ಅಂತರಾಷ್ಟ್ರೀಯ ಸ್ನೇಹಿತರ ದಿನ
ಅರಿವೇ ಇಲ್ಲದ ವಯಸ್ಸಿನಲಿ ಅರಿವು ಮೂಡಿಸಿದ ವ್ಯಕ್ತಿ, ಆಟವಾಡುತ್ತಾ ಬಿದ್ದಾಗ ಎಬ್ಬಿಸಿದ ವ್ಯಕ್ತಿ, ನಮ್ಮೆಲ್ಲ ದುಃಖವನು ಸಂಯಮದಿಂದ ಕೇಳಿಸಿಕೊಳ್ಳುವ ವ್ಯಕ್ತಿ, ನಮ್ಮ ಸಣ್ಣ ಹಾಸ್ಯಕ್ಕೂ ಬಿದ್ದು ಬಿದ್ದು
ನಗುವ ವ್ಯಕ್ತಿ, ಈಗೀಗ ಅನಿಸುತಿದೆ ಅದು ವ್ಯಕ್ತಿಯಲ್ಲ ನಮ್ಮೊಂದಿಗಿನ ಶಕ್ತಿ. ಆ ಶಕ್ತಿ ಮತ್ತು ನನ್ನ ನಡುವಿನ ಪವಿತ್ರ ಸಂಬಂಧವೇ ಸ್ನೇಹ…
ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಸಂಬಂಧ, ನೋವಿನಲ್ಲಿದ್ದಾಗ ಕಣ್ಣೀರು ಒರೆಸಿದ ಸಂಬಂಧ, ಪುಟ್ಟ ಪುಟ್ಟ ಕನಸಿಗು ರೆಕ್ಕೆ ಕಟ್ಟಿದ ಸಂಬಂಧ, ನಲಿವಿನಲಿ ಪಾಲು ಪಡೆದ ಸಂಬಂಧ, ಸದಾ ಪ್ರೋತ್ಸಾಹಿಸುತ್ತಾ ಒಳಿತನ್ನು ಬಯಸುವ ಸಂಬಂಧ, ದೂರವಿದ್ದರು ಮತ್ತೆ ಮತ್ತೆ ನೆನಪಾಗುವ ಸಂಬಂಧ ಅದುವೇ ಸ್ನೇಹವೆಂಬ ಅನುಭಂದ….
ಭಾರತ ರತ್ನ ಎ. ಪಿ. ಜೆ. ಅಬ್ದುಲ್ ಕಲಾಂ ರವರ ಮಾತೊಂದು ಹೀಗಿದೆ ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ. ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೇ ಸಮ. ಅದೆಷ್ಟು ಅರ್ಥಗರ್ಭಿತ ಮಾತಿದು. ಸ್ನೇಹ ಎಂಬುದು ಪದಗಳಲ್ಲಿ ವರ್ಣಿಸಲು ಅಸಾಧ್ಯ ವಾದುದು. ಆದರೂ ಸ್ನೇಹದ ಅನುಭವಗಳನ್ನು ಬರೆಯಲು ಸಾಧ್ಯ, ಅಲ್ಲವೇ..
ಅನೇಕ ಸಂಬಂಧಗಳ ಪ್ರೀತಿಯಲ್ಲಿ ನಾವು ಸ್ನೇಹವನ್ನು ಕಾಣಬಹುದು. ತಾಯಿ ಮಡಿಲ ಪ್ರೀತಿಯಲಿ, ತಂದೆಯ ಮಮತೆಯಲಿ, ಅಣ್ಣನ ನಿಸ್ವಾರ್ಥ ಅಪ್ಪುಗೆಯಲಿ, ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಲ್ಲುವ ಅಕ್ಕ — ತಂಗಿಯ ಪ್ರೋತ್ಸಾಹದಲಿ, ಹಿತೈಷಿಗಳ ಹಿತ ನುಡಿಗಳಲಿ, ಮಾರ್ಗದರ್ಶಕರ ಅತ್ಯುತ್ತಮ ಮಾರ್ಗದರ್ಶನದಲಿ ಹೀಗೆ ಅದೆಷ್ಟೋ ಪ್ರೀತಿಯಲ್ಲಿ ಸ್ನೇಹವನ್ನು ಕಾಣಬಹುದು…
ಇನ್ನು ಸ್ನೇಹ ಎಂದ ತಕ್ಷಣವೆ ನೆನಪಿಗೆ ಬರುವುದು ನಮ್ಮ ಶಾಲಾ ಸಹಪಾಠಿಗಳು. ಬಹುಷಃ ಪ್ರತಿಯೊಬ್ಬ ಮನುಷ್ಯನ ಬದುಕಿನ ಅತೀ ಸುಂದರವಾದ ಕ್ಷಣಗಳನ್ನು ಹೆಚ್ಚಾಗಿ ಕಳೆದಿರುವುದು ಈ ಸ್ನೇಹವೆಂಬ ಪವಿತ್ರ ಸಂಬಂಧದಲ್ಲೇ ಎಂದು ಅನಿಸುತದೆ. ನಮಗೆ ನಿಜವಾಗಿಯೂ ಸ್ನೇಹಿತರೊಂದಿಗಿರುವಾಗ ಅವರ ಮಹತ್ವದ ಅರಿವಾಗುವುದಿಲ್ಲ. ಈಗ ಆ ದಿನಗಳು ಮರಳಿ ಸಿಗಲಿ ಎಂದೆನಿಸಲು ಶುರುವಾಗಿದೆ…
ಅದೆಷ್ಟು ಸೊಗಸಾಗಿತ್ತು ಆ ದಿನಗಳು, ಒಟ್ಟಿಗೆ ಆಟವಾಡುತ್ತಾ, ಬಿದ್ದವನನ್ನು ಮೇಲಕ್ಕೆತ್ತುತ್ತಾ, ಅವನನ್ನು ನೋಡಿ ನಗುತ್ತಾ, ತರಗತಿಗಳಲ್ಲಿ ತರಲೆ ಮಾಡುತ್ತ, ಒಟ್ಟಿಗೆ ಕುಳಿತು ಊಟ ಮಾಡುತ್ತಾ, ಹೆಚ್ಚಾಗಿ ಓದುವವನನ್ನು ಹೀಯಾಳಿಸುತ್ತಾ, ಓದದೇ ಉತ್ತಿರ್ಣವಾಗುವುದೇ ಸಾಧನೆ ಎಂದುಕೊಳ್ಳುತ್ತಾ, ನಾವು ಅನುತ್ತಿರ್ಣರಾದಗ ಸ್ನೇಹಿತರು ನಾಪಾಸು ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತಾ, ಸ್ನೇಹಿತರಿಗೆ ಬಹುಮಾನ ದೊರೆತಾಗ ನಮಗೆ ದೊರಕಿತೇನೋ ಎಂಬಂತೆ ಸಂಭ್ರಮಿಸಿರುವುದು ಇದೀಗ ನೆನಪು ಮಾತ್ರ. ಇದೆಲ್ಲವು ಕಣ್ಣ ಮುಂದೆ ಬಂದು ಮರೆಯಾಗಿ ಹೋಗುತಿದೆ ಸ್ನೇಹವೆಂಬುದು ಶಾಶ್ವತವೆನ್ನುತ್ತಾ….
ಪುರಾಣಗಳಲ್ಲಿ ಸ್ನೇಹ
ಸ್ನೇಹವೆನ್ನುವಾಗ ಪುರಾಣಗಳಲ್ಲಿ ನೆನಪಿಗೆ ಬರುವುದೇ ಶ್ರೀಕೃಷ್ಣ ಮತ್ತು ಸುಧಾಮ(ಕುಚೇಲ) ರ ಸ್ನೇಹ. ಶ್ರೀಕೃಷ್ಣನನ್ನು ದೇವರು ಎನ್ನುವುದಕ್ಕಿಂತ ಆದರ್ಶಪುರುಷ ಎನ್ನುವುದು ಸೂಕ್ತ. ಏಕೆಂದರೆ ಅಂತಹ ಮಹಾಪುರುಷರಿಗೆ ಮಾತ್ರ ಎಲ್ಲವನ್ನೂ ಸ್ವೀಕರಿಸುವ ಗುಣವಿರುತದೆ. ಬಡತನದ ಬೇಗೆಯಲ್ಲಿದ್ದ ಸುಧಾಮನು ತನ್ನ ಗೆಳೆಯ ಶ್ರೀಕೃಷ್ಣನನ್ನು ನೋಡಲು ಬಂದು, ತನ್ನಲ್ಲಿದ್ದ ಅವಲಕ್ಕಿಯನ್ನು ಕೊಡುತ್ತಾನೆ. ದಿನವೂ ಬಗೆಬಗೆ ಆಹಾರ ಸೇವಿಸುವ ಕೃಷ್ಣನಿಗೆ ಆ ಅವಲಕ್ಕಿ ಏನೇನೋ ಅಲ್ಲ. ಆದರೆ ತನ್ನ ಗೆಳೆಯ ತಂದ ಅವಲಕ್ಕಿಯನ್ನು ಪ್ರೀತಿಯಿಂ, ಸೇವಿಸಿ,ಗೆಳೆಯನ ಸಂಕೋಚವನ್ನು ದೂರ ಮಾಡಿ, ಸುಧಾಮನ ಬಡತನವನ್ನು ನಿವಾರಿಸುವ ಶ್ರೀಕೃಷ್ಣ ನಂತಹ ಸರ್ವೋಕೃಸ್ಟ ಸ್ನೇಹಿತನನ್ನು ಪಡೆದ ಸುಧಾಮ ಅದೆಷ್ಟು ಪುಣ್ಯವಂತನಾಗಿರಬಹುದು.
ಹಾಗೆಯೇ ಮತ್ತೊಂದು ಶ್ರೇಷ್ಠ ಉದಾಹರಣೆ ಎಂದರೆ ಕರ್ಣ ಮತ್ತು ದುರ್ಯೋದನರದು. ಸೂತಪುತ್ರನೆಂದು ತುಂಬಿದ ಸಭೆಯಲ್ಲಿ ಅವಮಾನಿತನಾಗುವ ಕರ್ಣನಿಗೆ ಅಂಗರಾಜ್ಯವನ್ನು ದುರ್ಯೋದನ ಕೊಡುವುದು, ಹಾಗೆಯೇ ತಾನು ಹೋರಾಡುತಿರುವುದು ತನ್ನ ತಮ್ಮಂದಿರ ವಿರುದ್ದವೆ ಎಂದು ತಿಳಿದಿದ್ದರೂ ತನ್ನ ಸ್ನೇಹಿತ ದುರ್ಯೋದನನ ಪರವಾಗಿ ಹೋರಾಡಿ ವೀರ ಮರಣವನ್ನು ಹೊಂದುವುದು ಇದಕೆಲ್ಲ ಕಾರಣ ಅವರಿಬ್ಬರ ಮದ್ಯೆ ಗಾಡವಾಗಿ ಬೇರೂರಿದ್ದ ಸ್ನೇಹವಲ್ಲದೇ ಮತ್ತಿನ್ನೇನು…
ಹೀಗೆ ನೋಡುತ್ತಾ ಹೋದರೆ ಗುಹ ಶ್ರೀರಾಮ ಮುಂತಾದ ಪುರಾಣದ ಪಾತ್ರಗಳಲ್ಲಿ ಸ್ನೇಹವನ್ನು ಕಾಣಬಹುದು…
ಇಂತಹ ಸಂಬಂಧಗಳಲ್ಲೂ ಬೆಸ್ಟ್ ಫ್ರೆಂಡ್, ಜಸ್ಟ್ ಫ್ರೆಂಡ್ ಎಂಬ ಎರಡು ಪ್ರತ್ಯೇಕ ಭಾವನೆ ಇದೆ. ತಮ್ಮ ಅಭಿರುಚಿ, ಆದ್ಯತೆ ಇನ್ನೂ ಹಲವಾರು ಕಾರಣಗಳಿಂದ ಈ ವಿಂಗಡಣೆಯಾಗಿರಬಹುದು. ನಿಖರ ಕಾರಣವನ್ನು ನಾನರಿಯೇ… ಆದರೆ ಇಂತಹ ವಿಂಗಡಣೆ ಉತ್ತಮವಲ್ಲಾ
ಲೇಖನ ಮುಗಿಸುವ ಮುನ್ನಾ
ತಮ್ಮ ಜೀವನದಲ್ಲಿ ಗುರುವಾಗಿ, ಬದುಕಿನ ಅತ್ಯುತ್ತಮ ವ್ಯಕ್ತಿಯಾಗಿ, ಅದೆಂತಹ ಶ್ರೇಷ್ಠರ ಮದ್ಯೆಯೂ ನನ್ನ ಸ್ನೇಹಿತ/ತೆ ಯೇ ಶ್ರೇಷ್ಠವೆಂದು ನಿಲ್ಲುವ ಶಕ್ತಿಯಾಗಿ, ನಮ್ಮೆಲ್ಲ ಅಭಿರುಚಿಗಳನ್ನು ಗೌರವಿಸುತ್ತಾ, ಹಿತವನ್ನು ಬಯಸುತ್ತಾ, ಮಾರ್ಗದರ್ಶಕರಾಗುವ ಸ್ನೇಹಿತರನ್ನು ಎಂದಿಗೂ ಕಳೆದುಕೊಳ್ಳಬೇಡಿ…
ಮತ್ತೊಮ್ಮೆ, ಮಗದೊಮ್ಮೆ ಎಲ್ಲಾ ಮಿತ್ರರಿಗೂ ಅಂತಾರಾಷ್ಟ್ರೀಯ ಸ್ನೇಹಿತರ ದಿನದ ಶುಭಾಶಯಗಳು….
✍🏻 ಪ್ರತೀಕ್ ಪರಿವಾರ ಮರಗೋಡು