ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ
✍🏻 ಅನ್ವೇಶ್ ಕೇಕುಣ್ಣಾಯ
‘ದೇಶ ಸುತ್ತಬೇಕು, ಕೋಶ ಓದಬೇಕು’ ಎಂಬ ನುಡಿಗಟ್ಟಿನಂತೆ, ಜ್ಞಾನಾರ್ಜನೆಗಾಗಿ ಪುಸ್ತಕಗಳನ್ನು ಓದುವುದರ ಜೊತೆಗೆ ಜೀವನಾನುಭವಗಳನ್ನು ಪಡೆಯಲು ಆಗಾಗ್ಗೆ ಪ್ರವಾಸ ಕೈಗೊಳ್ಳಬೇಕು. ಹಿಂದಿನ ಕಾಲದಲ್ಲಿ ಭಕ್ತಿಪ್ರಧಾನವಾದ ತೀರ್ಥಯಾತ್ರೆಯೇ ಪ್ರವಾಸದ ಮುಖ್ಯ ಉದ್ದೇಶವಾಗಿತ್ತು, ಬದಲಾದ ಇಂದಿನ ಕಾಲಘಟ್ಟದಲ್ಲಿ ಪ್ರವಾಸದ ಪ್ರಕಾರಗಳು ಹಲವಾರು. ವಿದ್ಯಾಭ್ಯಾಸದ ಅಂಗವಾಗಿ ಶೈಕ್ಷಣಿಕ ಪ್ರವಾಸ, ವೈದ್ಯಕೀಯ ಪ್ರವಾಸ, ಕೃಷಿ ಪ್ರವಾಸ, ಧಾರ್ಮಿಕ ಪ್ರವಾಸ, ಉದ್ಯೋಗ ನಿಮಿತ್ತ ಪ್ರವಾಸ, ಮನರಂಜನೆಗಾಗಿ ಪ್ರವಾಸ, ಸಾಹಸಮಯ ಕ್ರೀಡೆಗಳಿಗಾಗಿ ಪ್ರವಾಸ, ಪ್ರಕೃತಿ ಪ್ರಿಯರಿಗಾಗಿ ಚಾರಣ, ಪುಣ್ಯ ಸಂಪಾದನೆಗಾಗಿ ತೀರ್ಥಯಾತ್ರೆ, ಆಯಾ ಋತುವಿಗೆ ತಕ್ಕಂತೆ ವಿಶೇಷ ಪ್ರವಾಸ, ಗತವೈಭವದ ಐತಿಹ್ಯವುಳ್ಳ ಜಾಗಗಳಿಗೆ ಪ್ರವಾಸ, ಸಾಂಸ್ಕೃತಿಕ ಪ್ರವಾಸ, ಕೌಟುಂಬಿಕ ಪ್ರವಾಸ, ಏಕಾಂಗಿ ಪ್ರವಾಸ , ಏಕತಾನತೆಯನ್ನು ಮುರಿಯಲು ಪ್ರವಾಸ, ವಾರಾಂತ್ಯದ ಪ್ರವಾಸ, ಹವ್ಯಾಸವಾಗಿ ಪ್ರವಾಸ, ಹೀಗೆ ಪ್ರವಾಸದ ವಿರಾಟ್ ರೂಪವು ದಂಗುಬಡಿಸುವಂತಿದೆ. ಆಸಕ್ತರ ವಿವಿಧ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಆಯಾ ವರ್ಗದ ಪ್ರವಾಸೋದ್ಯಮವು ಬೆಳೆಯುತ್ತಿದೆ.
ಸ್ವಾಮಿ ವಿವೇಕಾನಂದರು ” ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಸಮಾಜವೆನ್ನುವ ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರವಾಸ ಮಾಡಬೇಕು” ಎಂದಿದ್ದಾರೆ. ಹಾಗೆ ಅವರು ಪ್ರವಾಸ ಮಾಡಿ, ಭಾರತದ ಹಿರಿಮೆಯನ್ನು ಸಾರಿದ ಕಾರಣಕ್ಕೇ ಅಂದು ಇಡೀ ಭಾರತವೆಂಬ ಜಗದ್ಗುರುವತ್ತ ತಿರುತಿರುಗಿ ಬೆರಗು ಕಂಗಳಿಂದ ನೋಡಿದ್ದು.
ಕಡಲತೀರದ ಭಾರ್ಗವರೆಂದೇ ಕರೆಯಲ್ಪಡುವ ಶಿವರಾಮ ಕಾರಂತರು ಸಹ, ಪ್ರವಾಸವನ್ನು ನೆಚ್ಚಿಕೊಂಡಿದ್ದವರೇ. ತನ್ನ ಬರವಣಿಗೆಗೆ ಹೇಗೆ ಓದು ಮತ್ತು ಪ್ರವಾಸಗಳು ಕಾರಣವಾಗಿವೆ ಎಂದು ಆಗ್ಗಾಗ್ಗೆ ತಮ್ಮ ಪುಸ್ತಕಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅತ್ಯಂತ ಅಪ್ಯಾಯಮಾನ ಮತ್ತು ಶ್ರೇಷ್ಠ ಪುಸ್ತಕಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವ ಶಿವರಾಮ ಕಾರಂತರ ಬರಹಗಳ ಹಿಂದೆ ಇರುವುದು ಪ್ರವಾಸಗಳೆಂಬ ಅದ್ಭುತ ಅನುಭವಗಳೇ.
ಅಷ್ಟೇ ಏಕೆ ಇವತ್ತಿನ ನಮ್ಮ ಪ್ರಧಾನಿಗಳು ಸಹ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶ-ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದರಿಂದ, ಮತ್ತೆ ಪ್ರಚಂಚ ಭಾರತದತ್ತ ಎಚ್ಚೆತ್ತುಕೊಳ್ಳುವ ಹಾಗೆ ಆಗಿದ್ದು. ಹಾಗಾಗಿ ಭಾರತ ಪ್ರಕಾಶಿಸುತ್ತಿದೆ ಎಂದರೆ ಅತಿಶಯೋಕ್ತಿ ಅಲ್ಲವಷ್ಟೇ!
ಪ್ರವಾಸವೆನ್ನುವುದರ ಮಹತ್ವವೇ ಅದು. ನಮ್ಮ ಪ್ರದೇಶದ ಸೀಮಿತ ಮಿತಿಯನ್ನು ಮೀರಿ ಜ್ಞಾನ ವೃದ್ಧಿಸಿಕೊಳ್ಳಬೇಕಾದರೆ ಮನುಷ್ಯ ಸಂಚರಿಸುತ್ತಿರಬೇಕು.ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿ ಅಲ್ಲಿನ ಪ್ರಕೃತಿಯನ್ನು ಅಭ್ಯಾಸ ಮಾಡಬೇಕು. ಪ್ರಕೃತಿ ತಾಯಿ, ತಾಯಿ ಗುರುವೂ ಹೌದು. ನಾನಾ ದೇಶದ ಸಂಸ್ಕೃತಿ, ಆಚಾರ-ವಿಚಾರಗಳ, ನಂಬಿಕೆಗಳ, ತಂತ್ರಜ್ಞಾನಗಳ ಅರಿವಾಗುವುದು, ಅನುಭವವಾಗುವುದು ಇಂತಹ ಪ್ರವಾಸಗಳಗಲ್ಲೇ. ಪ್ರಚಂಚವೆಂಬ ವೈವಿಧ್ಯಮಯತೆಯ ಬೆರಗನ್ನು ಕಟ್ಟಿಕೊಡುವುದು ಕೂಡಾ ಈ ಪ್ರವಾಸಗಳೇ! ಇದರಿಂದ ಒಂದು ಪ್ರದೇಶದ ವಿಚಾರಗಳು ಇನ್ನೊಂದು ಪ್ರದೇಶವನ್ನು ತಲುಪಿ ವಿಚಾರಗಳು ವಿನಿಮಯವಾಗುತ್ತಿರುತ್ತವೆ. ಪರಸ್ಪರ ಕೊಡುಕೊಳ್ಳುವಿಕೆಗಳು ಸಾಧ್ಯವಾಗುವುದು ಪ್ರವಾಸಗಳಿಂದ ಮತ್ತು ಅವುಗಳಿಂದ ಸಿಗುವ ಅರಿವಿನಿಂದ.
ಪ್ರವಾಸೋದ್ಯಮದಿಂದಾಗಿ ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಯಾಗಿ, ಆದಾಯ ಹೆಚ್ಚುತ್ತದೆ, ವಿಭಿನ್ನ ಸಂಸ್ಕೃತಿಯ ಪರಿಚಯವಾಗುತ್ತದೆ. ಆದರೆ ಅತಿಯಾದ ಪ್ರವಾಸೋದ್ಯಮದಿಂದಾಗಿ ಸ್ಥಳೀಯ ಪರಿಸರ ಹಾಗೂ ಸಂಸ್ಕೃತಿಯ ಮೇಲೆ ದುಷ್ಪರಿಣಾಮಗಳಾಗುತ್ತಿರುವುದೂ ಸತ್ಯ.