ಭಾರತದ ಭವಿಷ್ಯತ್ತಿನ ಟೆನ್ನಿಸ್ ತಾರೆ ಕಂಜಿತಂಡ ದಾನ್ವಿ ದೇಚಮ್ಮ!
೧೨ನೇ ಶತಮಾನದಲ್ಲಿಯೇ ಆರಂಭವಾದ ಕ್ರೀಡೆ ಟೆನ್ನಿಸ್.!ಟೆನ್ನಿಸ್ ಒಂದು ರಾಕೆಟ್ ಬಾಲ್ ನೆಟ್ ಬಳಸಿ ಆಡುವ ಗೇಮ್. ಲಾಂಗ್ ಟೆನ್ನಿಸ್,ಅತೀ ದೀರ್ಘಕಾಲ ಅಂದರೆ ಅಂಗಣದಲ್ಲಿ ನಿರಂತರವಾಗಿ ಆಡುವ, ಹಾಕಿ ಆಟಕ್ಕಿಂತಲೂ ಹೆಚ್ಚಿನ ಕ್ಷಮತೆಯಿಂದ ಆಡಬೇಕಾದಂತಹ ಕ್ರೀಡೆ. ಹಾಗಾಗಿ ಇದಕ್ಕೆ ದೇಹದಾಢ್ಯತೆ, ಶಕ್ತಿ, ಏಕಾಗ್ರತೆ, ಪುಷ್ಠಿ ಹೆಚ್ಚಾಗಿಯೇ ಇರಬೇಕು. ಇಷ್ಟು ಮಾತ್ರವಲ್ಲದೆ ತ್ರಾಣ ಶಕ್ತಿ, ಇಚ್ಚಾ ಶಕ್ತಿ ಜೊತೆಗೆ ಅಪಾರ ಪ್ರೋತ್ಸಾಹ ದೊರೆತಾಗ ಅತ್ಯಂತ ಯಶಸ್ಸುಗಳಿಸುವ ಕ್ರೀಡೆ ಇದು.
ಬ್ರಿಟನ್ ಫ್ರಾನ್ಸ್‌ನಂತಹ ಕ್ರೀಡಾಪಟುಗಳಿಗೆ ಮಾತ್ರ ಸೀಮಿತ ಎನ್ನುವಂತಿದ್ದ ಕ್ರೀಡೆ ವಿಶ್ವ ಪ್ರತಿಷ್ಠಿತ ಆಟಗಳ ಸಾಲಿನಲ್ಲಿ ಸೇರಿದ್ದು, ಪುರುಷರಲ್ಲಿ ರೋಜರ್ ಫೆಡರರ್, ಕೆವಿನ್ ಆಂಡ್ರಸನ್, ರಫೆಲ್ ನಡಾಲ್, ನೊವಾಕ್ ಡ್ಜಕೋವಿಕ್ ಮುಂತಾದವರು. ಮಹಿಳೆಯರಲ್ಲಿ ಮಾರ್ಟಿನಾ ನವರಾಟಿಲೋವ, ಸ್ಟೆಫಿಗ್ರಾಫ್, ಮೊನಿಕಾ ಸೆಲೆಸ್, ಮಾರ್ಟಿನಾ ಹಿಂಗಿಸ್, ಕ್ರಿಸ್ ಎವರ್ಟ್ ಮುಂತಾದವರು ವಿಶ್ವ ಚಾಂಪಿಯನ್ ಪಟ್ಟದಲ್ಲಿ ನಿರಂತರ ರಾರಾಜಿಸಿದ್ದಾರೆ…
ಟೆನ್ನಿಸ್ ಫೆಡರೇಷನ್ ಗಮನಕ್ಕೆ ಭಾರತ ಬರುವುದೇ ಇಲ್ಲವೆಂಬ ಕಾಲವೊಂದಿತ್ತು, ಆಗ ಗ್ರಾಂಡ್ ಸ್ಲಾಮ್, ಡೇವಿಸ್ ಕಪ್ ನಂತಹ ಪ್ರತಿಷ್ಠಿತ ಕೂಟಗಳಲ್ಲಿ ಭಾಗವಹಿಸುವುದು ಮಾತ್ರವಲ್ಲ ಪ್ರಶಸ್ತಿಗಳಿಸುವುದರ ಮೂಲಕ ಭಾರತದ ಹೆಸರು ವಿಶ್ವ ಟೆನ್ನಿಸ್ ಸಂಸ್ಥೆ ಗುರುತಿಸುವಂತೆ ಮಾಡಿದ್ದೇ ಲಿಯಾಂಡರ್ ಪೇಸ್, ಸಾನಿಯಾ ಮಿರ್ಜಾ, ನಮ್ಮ ಹೆಮ್ಮೆಯ ಕೊಡಗಿನವರೇ ಆದ ರೋಹನ್ ಬೋಪಣ್ಣನಂತಹ ಕ್ರೀಡಾ ಕಲಿಗಳು. ಇದೀಗ ಕೊಡಗಿನ ಕುವರಿ ಆಫ್ರಿಕಾದ ಉಗಾಂಡದಲ್ಲಿ ನೆಲೆಸಿರುವಂತಹ 11ವರ್ಷದ ದಾನ್ವಿ ದೇಚಮ್ಮ ಉಗಾಂಡದ 12 ವರ್ಷ ಒಳಗಿನ ರುವಾಂಡ ಟೆನ್ನಿಸ್ ಫೆಡರೇಷನ್ ಆಯೋಜಿಸಿದ ರುವಾಂಡ, ಬುರುಂಡಿ, ತಾನ್ಜೇನಿಯಾ, ಕೀನ್ಯ, ಉಗಾಂಡ ರಾಷ್ಟ್ರ ಸ್ಪರ್ಧಿಸಿದ್ದ ಅಂತರಾಷ್ಟ್ರೀಯ ಕೂಟದಲ್ಲಿ ನಂ.1 ಜ್ಯೂ ಚಾಂಪಿಯನ್ ಆಗಿ ಹೊರಹೊಮ್ಮಿ ಎಲ್ಲರ ಗಮನ ಸೆಳೆದಿದ್ದಾಳೆ. ಅಲ್ಲದೆ ಕೀನ್ಯಾ ಜ್ಯೂನಿಯರ್ ಕೂಟ, ಕೊಲಾಲ ಕಪ್, ಕ್ಯಾಪ್ಟನ್ ಆಫ್ ಉಗಾಂಡ, ಈಸ್ಟ್ ಆಫ್ರಿಕನ್ ಚಾಂಪಿಯನ್ ಶಿಪ್ ಹೀಗೆ ಉಗಾಂಡದಲ್ಲಿ ಆಕೆಯ ಸಾಧನೆಯ ಉದ್ದ ಪಟ್ಟಿಯೇ ಇದೆ.
ಈಕೆಯ ಈ ಸಾಧನೆಗೆ ಉದ್ಯೋಗ ನಿಮಿತ್ತ ಆಫ್ರಿಕಾದ ಉಗಾಂಡದಲ್ಲಿ ನೆಲೆಸಿರುವ ಆಕೆಯ ತಂದೆ ಕಂಜಿತಂಡ ಬೋಪಣ್ಣ ಸೋಮಯ್ಯ, ತಾಯಿ ಕೃತಿನ್(ತಾಮನೆ ಅಡ್ಡಂಡ)ಮತ್ತು ಹಿರಿಯ ಸಹೋದರಿ ಕಾವೇರಮ್ಮಳ ಅಪಾರ ಪ್ರೋತ್ಸಾಹ ಕಾಳಜಿಯೇ ಕಾರಣವಾಗಿದೆ. ಹೀಗಾಗಿ ಉಗಾಂಡದಲ್ಲಿಯೇ ಹುಟ್ಟಿ ಬೆಳೆದ ದಾನ್ವಿ ಇದೀಗ ಹೆಚ್ಚಿನ ತರಬೇತಿಗೆಂದೆ ಸಂತೋಷವಾಗಿ ಆಕೆಯ ತಾಯಿಯೊಂದಿಗೆ ಭಾರತಕ್ಕೆ ಬಂದಿಳಿದಿದ್ದಾಳೆ.
ಬೆಂಗಳೂರಿನ ರೋಹನ್ ಕ್ರೀಡಾ ಅಕಾಡೆಮಿಯಲ್ಲಿ ಸೇರ್ಪಡೆಗೊಂಡಿರುವ ದಾನ್ವಿ ದೇಚಮ್ಮಳ ತರಬೇತಿ ಹಾಗು ತರಗತಿಗಳು ಮುಂದಿನ ಸೋಮವಾರದಿಂದ ಆರಂಭವಾಗುತ್ತಿದೆ. ತಂದೆಯ ಕನಸನ್ನು ನನಸಾಗಿಸುತ್ತಿರುವ ದಾನ್ವಿ ಐದು ವರ್ಷಕ್ಕೆ ರಾಕೆಟ್ ಹಿಡಿದು ಹತ್ತು ವರ್ಷದೊಳಗಿನ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಪಡೆದು ತನ್ನ ಪ್ರತಿಭೆಯನ್ನು ಆಗಲೇ ಅನಾವರಣಗೊಳಿಸಿದ್ದಳು.
ಇದೀಗ ಹನ್ನೆರಡು ವರ್ಷದೊಳಗಿನ ರಾಷ್ಟ್ರ, ಅಂತರಾಷ್ಟ್ರೀಯ ಆಟಗಳಲ್ಲಿ ನಿರಂತರವಾಗಿ ಗೆಲುವು ಸಾಧಿಸುವ ಮೂಲಕ ದಾನ್ವಿ ವಿಶ್ವದ ಗಮನ ಸೆಳೆದಿದ್ದಾಳೆ. ಭಾರತದ ತಾರೆಯಾಗಿ ವಿಶ್ವ ಟೆನ್ನಿಸ್ ಲೋಕದ ಆಶಾಕಿರಣವಾಗಿ ಗೋಚರಿಸುತ್ತಿರುವ ದಾನ್ವಿ ಕೊಡಗಿನ ಕೀರ್ತಿಯನ್ನೂ ಉತ್ತುಂಗಕ್ಕೇರುವಂತೆ ಮಾಡುವತ್ತ ಇಟ್ಟಿರುವ ಹೆಜ್ಜೆಗೆ, ಆಕೆಯ ಕಠಿಣ ಪರಿಶ್ರಮಕ್ಕೆ ಎಲ್ಲರ ಪ್ರೋತ್ಸಾಹ ಆಶೀರ್ವಾದ ಇರಲಿ. ಅಂತೆಯೇ ದಾನ್ವಿದೇಚಮ್ಮಳ ಉಜ್ವಲ ಟೆನ್ನಿಸ್ ಜೀವನಕ್ಕಾಗಿ ಸುದ್ಧಿಸಂತೆ ಕುಟುಂಬವೂ ಹೃತ್ಪೂರ್ವಕ ಶುಭಕಾಮನೆಗಳನ್ನು ಕೋರುತ್ತದೆ.
ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್