ಸತ್ತ ತಿಮಿಂಗಿಲದ ದೇಹದೊಳಗಿತ್ತು 10 ಕೋಟಿ ನಿಧಿ; ಕೋಟ್ಯಾಧೀಶರಾದ ಬಡ ಮೀನುಗಾರರು
ಸನಾ(ಜೂ.03): ಕೆಲ ದಿನಗಳ ಹಿಂದಷ್ಟೇ ಮುರುಡೇಶ್ವರ ಕಡಲ ತೀರದಲ್ಲಿ ತಿಮಿಂಗಿಲ ವಾಂತಿ ಪತ್ತೆಯಾಗಿತ್ತು. ಇದೀಗ ಮತ್ತೊಂದು ಕಡೆ ಕಡಲ ತೀರದಲ್ಲಿಯೂ ಸಿಕ್ಕಿದ್ದು, ಬಡ ಮೀನುಗಾರರ ಜೀವನವನ್ನೇ ಬದಲಾಯಿಸಿದೆ.
ಅತ್ಯಂತ ಬಡದೇಶ ಎಂದೇ ಕರೆಸಿಕೊಳ್ಳುವ ಮೀನುಗಾರಿಕೆಯೇ ಜೀವನಾಧಾರವಾಗಿರುವ ಯೆಮನ್‌ನಲ್ಲಿ ಮೀನುಗಾರರಿಗೆ 10 ಕೋಟಿ ರು. ಮೌಲ್ಯದ ತಿಮಿಂಗಿಲ ವಾಂತಿ ಸಿಕ್ಕಿದೆ.
ಯೆಮನ್ ದಕ್ಷಿಣ ತೀರದಲ್ಲಿ ಮೀನುಗಾರರ ಗುಂಪೊಂದು ಮೀನುಗಾರಿಕೆಗೆ ತೆರಳಿದ್ದ ವೇಳೆ ಸತ್ತ ತಿಮಿಂಗಿಲದ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ.
ಕಾರವಾರದಲ್ಲಿ ಕೋಟ್ಯಂತರ ರು. ಬೆಲೆ ಬಾಳುವ ತಿಮಿಂಗಿಲದ ವಾಂತಿ ಪತ್ತೆ ..
ಸೆರಿಫ್ ಫರ್ಸ್ಟ್ ಎಂಬ ಮೀನುಗಾರ ಉಳಿದ 35 ಮೀನುಗಾರರ ಬಳಿ ಈ ಬಗ್ಗೆ ತಿಳಿಸಿದ್ದು, ಅದರ ಸಮೀಪ ಹೋದಾಗ ಅತ್ಯಂತ ಕಟು ವಾಸನೆ ಬಂದಿದ್ದು, ಅದರ ಹೊಟ್ಟೆಯೊಳಗೆ ಯಾವುದೊ ವಸ್ತುವಿರುವುದಾಗಿ ಪತ್ತೆ ಮಾಡಿದ್ದಾರೆ.
ಬಳಿಕ ಕತ್ತರಿಸಿ ಪರಿಶೀಲಿಸಿದಾಗ ಬರೋಬ್ಬರಿ 10 ಕೋಟಿ ಮೌಲ್ಯದ ಅಂಬರ್ಗ್ರೀಸ್ (ತಿಮಿಂಗಿಲ ವಾಂತಿ) ಇರುವುದು ತಿಳಿದು ಬಂದಿದೆ. ಮೀನುಗಾರರು ಅದನ್ನು ಹೊರತೆಗೆದು ತೂಕ ಮಾಡಿದ್ದು ಬರೋಬ್ಬರಿ 127 ಕೆಜಿ ತೂಗಿದೆ. ಇದರಿಂದ ಮೀನುಗಾರರಿಗೆ ತಿಮಿಂಗಿಲದ ಹೊಟ್ಟೆಯಿಂದ ನಿಧಿ ದೊರಕಿದಂತಾಗಿದೆ.
ಬಳಿಕ ಅದನ್ನು ಅರಬ್ ವ್ಯಾಪಾರಿಯೊಬ್ಬರಿಗೆ 1.3 ಬಿಲಿಯನ್ ಯೆಮಿನಿ ರಿಯಲ್ ಬೆಲೆಗೆ (10 ಕೋಟಿ) ಮಾರಾಟ ಮಾಡಿದ್ದು, ಅದನ್ನು ಎಲ್ಲರೂ ಹಂಚಿಕೊಳ್ಳಲು ನಿರ್ಧರಿಸಿದರು. ಅಲ್ಲದೇ ಮತ್ತೋಂದಷ್ಟನ್ನು ಬಡ ಕುಟುಂಬಗಳಿಗೆ ಹಂಚುವ ನಿರ್ಧಾರವನ್ನು ಮಾಡಿದರು.
ಏನಿದು ಅಂಬರ್‌ಗ್ರೀಸ್ : ಸಮುದ್ರದ ಚಿನ್ನ ಎಂದೇ ಕರೆಸಿಕೊಳ್ಳುವ ಅಂಬರ್‌ಗ್ರೀಸ್ (ವಾಂತಿ) ಸ್ಪರ್ಮ್ ವೇಲ್‌ಗಳಲ್ಲಿ ಕಂಡು ಬರುತ್ತದೆ. ಇದನ್ನು ಸುಗಂದ ದ್ರವ್ಯ ತಯಾರಿಸಲು ಬಳಸಲಾಗುತ್ತದೆ.