fbpx

ಪೊಲೀಸ್ ವರಿಷ್ಠಾಧಿಕಾರಿ ಕ್ಯಾ.ಎಂ.ಎ.ಅಯ್ಯಪ್ಪ ಅವರಿಗೆ ಜಬ್ಬೂಮಿ ಸಂಘಟನೆಯಿಂದ ಮನವಿ- ಸಮಾಲೋಚನೆ

ಕೊಡವ ಜನಾಂಗದ ಕುಲಮಾತೆ ಕಾವೇರಿ ಮತ್ತು ಕೊಡವ ಜನಾಂಗವನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿರುವ ಪ್ರಕರಣದಲ್ಲಿ ನೈಜ ಆರೋಪಿಯನ್ನು ಬಂಧಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಪೊಲೀಸ್ ತಂಡವನ್ನು ಜಬ್ಬೂಮಿ ಸಂಘಟನೆಯ ಪ್ರಮುಖರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಪ್ರಕರಣದ ಬಗ್ಗೆ ಸಮಾಲೋಚನೆ ನಡೆಸಿದರು.

ಮಡಿಕೇರಿಯಲ್ಲಿ ಬುಧವಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ ಅವರನ್ನು ಭೇಟಿ ಮಾಡಿದ ಪ್ರಮುಖರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಹಿಂದೆ ಕೊಡವರನ್ನು ಹಾಗೂ ಕಾವೇರಿ ಮಾತೆಯನ್ನು ನಿಂದಿಸಿರುವ ಹಲವಾರು ಪ್ರಕರಣಗಳು ನಡೆದಿದೆ. ಈ ಬಗ್ಗೆ ನಾವು ದೂರು ನೀಡಿದ್ದರೂ ಯಾವುದೋ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಎಫ್.ಐ. ಆರ್ ದಾಖಲಿಸಲಿಲ್ಲ.ಆ ಸಂದರ್ಭದಲ್ಲಿ ಪ್ರಕರಣವನ್ನು ದಾಖಲಿಸಿ ಕೊಂಡು ಎಫ್.ಐ. ಆರ್.ಮಾಡಿ ಇದೇ ರೀತಿ ತನಿಖೆ ಕೈಗೊಂಡಿದ್ದರೆ ಇಂತಹ ಪ್ರಕರಣ ನಡೆಯುತ್ತಿರಲ್ಲ. ಈ ಪ್ರಕರಣದಲ್ಲಿ ಕೇಸು ದಾಖಲಿಸಿಕೊಂಡು ನೈಜ ಆರೋಪಿಯನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯ ಮುಂದೆ ದೊಡ್ಡ ಸವಾಲು ಇದ್ದರೂ, ಅದನ್ನು ಸ್ವೀಕರಿಸಿ ನೈಜ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿರುವುದು ಶ್ಲಾಘನೀಯ ಎಂದರು.

ಈ ಪ್ರಕರಣದಲ್ಲಿ ಬಂಧಿತ ಆರೋಪಿ ದಿವಿನ್ ದೇವಯ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯಲ್ಲಿ ಯಾವುದೇ ಧರ್ಮ, ಜಾತಿ, ಧಾರ್ಮಿಕ ವಿಚಾರಗಳನ್ನು ನಿಂದಿಸುವ,ಪ್ರಚೋದಿಸುವ ದುಷ್ಕರ್ಮಿಗಳಿಗೆ ಇದೊಂದು ಪಾಠವಾಗಬೇಕು. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ನಿಗಾ ಇಡಬೇಕೆಂದು ಮನವಿ ಮಾಡಿದರು.

ನೈಜ ಆರೋಪಿಯನ್ನು ಬಂಧಿಸಬೇಕಾದರೆ ಹಲವಾರು ಕೋನಗಳಲ್ಲಿ ತನಿಖೆ ನಡೆಸಬೇಕಾಗುತ್ತದೆ. ಈ ಸಂದರ್ಭ ಕೆಲವರ ವಿಚಾರಣೆ ಪೊಲೀಸ್ ಇಲಾಖೆ ನಡೆಸಿದ್ದು ಅದು ಯಾವುದೇ ತನಿಖೆಯಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ. ತನಿಖೆ-ವಿಚಾರಣೆ ನಡೆಸದೇ ಅಪರಾಧಿ ಹಾಗೂ ನಿರಪರಾಧಿಗಳನ್ನು ಪತ್ತೆಹಚ್ಚಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ ಅವರು ಇದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬಾರದು ಎಂದು ಅವರು ಮನವಿ ಮಾಡಿದರು

ಈ ದುಷ್ಕೃತ್ಯ ದ ಉದ್ದೇಶ ಹಾಗೂ ಈ ಪ್ರಕರಣದಲ್ಲಿ ಹಿಂದಿರುವ ಕಾಣದ ಕೈಗಳ ಬಗ್ಗೆ ತನಿಖೆ ನಡೆಯುವಂತಗಬೇಕು,ಇಂತಹ ಪ್ರಕರಣಗಳು ಮರುಕಳಿಸದಂತೆ ಅಂತಹ ಬೇರು ಸಹಿತ ಮಟ್ಟ ಹಾಕುವಂತೆ ಮನವಿ ಮಾಡಿದರು.

ಇದೇ ಸಂದರ್ಭ ಮಾತನಾಡಿದ ಪ್ರಮುಖರು ಜಿಲ್ಲೆಯ ಕೆಲವು ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸರಬರಾಜು ಹಾಗೂ ಸೇವನೆ ನಡೆಯುತ್ತಿದ್ದು ವಿಶೇಷವಾಗಿ ಗಾಂಜಾ ಸೇವನೆ ನಡೆಯುತ್ತಿದೆ.ಇದನ್ನು ಸಂಪೂರ್ಣವಾಗಿ ನಿಗ್ರಹಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಮಾದಕ ವಸ್ತು ಸೇವನೆಯಿಂದ ಯುವ ಸಮುದಾಯದ ಭವಿಷ್ಯ ಹಾಳಾಗುತ್ತದೆ. ಆದ್ದರಿಂದ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಈ ಬಗ್ಗೆ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳ ವ್ಯಾಪ್ತಿಯಲ್ಲಿ ಇಂತಹ ಯಾವುದೇ ಪ್ರಕರಣ ಕಂಡು ಬಂದರೆ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈಗಾಗಲೇ ಹಲವು ಗಾಂಜಾ ಮಾರಾಟಗಾರರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

error: Content is protected !!
satta king chart