‘ಕೋವಿ ಹಾಗು ಕೊಡಗು’ ಕುರಿತು ಪ್ರಬಂಧ ಸ್ಪರ್ಧೆ
ಮೂರನೇ ಬಹುಮಾನ ಪಡೆದ ಪ್ರಬಂಧ
ಕೊಡಗು, ಇದು ಪಶ್ಚಿಮ ಘಟ್ಟದ ತಪ್ಪಲಿನ ದಟ್ಟವಾದ ಕಾಡುಗಳಿಂದ ವೈಭವೀಕರಿಸಿದ ಕರ್ನಾಟಕದ ಅತ್ಯಂತ ಸುಂದರ ಗಿರಿಧಾಮವಾಗಿದೆ.
ಇದು ಕರ್ನಾಟಕದ 30 ಜಿಲ್ಲೆಗಳಲ್ಲಿಯೇ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಕೊಡಗಿನ ಕಾಫಿ ಮತ್ತು ಕೊಡಗಿನ “ಕೆಚ್ಚೆದೆಯ ಯೋಧರರು” ಪ್ರಪಂಚದಲ್ಲಿ ಪ್ರಸಿದ್ದಿ ಪಡೆದಿದೆ. ಮಡಿಕೇರಿಯು ಕೊಡಗಿನ ಕೇಂದ್ರಸ್ಥಾನವಾಗಿದೆ. ಕೊಡಗು ಕೊಡವ ಭಾಷೆಯನ್ನು ಮಾತನಾಡುವ ಸ್ಥಳೀಯರಿಗೆ ನೆಲೆಯಾಗಿದೆ.
ಕೊಡವ ಬುಡಕಟ್ಟು ಕುಲದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬಂದೂಕು ಕೊಡವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಲಾಂಛನವಾಗಿದ್ದು ಕೊಡವ ಬುಡಕಟ್ಟು ಕುಲದ ನಾಗರೀಕತೆ ಉಗಮವಾದಂದಿನಿಂದಲೂ ಆಯುಧಗಳು ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿವೆ.
ಕೊಡವರಿಗೆ ಕೋವಿ ಹೊಂದುವ ವಿಶೇಷ ಹಕ್ಕನ್ನು 1861ರಲ್ಲಿ ಬ್ರಿಟಿಷ್ ಆಳ್ವಿಕೆ ಕಾಲಘಟ್ಟದಲ್ಲಿ ಅಧಿಕೃತವಾಗಿ ನೀಡಲಾಗಿತ್ತು. ಕೂರ್ಗ್ ಚೀಫ್ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಕೊಡವರಿಗೆ ಮತ್ತು ಜಮ್ಮಾ ಹಿಡುವವಳಿದಾರರಿಗೆ ವಿಶೇಷ ವಿನಾಯಿತಿ ಹಕ್ಕಿನ ಆದೇಶ ಹೊರಡಿಸಿದ್ದರು. ರಾಜರ ಆಳ್ವಿಕೆ ಕಾಲಕ್ಕಿಂತ ಮುಂಚಿತವಾಗಿ ಕೊಡವರು ಕೋವಿ ಹೊಂದಿದ್ದರು. ಬ್ರಿಟಿಷ್ ಸೇನೆಯಲ್ಲಿಕೊಡವರು ನಿಷ್ಠೆ, ಬದ್ಧತೆಯಿಂದ ತಮ್ಮ ಪಾಲಿನ ಜವಾಬ್ದಾರಿ ನಿರ್ವಹಿಸಿದ್ದರಿಂದ ಕೋವಿ ಇಟ್ಟುಕೊಳ್ಳಲು ಇದ್ದ ಕಾನೂನು ನಿಯಂತ್ರಣದಿಂದ ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ವಿನಾಯಿತಿ ನೀಡಿದ್ದರು. ಸ್ವಾತಂತ್ರ್ಯಾನಂತರದಲ್ಲಿ1959ರ ಭಾರತೀಯ ಶಸ್ತಾ್ರಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 4 ರನ್ವಯ ಕೂರ್ಗ್ ಬೈ ರೇಸ್ ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದಲು ಇರುವ ಪರವಾನಗಿ ವಿನಾಯಿತಿ ಮುಂದುವರಿಸಲು 1963ರಲ್ಲಿ ಕೇಂದ್ರ ಸರಕಾರ ವಿಶೇಷ ಆದೇಶ ಹೊರಡಿಸಿತ್ತು. ಕೋವಿ ಹೊಂದಲು ಕಾನೂನಿನಡಿ ಪರವಾನಗಿ ಪಡೆಯುವುದರಿಂದ ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ (ಕೊಡವ, ಗೌಡ, ಕೊಡವ ಮಾಪಿಳ್ಳೆ, ಹೆಗಡೆ, ಅಮ್ಮಕೊಡವ ಸೇರಿದಂತೆ ವಿವಿಧ ಜನಾಂಗದವರು ಜಮ್ಮಾ ಹಿಡುವಳಿದಾರ ರಾಗಿದ್ದಾರೆ) ಕೊಡಗು ಜಿಲ್ಲಾಡಳಿತದಿಂದ ವಿನಾಯಿತಿ ಪತ್ರ ನೀಡಲಾಗುತ್ತದೆ. ವಿನಾಯಿತಿ ಪತ್ರದಡಿ ತಾವು ಹೊಂದುವ ಕೋವಿಯನ್ನು ದೇಶಾದ್ಯಂತ ತೆಗೆದುಕೊಂಡು ಹೋಗಲು ಮುಕ್ತ ಅವಕಾಶವಿದೆ.
ಕೋವಿ, ರಿವಾಲ್ವರ್ ಹೊಂದುವುದು ಶ್ರೀಮಂತರಿಗೆ ಭದ್ರತೆ ಮತ್ತು ಫ್ಯಾಷನ್ ಆಗಿದ್ದರೆ ಕೊಡಗಿನವರಿಗೆ ಅದು ಸಂಸ್ಕೃತಿಯ ಪ್ರತೀಕ. ಕೊಡವ ಜನಾಂಗದವರು ದೇಶದ ಯಾವುದೇ ಮೂಲೆಯಲ್ಲಿರಲಿ ಅವರ ಮನೆಯಲ್ಲಿ ಕೋವಿಯೊಂದು ಇರಲೇಬೇಕು ! ಡಗಿನವರಿಗೆ ಅದು ಸಂಸ್ಕೃತಿಯ ಪ್ರತೀಕ. ಕೊಡವ ಜನಾಂಗದವರು ದೇಶದ ಯಾವುದೇ ಮೂಲೆಯಲ್ಲಿರಲಿ ಅವರ ಮನೆಯಲ್ಲಿ ಕೋವಿಯೊಂದು ಇರಲೇಬೇಕು ! ಸಿಖ್ರಿಗೆ ಭರ್ಜಿ, ಗೂರ್ಖಾ ಜನಾಂಗಕ್ಕೆ ಕತ್ತಿ ಇಟ್ಟುಕೊಳ್ಳಲು ಸಂವಿಧಾನದಲ್ಲಿ ವಿನಾಯಿತಿ ನೀಡಿರುವಂತೆ, ದಕ್ಷಿಣ ಭಾರತದಲ್ಲಿ ಕೊಡವ ಜನಾಂಗದವರಿಗೆ ಕೋವಿ ಇಟ್ಟುಕೊಳ್ಳುವ ವಿನಾಯ್ತಿ ಇದೆ. ಹಾಗಾಗಿ ಕೊಡವರು ಎಲ್ಲಿಗೆ ಹೊರಟು ನಿಂತರು, ಬಗಲಲ್ಲಿ ಒಂದು ಕೋವಿ ಇಟ್ಟುಕೊಳ್ಳುತ್ತಾರೆ. ರಸ್ತೆಯಲ್ಲಿ ಓಡಾಡುವಾಗಲೂ ಬಹಿರಂಗವಾಗಿ ಕೋವಿ, ರಿವಾಲ್ವರ್ ಇಟ್ಟುಕೊಳ್ಳಬಹುದು. ಕೊಡವ ಪ್ರಮುಖ ಹಬ್ಬ ಕೈಲು ಮುಹೂರ್ತ ಹಬ್ಬದಲ್ಲಿ ಕೋವಿಯನ್ನು ಪೂಜಿಸಲಾಗುತ್ತದೆ. ಹೀಗಾಗಿ ಸುಮಾರು 20 ಸಾವಿರಕ್ಕೂ ಹೆಚ್ಚು ಕೋವಿ, ರಿವಾಲ್ವರ್ಗಳು ಕೊಡಗಿನಲ್ಲಿವೆ. ಲೈಸೆನ್ಸ್ ಹೊಂದಿದವರು ಸುಮಾರು 500 ಮಂದಿ ಮಾತ್ರ ಇದ್ದಾರೆ. ಇಷ್ಟೊಂದು ಕೋವಿ, ರಿವಾಲ್ವರ್ಗಳು ಇದ್ದರೂ ಭೂಗತ ಚಟುವಟಿಕೆ, ರೌಡಿಸಂ ನಂತಹ ಪ್ರಕರಣಗಳಿಗೆ ಕೋವಿಗಳು ಹೆಚ್ಚಿನ ಪ್ರಮಾಣದಲ್ಲಿ ದುರುಪಯೋಗವಾಗಿಲ್ಲ.
ಕೋವಿಯೊಂದಿಗೆ ಕೊಡವ ಸಮುದಾಯ ಅವಿನಾಭಾವ ಸಂಬಂಧ ಹೊಂದಿದ್ದು, ಕೊಡವರ ಹುಟ್ಟು ಸಾವಿನ ಸಂದರ್ಭ ಕೋವಿ ಬಳಕೆ ಕಡ್ಡಾಯವಾಗಿದೆ. ಕೊಡವ ಜನಾಂಗದಲ್ಲಿ ಕೋವಿ ಪೂಜನೀಯ ಸ್ಥಾನ ಪಡೆದುಕೊಂಡಿದೆ. ಕೋವಿಯ ಬಳಕೆಯೊಂದಿಗೆ ಕೊಡಗಿನ ವಿಶೇಷ ಹಬ್ಬಗಳಾದ ಪುತ್ತರಿ, ಕೈಲ್ ಪೋದ್ ಗಳಲ್ಲಿ ವಿಶೇಷವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ನಡೆಸಿ ಪ್ರಥಮ ಸ್ಥಾನ ಗಳಿಸಿದವರಿಗೆ ನಗದು ಹಾಗೂ ಟ್ರೋಫಿ ನೀಡಿ ಸನ್ಮಾನಿಸಲಾಗುವುದು.
ಮತ್ರಂಡ ಹರ್ಷಿತ್ ಪೂವಯ್ಯ