fbpx

ಕೊಡಗಿನ ಮೋಟಾರ್ ರೇಸ್ ಲೋಕದ ಅನನ್ಯ ತಾರೆ ಉದ್ದಪಂಡ ಚೇತನ್

ಕೊಡಗಿನ ಮಟ್ಟಿಗೆ ಹೇಳುವುದಾದರೆ ಅಪರೂಪದಲ್ಲಿ ಅಪರೂಪವಾದ ಸಾಹಸ ಕ್ರೀಡೆ ಎಂದರೆ ಮೋಟೋ ರೇಸ್. ಕೊಡಗಿನ ಮೋಟಾರ್ ಸ್ಪರ್ಧೆ ಲೋಕದಲ್ಲಿ ಜಗತ್ ನಂಜಪ್ಪ ಮತ್ತು ಅನಿತ ನಂಜಪ್ಪನವರದು ಚಿರಪರಿಚಿತ ಹೆಸರು. ಕಡಿದಾದ ಗುಡ್ಡ ಗಾಡಿನ ಗಡಸು ರಸ್ತೆಯಲ್ಲಿ ಮೋಟಾರ್ ಓಡಿಸುವುದೆ ಒಂದು ರೋಚಕ ಸಾಹಸ.

ಇದರಲ್ಲಿ ಸ್ಪರ್ಧಿಸುವುದು ಕೂಡ ಅಸಾಮಾನ್ಯ ಪ್ರತಿಭೆಗಳೆ. ಇಂತಹ ಕ್ರೀಡೆಯೊಂದರಲ್ಲಿ ಖ್ಯಾತನಾಮರಾದ ಕೊಡಗಿನ ಜಗತ್ ನಂಜಪ್ಪ ಅವರೊಂದಿಗೆ ಗುರುತಿಸಿಕೊಂಡಿರುವ ಮತ್ತೊಂದು ಹೆಸರೇ ಉದ್ದಪಂಡ ಚೇತನ್. ಸುದ್ಧಿ ಸಂತೆಗೆ ಇಂದಿನ ಕ್ರೀಡಾ ಸ್ಪೂರ್ತಿಯೆ ಈ ಜೀಪ್ ರೇಸಿಂಗ್ ತಾರೆ ಚೇತನ್ . ಆತ್ಮಸ್ಥೈರ್ಯ ಅಗಾಧವಾಗಿರಬೇಕಾದ ಇಂತಹ ಕ್ರೀಡೆಯನ್ನು ಹವ್ಯಾಸಿಯಾಗಿ ಆರಂಭಿಸಿ ವೃತ್ತಿಪರತೆ ಸಾಧಿಸಿಕೊಂಡಿರುವವರು ಚೇತನ್. ಇವರು ಎಂಟನೇ ವಯಸ್ಸಿನಲ್ಲಿಯೆ ತಮ್ಮ ತಂದೆಯ ತೊಡೆಯಲ್ಲಿ ಕುಳಿತುಕೊಂಡು ಜೀಪು ಓಡಿಸಿದ್ದ ಪೋರ. ತನ್ನ ಹದಿನೇಳನೆಯ ವಯಸ್ಸಿನಲ್ಲಿ ತಾನೇ ವಿಶೇಷವಾಗಿ ವಿನ್ಯಾಸಗೊಳಿಸಿದ ಜೀಪಿನ ಸ್ಟೇರಿಂಗ್ ಹಿಡಿದು ರೇಸ್ ಪ್ರಿಯರಿಂದ ಸೈ ಎನಿಸಿಕೊಂಡಿದ್ದವರು. ಈ ಕೊಡಗಿನ ವೀರ ತಮ್ಮ ಹದಿನೆಂಟನೆಯ ವಯಸ್ಸಿನಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚುವ ಮೂಲಕ ಎಲ್ಲರ ಗಮನ ಸೆಳೆದಂತವರು.

ಫೆಬ್ರವರಿ 18ರಂದು ಅಮ್ಮತ್ತಿಯಲ್ಲಿ ಜನಿಸಿದ ಚೇತನ್ ಅವರ ತಂದೆ ಶಂಭು ಕಾವೇರಪ್ಪ ತಾಯಿ ಮಲ್ಲಿಗೆ, ಸಹೋದರಿ ದಿವ್ಯ ಮೈಸೂರು ಕ್ರೀಡಾನಿಲಯದ ಹಾಕಿ ಕ್ರೀಡಾಪಟುವಾಗಿದ್ದವರು. ಚೇತನ್ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಚಿಕ್ಕಂದಿನಿಂದಲೇ ಹೆಚ್ಚೇ ಎನ್ನುವಷ್ಟು ವಾಹನ ಚಲಾಯಿಸುವ ಗೀಳು ಹತ್ತಿಸಿಕೊಂಡಿದ್ದ ಚೇತನ್ 1998 ರಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್ ಶಿಪ್ʼನಲ್ಲಿ ಪ್ರಥಮಸ್ಥಾನ ಪಡೆದಿದ್ದರು. ಮುಂದುವರಿದು 2002ರಲ್ಲಿಯೂ ವಿಜೇತರಾಗಿ ಗಮನ ಸೆಳೆದಿದ್ದರು. ಇವರು ತಮ್ಮ 17ನೇ ವಯಸ್ಸಿನಲ್ಲಿ ಸ್ವತಃ ವಿನ್ಯಾಸಗೊಳಿಸಿದ ಜೀಪ್ʼನ ಮಾದರಿಯ ಅತ್ಯಾಕರ್ಷಣೆಯಿಂದ ಟಫ್ ರೋಡ್ ಜೀಪ್ ರೇಸ್ ಕ್ರೀಡೆಗಿಳಿಯುವ ಒಲವು ತೋರಿದರು. 2006ರಲ್ಲಿ ಮೊದಲ ಬಾರಿಗೆ ರೆಡ್ ರೂಸ್ಟರ್ ಆಯೋಜಿಸಿದ್ದ ರಾಷ್ಟ್ರೀಯ ಚಾಂಪಿಯನ್ ಶಿಪ್ʼನಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ತಮ್ಮ ಮುಂದಿನ ಅದ್ವಿತೀಯ ಸಾಧನೆಗಳಿಗೆ ಅಡಿಗಲ್ಲಿಟ್ಟಿದ್ದರು. ಆ ನಂತರ ಇಪ್ಪತ್ತಕ್ಕೂ ಹೆಚ್ಚಿನ (ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಕೊಡಗಿನ) ಸ್ಥಾನೀಯ ಪೈಪೋಟಿಗಳಲ್ಲಿ ಸ್ಪರ್ಧಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ.

2016ರಲ್ಲಿ ಪಲಾರ್ ರೇಸ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿರುವುದು ಚೇತನ್ ಪಾಲಿಗೆ ಅವಿಸ್ಮರಣೀಯವಾಗಿದೆ. ಇವರ ಈ ಹವ್ಯಾಸವು ಮೋಟಾರು ಕ್ರೀಡೆಯನ್ನು ಬೆಳೆಸುವ ಉದ್ದೇಶದೊಂದಿಗೆ ವಿ5 ಆಫ್ ರೋಡರ್ಸ್ ಕೂರ್ಗ್ ಸಂಘವನ್ನು ಹುಟ್ಟು ಹಾಕಿತಲ್ಲದೆ ಅನೇಕ ಸಮಾನಮನಸ್ಕ ಮೋಟಾರು ರೇಸ್ ಉತ್ಸಾಹಕರನ್ನು ಒಂದೇ ಸೂರಿನಡಿ ಕಲೆಹಾಕುವಂತ ಕೆಲಸವನ್ನು ಮಾಡಿತು. ಮಾತ್ರವಲ್ಲದೆ ಸಧ್ಯ ದೊಡ್ಡಮಟ್ಟದಲ್ಲಿ ತಮ್ಮ ಸಮೂದಾಯ ಬೆಳೆಯುವುದಕ್ಕೆ ಬೇಕಾದ ಪ್ರಚಾರ, ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತ ಕಾರ್ಯಪ್ರವೃತ್ತವಾಗಿದೆ.this

2014ರಲ್ಲಿ ಆರಂಭವಾದ RFC ಯು “ರೈನ್ ಫಾರೆಸ್ಟ್ ಚಾಲೆಂಜ್” ಭಾರತೀಯ ಮೋಟಾರ್ ರೇಸ್ ಜಿದ್ದುಗಳಲ್ಲಿ ಪ್ರತಿಷ್ಠಿತವೆನಿಸಿಕೊಂಡಿದೆ. ಈ ಸ್ಪರ್ಧೆಗೆ ದೇಶದ ಎಲ್ಲ ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸುತ್ತಾರೆ. ಗೋವಾದಲ್ಲಿ ನಡೆಯುವ ಈ ಸ್ಪರ್ಧೆ ಸಾಕಷ್ಟು ಜನಪ್ರಿಯ ಹಾಗೂ ಪ್ರಖ್ಯಾತಿಯನ್ನು ಗಳಿಸಿದೆ. ತೀವ್ರ ಸ್ವರೂಪದ ಈ ಚಾಲೆಂಜ್ ಅತ್ಯಂತ ಕಠಿಣವಾದುದಾಗಿದ್ದು ಕೆಸರು, ಕೊರಚು, ಕಡಿದಾದ ಪ್ರದೇಶ, ಹಳ್ಳ, ಕೊಳ್ಳ, ಬಂಡೆ ಮುಂತಾದ ಮೈನವಿರೇಳಿಸುವ ಮಾರ್ಗಗಳನ್ನು ಕ್ರಮಿಸುವಂತಹದಾಗಿರುತ್ತದೆ.

2016ರಲ್ಲಿ ಜಗತ್ ನಂಜಪ್ಪ ಅವರೊಂದಿಗೆ ವಿ5 ಆಫ್ ರೋಡರ್ಸ್ ಕೂರ್ಗ್ ಮುಖೇನ ಕಣಕ್ಕಿಳಿದು ಬೆಂಗಳೂರಿನ ಪಂಥದಲ್ಲಿ ಗೋವಾಗೆ ಆಯ್ಕೆಗೊಂಡು ಅಲ್ಲಿ ನಡೆದ ಸ್ಪರ್ಧೆಯ ಅಂತಿಮ ಘಟ್ಟದಲ್ಲಿ ಎಂಟನೇ ಸ್ಥಾನ ಪಡೆದಿದ್ದರು.

ಇದೇ ಸ್ಪರ್ಧೆಯನ್ನು 2017ರಲ್ಲಿಯೂ ಸ್ಪರ್ಧಿಸಿ ದ್ವಿತೀಯ ಸ್ಥಾನಗಳಿಸಿದರು. ಹಾಗೆ 2018ರಲ್ಲಿ ಪ್ರಥಮಸ್ಥಾನ ಪಡೆಯುವ ಮೂಲಕ ಮಲೇಷ್ಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಗೊಂಡು ಕೊಡಗಿನ ಗರಿಮೆಯನ್ನು ಎತ್ತಿಹಿಡಿದರು. ಆ ನಂತರ 2019ರಲ್ಲಿ ನಡೆದ ಅದೇ ಸ್ಪರ್ಧೆಯಲ್ಲಿ ಚಂಡೀಗಡದ ‘ಗುರುಮೀತ್ ವರ್ಧಿ’ ಸಹಚಾಲನೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಕೊರೋನ ಲಾಕ್ಡೌನ್ ದೀರ್ಘ ಬಿಡುವಿನ ನಂತರದಲ್ಲೂ 2021ರಲ್ಲಿ ಕೊಯಂಬತ್ತೂರಿನಲ್ಲಿ ನಡೆದ INRC “ಇಂಡಿಯನ್ ನ್ಯಾಷನಲ್ ರಾಲಿ ಚಾಂಪಿಯನ್ ಶಿಪ್” ನಲ್ಲಿ ಭಾಗವಹಿಸಿ ಇವರು ತಮ್ಮ ಮುಂದಿನ ಸ್ಪರ್ಧೆಗಳಿಗೆ ಸಿದ್ಧರಾಗಿರುವುದನ್ನು ಸಾಬೀತು ಪಡಿಸಿದ್ದಾರೆ.

ಹೀಗೆ ಅಮೋಘ ರೋಮಾಂಚಕಾರಿ ಕ್ರೀಡೆಯೊಂದನ್ನು ಆಯ್ಕೆ ಮಾಡಿಕೊಂಡು ಅಡೆತಡೆಗಳನ್ನು ಲೆಕ್ಕಿಸದೆ ಯಶಸ್ಸು ಕಂಡಿರುವ ಉದ್ದಪಂಡ ಚೇತನ್ ಇಂದಿನ ಮೊಬೈಲ್ʼನಲ್ಲಿ ರೇಸ್ ಆಡಿ ಸಮಯ ಕಳೆಯುತ್ತಿರುವ ಅನೇಕ ಪ್ರತಿಭಾವಂತ ಯುವ ಜನರಿಗೆ ಮಾದರಿಯಾಗಿದ್ದಾರೆ. ಈ ಅದ್ಬುತ ಸಾಹಿಸಿಗೆ ಸುದ್ಧಿಸಂತೆ ಕುಟುಂಬ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರ ಮುಂದಿನ ದಿನಗಳು ಮಗದಷ್ಟು ಮೋಟಾರು ರೇಸ್ ಸಾಧನೆಗಳೊಂದಿಗೆ ವಿಜೃಂಭಿಸಲಿ, ಭಾರತದ ಕೀರ್ತಿಪತಾಕೆ ಹೆಮ್ಮೆಯಿಂದ ಹಾರಿಸುತಿರಲಿ ಎಂದು ಹಾರೈಸುತ್ತದೆ.

ಲೇಖನ: ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್,
ಹಾಸನ

error: Content is protected !!