ಅವಿಶ್ರಾಂತಳು ನೀನಮ್ಮ
ಅಮ್ಮ… ನನ್ನಮ್ಮಾ…
ನಿನ್ನಲ್ಲಿ ಕೇಳದೇ ಉಳಿದ
ಸಾವಿರ ಪ್ರಶ್ನೆಗಳಿವೆ
ಉತ್ತರಿಸುವೆಯಾ ಅಮ್ಮ ?
ನಿನ್ನ ಬಾಳನ್ನೇ
ಸಂಸಾರದ ಸೇವೆಗೆ
ಮುಡಿಪಾಗಿಟ್ಟು
ನೀನೆಂದು ನೆಮ್ಮದಿಯ
ನಿಟ್ಟುಸಿರು ಬಿಟ್ಟಿರುವೆ ?
ಶಾಂತಿಯ ಪ್ರತಿರೂಪ ಅಮ್ಮ
ನೀನು ಉತ್ತರಿಸುವುದಾದರೆ
ನನ್ನದೊಂದು ಪ್ರಶ್ನೆ ಇದೆ ಕೇಳಮ್ಮ
ವಿದ್ವತ್ತಿನ ಗರ್ವದಿ ಮುಳುಗಿದ ನಾನು
ಎಂದು ನಿನ್ನ ಬಳಿ
ಮೃದುವಾಗಿ ಮಾತನ್ನಾಡಿರುವೆ ?
ನಿನ್ನ ಸಮ್ಮತಿ ಇದ್ದರೆ ಉತ್ತರಿಸಮ್ಮ
ಕೇಳುವ ಪ್ರಶ್ನೆಗಳಿಗೆ ;
ನೀ ಹಾಕಿದ ತಳಪಾಯವೆಂಬ
ದೇಹ ಬೆಳೆದು ಬಾಗಿದ ಮೇಲೆ
ಮಡಿಲಲ್ಲಿ ಮಲಗಿದ ದಿನಗಳಿವೆಯೇ ಅಮ್ಮ ?
ನಿನ್ನ ಸಂಕಟಕ್ಕೆ ಕೊರಗಿದ
ಕ್ಷಣಗಳಿವೆಯೇ ಅಮ್ಮ ?
ಶ್ರಮದ ಅಧೀನ ನೀನಮ್ಮ
ಕೇಳುವೆ ಮಗದೊಂದನು ಹೇಳಮ್ಮ
ಸೂರ್ಯೋದಯ ಸೂರ್ಯಾಸ್ತದ
ಅಂತರ ತಿಳಿಯದವಳೇ
ನೀ ಹೇಳಮ್ಮ ;
ನಿನಗಾಗಿ ವಿಶ್ರಮಿಸಿದ ದಿನಗಳಿವೆಯೇ ಅಮ್ಮ ?
ಪತಿಯ ಮೇಲೆ ಭಕ್ತಿ
ಮಕ್ಕಳ ಮೇಲೆ ಮಮತೆ
ಇವುಗಳ ಹೊರತು ನಿನ್ನಲ್ಲಿ
ಬೇರೇನಿದೆ ಹೇಳಮ್ಮ ?
ಕಡೆಯದೊಂದಿದೆ ಪ್ರಶ್ನೆಯಿದೆ ಕೇಳು
ನೀನೇಕೆ ಅಷ್ಟು ಮಮತಾಮಯಿ ?
ಮನದಲ್ಲಿ ಸಾವಿರ ನೋವು
ಮುಖದಲ್ಲಿ ನಗುವಿನ ಚಿಲುಮೆ
ಇದೇ ನಿನ್ನ ಬಾಳಿನ ಆಭರಣವಮ್ಮ
ನೀನಿರದ ಬಾಳು ಬಾಳಲ್ಲ ಅದು
ಭ್ರಾಂತಿಯ ತಿರುಳು ನನ್ನಮ್ಮ !
✒️ಪಟ್ಟಡ ದೀಕ್ಷಿ