‘ಮಾಕೋನ ಏಕಾಂತ’
ಪುಸ್ತಕ ವಿಮರ್ಶೆ
ಗುರುಗಳ ಸೂಚನೆಯಂತೆ ಹಾಲಿಗೆ ಸಕ್ಕರೆ ಹಾಕಿ ಕುಡಿಯಲು ಶುರುಮಾಡಿದ ನಂತರ ಗಹನವಾದ ಬದಲಾವಣೆ ನನ್ನಲ್ಲಿ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ.
“ನೀನು ಸಾಕಷ್ಟು ಇಷ್ಟಪಟ್ಟ ಯಾವುದಾದರೂ ನಿನ್ನಿಂದ ಕೊಂಚ ಕೊಂಚವೇ ದೂರಗುತ್ತಿದೆ ಎನ್ನುವ ಸೂಚನೆ ಸಿಕ್ಕಿದ ತಕ್ಷಣವೇ ನೀನೇ ಅದನ್ನು ದೂರವಿಡಲು ಅಣಿಯಾಗು, ಮನಸ್ಸನ್ನು ಗಟ್ಟಿಮಾಡಿಕೊ, ಕಷ್ಟವಾಗಬಹುದು ಆದರೆ ಆದ್ಹಾಗೆ ದೂರಸರಿದ ವೇದನೆಗಿಂತ ನೀನಾಗೆ ದೂರವಿಡುವ ಯೋಚನೆ ನಿನಗೆ ಅಷ್ಟಾಗಿ ನೋವನ್ನು ನೀಡಲಾರದು” ಎಂದಿದ್ದರು.
ಅವರ ನುಡಿಯಂತೆ ಕೋವಿಡ್ ಭಾದೆಯ ನಂತರ ಕೊಂಚಕೊಂಚವೆ ಮುನಿಸಿಕೊಂಡು ಉದುರುತ್ತಾ ದೂರವಾಗುತ್ತಿದ್ದ ತಲೆ ಕೂದಲನ್ನು ನಾನೇ ಸ್ವತಃ ತೆಗೆಸಿ ಒಂದಿಷ್ಟು ನಿರಾಳನಾಗಿದ್ದೇನೆ.
ಈ ನಡುವೆ ಈ ಹಿಂದೆ ಉಪಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದ ‘ಕೂರ್ಗ್ ಎಕ್ಸ್‌ಪ್ರೆಸ್’ ವಾರಪತ್ರಿಕೆಗೆ ಬಡ್ತಿ ಹೊಂದಿ ಸಂಪಾದಕನೂ ಆಗಿದ್ದೇನೆ.
ಹಾಗೆ ಕೂದಲು ತೆಗೆಸಿಕೊಂಡ ನನ್ನನ್ನು ನೋಡಿದ ಅಷ್ಟೂ ಜನರು ಈಗ ನನ್ನ ಹಳೆಯ ಪ್ರೇಮ ಪುರಾಣಗಳ ಕುರಿತು ಪ್ರಶ್ನಿಸುತ್ತಿಲ್ಲ ಹಾಗು ಕೂದಲು ತೆಗೆಯಲು ಕಾರಣವೇನು? ಎನ್ನುವುದನ್ನೇ ಕೇಳುತ್ತಿದ್ದಾರೆ. ನಾನು ಒಬ್ಬೊಬ್ಬರಿಗೂ ಒಂದೊಂದು ನೆಪಹೇಳುತ್ತಾ ಈ ಮೂರುದಿನ ತಳ್ಳಿದ್ದೇನೆ. ಅಸಲಿ ಕಾರಣ ನೀವು ಮೇಲೆ ಓದಿದ್ದೀರಾ. “ನಮ್ಮಿಂದ ದೂರಾಗಲು ಪ್ರಯತ್ನಿಸುವುದನ್ನು ನಾವೇ ದೂರವಿಡಬೇಕು” ಎನ್ನುವ ಗುರುಗಳ ವೇದ ವಾಕ್ಯವನ್ನು ಇನ್ನು ಮುಂದೆ ಎಲ್ಲಾ ವಿಚಾರಗಳಲ್ಲೂ ಅನುಸರಿಸಲು ನಿರ್ಧರಿಸಿದ್ದೇನೆ.
ಈ ವಾರ ಸುಂದರ ಕಥೆ ಪುಸ್ತಕ ಒಂದನ್ನು ಓದಿದ್ದೇನೆ. ಅದೆಷ್ಟು ಸುಂದರ ಕಥೆಗಳು ಆ ಪುಸ್ತಕದೊಳಗಿದೆ ಎಂದರೆ! ಓದಿದ ನನಗೆ ಅದನ್ನು ನಿಮಗೆ ಹೇಳದಿದ್ದರೆ ಉಸಿರು ಕಟ್ಟಿ ಸತ್ತೇ ಹೋಗುತ್ತೇನೆ ಅನಿಸತೊಡಗಿದೆ. ಹಾಗೆ ಉಸಿರು ಕಟ್ಟಿ ಸಾಯುವುದನ್ನು ತಪ್ಪಿಸುವ ಸಲುವಾಗಿ ನಾನು ಕಥೆಗಳ ಕುರಿತು ನನ್ನ ಓದಿನ ಅನುಭವದ ಕುರಿತು ಇಲ್ಲಿ ಹೇಳುತ್ತಿದ್ದೇನೆ.
ಈ ಪುಸ್ತಕದ ಕುರಿತು ಒಂದಿಷ್ಟು ನಾಚಿಕೆ ಇಟ್ಟುಕೊಂಡೆ ನಾನು ಬರೆಯುತ್ತಿದ್ದು ನನ್ನ ನಾಚಿಕೆಗೆ ಕಾರಣವನ್ನು ಕೊನೆಯಲ್ಲಿ ಹೇಳುತ್ತೇನೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ‘ಕಾವ್ಯ ಕಡಮೆ’ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬಳೇನೂ ಅಲ್ಲ. ಇದೀಗ ದೂರದ ಬ್ರಿಡ್ಜ್‌ವಾಟರ್- ನ್ಯೂಜರ್ಸಿಯಿಂದಲೇ ಎಂಟು ಕಥೆಗಳನ್ನು ಬರೆದು ‘ಛಂದ ಪುಸ್ತಕ ಬಹುಮಾನ’ ಗಿಟ್ಟಿಸಿಕೊಂಡಿರುವ ಇವರದ್ದು ಇದು ಮೊದಲ ಪುಸ್ತಕವೂ ಅಲ್ಲ, ಮೊದಲ ಪುರಸ್ಕಾರವೂ ಅಲ್ಲ.
ಇವರ ಪರಿಚಯ ಓದಿದ ನನಗೆ. ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಪದವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ ಯುವ ಪುರಸ್ಕಾರ ಸೇರಿದಂತೆ ತನ್ನ ಕಾದಂಬರಿಗೆ, ನಾಟಕಗಳಿಗೆ, ಕವನ ಸಂಕಲಗಳಿಗೆ ಹಾಗು ಪ್ರಬಂಧ ಸಂಕಲನಕ್ಕೆ ದೊರಕಿರುವ ಸಾಲು ಸಾಲು ಗೌರವ, ಪುರಸ್ಕಾರಗಳನ್ನು ನೋಡಿ “ಛೇ ಇವಮ್ಮನಿಗೆ ಇದೆಂತ ಆಸೆಯಪ್ಪ ಛಂದ ಪುಸ್ತಕ ಬಹುಮಾನವೂ” ನನಗೇ ಬೇಕು ಅಂತ ಕಥೆ ಬರೆದು ಕಳಿಸಿದ್ದಾರಲ್ಲ ಅಂತ ಅನಿಸದೇ ಇರಲಿಲ್ಲ.
ಹಾಗೆ ಅನಿಸಿ, ಮುಖ ಸ್ವಲ್ಪ ಗಂಟು ಮಾಡಿಕೊಂಡೆ ನಾನು ‘ಮಾಕೋನ ಏಕಾಂತ’ ಪುಸ್ತಕದ ಪುಟ ತೆರೆದೆ.
ಮೊದಲ ಕಥೆ ’ಮಾಕೋನ ಏಕಾಂತ’ ಓದಿ ಮುಗಿಸುವಷ್ಟರಲ್ಲಿ ಪ್ರಪಂಚದ ಅಷ್ಟೂ ಏಕಾಂತ ಒಮ್ಮೆಗೆ ನನ್ನ ಮನಕ್ಕೆ ಘಾಸಿಮಾಡಿದಷ್ಟು ತೀವ್ರತನವಾದ ಒಂದು ಕಾಡುವಿಕೆ ಶುರುವಾಗಿತ್ತು.
ವಿದೇಶದಲ್ಲಿ ಹುಟ್ಟಿದ ಭಾರತೀಯ ಮೂಲದ ಹದಿನಾರರ ಮಗ, ಸ್ವದೇಶಿ ನಂಟಿನೊಂದಿಗೆ ವಿದೇಶದಲ್ಲಿ ಬದುಕುತ್ತಿರುವ ನಲವತ್ತರ ತಾಯಿ, ಅವರಿಬ್ಬರ ನಡುವೆ ಉಂಟಾಗುವ ಗೊಂದಲಗಳು, ಇರುಸು ಮುರುಸು, ತಿಂಗಳ ಮುಕ್ಕಾಲುಪಾಲು ದಿನಗಳು ಟ್ರಕ್ಕಿನಲ್ಲಿ ಸಂಚರಿಸುವ ಗಂಡ ಹಾಗು ತಾಯಿಯ ಪ್ರಿಯಕರ ಟೋರಿ, ಮಗನ ವ್ಯಕ್ತಿತ್ವದಲ್ಲುಂಟಾದ ಸೂಕ್ಷ್ಮ ಬದಲಾವಣೆ, ಅವನ ರಾತ್ರಿ ಸಂಚಾರ ತಾಯಿಯ ಮನದಲ್ಲುಂಟು ಮಾಡಬಹುದಾದ ಸಹಜ ಊಹಾಪೋಹ, ಗೊಂದಲ ಹಾಗು ಕಾವ್ಯ ಕಡಮೆ ಅವರ ಎಲ್ಲೂ ಅವಸರಿಸದ ತಣ್ಣನೆಯ ನಿರೂಪಣೆ ಓದುಗನನ್ನು ಮಂತ್ರಮಗ್ಧನನ್ನಾಗಿಸುತ್ತದೆ. ನಾನು ಓದಿ ಮುಗಿಸಿ ಕೆಲಗಂಟೆಗಳ ಕಾಲ ಮಂಕುಬಡಿದವನಂತೆ ಏನೂ ಮಾಡಲಾಗದ ಸ್ಥಿತಿತಲುಪಿದ್ದೆ.
ಮಾಕೋನ ಏಕಾಂತ, ತಂದೆ, ಮೀಲೋ, ಪದವಿ ಪ್ರಧಾನ, ಕ್ಲಾರಾ ನನ್ನ ಗೆಳತಿ, ಸುನೇತ್ರಾ ಪಬ್ಲಿಷರ್ಸ್, ಕೊನೇ ಊಟ, ಆ ಒಂದು ಥರ ಎನ್ನುವ ಎಂಟೂ ಸೂಕ್ಷ್ಮ ಕಥೆಗಳಲ್ಲಿ ನನ್ನನ್ನು ಹಿಡಿದಿಟ್ಟ ಮತ್ತೊಂದು ಕಥೆ ’ಕ್ಲಾರಾ ನನ್ನ ಗೆಳತಿ’ ಸಂಬಂಧದ ಕೊಂಡಿಯೊಂದು ಅನಿರೀಕ್ಷಿತವಾಗಿ ಕಳಚಿ ಬಿದ್ದಾಗ ಮನಷ್ಯ ಮಾನಸಿಕವಾಗಿ ಕುಗ್ಗಿ, ಆ ಪರಿಣಾಮ ಆ ಸಂದಿಗ್ಧ ಸ್ಥಿತಿಯಲ್ಲಿ ತನಗೆ ತಾನು ಉಂಟು ಮಾಡಿಕೊಳ್ಳಬಹುದಾದ ಅಪಾಯ ಹಾಗು ಆ ನಂತರದ ಗೊಂದಲಗಳನ್ನು ವಸ್ತು ವಿಷಯವಾಗಿ ಇಟ್ಟು ಕೊಂಡು ಕಥೆಗಾರ್ತಿ ಈ ಕಥೆಯನ್ನು ಬರೆದಿದ್ದು. ಹತ್ತುವರ್ಷಗಳ ವೈವಾಹಿಕ ಜೀವನ ಅಂತ್ಯವಾಗಿ, ಮಾನಸಿಕವಾಗಿ ಕುಗ್ಗಿ ಹೋದ ಮಹಿಳೆಯೊಬ್ಬಳು ಪಬ್ ಒಂದರಲ್ಲಿ ಅನಿರೀಕ್ಷಿತವಾಗಿ ಲೈಂಗಿಕವಾಗಿ ಬಳಕೆಯಾಗಿ ನಂತರ ಆ ಆಘಾತದಿಂದ ಹೇಗೆ ಚಡಪಡಿಸುತ್ತಾಳೆ ಎನ್ನುವುದನ್ನು ಕಥೆಗಾರ್ತಿ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುವಲ್ಲಿ ಸೆಂಚುರಿ ಬಾರಿಸಿದ್ದಾರೆ.
’ಮೀಲೋ’ ಎನ್ನುವ ಕಥೆಯು ನೈಜತೆಗೆ ತೀರ ಹತ್ತಿರವಿದ್ದು ಲೇಖಕಿ ಅಮೇರಿಕಾದಿಂದ ಹೊರಟು ಆಸ್ಟ್ರೇಲಿಯಾದ ಒಂದು ಸಾಹಿತ್ಯ ಕಾರ್ಯಗಾರದಲ್ಲಿ ಭಾಗಿಯಾಗಿ, ಅಲ್ಲೊಂದು ’ಅದು’ ಗೋಚರಿಸಿ ಅವಳ ಮನದಲ್ಲುಂಟಾಗುವ ಭಯ, ದುಗುಡ, ಅದರೆಡೆಗಿನ ಸಣ್ಣ ಕರುಣೆ ಎಲ್ಲವೂ ಮಿಳಿತಗೊಂಡು ತನ್ನ ಮಗನ ದಿಂಬು ಗೊಂಬೆಯ ’ಮೀಲೋ’ ಹೆಸರನ್ನೇ ’ಅದಕ್ಕೆ’ ಇಡುವಲ್ಲಿಗೆ ಕಥೆ ಮುಕ್ತಾಯವಾಗುವಾಗ ಕಥೆಗಾರ್ತಿಯ ಕಥಾ ನೈಪುಣ್ಯದ ಕುರಿತು ಬೆರಗು ಮೂಡುತ್ತದೆ.
‘ತಂದೆ’ ಕಥೆಯ ಭಾರತೀಯ ಮೂಲದ ಅಡುಗೆ ತಯಾರಕ ವೃದ್ದ, ಹೊಟ್ಟೆಯೊಳಗೆ ಸತ್ತ ಮಗು, ಎದೆಹಾಲನ್ನು ದಾನವಾಗಿ ಕೊಡುವ ಕಥಾ ನಾಯಕಿ, ವೃದ್ಧನೆಡೆಗೆ ಸದಾ ಸಂಶಯ ಮೂಡಿ ಚಡಪಡಿಸುವ ಕಥಾ ನಾಯಕನ ಮನಸ್ಸು, ಎಲ್ಲವೂ ಕಥೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.
‘ಸುನೇತ್ರಾ ಪಬ್ಲಿಷರ್ಸ್’ ಭೂಗತ ಲೋಕ, ’ಡಾನ್’ ಗಳ ಕುರಿತು ಮೊದಲಿನಿಂದಲೂ ಕುತೂಹಲಿಯಾಗಿರುವ ನನಗೆ ರಸದೌತಣ ನೀಡಿದ ಕಥೆ ಇದಾಗಿದೆ. ಇಲ್ಲಿ ಲಾಭಕ್ಕಾಗಿ ಡಾನ್ ಒಬ್ಬನ ಜೀವನ ಚರಿತ್ರೆ ಬರೆದು ಪ್ರಕಟಿಸಲು ಮುಂದಾಗುವ ಪಬ್ಲಿಷರ್ಸಿನ ಒಡೆಯ ಹಾಗು ಅವನ ಡೈವರ್ಸಿ ತಂಗಿಯ ನಡುವೆ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಕಥೆಯಾಗಿಸಿ. ಕೊನೆಗೆ ಡಾನ್ ಕೊಲೆ ಮಾಡಿದನೇ ಅಥವಾ ಆನೆ ತುಳಿದೇ ತಂಗಿ ಸತ್ತಳೆ? ಅನ್ನುವ ಕನ್ಫೂಷನ್‌ಗೆ ಕಥೆ ತಂದು ನಿಲ್ಲಿಸುತ್ತದೆ.
ಭಾರತ ಮೂಲದ ಖೈದಿಯೊಬ್ಬನಿಗೆ ವಿದೇಶದಲ್ಲಿ ಮರಣದಂಡನೆ ಶಿಕ್ಷೆ. ಮರಣದಂಡನೆಗೆ ಅಣಿಯಾಗುತ್ತಿರುವ ’ಖೈದಿಯ’ ಭಾರತದ ಅದೇ ರಾಜ್ಯದ, ಅದೇ ಜಿಲ್ಲೆಯ, ಅದೇ ಗ್ರಾಮದ ಮತ್ತೊಬ್ಬ ಖೈದಿ. ಅವರಿಬ್ಬರ ನಡುವೆ ಏರ್ಪಡುವ ಭಾವನಾತ್ಮಕ ಸಂಬಂಧ ಹಾಗು ಸಾಯುವ ಮುನ್ನ ನೀಡುವ ‘ಕೊನೆ ಊಟ’ ಎಲ್ಲವೂ ನನಗೆ ಯಾಕೋ ಪ್ರಪಂಚದ ಶ್ರೇಷ್ಠ ಕೃತಿಗಳಲ್ಲೊಂದಾದ ಪ್ಯಾಪಿಲಾನ್ ಅನ್ನು ನೆನಪಿಸಿತು. ಕಥೆ ಮುಗಿದ ನಂತರವೂ ಕೊಂಚ ಕಾಲ ಕಾಡಿತು.
’ಪದವಿ ಪ್ರಧಾನ’ ಕಥೆ ಇಷ್ಟೆಲ್ಲಾ ಗಂಭೀರ ಕಥೆಗಳ ನಡುವೆ ಓದಿ, ಸ್ವಲ್ಪ ಸಮಯದ ನಂತರವೇ ಅದರೊಳಗಿದ್ದ ಸಣ್ಣ ವ್ಯಂಗ್ಯ ಹಾಗು ಹಾಸ್ಯ ಅರ್ಥವಾಗಲು ಸಾಧ್ಯವಾಯ್ತು.
‘ಆ ಒಂದು ಥರ’ ಕಥೆಯ “ಒಂಥರಾ ಇದ್ಯಾಲ್ಲ” ಎನ್ನುವ ಪ್ರಶ್ನೆ ಒಂದೇ ಗಂಡ ಹೆಂಡತಿಯರಿಬ್ಬರಲ್ಲಿ ಉಂಟು ಮಾಡುವ ಸಂಕಟವನ್ನು ವಿವರಸುತ್ತಾ. ಮೂವತ್ತು ದಾಟಿದ ಮಹಿಳೆಯಲ್ಲುಂಟಾಗುವ ಸಹಜ ಗೊಂದಲದ ಸಣ್ಣ ಎಳೆಯನ್ನು ಬಿಚ್ಚಿಡುತ್ತಾ. ವಿದೇಶದಲ್ಲಿ ಭಯದಿ ಕಾರು ಚಲಾಯಿಸುವ ಗೊಂದಲವನ್ನೇ ಮುಂದಿಟ್ಟುಕೊಂಡು ಕಥೆಯನ್ನು ಭಾವನಾತ್ಮಕವಾಗಿ ವಿವರಿಸಲಾಗಿದೆ.
ಒಟ್ಟು ಮೊತ್ತ ಎಲ್ಲಾ ಕಥೆಗಳನ್ನು ನೋಡುವುದಾದರೆ ವಿದೇಶದಲ್ಲಿ ಕನ್ನಡಿಗರು, ಅಥವಾ ಭಾರತೀಯರ ಬದುಕು, ಬವಣೆ ಹಾಗು ಅವರ ಬದುಕಿನಲ್ಲುಂಟಾಗುವ ಇರುಸು ಮುರುಸಗಳನ್ನು ಕಥೆಗಳು ಪ್ರತಿನಿಧಿಸುವಂತಿದೆ ಹಾಗು ಈಗಾಗಲೇ ಪಳಗಿರುವ ಲೇಖಕಿಗೆ ಕಥೆಯನ್ನು ಚಂದ ಮಾಡುವ ಎಲ್ಲಾ ಕಲೆ ಒದಗಿರುವುದು ಪುಸ್ತಕದ ಒಂದೆರಡು ಪುಟ ತಿರುವುವಾಗಲೇ ಬಾಸವಾಗುತ್ತದೆ.
ಇಲ್ಲಿ ಲೇಖಕಿಯ ತಾಯಿ ‘ಸುನಂದಾ ಪ್ರಕಾಶ ಕಡಮೆ’ ಅವರು ಕನ್ನಡದ ಪ್ರಮುಖ ಲೇಖಕಿ ಆಗಿರುವುದರಿಂದ ಹಾಗು ಕನ್ನಡದ ಖ್ಯಾತನಾಮರ ಅನುಗ್ರಹ, ಆಶೀರ್ವಾದ, ಮಾರ್ಗದರ್ಶನ ಕೂಡ ಲೇಖಕಿಯ ಮೇಲೆ ಯಥೇಚ್ಛವಾಗಿ ಇರುವುದರಿಂದ ಹಾಗು ತಾನು ಕೂಡ ಕರ್ನಾಟಕದಿಂದ ಹೊರಟು ನ್ಯೂಜರ್ಸಿಯಲ್ಲಿ ಬದುಕುತ್ತಿರುವುದರಿಂದ ಕಥೆಗಳು ಇನ್ನಷ್ಟು ಉತ್ಕೃಷ್ಟ ಮಟ್ಟದಲ್ಲಿದೆ ಅನಿಸಿತು. ಕಥೆಗಾರ್ತಿ ‘ಕಾವ್ಯ ಕಡಮೆ’ ಕನ್ನಡದಲ್ಲಿ ಚಂದ ಬರೆಯುವ ಅಪರೂಪದ ಲೇಖಕಿ ಅನಿಸಲು ಈ ಎಂಟು ಕಥೆಗಳು ಸಾಕೆನಿಸಿತು. ಅವರ ಇತರೇ ಕೃತಿಗಳನ್ನೂ ತರಿಸಿ ಓದುವ ಮನಸ್ಸು ಉಂಟಾಯ್ತು. ಅಂದ್ಹಾಗೆ ಮೇಲೆ ಹೇಳಿರುವ ನಾಚಿಕೆ ವಿಷಯಕ್ಕೆ ಬರುತ್ತೇನೆ ಈ ಕಥೆಗಳು ಓದಿ ಆದನಂತರ ನನ್ನ ಕಥೆಗಳನ್ನು ಯಾಕಾದರೂ ಈ ಸ್ಪರ್ಧೆಗೆ ಕಳುಹಿಸಿದೆ ಅನ್ನುವುದು ನನ್ನ ತೀವ್ರ ನಾಚಿಕೆಗೆ ಕಾರಣವಾಗಿತ್ತು. ಅಂದ್ಹಾಗೆ ಕಾವ್ಯ ಕಡಮೆಯವರಿಗೆ ಒಬ್ಬ ಅಭಿಮಾನಿ ಹೆಚ್ಚಿಗೆ ಇನ್ನುಮುಂದೆ.
03-10-2021
ರಂಜಿತ್ ಕವಲಪಾರ