್ಯ ಆಕೃತಿ ಇರುವುದನ್ನು ಕಂಡ. ಅದರ ಬಗ್ಗೆ ಜಾಸ್ತಿ ಗಮನ ಹರಿಸದೆ ಹರಿಯುತ್ತಿದ್ದ ರಭಸದ ನದಿಗೆ ಹಾರಲು ನಿರ್ಧರಿಸಿದ್ದ. ಸೀದಾ ಸೇತುವೆ ಮೇಲೆ ಹತ್ತಿ ನದಿಗೆ ಹಾರಿದ. ಈಜು ಗೊತ್ತಿಲ್ಲದ ಅವನು ನೀರಿನಲ್ಲಿ ಒದ್ದಾಡಿ ಮುಳುಗಿದ. ಸ್ವಲ್ಪ ಹೊತ್ತಿನ ನಂತರ ಕಣ್ಣು ಬಿಟ್ಟರೆ ನದಿಯ ದೂರದ ತೀರದಲ್ಲಿ ಮಲಗಿದ್ದ. ಆಗ ಕಂಡಿದ್ದ ಮನುಷ್ಯಾಕೃತಿ ಒಬ್ಬ ವೃದ್ಧ ಪಕ್ಕದಲ್ಲಿ ಕುಳಿತು ಕಡ್ಡಿ ಸೌದೆಗಳನ್ನು ಬಳಸಿ ಏನೋ ಅಡುಗೆ ಮಾಡುತ್ತಿದ್ದ. ಅವನೇ ಜಗದೀಶ್ವರ್ ನದಿಗೆ ಬಿದ್ದಿದ್ದನ್ನು ಕಂಡು ನೀರಿನಿಂದ ಹೊರ ತೆಗೆದು ಕಾಪಾಡಿದ್ದ.
‘ಯಾರಜ್ಜ ನೀವು? ನನ್ನ ಯಾಕೆ ಬಚಾವ್ ಮಾಡಿದ್ರಿ? ನಾನು ಸತ್ತೋಗ್ಬೇಕಿತ್ತು. ನಾನು ಸತ್ರೆ ನಿಮಗೇನಾಗ್ತಿತ್ತು. ಯಾಕೆ ಹೇಳಿ?’
ಮಮತೆ ಪೂರ್ವಕವಾಗಿ ‘ತೊಗೋ ನಾನು ಗಾಳ ಹಾಕಿ ಈ ನದಿಲಿ ಹಿಡಿದ ಮೀನನ್ನು ಉಪ್ಪು ಕಾರ ಹಾಕಿ ಚೆನ್ನಾಗಿ ಬೇಯಿಸಿದ್ದೀನಿ. ಇಲ್ಲೇ ಹತ್ತಿರದಲ್ಲಿ ತೋಟದಲ್ಲಿ ಅಣಬೆ ಬೆಳೆದಿದ್ದವು ಅದನ್ನು ಪಲ್ಯದ ಹಾಗೆ ಮಾಡಿದ್ದೇನೆ. ಮನೆಯಿಂದ ಗೋದಿ ಪುಡಿ ತಂದು ಚಪಾತಿ ಮಾಡಿದೆ. ಹಲಸಿನ ಹಣ್ಣಂತೂ ಬಹಳ ಸಿಹಿ ಇದೆ ತಿನ್ನು ಮಗು ಆಮೇಲೆ ಮಾತಾಡುತೆ’ ಎಂದಿತು ಮುದುಕ.
ಸಾಯಬೇಕೆಂದು ಬಂದಿದ್ದ ಜಗದೀಶ್ವರ್ ಆ ಪ್ರೀತಿ ಪೂರ್ವಕ ಮಾತುಗಳಿಂದ ಕೊಂಚ ಭಾವುಕನಾಗಿ ಹೊಟ್ಟೆ ಹಸಿವನ್ನು ಆ ತಾತ ಮಾಡಿದ್ದ ಆ ಆಹಾರ ತಿಂದು ನೀಗಿಸಿಕೊಳ್ಳಲು ಮುಂದಾದ.
‘ಸಾಯುವಂತಹ ನಿರ್ಧಾರಕ್ಕೆ ಏಕೆ ಬಂದೆ?ಮಗೂ’ ಎಂದು ಕೇಳಿತು ಮುದುಕ.
‘ಅದೆಲ್ಲಾ ನಿಮಗ್ಯಾಕೆ? ನಿಮಗೆ ನನ್ನನ್ನು ನೀರಿನಿಂದ ಈಚೆಗೆಳೆದು ಬದುಕಿಸುವ ಅವಶ್ಯಕತೆ ಏನಿತ್ತು? ನಾನ್ಯಾರೋ ನೀವ್ಯಾರೋ? ನಾನು ಸತ್ತರೆ ನಿಮಗೇನಾಗುತ್ತಿತ್ತು? ಅಷ್ಟಕ್ಕೂ ನನ್ನನ್ನು ನೀವು ಯಾಕೆ ಕಾಪಾಡಿದ್ದು ?’ ಎಂದು ಜೋರಾಗಿ ಕಿರುಚಿದ. ವೃದ್ಧನನ್ನು ದೂಡಿ ಕೇಳಿದ.
ಆ ವೃದ್ಧ ಜಗದೀಶ್ವರ್ ತಲೆ ಸವರುತ್ತಾ, ‘ನೋಡು ಮಗು ನೀನು ಇನ್ನು ಪುಟ್ಟ ಹುಡುಗ. ಪ್ರಾಣದ ಬೆಲೆ ಗೊತ್ತಿಲ್ಲದೆ ಹೀಗೆಲ್ಲಾ ಮಾಡ್ಕೋಬಾರ್ದು.’
ಜಗದೀಶ್ವರ್ ಮುಖ ತಿರುವಿಕೊಂಡು, ‘ಪ್ರಾಣ ಹೋದ್ರೆ ಹೋಗ್ತಿತ್ತು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದವರಿಗೇ ನಾವು ಬೇಡ ಅಂದ ಮೇಲೆ ನಾವು ಯಾಕೆ ಬದುಕಬೇಕು?’
ವೃದ್ಧ ‘ಏನಾಯ್ತು ಸರಿಯಾಗಿ ಹೇಳು’ ಎಂದು ಹೇಳಿದ.
ಜಗದೀಶ್ವರ್ ‘ನಾನು ಒಬ್ಬಾಕೆ ಹುಡುಗಿಯನ್ನು ಬಹಳ ಇಷ್ಟ ಪಟ್ಟು, ಪ್ರೀತಿಸಿ ಮದುವೆ ಆದೆ. ಆದರೆ ಅವಳು ನನ್ನ ಒಬ್ಬಾತ ಪರಿಚಿತನೊಂದಿಗೆ ಓಡಿ ಹೋದ. ಅಪ್ಪ ಅಮ್ಮ ಎಷ್ಟೇಬೇಡ ಅಂದರೂ ಒಬ್ಬನೇ ಮಗನಾಗಿದ್ದೂ ಕೂಡ ಹಠ ಹಿಡಿದು, ಮನೆ ಬಿಟ್ಟು ಓಡಿ ಹೋಗಿ ಮದುವೆ ಆಗಿದ್ದೆ ಅವಳನ್ನು. ಆದರೆ ಅವಳು ಕೆಲವೇ ವರ್ಷ ಸಂಸಾರ ಮಾಡಿ, ನಂಬಿಕೆ ದ್ರೋಹ ಬಗೆದು ದೂರವಾಗಿ ಬಟ್ಲು.ಯಾವತ್ತೂ ಹೀಗೆ ಆಗುತ್ತೆ ಅಂತ ಗೊತ್ತಿರಲಿಲ್ಲ.’ ಎಂದ.
‘ಅದಕ್ಕೆ ನೀನು ಸಾಯುವ ನಿರ್ಧಾರ ಮಾಡಿದ್ದು ಸರಿ ಅಲ್ಲವೇ ಅಲ್ಲ. ಯಾರಿಗೆ ಎಷ್ಟು ಋಣಾನುಬಂಧ ಇರುತ್ತದೋ ಅಷ್ಟೆ ದಿನ ಅವರು ನಮ್ಮ ಜೊತೆ ವಿ ಎ’
‘ನಿಮಗೇನು ಗೊತ್ತು ಪ್ರೀತಿ ಅಂದ್ರೆ ಏನಂತಾ?’ ಎಂದು ಮೂಗು ಮುರಿಯುತ್ತಾ ನುಡಿದ.
‘ಹಂ ನಾನೂ ನಿನ್ನ ಹಾಗೆ ಇದ್ದೆ ಒಂದು ಜಮಾನಾದಲ್ಲಿ ಆದರೆ ನಿನ್ನ ಹಾಗೆ ಸ್ಥಿತಿವಂತರಾಗಿರಲಿಲ್ಲ ನನ್ನ ಕುಟುಂಬ. ಅದಕ್ಕೆ ಬಿಟ್ಟು ಹೋದ ಹುಡುಗಿನ ಮರೆತು ದೇಶ ಸೇವೆ ಮಾಡುವವರ ಸೇವೆಯನ್ನಾದರೂ ಮಾಡಬೇಕು ಅಂತ ಸೇನೆಯಲ್ಲಿ Medical Assistant ಆಗಿ ಕೆಲಸ ಹಿಡಿದೆ. ಒಬ್ಬ ವೈದ್ಯಕೀಯ ಸಿಬ್ಬಂದಿಯಾಗಿ ಕೆಲಸ ಮಾಡಿ ನಿವೃತ್ತಿಯಾದೆ. ನಾನು ಕರ್ತವ್ಯ ನಿರ್ವಹಿಸುವಾಗ, ಅದೆಷ್ಟೋ ಸೈನಿಕರಿಗೆ ಚಿಕಿತ್ಸೆ ನೀಡಲು ಸಹಾಯಕನಾಗಿದ್ದೆ.
ಅಲ್ಲಿ ನಾನು ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ ಸೈನಿಕರ ಕೊನೆಯ ಕ್ಷಣಗಳ ನರಳಾಟ ನೋಡಿದ್ದೇನೆ. ಅವರನ್ನು ಬದುಕಿಸಲು ಶಕ್ತಿ ಮೀರಿ ಪ್ರಯತ್ನಿಸುವಲ್ಲಿ ಪಾತ್ರ ವಹಿಸಿದ್ದೆ. ಪ್ರಾಣದ ಉಸಿರನ್ನೇ ದೇಶಕ್ಕಾಗಿ ಅರ್ಪಿಸಿದ ಆ ಮಹಾ ವೀರರೊಂದಿಗೆ ಹತ್ತಿರದಿಂದ ಆತ್ಮೀಯವಾಗಿ ಮಾತಾಡಿದ್ದೇನೆ.
ಅವರನ್ನೆಲ್ಲಾ ನೋಡಿ ನನಗೆ ಪ್ರಾಣದ ಪ್ರಾಮುಖ್ಯತೆ ಏನೆಂದು ತಿಳಿಯಿತು. ನನಗೆ ಕೆಲ ತಿಂಗಳುಗಳಿಂದ ಬ್ಲಡ್ ಕ್ಯಾನ್ಸರ್ ಇದೆ ಆದ್ರೆ ಯಾವತ್ತು ನಾನು ವಿಧಿಗೆ ಶರಣಾಗೋದಿಲ್ಲ. ಬದುಕಿನ ಕೊನೆ ಕ್ಷಣದವರೆಗೆ ಸಂತೋಷವಾಗಿ ನನ್ನ ಮಡದಿಯೊಂದಿಗೆ ಸಮಯ ಕಳಿತೀನಿ. ಇದ್ದ ಒಬ್ಬನೇ ಮಗ ಯಾವುದೋ ಹುಡುಗಿನ ಪ್ರೀತಿಸಿ ಊರು ಬಿಟ್ಟು ಓಡಿ ಹೋದ. ಇನ್ನೇನು ಇದೆ ? ಕೇವಲ ಕೆಲವೇ ದಿನಗಳ ಪಯಣ. ಆದರೆ ಅದನ್ನು ಕೂಡ ಕುಷಿಯಿಂದ ಕಳಿತೀನಿ. ಯಾಕೆಂದರೆ ನಾನು ದೇವರು ಕೊಟ್ಟ ಈ ಜನ್ಮವನ್ನು ಪೂರ್ತವಾಗಿ ಅನುಭವಿಸಬೇಕು ಎಂಬ ಆಶಾಭಾವನೆ ಇರುವವನು.’
ಜಗದೀಶ್ವರ್ ಗಾಢ ಯೋಚನೆಯಲ್ಲಿ ಮುಳುಗಿದ್ದವನು ಅವರ ಮುಖವನ್ನು ನೋಡಿ ಒಮ್ಮೆ ಏನೋ ನಿರ್ಧರಿಸಿದವನ ಹಾಗೆ ಆಡಿ… ತಾನಾಗೆ ಕಣ್ಣಲ್ಲಿ ಸುರಿಯುತ್ತಿದ್ದ ಕಂಬನಿ ವರೆಸಿಕೊಂಡು ಎದ್ದು ಕಾರು ಹತ್ತಿ ಮನೆಗೆ ಮರಳಿದ.