fbpx

ನಡುರಾತ್ರಿಯ ನೀರವತೆ, ದಟ್ಟ ಕಾಡು, ಕಣಿವೆ, ಇಳಿಜಾರು, ಕೆಟ್ಟ ಮಳೆ, ಮನುಷ್ಯ ವಾಸನೆ ಹಿಡಿದು, ಕಾಲ್ಗಳಿಗೆ ಅಂಟಿ, ರಕ್ತ ಹೀರುತ್ತಿರುವ ಜಿಗಣೆ. ತೊಯ್ದು ತೊಪ್ಪೆಯಾಗಿ, ನಾಲ್ವರಲ್ಲಿ ಒಬ್ಬನಾಗಿ, ಸ್ಟ್ರಚ್ಚರಿಗೆ ಹೆಗಲುಕೊಟ್ಟು ಆ ಇಕ್ಕಟ್ಟಾದ ಕಣಿವೆಯಲ್ಲಿ ಏದುಸಿರು ಬಿಡುತ್ತಾ ಹೆಣ ಹೊರುತ್ತಿರುವ ನಾನು, ಎಲ್ಲವೂ ಕನಸ್ಸಿನಂತೆ ಅನಿಸುತ್ತಿತ್ತು. ಶವದ ಕೈ ಆ ಮಳೆಯಲ್ಲಿ ಇನ್ನಷ್ಟು ತಣ್ಣಗಾಗಿ ನನ್ನ ಕೈಗೆ ತಾಕುತ್ತಿತ್ತು ಆ ಬಲಗೈಯ ತಣ್ಣನೆಯ ಸ್ಪರ್ಶ ನನ್ನ ಅಂತರಾಳವನ್ನು ತಲುಪಿ, ಆರ್ದಗೊಳಿಸುತ್ತಿತ್ತು. ಶವದ ಎದೆಯಿಂದ ಚಿಮ್ಮಿದ್ದ ರಕ್ತ, ಮಳೆಯ ನೀರಿನಲ್ಲಿ ಬೆರೆತು, ನನ್ನ ಕೈ ಸವರಿ ನೆಲಕ್ಕೆ ತೊಟ್ಟಿಕ್ಕುತ್ತಿದ್ದದ್ದು ಆ ಕಾಷ್ಠ ಕತ್ತಲಲ್ಲೂ ನನ್ನ ಅರಿವೆ ಬರುತ್ತಿತ್ತು. ಸುಮಾರು ಇನ್ನೂರು ಮೀಟರ್ ಹೆಗಲು ಕೊಟ್ಟ ನನಗೆ ಇನ್ನು ಒಂದಡಿ ಆ ಕಣಿವೆ ಹತ್ತಲು ಸಾಧ್ಯವಿಲ್ಲ ಅನ್ನಿಸತೊಡಗಿ, ಕ್ಷೀಣ ಧ್ವನಿಯಲ್ಲಿ ನನ್ನ ಹಿಂದೆ ಬ್ಯಾಟರಿ ಹಿಡಿದು ಬರುತ್ತಿದ್ದ ಶಂಕರನಿಗೆ "ಸ್ವಲ್ಪ ಹೆಗಲು ಕೊಡು, ನನಗೆ ಆಗುತ್ತಿಲ್ಲ" ಅನ್ನುವಷ್ಟರಲ್ಲಿ, ನನ್ನ ಗಂಟಲ ನೀರು, ಆ ಮಳೆಯಲ್ಲು ಒಣಗಿ ಹೋಗಿತ್ತು. ಹೆಗಲು ಬದಲಿಸಿದ್ದೇ ತಡ. ನಾನು ಆ ಇಕ್ಕಟಾದ ರಸ್ತೆಯಲ್ಲಿ ಕುಸಿದು ಕೂತೆ. ಹೆಣ ಹೊತ್ತ ಪಡೆ ಮುಂದೆ ಮುಂದೇ ಸಾಗುತ್ತಿತ್ತು. ಮಳೆ ಮತ್ತಷ್ಟು ರಭಸ ಹೆಚ್ಚಿಸಿಕೊಂಡು ಸುರಿಯ ತೊಡಗಿತು, ಕಾಲಿಗಂಟಿದ್ದ ಜಿಗಣೆಗಳು ರಕ್ತ ಹೀರಿ ರಾಕ್ಷಸ ಗಾತ್ರ ತಲುಪಿತ್ತು.


ಆಗಸ್ಟ್ ಹದಿನಾಲ್ಕು ಬೋಪಣ್ಣನ ಕಾಲುಗಳು ನಡುಗುತ್ತಿತ್ತು. ಬೋಪಣ್ಣ ಎಷ್ಟೇ ಪ್ರಯತ್ನಿಸಿದರು ಆ ನಡುಕ ನಿಲ್ಲಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಬೋಪಣ್ಣನೊಂದಿಗೆ ಬಂದಿದ್ದ ಅವರ ಸಹಚರರು ನಮ್ಮ ಆಫೀಸಿನ ಹೊರಗೆ ನಿಂತಿದ್ದರು. ಅವರನ್ನು ಉದ್ದೇಶಪೂರ್ವಕವಾಗಿಯೇ ಬೋಪಣ್ಣ ಒಳಕ್ಕೆ ಬಿಟ್ಟುಕೊಂಡಿರಲಿಲ್ಲ. ಹೀಗೆ ನನ್ನಂತಹ ಎಳೆಯ ಹುಡುಗನ ಎದುರು ಹೀಗೆ ಬೋಪಣ್ಣ ನಡುಗುತ್ತಾ ನಿಲ್ಲುವುದನ್ನು ಅವರೇನಾದರೂ ನೋಡಿದರೆ ಬೋಪಣ್ಣನ ಇಮೇಜು ಮೂರಾಬಟ್ಟೆ ಆಗುತ್ತಿತ್ತು. ಆ ಕಾರಣ ಮೊದಲೇ ಅರಿತಿದ್ದ ಬೋಪಣ್ಣ ಅವರನ್ನು ಹೊರಗೆ ನಿಲ್ಲಿಸಿ, ಒಳಗೆ ಬಂದಿದ್ದರು.

ಈಗ ನಡುಗುತ್ತಾ “ವೇದಿಕೆ ಮೇಲಿರುವ ಗಣ್ಯರಿಗು, ವೇದಿಕೆಯ ಮುಂಭಾಗ ಆಸೀನರಾಗಿರುವ ಶ್ರಮಿಕ ವರ್ಗದ ಕಾರ್ಮಿಕರಿಗು ಹಾಗು ಅವರ ಕುಟುಂಬಕ್ಕೂ 73ನೇಯ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಕಾಮನೆಗಳು, ನಾನು ಜಿಲ್ಲಾ ಲಾರಿ ಮಾಲಿಕರ, ಚಾಲಕರ ಸಂಘದ ಅಧ್ಯಕ್ಷನಾಗಿ ಸತತ ನಾಲ್ಕನೇಯ ಬಾರಿ ಆಯ್ಕೆಯಾಗಿದ್ದು. ವರ್ಷಂಪ್ರತಿಯಂತೆ ಈ ಬಾರಿಯೂ ನಮ್ಮ ಸಂಘ ಹಮ್ಮಿಕೊಂಡಿರುವ ಈ ಸಂಭ್ರಮಾಚರಣೆಗೆ ನಿಮಗೆಲ್ಲರಿಗೂ ಆದರದ ಸ್ವಾಗತ. ಈ ವರ್ಷವೂ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ ನಿಮ್ಮ ನಿರೀಕ್ಷೆಗಳನ್ನು ಪೂರ್ಣಗೊಳಿಸುವ ಇರಾದೆ ಇದೇ” ಎಂದು ನಿಲ್ಲಿಸಿದ ಬೊಪಣ್ಣ

“ರಂಜು ಇದನ್ನು ಸ್ಪಲ್ಪ ಇನ್ನು ಚಿಕ್ಕದು ಮಾಡಕ್ಕೆ ಆಗಲ್ವ? ಇಷ್ಟನ್ನ ನೆನಪಲ್ಲಿ ಇಟ್ಟುಕೊಂಡು ಹೇಳಕ್ಕೆ ಕಷ್ಟ” ಎನ್ನುತ್ತಾ ಮಗುವಿನಂತಾದರೂ. ನಾನು ಶಿಸ್ತಿನ ಮೇಸ್ತರಿನಂತೆ ” ನೀವು ನಾಲ್ಕನೇ ವರ್ಷದ ಭಾಷಣ ಮಾಡ್ತಾ ಇರೋದು, ಸ್ಪಲ್ಪ ಗತ್ತು ಗಾಂಭೀರ್ಯ ಎಲ್ಲ ಬೇಕು, ಸುಮ್ಮನೆ ಪ್ರಾಕ್ಟಿಸ್ ಮಾಡಿ” ಎಂದು ಒತ್ತಾಯಿಸುತ್ತಿದ್ದೆ.

ವರ್ಷದ ಆಗಸ್ಟ್ ಹದಿನೈದರಂದು ‘ಜಿಲ್ಲಾ ಲಾರಿ ಮಾಲೀಕರ, ಚಾಲಕರ’ ಸಂಘದವರು ಏರ್ಪಡಿಸುವ ಸ್ವತಂತ್ರ ದಿನಾಚರಣೆಗೆ, ಸಂಘದ ಅಧ್ಯಕ್ಷ ಬೋಪಣ್ಣನಿಗೆ ಬೇರೆ ಯಾರೇ ಭಾಷಣ ಬರೆದುಕೊಟ್ಟು, ಅವರನ್ನು ಸಜ್ಜು ಮಾಡಿ, ಕಳುಹಿಸಿದರೂ ಅವರಿಗೆ ಸಮಾಧಾನ ಇಲ್ಲ. ಅವರು ಅಧ್ಯಕ್ಷರಾಗಿ ನಡೆಸಿದ ಎಲ್ಲಾ ಸಭಾ ಕಾರ್ಯಕ್ರಮಗಳಿಗು ಬೋಪಣ್ಣನಿಗೆ ಭಾಷಣ ಬರೆದುಕೊಟ್ಟು, ಕಂಠ ಪಾಠ ಮಾಡಿಸಿ ನಾನೇ ಕಳುಹಿಸಿ ಕೊಡಬೇಕು. ಹಾಗೆ ಕಳುಹಿಸುವುದಲ್ಲದೆ ನಾನೂ ಜೊತೆಗೆ ಹೋಗಿ, ವೇದಿಕೆ ಮೂಲೆಯಲ್ಲಿ ಕೂರಬೇಕು, ಅವರ ಸರದಿ ಬಂದಾಗ ವೇದಿಕೆಯಿಂದಲೇ ನನ್ನ ಕಡೆ ಮುಖ ಮಾಡುವ ಬೋಪಣ್ಣನಿಗೆ ಕಣ್ಸನ್ನೆ ಮೂಲಕ ದೈರ್ಯ ತುಂಬಬೇಕು. ಸಣ್ಣ ಮಕ್ಕಳಂತೆ ನಾನು ತಯಾರುಮಾಡಿ ಕೊಟ್ಟಂತೆ ಭಾಷಣ ಒಪ್ಪಿಸುವ ಬೋಪಣ್ಣ. ಭಾಷಣ ಮುಗಿಸಿ ನನ್ನತ್ತ ನೋಡಿ, ನನ್ನ ಉತ್ತರಕ್ಕಾಗಿ ನಿರೀಕ್ಷಿಸುತ್ತಾರೆ, ನಾನು ವೆಲ್‌ಡನ್ ಎಂದು ಕೈ ಸನ್ನೆ ಮಾಡಿದರೆ ಅವರು ಹಿಗ್ಗಿ ಮುಖದ ತುಂಬ ನಗುವನ್ನು ತಂದುಕೊಂಡು, ತಮ್ಮ ಖುರ್ಚಿಯಲ್ಲಿ ಹೋಗಿ ಕೂರುತ್ತಾರೆ. ಇದಿಷ್ಟು ಆಗದೇ ನನಗೆ ಯಾವ ಸಭೆಯಿಂದಲೂ ಬಿಡುಗಡೆ ಭಾಗ್ಯ ಇರುವುದಿಲ್ಲ.

ನನ್ನ ಎದುರಿಗೆ ಮಕ್ಕಳಂತೆ ಆಡುವ ಬೋಪಣ್ಣ, ಅಸಲಿಗೆ ಹೆಸರಾಂತ ವ್ಯಕ್ತಿತ್ವದ ಮನುಷ್ಯ. ನೀವೇನಾದರೂ ಮಲಯಾಳಂ ಸಿನಿಮಾ ನೋಡುವ ಅಭ್ಯಾಸ ಇರುವವರಾದರೆ ನಟ ‘ಕಲಾಭವನ್ ಮಣಿ’ಯನ್ನು ಮನಸ್ಸಿನಲ್ಲಿ ಊಹಿಸಿಕೊಳ್ಳಿ. ಥೇಟ್ ಹಾಗೆ ಇದ್ದ ಬೋಪಣ್ಣ ಮಣಿಗಿಂತ ಕೊಂಚ ಕುಳ್ಳಕ್ಕು, ಇಷ್ಟೇ ಇಷ್ಟು ಸಣ್ಣಕ್ಕೂ ಇದ್ದರಷ್ಟೆ.

ಈ ಬೋಪಣ್ಣ ಕೊಡಗಿನಲ್ಲಾದ ಗುಂಪುಘರ್ಷಣೆಯ ಸಲುವಾಗಿ ಹದಿನೈದು ದಿನ ಕಾರಗೃಹವನ್ನು ನೋಡಿಕೊಂಡು ಬಂದಿದ್ದರು, ನಗರದ ಒಂದು ದೊಡ್ಡ ಯುವ ಸಮೂಹಕ್ಕೆ ಲೀಡರ್ ನಂತಿದ್ದ ಇವರನ್ನು ಕಂಡರೆ ಹುಡುಗರಿಂದ, ವಯಸ್ಕರವರೆಗೂ ಒಂದು ರೆಸ್ಪೆಕ್ಟ್ ಇತ್ತು.
ಒಳ್ಳೆ ಮನುಷ್ಯ ಹಾಗು ಸ್ನೇಹತರಿಗೆ ಜೀವವನ್ನೇ ಕೊಡಲು ತಯಾರಿರುತ್ತಿದ್ದ ಇವರು, ಅದೇ ಕಾರಣಕ್ಕೆ ಸತತ ನಾಲ್ಕನೇ ಬಾರಿ, ಲಾರಿ ಯೂನಿಯನ್ನಿನ ಅವಿರೋಧ ಅಧ್ಯಕ್ಷರೂ ಆಗಿದ್ದರು.
ಈ ಬೋಪಣ್ಣನ ನಿಜವಾದ ಹೆಸರು ಬೇರೆಯೇ ಇತ್ತು. ಆ ಹೆಸರಿನ ಜೊತೆಗೆ ‘ಬೋಪಣ್ಣ’ ಎನ್ನುವ ಹೆಸರನ್ನು ಅವರೇ ಸುಮ್ಮನೆ ಇಟ್ಟುಕೊಂಡಿದ್ದರು. ಯಾಕೆ ಎಂದು ಕೇಳಿದಾಗ “ಹೆಸರಿಗೊಂದು ತೂಕ ಬೇಡವ ರಂಜು ಅದಕ್ಕೆ” ಅನ್ನುತ್ತಿದ್ದರು. ತುಂಬಾ ಉಲ್ಲಾಸದ ವ್ಯಕ್ತಿತ್ವದ ಬೋಪಣ್ಣ ನೋಡಲು ಎಷ್ಟು ಗಟ್ಟಿಯೋ, ಮನಸ್ಸಿನಿಂದ ಅಷ್ಟೇ ಮೃದುವಾಗಿದ್ದರು.
ಹೀಗೆ ಸ್ಥಳೀಯವಾಗಿ ಹೆಸರುವಾಸಿಯಾಗಿದ್ದ ಬೋಪಣ್ಣನಿಗು ನನಗೂ ಬಾರಿ ಗೆಳೆತನ ಇತ್ತು. ನನಗೆ ಅಪಾರ ಗೌರವವನ್ನು ನೀಡುತ್ತಿದ್ದ ಬೋಪಣ್ಣ, ನನ್ನ ಕುರಿತು ಯಾರಾದರೂ ಕೆಟ್ಟದನ್ನು ನುಡಿದರೆ ಕೆಂಡಾಮಂಡಲ ಆಗುತ್ತಿದ್ದರು. ಅದಕ್ಕೆ ಕಾರಣವೂ ಇತ್ತು. ನೋಡಲು ಅವರು ಗುರು, ನಾನು ಶಿಷ್ಯನಂತೆ ಕಾಣಿಸಿದರು. ಬಹುತೇಕ ಸಮಯದಲ್ಲಿ ನಾನು ಅವರಿಗೆ ಗುರುವಿನಂತೆ ಆಡುತ್ತಿದ್ದೆ. ಅವರೂ ಅನಿವಾರ್ಯವಾಗಿ ನನ್ನನ್ನು ಸಹಿಸಿಕೊಳ್ಳುತ್ತಿದ್ದರು. ಇಲ್ಲವಾದರೆ ನಾನು ಭಾಷಣ ಬರೆದುಕೊಡದೆ ಸತಾಯಿಸುತ್ತೇನೆ, ಎನ್ನುವ ಸಣ್ಣ ಭಯವೂ ಅವರಲ್ಲಿ ಇತ್ತು.

ಹಾಗಂತ ನಾನೇನು ಸುಖಾ-ಸುಮ್ಮನೆ ಭಾಷಣ ಬರೆದುಕೊಡುತ್ತಿರಲಿಲ್ಲ. ಬದಲಿಗೆ ಆಗಾಗ್ಗೆ ಬೋಪಣ್ಣ ನನ್ನನ್ನು ಅವರ ಮನೆಗೆ ಆಹ್ವಾನಿಸುತ್ತಿದ್ದರು. ರುಚಿ ರುಚಿಯಾದ ಖಾರ-ಖಾರ ಮಾಂಸದೂಟ ಮಾಡಿಸಿ, ನನಗೆ ಒಂದು ಫುಲ್ ಬಾಟಲಿ ಬೀಯರನ್ನೂ ಕುಡಿಸಿ, ಮನೆಗೆ ಹೋಗುವಾಗ ಮನೆಗೂ ಸ್ಪಲ್ಪ ಮಾಂಸ ಕಟ್ಟಿಕೊಡುತ್ತಿದ್ದರು.

ಆದರೇ ಆ ಮಾಂಸ ಯಾವುದೂ! ಎಂದು ಮಾತ್ರ ಅವರ ಬಳಿ ನಾನು ಕೇಳುವ ಹಾಗೆ ಇರಲಿಲ್ಲ, ಯಾರಿಗೂ ಈ ವಿಚಾರ ಹೇಳಕೂಡದೂ ಎನ್ನುವ ಶರತ್ತನ್ನು ಅವರು ಹಾಕಿದ್ದರು. ನಾನು ಅವರು ಕರೆದಾಗಲೆಲ್ಲ ಒಬ್ಬನೇ ಅವರ ಮನೆಗೆ ಹೋಗಿ, ಅವರ ಮಡದಿ ಗಾಂಧಾರಿ ಮೆಣಸು ಹಾಕಿ ಮಾಡುತ್ತಿದ್ದ ರುಚಿಕರ ಮಾಂಸದೂಟ ಸವಿದು. ಹೊಟ್ಟೆತುಂಬ ಬೀಯರ್ ಕುಡಿದು ಬರುತ್ತಿದ್ದೆ.
ಹಾಗೆ ಅವರು ಆಹ್ವಾನಿಸುವಾಗಲ್ಲೆಲ್ಲಾ ಅವರು ನನ್ನಲ್ಲಿ ಒಂದು ವಿಚಿತ್ರ ಬೇಡಿಕೆ ಇಡುತ್ತಿದ್ದರು. ಹಾಗು ಆ ಬೇಡಿಕೆ ಅವರ ಮಡದಿಯ ಕಿವಿಗೆ ಬೀಳದಂತೆ ಎಚ್ಚರ ಕೂಡ ವಹಿಸುತ್ತಿದ್ದರು.

“ರಂಜು ನೀನು ನನ್ನ ಕುರಿತು ಒಂದು ಕಥೆ ಬರಿಯ ಬೇಕು, ಈ ರವಿ ಬೆಳಗೆರೆ ಡಾನ್‌ಗಳ ಕುರಿತು ಬರೆಯುತ್ತಾರೆ ನೋಡು. ಆ ರೇಂಜಿಗೆ ಇರಬೇಕು” ಎಂದು ಅವರು ಕೇಳಿಕೊಳ್ಳುವಾಗಲ್ಲೆಲ್ಲಾ ನಾನು “ಅಣ್ಣ ನೀವು ಮೊದಲು ಡಾನ್ ಆಗಿ” ಮತ್ತೆ ನೋಡೋಣ ಎಂದು ಅವರನ್ನು ನಿರಾಸೆ ಮಾಡುತ್ತಿದ್ದೆ. ಆದರೆ ಒಂದಲ್ಲ ಒಂದು ದಿನ ಬರೆದುಕೊಡಬೇಕು ಇವರಿಗೊಂದು ಕಥೆ, ಅನ್ನುವ ಆಸೆ ನನಗೂ ಆಗುತ್ತಿತ್ತು.


ಹಾಗೆ ನಮ್ಮ ಆಫೀಸಿಗೆ ಬಂದು ಬೋಪಣ್ಣ ಭಾಷಣ ಕಲಿಯುತ್ತಿದ್ದರೆ. ಈ ರೌಡಿಗಳೆಲ್ಲ ಯಾಕೆ ಇವನನ್ನ ಭೇಟಿಮಾಡುತ್ತಾರೆ ಎನ್ನುವ ಗುಮಾನಿ ನನ್ನ ಪಕ್ಕದ ಆಫೀಸಿನವರಿಗಿತ್ತು. ನಾನು ಖ್ಯಾತನಾಮರೆಲ್ಲ ನನಗೆ ಖಾಸ ಖಾಸ ಎನ್ನುವಂತೆ ಅವರ ಮುಂದೆ ಗಂಭೀರವಾಗಿ ಓಡಾಡಿಕೊಂಡು ಅವರ ಕುತೂಹಲದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದೆ. ಈ ಬೋಪಣ್ಣ ಓಡಾಡುವಾಗ ಯಾವಾಗಲೂ ಮೂರು ನಾಲ್ಕು ಜನ ದಢೂತಿ ಸಂಗಡಿಗರು ಅವರೊಂದಿಗೆ ಇರುತ್ತಿದ್ದದ್ದು ಅವರ ಬರುವಿಕೆಗೆ ಬಿರುಗಾಳಿಯ ಸ್ಪರ್ಶನೀಡುತ್ತಿತ್ತು. ಆದರೆ ಒಳಗೆ ತರಗೆಲೆಯಂತೆ ನಡುಗುತ್ತಾ ಭಾಷಣ ಕಂಠಪಾಠ ಮಾಡುತ್ತಿದ್ದ ಆ ಬೋಪಣ್ಣ ಈ ಪ್ರಪಂಚದ ಯಾರಿಗೂ ಗೊತ್ತಿರಲಿಲ್ಲ. ಅಂದು ಆಗಸ್ಟ್ ಹದಿನೈದರ ಭಾಷಣಕ್ಕೆ ಕಡೆಯ ರಿಹರ್ಸಲ್ ಮುಗಿಸಿ, ಬೋಪಣ್ಣ ಹೋಗುವಾಗ. ನಾಳಿನ ಫಂಕ್ಷನ್ ಮುಗಿಸಿ, ನೇರ ಅವರ ಮನೆಗೆ ನಾನು‌ ಹೋಗುವಂತೆ ಆಹ್ವಾನಿಸಿದ್ದರು. ನಾನು "ಭಾಷಣ ಸರಿಯಾಗಿ ಮಾಡಿದರೆ ಮಾತ್ರ ಬರುತ್ತೇನೆ" ಎಂದು ತಮಾಷೆ ಮಾಡಿ ಕಳುಹಿಸಿದ್ದೆ. ಸಂಜೆ ನಾಲ್ಕು ಗಂಟೆಗೆ ಭಾಷಣ ಕಲಿಯಲು ಬಂದ ಬೋಪಣ್ಣ, ಆಫೀಸಿನಿಂದ ಅಂದು ಮರಳುವಾಗ ಸಮಯ ಎಂಟು ದಾಟಿತ್ತು.

ನಾನು ಮನೆ ತಲುಪಿ, ಬೋಪಣ್ಣ ಭಾಷಣ ಕಲಿಯುತ್ತಿದ್ದ ಚಂದವನ್ನು, ಅವರ ಮಗು ಮನಸ್ಸನ್ನು, ನೆನಪಿಸಿಕೊಂಡು ಮಂದಹಾಸದೊಂದಿಗೆ ತಲೆ ದಿಂಬಿಗೆ ತಲೆಯಾನಿಸಿದ್ದೆ. ನಿದ್ರೆ ಹತ್ತಿತ್ತು. ಎಲ್ಲೋ ಮೊಬೈಲ್ ರಿಂಗಣಿಸಿದ ಕ್ಷೀಣ ಶಬ್ದ ಕಿವಿಗೆ ಕೇಳಿಸುತ್ತಿತ್ತು. ಗಾಢ ನಿದ್ರೆಯಲ್ಲಿದ್ದ ನನಗೆ ನನ್ನ ಮೊಬೈಲ್ ಬಡಿದುಕೊಳ್ಳುತ್ತಿದೆ ಎಂದು ಅಂದಾಜು ಮಾಡಲು ಸ್ಪಲ್ಪ ಸಮಯ ಹಿಡಿಯಿತು. ಕರೆ ತುಂಡಾಗಿ ಮತ್ತೆ ಮತ್ತೆ ಬಡಿದುಕೊಳ್ಳತೊಡಗಿದಾಗ. ಅರ್ಧ ನಿದ್ರೆಯಲ್ಲೇ ಫೋನ್ ಕೈಗೆತ್ತಿಕೊಂಡು ಕಿವಿಗಿಟ್ಟೆ. ನನ್ನ ಭಾವ ಆಚೆ ತುದಿಯಿಂದ “ರಂಜು ವಿಷಯ ಗೊತ್ತಾಯ್ತಾ? ಶೂಟ್ ಔಟ್ ಆಗಿ ಬೋಪಣ್ಣ ತೀರಿಕೊಂಡರಂತೆ” ಅಂದ. ಕಾಲ ಸ್ಥಬ್ಧವಾಯಿತು. ಆಗಷ್ಟೇ ನಿದ್ರೆಯಿಂದ ಎಚ್ಚರಾದ ನನಗೆ, ಆ ಸುದ್ದಿಯನ್ನು ನಂಬಲೇ ಸುಮಾರು ಅರ್ಧತಾಸು ಹಿಡಿದಿತ್ತು, ನಾನು ಕಲ್ಲಿನಂತೆ ಹಾಗೆ ಕುಳಿತಿದ್ದೆ.
ಪುನಃ ಕರೆ, ಸ್ಪಷ್ಟೀಕರಣ.

ನಮ್ಮ ತಂದೆಗೆ ವಿಷಯ ತಿಳಿಸಿ, ತಂದೆಯೊಡನೆ ನಾನು ಘಟನಾಸ್ಥಳಕ್ಕೆ ತಲುಪುವಾಗ ನಡುರಾತ್ರಿ ಹನ್ನೆರಡು ದಾಟಿತ್ತು. ಅಲ್ಲಿ ಅದಾಗಲೇ ನೂರಾರು ಸಂಖ್ಯೆಯಲ್ಲಿ ಯುವಕರು ಜಮಾಯಿಸಿದ್ದರು. ಪೊಲೀಸ್ ಇಲಾಖೆಯ ಸಾಲು ಸಾಲು ವಾಹನಗಳು ನಿಂತಿದ್ದವು. ಗ್ರಾಮಾಂತರ ಠಾಣೆಯೇ ಅಲ್ಲಿಗೆ ದೌಡಾಯಿಸಿತ್ತು.

ಪೋಲೀಸರು “ಯಾರಾದರು ಹನ್ನೆರಡು ಜನ ಹುಡುಗರು ಮಾತ್ರ ಕಾಡಿಗೆ ಬನ್ನಿ, ಬಾಡಿ ಐಡೆಂಟಿಫಿಕೇಶನ್ ಮಾಡಿ, ಬಾಡಿನ ಇಲ್ಲಿಗೆ ತರೋಣ” ಅಂದ್ರು. ಹನ್ನೆರಡು ಜನರ ತಂಡ, ಕಾಡಿನೊಳಕ್ಕೆ ಲಗ್ಗೆ ಇಟ್ಟಿತು. ಭಯಂಕರ ಮಳೆಯೂ ಸುರಿಯತೊಡಗಿತು.

ಸಮಯ ಮಂದಗತಿಯಲ್ಲಿ ಸಾಗುತ್ತಿತ್ತು. ಅಲ್ಲೆ ಬಂದು ನಿಂತಿದ್ದ ಆಟೋ ಒಂದನ್ನು ಹತ್ತಿ ನಾನು ತಂದೆ ಸುಮ್ಮನೆ ಕುಳಿತೋ. ಅಷ್ಟೂ ಜನರ ನಡುವೆ ಮೌನ ತಾಂಡವ ಆಡುತ್ತಿತ್ತು.

ಸುಮಾರು ಒಂದೂವರೆ ಗಂಟೆ, ಕಾಡಿಗೆ ಹೋಗಿದ್ದ ತಂಡದಿಂದ ಮತ್ತೆ ಕರೆ “ಇನ್ನೂ ಹನ್ನೆರಡು ಜನ ಹುಡುಗರು ಬನ್ನಿ, ಬಾಡಿ ಸಾಗಿಸಲು ಕಷ್ಟ ಆಗುತ್ತಿದೆ” ಎನ್ನುವ ಸಂದೇಶ. ಈ ಬಾರಿಯ ತಂಡದಲ್ಲಿ ನಾನು ಜೊತೆಯಾದೆ. ಸುಮಾರು ಮೂರು ಕಿ.ಲೋ ಮೀಟರ್ ದುರ್ಗಮ ಕಾಡಿನ, ಕಣಿವೆ ಇಳಿಜಾರಿನಲ್ಲಿ ಜಾರುತ್ತಾ..ಹೋಗಿ ತಲುಪುವಷ್ಟರಲ್ಲಿ. ಮೊದಲು ಹೋಗಿದ್ದ ತಂಡದವರು ಅರ್ಧ ದಾರಿಗೆ ದೇಹವನ್ನು ತಂದು ಮಲಗಿಸಿದ್ದರು.

ಬಂದೂಕಿನ ತೋಟ ನೇರವಾಗಿ ಎದೆಗೆ ಬಿದ್ದು ಚದುರಿಹೋಗಿತ್ತು, ಮಳೆಗೆ ರಕ್ತ ಕರಗಿ ನೀರಾಗಿ ದೇಹದಿಂದ ಸೋರುತ್ತಿತ್ತು. ಬೋಪಣ್ಣ ಬಿಟ್ಟಕಣ್ಣಲ್ಲೇ ಸತ್ತು ಮರಗಟ್ಟಿ ಮಲಗಿದ್ದರು.

ಅಲ್ಲಿಂದ ನಾವು ನಾಲ್ಕು ಜನರ ತಂಡವಾಗಿ, ಬೋಪಣ್ಣನನ್ನು ಹೆಗಲಿಗೇರಿಸಿಕೊಂಡು ಕಣಿವೆಯ ದುರ್ಗಮ ಬೆಟ್ಟವನ್ನು ಏರತೊಡಗಿದೋ, ಇನ್ನೂರು ಮೀಟರಿಗೆ ನನ್ನ ಗಂಟಲಿನ ಪಸೆ ಒಣಗಿ, ಏದುಸಿರು ಬಿಡುತ್ತಾ, ಹೆಗಲು ಬದಲಿಸಿ, ಕುಸಿದು ಕೂತೆ, ಸಾವರಿಸಿಕೊಂಡು ಮತ್ತೆ ಹತ್ತ ತೊಡಗಿದೆ. ಸುಮಾರು ಮೂರುಗಂಟೆ ತಡರಾತ್ರಿಯ ಹೊತ್ತಿಗೆ ದೇಹ ಮುಖ್ಯ ರಸ್ತೆ ತಲುಪಿತು.
ನಾನು ಒದ್ದೆ ಮುದ್ದೆಯಾಗಿ ಬಂದು ಆಟೋ ಹತ್ತಿದೆ. ಮೊಬೈಲ್ ಕೈಗೆತ್ತಿಕೊಂಡು ವರದಿ ಒಂದನ್ನು ಟೈಪಿಸತೊಡಗಿದೆ.

“ಬ್ರೇಕಿಂಗ್ ನ್ಯೂಸ್:
ಅಕ್ರಮ ಬೇಟೆ. ಜಿಲ್ಲಾ ಲಾರಿ ಮಾಲೀಕರ, ಚಾಲಕರ ಸಂಘದ ಅಧ್ಯಕ್ಷ ಬೋಪಣ್ಣ(೩೫) ಆಕಸ್ಮಿಕ ಗುಂಡೇಟಿಗೆ ಬಲಿ” ಎಂದು ಫೋಟೋದೊಂದಿಗೆ ವರದಿ ಹಾಕಿದೆ.


ಕೈಯಲ್ಲಿ ನಾ ಬರೆದುಕೊಟ್ಟ ಭಾಷಣವನ್ನು ನಡುಗುತ್ತಾ ಓದಿ ತಾಲೀಮು ನಡೆಸುತ್ತಿದ್ದ, ಮನೆಗೆ ಕರೆದು ನನಗೆ ಗುರು ಕಾಣಿಕೆಯಾಗಿ ಬೀಯರನ್ನು, ಮಾಂಸದ ಊಟವನ್ನೂ ಹೊಟ್ಟೆ ತುಂಬಾ ತಿನ್ನಿಸಿ, ಕುಡಿಸಿ. ನಾನು “ಖಾರಾ ಖಾರಾ..” ಎಂದು ನೀರಿಗಾಗಿ ಚಡಪಡಿಸುವಂತೆ ಕಾಡಿಸಿ, ಸಂಭ್ರಮಿಸುತ್ತಿದ್ದ, ಡಾನ್ ರೇಜಿಂಗೆ ಒಂದು ಕಥೆ ಬರೆದುಕೊಡುವಂತೆ ಬೇಡಿಕೆ ಇಡುತ್ತಿದ್ದ ಬೋಪಣ್ಣ ಇನ್ನೀಗ ನೆನಪು ಮಾತ್ರ ಅನಿಸುತ್ತಿತ್ತು.
ದೇಹವನ್ನು ಹೊತ್ತ ಆಂಬುಲನ್ಸ್ ಮುಖ್ಯ ರಸ್ತೆಯಿಂದ ಜಿಲ್ಲಾ ಶವಾಗಾರದೆಡೆಗೆ ಹೊರಟಿತು, ಜೊತೆಗೆ ಪೋಲೀಸು ವಾಹನಗಳು, ಅವರ ಗೆಳೆಯರ ಅಪಾರ ಬಳಗದ ವಾಹನಗಳು ಅಲ್ಲಿಂದ ಕದಲಿತು. ನಾನು ನನ್ನ ಬೈಕು ಹತ್ತಿ ತಂದೆಯನ್ನು ಜೊತೆಯಾಗಿಸಿಕೊಂಡು ಆ ವಾಹನಗಳನ್ನು ಹಿಂಬಾಲಿಸಿದೆ.

ಕಾಲ ನಿಧಾನಗತಿಯಲ್ಲಿ ಮುಂದೆ ಸರಿಯುತ್ತಿತ್ತು. ಮಳೆ ಸುರಿಯುತ್ತಲೇ ಇತ್ತು. ಕಾಲಿಂದ ರಕ್ತಹೀರಿ ಧಣಿದಿದ್ದ ದೈತ್ಯಗಾತ್ರದ ಜಿಗಣೆಗಳು ಒಂದೊಂದೆ ಉದುರಿ ಬೀಳುತ್ತಿತ್ತು. ಅದು ರಕ್ತ ಹೀರಿದ ಸ್ಥಳಗಳಿಂದೆಲ್ಲಾ ರಕ್ತ ಸೋರುತ್ತಿತ್ತು‌‌, ಮಳೆನೀರಿನೊಂದಿಗೆ ಆ ರಕ್ತ ಬೆರೆತು‌ ಹರಿಯುತ್ತಿತ್ತು.

ರಂಜಿತ್ ಕವಲಪಾರ

error: Content is protected !!
satta king chart