fbpx

ಚಿಲಿಪಿಲಿಯ ಗುಹೆ ಮತ್ತು ಜಲಪಾತ ಕಂಡಿದ್ದೀರಾ!?

ಕೊಡಗು ಜಿಲ್ಲೆ ಹಲವು ಮನೋಹರವಾದ ತಾಣಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಅದರಲ್ಲಿ ಹಲವು ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು ಸಾಕಷ್ಟು ಪ್ರಚಾರವಿಲ್ಲದೆ ಸ್ಥಳೀಯ ಗ್ರಾಮಸ್ಥರಿಗೆ ಮತ್ತು ಪಕ್ಕದೂರಿನವರಿಗೆ ಮಾತ್ರ ತಿಳಿದಿರುತ್ತದೆ. ಇಂತಹ ಸ್ಥಳಗಳಿಗೆ ಉದಾಹರಣೆಯಾಗಿ “ಶ್ರೀ ಚಿಲಿಪಿಲಿ ಶ್ರೀ ಮಹಾದೇವರ ದೇವಸ್ಥಾನ” ಕೂಡ ಹೌದು. ಸದಾ ಹೊಸ ಸ್ಥಳಗಳನ್ನು ಅನ್ವೇಷಿಸಬೇಕು ಎಂದು ಬಯಸುವ ಸಾಕಷ್ಟು ಯುವ ಸಮೂಹ ನಮ್ಮ ಜಿಲ್ಲೆಯಲ್ಲಿದ್ದಾರೆ, ಇಂತಹ ಉತ್ಸಾಹಿಗಳು ಭೇಟಿ ನೀಡಬೇಕಾದ ಸ್ಥಳ ಚಿಲಿಪಿಲಿ.

ಮರಗೋಡಿನಿಂದ ಸಿದ್ದಾಪುರ ಮಾರ್ಗದಲ್ಲಿ ಸುಮಾರು 4 ಕಿ.ಮೀ ಕ್ರಮಿಸಿದಾಗ ಹೊಸ್ಕೇರಿ ಗ್ರಾಮ ಸಿಗುವುದು ಅಲ್ಲಿಂದ ಎಡಕ್ಕೆ ಸುಮಾರು 1 ಕಿ.ಮೀ ಕ್ರಮಿಸಬೇಕು, ಹೀಗೆ ಸಾಗಿದಾಗ ಬಲಬದಿಯಲ್ಲಿ ದೇವಸ್ಥಾನದ ಫಲಕದೊಂದಿಗೆ ದ್ವಾರವಿದೆ, ಇದರ ಮೂಲಕ ಹಲವು ಮೆಟ್ಟಿಲುಗಳನ್ನು ಇಳಿಯುತ್ತಾ ಸಾಗಬೇಕು. ದಾರಿಯಲ್ಲಿ ವಿವಿಧ ರೀತಿಯ ದಾಸವಾಳ ಹೂವುಗಳನ್ನು ನೆಟ್ಟಿರುವುದರಿಂದ ಬಹಳ ಅಂದವಾಗಿ ಕಾಣಿಸುತ್ತದೆ. ಮೆಟ್ಟಿಲುಗಳನ್ನು ಇಳಿಯುತ್ತಲೆ ದೂರದಿಂದ ನೀರು ಧುಮ್ಮಿಕ್ಕುವ ಶಬ್ದ ಮತ್ತು ಪಕ್ಷಿ ಗಳ ಇಂಪಾದ ಕಲರವ ಕೇಳುವುದು, ಈ ಕಲರವಕ್ಕಾಗಿಯೇ ಇಲ್ಲಿಗೆ ಚಿಲಿಪಿಲಿ ಎಂಬ ಹೆಸರು ಬಂದಿದೆ.

ಚಿಲಿಪಿಲಿ ದೇವಸ್ಥಾನ ಎಲ್ಲಾ ದೇವಾಲಯಗಳಂತೆ ಗುಡಿಗೋಪುರವಿಲ್ಲದ ಕ್ಷೇತ್ರ, ಎರೆಡು ಬೃಹತ್ ಬಂಡೆಗಳು ಜೋಡಣೆಗೊಂಡು ಗುಹೆ ನಿರ್ಮಾಣವಾಗಿದೆ, ಗುಹೆಯ ಒಳಗೆ ಹೊದಂತೆ ಸ್ವಲ್ಪ ಎತ್ತರದ ಸಮತಟ್ಟಾದ ಜಾಗದಲ್ಲಿ ಶ್ರೀ ಮಹಾದೇವರ ಉದ್ಭವ ಲಿಂಗವಿರುವುದು, ಅದರ ಎಡಬದಿಯಲ್ಲಿ ಶ್ರೀ ಮಹಾಗಣಪತಿ ಮತ್ತು ಬಲಬದಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗೂ ನಾಗದೇವರ ಮೂರ್ತಿಗಳಿವೆ. ಶಿವಲಿಂಗದಕ್ಕೆ ಸರಿಯಾಗಿ ಮುಂಬಾಗದಲ್ಲಿ ನಂದಿಯು ಕೂಡ ಇರುವುದು. ಮಳೆಗಾಲದಲ್ಲಿ ಬಂಡೆಗಳ ನಡುವಿನಿಂದ ನೀರು ಜಲಧಾರೆಯಾಗಿ ಶಿವಲಿಂಗದ ಮೇಲೆ ಬೀಳುವುದು ಇಲ್ಲಿನ ವಿಶೇಷ. ಗರ್ಭಗುಡಿ ಇಲ್ಲದ ಕಾರಣ ಈ ಗುಹೆಯ‌ ಒಳಕ್ಕೆ ಅರ್ಚಕರಿಗೆ ಮಾತ್ರ ಪ್ರವೇಶ, ಗುಹೆಯ ಎಡಭಾಗದ ದಾರಿಯಲ್ಲಿ ಹೋದರೆ ಎತ್ತರದಲ್ಲಿ ಕಲ್ಲುಬಂಡೆಗಳ ಇದ್ದು ಅಲ್ಲಿಂದ ನಿಂತು ಕೆಳಕ್ಕೆ ನೋಡಿದರೆ ದೇವರ ದರ್ಶನ ಪಡೆಯಬಹುದು.

ಇಲ್ಲಿನ ಗ್ರಾಮಸ್ಥರು ಹೇಳುವಂತೆ ಈ ಕ್ಷೇತ್ರದಲ್ಲಿ ಋಷಿಮುನಿಗಳೊಬ್ಬರು ಹಲವು ವರ್ಷಗಳ ಕಾಲ ಶಿವನನ್ನು ಕುರಿತು ತಪಸ್ಸು ಮಾಡಿದಾಗ ಶಿವಲಿಂಗ ಉದ್ಭವವಾಯಿತು, ಮತ್ತು ಇಲ್ಲಿ ದೇವರಲ್ಲಿ ಪ್ರಾರ್ಥಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ದೇವಸ್ಥಾನದ ವಾರ್ಷಿಕೋತ್ಸವ ಪ್ರತಿ ವರ್ಷ ಶಿವರಾತ್ರಿಯಂದು ಜರುಗುವುದು, ಆ ದಿನ ದೇವರಿಗೆ ಅಭಿಷೇಕಗಳನ್ನು, ಬಿಲ್ವಪತ್ರೆ ಅರ್ಚನೆಗಳನ್ನು ನೆರೆವೇರಿಸಲಾಗುತ್ತದೆ.
ದೇವಾಲಯದ ಪರಿಸರದಲ್ಲಿ ಶ್ರೀ ಶಾಸ್ತಾವು, ನಾಗದೇವರ ಸನ್ನಿಧಿ, ಅರಳಿ ಮರ, ಬಿಲ್ವಪತ್ರೆ ಮರ ಮತ್ತು ಇನ್ನೊಂದು ವಿಶೇಷವೆಂದರೆ ಈಶ್ವರನ ಪ್ರತೀಕವಾದ ರುದ್ರಾಕ್ಷಿ ಮರ ಕೂಡ ಇಲ್ಲಿದೆ.
ದೇವಸ್ಥಾನದ ಮುಂಭಾಗದಲ್ಲಿ ಗುಹೆಗೆ ಸಮನಾಗಿ ಚಿಕ್ಕದಾದ ಜಲಪಾತವಿದೆ, ಇಲ್ಲಿಗೆ ನೀರು ಗದ್ದೆಗಳು, ತೋಡುಗಳ ಮೂಲಕ ಬಂದು ಬಂಡೆಗಲ್ಲುಗಳ ಸಂಧಿಯಿಂದ ಹರಿದು ಬರುತ್ತದೆ. ಮಳೆ ಇಲ್ಲದ ಸಮಯದಲ್ಲು ಸಣ್ಣ ನೀರಿನ ಹರಿವಾದರು ಇರುವುದು. ಈ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದು ಬಹಳ ಆಹ್ಲಾದಕರ. ಈ ನೀರು ಮುಂದೆ ಸಾಗಿ ಹತ್ತಿರದಲ್ಲೇ ಇನ್ನೊಂದು ಜಲಪಾತವಾಗಿ ಸ್ವಲ್ಪ ಎತ್ತರದಿಂದಲೆ ಹರಿಯುತ್ತದೆ. ಇದು ಕೂಡ ನೋಡಲು ರಮಣೀಯವಾಗಿದೆ. ಇದನ್ನು ನೋಡಬೇಕಾದರೆ ಕೆಳಗಿರುವ ಗದ್ದೆಗೆ ಇಳಿಯಬೇಕು. ದೇವಸ್ಥಾನದ ಸುತ್ತ ಮುತ್ತ ಗದ್ದೆ, ಕಾಫಿ ತೋಟ, ಅಡಿಕೆ, ತೆಂಗು ಮುಂತಾದ ಮರಗಳಿಂದ ಕೂಡಿದೆ, ನೀವೂ ಕೂಡ ಇಲ್ಲಿಗೆ ಬಂದರೆ ಯಾರ ಅಡಚಣೆಗಳಿಲ್ಲದೆ ದೇವಸ್ಥಾನ ಮತ್ತು ಅಲ್ಲಿರುವ ಹಲವು ಪ್ರಕೃತಿ ಸೌಂದರ್ಯಗಳನ್ನು ಸವಿಯಬಹುದು.

ಗುರುಕೃಷ್ಣ ಬಿ.ಎಂ
ಮರಗೋಡು
error: Content is protected !!
satta king chart