ಹಿಂದೂಪರ ಸಂಘಟನೆಗಳಿಂದ ಮುಂಜಾನೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸ ಮೊಳಗಿಸಲು ನಿರ್ಧಾರ!
ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಹಿಂದೂಪರ ಸಂಘಟನೆಗಳು ನಾಳೆಯಿಂದ ಎಲ್ಲೆಡೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸ ಮೊಳಗಿಸಲು ನಿರ್ಧರಿಸಿವೆ.
ಐನೂರಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುಪ್ರಭಾತ ಅಭಿಯಾನದ ಮೂಲಕ ಹನುಮಾನ್ ಚಾಲಿಸ ಪಠನೆ ಮಾಡಲು ಹಿಂದೂಪರ ಸಂಘಟನೆಗಳು ಮುಂದಾಗಿವೆ.
ಅಜಾನ್ ಧ್ವನಿವರ್ಧಕವನ್ನು ನಿಯಂತ್ರಿಸಬೇಕು. ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸ ಬೇಕೆಂದು ಸರ್ಕಾರಕ್ಕೆ ಶ್ರೀರಾಮಸೇನೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ನೀಡಿದ್ದ ಗಡುವು ನಾಳೆಗೆ (ಮೇ 9) ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ನಾಳೆಯಿಂದ ವಿವಿಧ ದೇವಾಲಯಗಳಲ್ಲಿ ರಾಮಭಜನೆ, ಹನುಮಾನ್ ಚಾಲಿಸ್, ಸುಪ್ರಭಾತ ಅಭಿಯಾನ ನಡೆಸಲು ಮುಂದಾಗಿವೆ.
ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರ ಧ್ವನಿವರ್ಧಕಗಳನ್ನು ತೆರವು ಮಾಡಿದರೆ ನಾವು ನಮ್ಮ ಹೋರಾಟದಿಂದ ಹಿಂದೆ ಸರಿಯುತ್ತೇವೆ. ಇಲ್ಲದಿದ್ದರೆ ನಾಳೆಯಿಂದ ಹನುಮಾನ್ ಚಾಲಿಸ ಮೊಳಗಲಿವೆ. ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂಬ ಎಚ್ಚರಿಕೆಯನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನೀಡಿದ್ದಾರೆ.
ಅಜಾನ್ ವಿರುದ್ಧ ಸಮರ ಸಾರಿರುವ ಹಿಂದೂಪರ ಸಂಘಟನೆಗಳಿಗೆ ವಿವಿಧ ಮಠದ ಮಠಾೀಧಿಶರೂ ಕೈ ಜೋಡಿಸಿದ್ದಾರೆ. ನಾಳಿನ ಹೋರಾಟದ ರೂಪುರೇಷೆ ಸಂಬಂಧ ಇಂದು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧೆಡೆ ಸಭೆಗಳು ನಡೆದಿವೆ.
ರಾಜಾಜಿನಗರದ ಕೆಂಪೇಗೌಡ ಸಮುದಾಯ ಭವನದಲ್ಲಿ ಹಿಂದೂ ಮಹಾಸಭಾ, ರಾಷ್ಟ್ರ ರಕ್ಷಣಾ ಪಡೆ, ಹಿಂದೂ ಜನ ಜಾಗೃತಿ ಸಮಿತಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಹಿಂದೆ ಹಿಜಾಬ್ ವಿರೋಧ ಹೋರಾಟ, ಹಾಲಾಲ್ ಬಾಯ್‍ಕಟ್ ಅಭಿಯಾನ ಮತ್ತು ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಆಗ್ರಹಿಸಿ ನಡೆದ ಹೋರಾಟಗಳಲ್ಲಿ ಭಾಗಿಯಾದವರ ಮೇಲೆ ಹೂಡಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ಚರ್ಚೆ ನಡೆಯಲಿದೆ.
ನಾಳೆಯಿಂದ ಮನೆ ಮನೆ ರಾಮಭಜನೆ ಅಭಿಯಾನ ಆರಂಭಿಸಲಾಗುವುದು. ಅತ್ತ ಕಲಬುರಗಿಯಲ್ಲಿ ಮಸೀದಿಗಳಲ್ಲಿ ಲೌಡ್‍ಸ್ಪೀಕರ್ ಬಳಸಿ ಅಜಾನ್ ಕೂಗುವ ಪದ್ಧತಿ ವಿರೋಧಿಸುತ್ತಿರುವ ಶ್ರೀರಾಮ ಸೇನೆಯು ಮಸೀದಿಗಳ ಸಮೀಪದ ದೇವಸ್ಥಾನಗಳಲ್ಲಿ ಲೌಡ್‍ಸ್ಪೀಕರ್‍ಗಳಲ್ಲೇ ಹನುಮಾನ್ ಚಾಲಿಸ ಮತ್ತು ಭಜನೆಗಳನ್ನು ಮೊಳಗಿಸಲು ಮುಂದಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಘಟಕದ ರಾಜ್ಯ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಬಳಿಯ ದೇವಸ್ಥಾನದಲ್ಲಿ ಮಧ್ಯಾಹ್ನ 12ರಿಂದ 2 ಗಂಟೆವರೆಗೆ ಭಜನೆ, ಹನುಮಾನ್ ಚಾಲಿಸ ಪಠಿಸಲಾಗುವುದು ಎಂದು ಹೇಳಿದ್ದಾರೆ.