“ಇರ್ಪು ಜಲಪಾತದ ಸೊಬಗು”
ಈ ಮಳೆಗಾಲದಲ್ಲಿ ಹಾಲಿನನೊರೆಯಂತೆ ಧುಮ್ಮಿಕ್ಕುವ ಜಲಧಾರೆಗಳನ್ನು ನೋಡುವುದು ಎಂದರೆ ಅದೊಂದು ರೋಮಾಂಚನಕಾರಿ ವಿಷಯ. ಪೂರ್ವ ತಯಾರಿ ಇಲ್ಲದೇ ಪ್ರವಾಸಕ್ಕೆ ಹೋಗಬೇಕು, ದ್ವಿಚಕ್ರ ವಾಹನದಲ್ಲಿ ಮಳೆಕೋಟು ಧರಿಸಿ ರೈಡ್ ಮಾಡಬೇಕು ಎಂಬವರಿಗೆ ತಕ್ಷಣಕ್ಕೆ ನೆನಪಾಗುವುದು ನಮ್ಮ ಕೊಡಗಿನ ಇರ್ಪು ಜಲಪಾತ. ತಕ್ಷಣಕ್ಕೆ ನಿರ್ಧಾರವಾಗುವ ಪ್ರವಾಸಗಳ ಮಜಾ ಬೇರೆಯದ್ದೇ ಆಗಿರುತ್ತದೆ.
ಜಲಪಾತದ ಬಳಿಗೆ ತಲುಪುತ್ತಲೆ 170 ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರಿನ ಜುಳು- ಜುಳು ನಾದವು ಕೇಳಲಾರಂಭಿಸುತ್ತದೆ, ದಾರಿಯುದ್ದಕ್ಕು ಪಕ್ಷಿಗಳ ಕಲರವ ಇಂಪಾಗಿರುವುದು ಆದರೆ ಮಳೆ ಜೋರಾಗಿದ್ದರೆ ಪಕ್ಕದಲ್ಲಿ ಇರುವವರು ಮಾತನಾಡುವುದು ಸಹ ಕೇಳಿಸುವುದಿಲ್ಲ. ಜಲಪಾತ ತಲುಪುವ ಮೊದಲೇ ಕಣ್ಣಿನಲ್ಲಿ ಹಾಗೂ ಫೊನ್ ಕ್ಯಾಮರಾದಲ್ಲಿ ಸೆರೆಹಿಡಿಯಬೇಕಾದ ಪ್ರಕೃತಿ ಸೌಂದರ್ಯಗಳು ಸಾಕಷ್ಟು, ಜಲಪಾತ ತಲುಪಿದಾಗ ಒಂದು ಕ್ಷಣಕ್ಕೆ ಎಲ್ಲರು ಜಲಪಾತದ ಸೌಂದರ್ಯವನ್ನು ನೋಡಿ ಸ್ತಬ್ಧವಾಗುವುದರಲ್ಲಿ ಸಂಶಯವಿಲ್ಲ. ರುದ್ರರಮಣೀಯವಾದ ಜಲಪಾತವನ್ನು ನೋಡಲು ಎರಡು ಕಣ್ಣುಗಳು ಸಾಲದು. ಮಳೆ ಕಡಿಮೆಯಾದಗ ನೀರಿನ ರಭಸ ಕಡಿಮೆಯಾಗಿರುತ್ತದೆ ಆಗ ಪ್ರವಾಸಿಗರು ಮೇಲಿನಿಂದ ಬೀಳುವ ನೀರಿಗೆ ತಲೆಯನ್ನು ಇಟ್ಟು ಆನಂದಿಸುವ ದೃಶ್ಯ ಸಾಮಾನ್ಯ. ಅಲ್ಲಿಗೆ ಬರುವ ಹೆಚ್ಚಿನ ಪ್ರವಾಸಿಗರು ಮಿಂದೆಳುತ್ತಾರೆ.
ಜಲಪಾತದಿಂದ ದುಮ್ಮಿಕ್ಕುವ ನೀರಿನ ಬಳಿ ಹೋಗಲು ಕಬ್ಬಿಣದ ಸೇತುವೆ ಮಾದರಿಯನ್ನು ಕಲ್ಲಿನ ಮೇಲೆ ಹಾಸಿದ್ದು ಬಹಳ ಉಪಯೋಗಕರ, ಇಲ್ಲಿ ನಿಂತು ಹಲವು ಫೋಟೋ ಕ್ಲಿಕ್ಕಿಸಬಹುದು. ಆದರೆ ಮಳೆಗಾಲದಲ್ಲಿ ನೀರು ರಭಸವಾಗಿ ಧುಮ್ಮಿಕ್ಕುವುದರಿಂದ ಜಲಪಾತವನ್ನು ದೂರದಿಂದಲೇ ಸವಿಯಬೇಕು ಮತ್ತು ಕಲ್ಲಿನ ಮೇಲೆ ಹಾಸಿದ್ದ ಕಬ್ಬಿಣದ ಸೇತುವೆ ಮಾದರಿಯು ನೀರಿನ ರಭಸಕ್ಕೆ ಕೊಚ್ಚಿಹೋಗಬಹುದೆಂದು ಬದಿಯಲ್ಲಿ ತೆಗೆದಿಟ್ಟಿರುತ್ತಾರೆ. ಆದ್ದರಿಂದ ಈ ಮಳೆಗಾಲದ ಸಮಯದಲ್ಲಿ ಜಲಪಾತದ ಹತ್ತಿರ ಹೋಗುವುದು ನಿಷಿದ್ಧ ಮತ್ತು ಅಪಾಯ ಕೂಡ, ಎಚ್ಚರಿಕೆಯಿಂದ ದೂರದಿಂದಲೆ ಮೈತುಂಬಿ ಹರಿಯುವ ಜಲಪಾತವನ್ನು ನೋಡಿ ಸವಿಯುವುದು ಸೂಕ್ತ. ಮಳೆಗಾಲದಲ್ಲಿ ಜಿಗಣೆ ಕಾಟ ಹೆಚ್ಚಾಗಿರುತ್ತದೆ ಮತ್ತು ಪಾಚಿ ಕಟ್ಟಿದ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಎಚ್ಚರವಹಿಸಬೇಕು. ಇರ್ಪು ಜಲಪಾತಕ್ಕೆ ಮಳೆಗಾಲದಲ್ಲಿ ಮತ್ತು ಮಳೆ ಕಡಿಮೆಯಾದಾಗ ಎರೆಡು ಬಾರಿ ಭೇಟಿ ನೀಡಿದಾಗ ಎರೆಡು ರೀತಿಯ ಅನುಭವಗಳು ಸಿಗಲಿದೆ. ಜಲಪಾತದ ಮೇಲಿನ ಭಾಗದಲ್ಲಿ ಶಿವಲಿಂಗ ಇದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ ಆದರೆ ನೀರಿನ ಹಾಲಿನಂತ ನೊರೆಯಲ್ಲಿ ಅದು ಕಾಣುವುದಿಲ್ಲ.
ಇರ್ಪು ಜಲಪಾತವು ಕೇವಲ ಪ್ರವಾಸಿ ತಾಣವಲ್ಲದೆ ಧಾರ್ಮಿಕ ಕ್ಷೇತ್ರವು ಹೌದು, ಇಲ್ಲಿ ಕೊಡಗಿನ ಇತಿಹಾಸ ಪ್ರಸಿದ್ದ ಇರ್ಪು ಶ್ರೀ ರಾಮೇಶ್ವರ ದೇಗುಲವಿದೆ. ಈ ದೇಗುಲವನ್ನು ಶ್ರೀರಾಮನೇ ಪ್ರತಿಷ್ಟಾಪನೆ ಮಾಡಿದ ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ. ಶ್ರೀರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ, ಬ್ರಹ್ಮಗಿರಿ ಬೆಟ್ಟಕ್ಕೆ ಬಂದಿದ್ದ ಸಂದರ್ಭಲ್ಲಿ ಶ್ರೀರಾಮನು ಲಕ್ಷ್ಮಣನನ್ನು ಕುಡಿಯಲು ನೀರು ತರಲು ಕೇಳಿಕೊಂಡನಂತೆ, ಆಗ ಲಕ್ಷ್ಮಣನು ಬ್ರಹ್ಮಗಿರಿ ಮೇಲೆ ಬಾಣವನ್ನು ಬಿಟ್ಟಾಗ, ಆ ಸ್ಥಳದಲ್ಲಿ ಲಕ್ಷ್ಮಣ ತೀರ್ಥ ಎಂದು ಕರೆಯಲ್ಪಡುವ ನದಿ ಹುಟ್ಟಿಕೊಂಡಿತು ಎಂಬುವುದು ಇಲ್ಲಿನ ಪ್ರತೀತಿ. ಆದ್ದರಿಂದ ಇರ್ಪು ಜಲಪಾತದಲ್ಲಿ ಸ್ನಾನ ಮಾಡಿದರೆ ನಮ್ಮ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಶಿವರಾತ್ರಿ ಸಂದರ್ಭಲ್ಲಿ ಸಹಸ್ರಾರು ಭಕ್ತರು ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ.
ಇರ್ಪು ಜಲಪಾತ ನೋಡಲು ಗೋಣಿಕೊಪ್ಪ – ಕುಟ್ಟ ಹೆದ್ದಾರಿಯಲ್ಲಿ, ಶ್ರೀಮಂಗಲ ಮಾರ್ಗವಾಗಿ ತೆರಳಬೇಕು. ದ್ವಿಚಕ್ರ ವಾಹನ ನಿಲುಗಡೆಗೆ 5 ರೂಪಾಯಿ ಮತ್ತು ಪ್ರವೇಶ ದರ 50ರೂಪಾಯಿ ನಿಗದಿಯಾಗಿದೆ. ಜಲಪಾತಕ್ಕೆ ಹೋಗುವವರು ಯಾವುದೇ ತಿಂಡಿ ಪೊಟ್ಟಣಗಳಾಗಲಿ, ನೀರಿನ ಬಾಟಲಿಗಳಾಗಲಿ ತೆಗೆದುಕೊಂಡು ಹೋಗುವಂತಿಲ್ಲ. ವಯಸ್ಸಾದವರು ಹಾಗೂ ಮಕ್ಕಳ ಅನುಕೂಲಕ್ಕಾಗಿ 20 ರೂಪಾಯಿಗಳ ಟೋಕನ್ ತೆಗೆದುಕೊಂಡು ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಬಹುದು. ಜಲಪಾತ ವೀಕ್ಷಿಸಿ ಹಿಂತಿರುಗುವಾಗ ಬಾಟಲಿಯನ್ನು ತೋರಿಸಿ ಹಣವನ್ನು ಹಿಂಪಡೆಯಬಹುದು.
ಇರ್ಪು ಜಲಪಾತವನ್ನು ಪದಗಳಲ್ಲಿ ವರ್ಣಿಸಲು ಅಸಾದ್ಯ. ನೀವೆಲ್ಲಾದರು ಮಳೆಗಾಲದ ಮಜವನ್ನು ಸವಿಯ ಬೇಕೆಂದಿದ್ದರೆ ಕೊಡಗಿನ ಇರ್ಪು ಜಲಪಾತಕ್ಕೆ ಭೇಟಿ ನೀಡಲೇಬೇಕು. ಇರ್ಪು ರಾಮೇಶ್ವರ ದೇವಸ್ಥಾನ ಹಾಗೂ ಜಲಪಾತವು ಕೊಡಗಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿರಿಮೆಯಾಗಿದೆ ದಯವಿಟ್ಟು ಇಲ್ಲಿಗೆ ಬರುವ ಪ್ರವಾಸಿಗರು ಮೋಜು ಮಸ್ತಿಗೆಂದು ಬಾರದೆ, ಇಲ್ಲಿನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು.
–ಗುರುಕೃಷ್ಣ ಬಿ.ಎಂ
ಮರಗೋಡು