June 3, 2021

ನಗರಸಭೆಯಿಂದಲೇ ಈಗ ಸಾಂಕ್ರಾಮಿಕ ರೋಗ ಹರಡುವ ಭೀತಿ…?

ಕಸ ಸಂಗ್ರಣಹಣಾ ಘಟಕದ ಅವಸ್ಥೆ, ಅವ್ಯವಸ್ಥೆ ಕಂಡರೆ ಎಂತಹವರಿಗೂ ತಲೆ ನೋವು ಬರೋದು ಗ್ಯಾರೆಂಟಿ!

ಇನ್ನೇನು ಮುಂಗಾರು ಆರಂಭವಾಗಿ ಬಿಡಲಿದೆ. ಕೊರೋನಾದಿಂದ ವ್ಯಾಪಾರ- ವ್ಯವಹಾರ, ಶಾಲಾ-ಕಾಲೇಜು, ಜನರ ಓಡಾಟ, ಚಟುವಟಿಕೆಗಳಿಲ್ಲದೆಯೇ ನಗರವೇ ಬಿಕೋ ಎನ್ನುತ್ತಿದೆ. ಮುಂಗಾರು ಶುರುವಾದ ಮೇಲಂತೂ ಮಳೆ ಉದೋ ಎಂದು ಸುರಿಯಲು ಶುರು ಮಾಡಿತು ಅಂದುಕೊಳ್ಳಿ ಆಗಸ್ಟ್- ಸೆಪ್ಟೆಂಬರ್ ತಿಂಗಳ ತನಕವೂ ನಿರಂತರ ಜಡಿ ಮಳೆ ಸಾಕೋ ಸಾಕು ಎನ್ನುವಷ್ಟು ಬರುತ್ತದೆ. ಈಗಾಗಲೇ ಕೊರೋನಾದಿಂದ ಆರ್ಥಿಕ ನಷ್ಟದಲ್ಲಿ ಹೈರಾಣಾಗಿರುವ ಜನತೆ ಮಳೆಗಾಲದಲ್ಲಿ ಕಾಸು ಕಾಣುವುದೇ ವಿರಳವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈಗ ಸಾಂಕ್ರಾಮಿಕ ರೋಗಗಳೂ ಹರಡುವ ಭೀತಿ ಎದುರಾಗಿದೆ. ಅದಕ್ಕೆ ಮುಖ್ಯ ಕಾರಣ ನಗರ ಸಭೆಯ ಅವೈಜ್ಞಾನಿಕ ಕಸ ವಿಲೇವಾರಿ ಮತ್ತು ಸಂಗ್ರಹಣಾ ಘಟಕ.

ಹಿಂದೊಂದು ಕಾಲವಿತ್ತು. ಈ ನಗರ ಅದರ ಶುಚಿತ್ವದ ಕಾರಣಕ್ಕೆ ಮಡಿಯಾದ ಕೇರಿ ಎಂಬ ಹೆಸರು ಪಡೆದಿತ್ತು ಅದು ಕ್ರಮೇಣ ಮಡಿಕೇರಿ ಅಂತ ಜನರ ಬಾಯಲ್ಲಿ ರೂಢಿಗೆ ಬಂತು. ಈಗ ಅದೇ ಮಡಿಕೇರಿ ತ್ಯಾಜ್ಯ ಸಮಸ್ಯೆಯಿಂದಾಗಿ ಕಸಮಯವಾಗುತ್ತಿದೆ. ತೊಟ್ಟಿಗಳಿಲ್ಲದೆ ನಗರದ ಹಲವೆಡೆ ಬುದ್ಧಿ ಇಲ್ಲದ ಜನ ರಸ್ತೆಗಳ ಬದಿಯಲ್ಲಿ ತ್ಯಾಜ್ಯ ಸುರಿದು ಪರಾರಿ ಆಗುತ್ತಿದ್ದಾರೆ. ತ್ಯಾಜ್ಯ ಸಂಗ್ರಹಣಾ ಕೆಲಸಗಳು ವೈಜ್ಞಾನಿಕವಾಗಿಲ್ಲ. ಜೊತೆಗೆ ತ್ಯಾಜ್ಯ ಸಂಸ್ಕರಣಾ ಘಟಕವೂ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದೆಲ್ಲಾ ಸಮಸ್ಯೆಗಳಿಂದಾಗಿ ಕೊಲೆರಾ, ಮಲೇರಿಯಾ, ಡೆಂಗ್ಯೂ ಚಿಕುನ್ಗುನ್ಯಾದಂತಹ ಸಾಂಕ್ರಮಿಕ ರೋಗ ರುಜಿನಗಳು ಹರಡುವ ಭೀತಿ ಎದುರಾಗಿದೆ.

ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಕಂಡು ಬಂದ ವೈದ್ಯಕೀಯ ತ್ಯಾಜ್ಯ

ಸ್ಟೋನ್ ಹಿಲ್ ಬಳಿ ಇರುವ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಕೋಳಿ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಎಲ್ಲವನ್ನೂ ಒಟ್ಟಿಗೆ ಸುರಿಯಲಾಗುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಚೆಲ್ಲಾ ಪಿಲ್ಲಿಯಾಗಿ ಬಿಸಾಕಿರುವ ಪ್ಲಾಸ್ಟಿಕ್ ತ್ಯಾಜ್ಯ

ಬದುಕಿಯಾ ಬಡ ಜೀವ ಎಂದು ಕೊಡಗಿನ ಜನರು ಪ್ರಕೃತಿ ವಿಕೋಪ, ಕೊರೋನಾದಿಂದ ನಲುಗಿರುವಾಗ ಮತ್ತಷ್ಟು ಸಾಂಕ್ರಾಮಿಕ ರೋಗಗಳು ಹರಡಿ ಸಾವು ನೋವುಗಳು ಹೆಚ್ಚಾದರೆ ಅದಕ್ಕೆ ಕಾರಣ ನಗರ ಸಭೆಯೇ ಆಗುವುದಿಲ್ಲವೇ…!?

error: Content is protected !!