ಆಷಾಡ ಮಾಸದ ವಿಶಿಷ್ಟ ಆಚರಣೆ ಆಟಿ ಕಳಂಜ
ಪ್ರಸ್ತುತ ಕರ್ನಾಟಕ ಕೇರಳ ಗಳಲ್ಲಿ ಹಂಚಿ ಹೋಗಿರುವ ತುಳುನಾಡು ಎಂಬ ಪುಣ್ಯಭೂಮಿಯು ತನ್ನ ಧಾರ್ಮಿಕ ಆಚರಣೆಗಳ ಮೂಲಕ ರಾಜ್ಯ ಮಾತ್ರವಲ್ಲದೇ ದೇಶದೆಲ್ಲೆಡೆ ತನ್ನದೇ ಆದ ಗೌರವದ ಸ್ಥಾನಮಾನವನ್ನು ಪಡೆದುಕೊಂಡಿದೆ. ಕಲೆ, ಸಂಸ್ಕೃತಿ, ಆಚರಣೆ, ಅನೇಕ ಜಾತಿ, ಧರ್ಮಗಳ ಮದ್ಯೆಯೂ ಆಷಾಡದ ಈ ವಿಶಿಷ್ಟ ಆಚರಣೆ ಇಂದಿಗೂ ನಡೆಯುತ್ತಲೇ ಇದೆ. ಈ ವಿಶಿಷ್ಟ ಧಾರ್ಮಿಕ ಆಚರಣೆಯೇ ಆಟಿ ಕಳಂಜ….
ಹೀಗೊಂದು ಆಚರಣೆ ತುಳುನಾಡಿನಲ್ಲಿ ಬಿಟ್ಟರೆ ಬೇರೆಲ್ಲೂ ಸಹ ಕಾಣಸಿಗುವುದು ಅಪರೂಪ. ಸಾಮಾನ್ಯವಾಗಿ ತುಳುನಾಡಿನಲ್ಲಿ ದೈವಗಳೆಂಬ ಶಕ್ತಿಗಳ ಆರಾಧನೆ ಶತಶತಮಾನಗಳಿಂದ ನಡೆದುಕೊಂಡು ಬಂದಿರುವುದು ತಿಳಿದಿದೆ. ಆದರೆ ಈ ಆಚರಣೆ ಆಷಾಢ ಮಾಸದಲ್ಲಿ ಕಂಡುಬರುವುದು ಅಪರೂಪವಾಗಿರುತ್ತದೆ…
ಆಟಿ ಕಳಂಜ
ಆಷಾಡ ಮಾಸದಲ್ಲಿ ಮಾತ್ರ ಆಟಿ ಕಳಂಜ ಎಂಬ ಆಚರಣೆಯನ್ನು ಕಾಣಲು ಸಾಧ್ಯ. ಹಾಗಾದರೆ ಆಟಿ ಕಳಂಜ ಎಂದರೆ ಏನೂ?? ಈ ಆಚರಣೆ ಏಕೆ ಇಂದಿಗೂ ನಡೆಸಲಾಗುತಿದೆ?? ತಿಳಿದುಕೊಳ್ಳೋಣ ಬನ್ನೀ
ತುಳುನಾಡಿನಲ್ಲಿ ಆಷಾಡ ಮಾಸ (ಆಟಿ ತಿಂಗೊಲು)ದಲ್ಲಿ ಕಂಡುಬರುವ ಧಾರ್ಮಿಕ ಆಚರಣೆ ಅಥವಾ ನಂಬಿಕೆಯೇ ಆಟಿಕಳಂಜ. ಸಾಮಾನ್ಯವಾಗಿ ಆಟಿ ಕಳಂಜ ವೇಷಧಾರಿಗಳು ನಲಿಕೆ ಎಂಬ ಜನಾಂಗ ಅಥವಾ ಸಮುದಾಯದವರಾಗಿರುತ್ತಾರೆ.
ವೇಷ –ಭೂಷಣ
ಸಣ್ಣ ವಯಸ್ಸಿನ ಹುಡುಗನೊಬ್ಬನಿಗೆ ತಲೆಗೆ ಕಂಗಿನ ಹಾಳೆಯ ಟೊಪ್ಪಿ ಧರಿಸಿ, ಮುಖಕ್ಕೆ ಬಿಳಿ ಅಥವಾ ಇತರೆ ಬಣ್ಣವನ್ನು ಕ್ರಮಬದ್ದವಾಗಿ ಹಾಕಿ, ತೆಂಗಿನ ನಾರಿನಲ್ಲಿ ಅಥವಾ ದಡ್ಡಿಯ ನಾರಿನಲ್ಲಿ ಗಡ್ಡ ಮೀಸೆಯನ್ನು ಬಿಡಿಸಲಾಗುತದೆ..
ನಂತರ ಕಾಲಿಗೆ ಗೆಜ್ಜೆ ಕಟ್ಟಿ, ಕೈಯ್ಯಲ್ಲಿ ತತ್ರ(ಕೊಡೆ ಮಾದರಿಯ ಸಾಧನ)ವನ್ನು ಹಿಡಿದಿರುತ್ತಾರೆ…
ನಂಬಿಕೆ
ಈ ರೀತಿಯ ವೇಷಧಾರಿಯಾದ ಆಟಿ ಕಳಂಜನ ಜೊತೆಗೆ ಮತ್ತೊಬ್ಬ ತೆಂಬೆರೆ ಎಂಬ ಚರ್ಮವಾದ್ಯವನ್ನು ಬಡಿಯುತ್ತಾ ಸಾಗುತ್ತಾನೆ. ಹೀಗೆ ಮನೆ ಮನೆಗೆ ಹೋಗುವ ಆಟಿ ಕಳಂಜ, ಮನೆ ಅಂಗಳದಲ್ಲಿ ಪಾಡ್ದನದ ಸ್ವರ, ತೆಂಬೆರೆಯ ನಾದಕ್ಕೆ ಸರಿಯಾಗಿ ಮೆಲ್ಲನೆ ಕಾಲನ್ನು ಅಲ್ಲಾಡಿಸುತ್ತಾ ಕೈಯಲ್ಲಿನ ತತ್ರವನ್ನು ತಿರುಗಿಸುತ್ತ ಹಿಂದೆ –ಮುಂದೆ ಸಾಗುತ್ತಾರೆ…
ಹೀಗೆ ಮನೆ ಮುಂದೆ ನರ್ತಿಸುವ ಆಟಿ ಕಳಂಜನು ಮನುಷ್ಯರಿಗೆ, ಪ್ರಾಣಿಗಳಿಗೆ ಬರುವ ದೋಷಗಳನ್ನು ನಿವಾರಿಸುತ್ತಾನೆ ಎಂಬುದು ತುಳುನಾಡ ಜನರ ನಂಬಿಕೆ…
ಆಷಾಢ ಮಾಸದಲ್ಲಿ ಮನೆ ಮುಂದೆ ನರ್ತಿಸುವ ಆಟಿ ಕಳಂಜನಿಗೆ ತಡ್ಪೆ (ನಾಲಕ್ಕು ಮೂಲೆಗಳಿರುವ ಬಿದಿರು ಅಥವಾ ಮರದ ಸಾಧನ)ಯಲ್ಲಿ ಭತ್ತ, ಅಕ್ಕಿ, ಹುಳಿ, ಮೆಣಸು, ಉಪ್ಪು, ಮುಂತಾದವುಗಳನ್ನು ನೀಡುತ್ತಾರೆ. ಮಾತ್ರವಲ್ಲದೇ ಆಟಿ ಕಳಂಜ ಅಂಗಳ ಇಳಿದು ಹೋಗುವಾಗ ಕುರ್ದಿ(ಅರಶಿಣ ಮತ್ತು ಸುಣ್ಣ ಬೆರೆಸಿದ ಶುದ್ಧವಾದ ನೀರು)ಯನ್ನು ಸಿಂಪಡಿಸುತ್ತಾರೆ… ಹೀಗೆ ಮಾಡಿದರೆ ಮನೆಯ ಅಶುಭ ಕಳೆಯುತದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ….
ಕಳಂಜ ವೇಷಧಾರಿಗಳಾಗಿದ್ದವರ ಮನದ ಮಾತು*
ಆಷಾಡ ಮಾಸದಲ್ಲಿನ ಕಷ್ಟಗಳನ್ನು ಆಟಿ ಕಳಂಜ ಪರಿಹರಿಸುತ್ತಾನೆ ಎಂಬುದು ನಮ್ಮ ನಂಬಿಕೆ. ಕೆಲವು ಕಡೆಗಳಲ್ಲಿ ಕನ್ಯೆ(ಹೆಣ್ಣಿನ ವೇಷಧಾರಿ)ಮತ್ತು ಕಳಂಜ ಒಟ್ಟಿಗೆ ಹೋಗುವ ಕ್ರಮವಿದೆ. ಕೆಲವು ಕಡೆಗಳಲ್ಲಿ ಕಳಂಜ ಮಾತ್ರ ಹೋಗುತ್ತಾರೆ. ಈ ಆಚರಣೆ ಪಕ್ಕದ ರಾಜ್ಯ ಕೇರಳದಲ್ಲೂ ಇದೆ. ಆಟಿ ಕಳಂಜನಿಗೆ ಕೆಲವು ವಸ್ತುಗಳನ್ನು(ಲೇಖನದಲ್ಲಿ ಉಲ್ಲೇಖಿಸಿರುವಂತೆ) ಕೊಡುವ ಪದ್ಧತಿ ಇದೆ. ಕೊಡುವ ವಸ್ತುಗಳನ್ನು ಸ್ವೀಕರಿಸುವ ಆಟಿ ಕಳಂಜ ಮನುಷ್ಯರಿಗೆ ಬರುವ ಕಷ್ಟಗಳು, ಭೂಮಿಯಲ್ಲಿ ಬೆಳೆದ ಬೆಳೆಗಳಿಗೆ ತಗಲುವ ರೋಗಗಳು, ಹೀಗೆ ಪ್ರತಿಯೊಂದು ಸಮಸ್ಯೆಗಳನ್ನು ಪರಿಹರಿಸುತ್ತಾನೆ ಎಂಬುದು ಜನರ ನಂಬಿಕೆಯಾಗಿದೆ.
ಈ ಹಿಂದೆ ನಾನು ಬಾಲಕರಾಗಿದ್ದಾಗ ನನ್ನ ತಂದೆಯೊಂದಿಗೆ ಆಟಿ ಕಳಂಜ ವೇಷಧಾರಿಯಾಗಿ ಮನೆಮನೆಗೆ ಹೋಗುತ್ತಿದ್ದೆ. ಈಗಲೂ ಈ ಆಚರಣೆಯನ್ನು ಸಣ್ಣ ಬಾಲಕರ (ಕಳಂಜ ವೇಷಧಾರಿಗಳಿಗೆ ನಿರ್ದಿಷ್ಟ ವಯಸ್ಸಿನ ಮಿತಿ ಇದೆ) ಮೂಲಕ ನಡೆಸಿಕೊಂಡು ಹೋಗುತಿದ್ದೇವೆ. ಆದರೆ ನಮ್ಮ ಸಮುದಾಯದ ಯುವಕರು ಈ ಆಚರಣೆ ಮುಂದುವರಿಸುವುದು ತೀರಾ ಕಡಿಮೆಯಾಗುತಿದೆ. ಹಾಗಾಗಬಾರದು, ಈ ಶ್ರೇಷ್ಠ ಆಚರಣೆ ಇನ್ನು ಮುಂದೆಯೂ ಮುಂದುವರಿಯಬೇಕು ಎಂಬುದು ನನ್ನ ಆಶಯ
ಚಿದಾನಂದ ಅಡ್ಡಣಪಾರೆ (ಪ್ರಸಿದ್ಧ ದೈವನರ್ತಕರು ಮತ್ತು ಅನುಭವಿ ಕಳಂಜ ವೇಷಧಾರಿಗಳು)
ದೇವಚಳ್ಳ ಗ್ರಾಮ ಗುತ್ತಿಗಾರು
ದಕ್ಷಿಣ ಕನ್ನಡ ಜಿಲ್ಲೆ
ಕಡಿಮೆಯಾಗುತಿದೆ ಇಂತಹ ಆಚರಣೆ
ಆಧುನಿಕತೆ, ಬದಲಾದ ಜನಜೀವನ, ಹೆಚ್ಚಿದ ಸಾಕ್ಷರತೆ, ಇದೆಲ್ಲ ಮೂಡನಂಬಿಕೆ ಎಂಬ ಭಾವನೆ ಮುಂತಾದವುಗಳಿಂದ ಇಂತಹ ಧಾರ್ಮಿಕ ಆಚರಣೆ ಕಡಿಮೆಯಾಗುತಿರುವುದು ವಿಪರ್ಯಾಸವೇ ಸರಿ. ಇಂತಹ ಆಚರಣೆ ಎಂದಿಗೂ ನಶಿಸಲು ಸಾಧ್ಯವಿಲ್ಲ ಏಕೆಂದರೆ ಇತರರಿಗೆ ಇದೊಂದು ಆಚರಣೆಯಾಗಿರಬಹುದು ಆದರೆ ತುಳುನಾಡ ಜನರ ಪಾಲಿಗೆ ಇದು ತಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವುದು ಅಕ್ಷರಶ ಸತ್ಯ..
✍🏻 ಪ್ರತೀಕ್ ಪರಿವಾರ ಮರಗೋಡು