fbpx

ಅಂದೇ ಎಚ್ಚೆತ್ತುಕೊಂಡಿದ್ದರೆ ಇಂತಹ ದುಸ್ಥಿತಿ ಕೊಡಗಿಗೆ ಬರುತ್ತಿರಲಿಲ್ಲ…

ಕರ್ನಾಟಕದ ಅತಿ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೊರೋನಾ ಸಾಂಕ್ರಾಮಿಕ ಸೊಂಕಿತರ ಸಂಖ್ಯೆ ಬೆರಳೆಣಿಕೆಯಷ್ಟು ಇದ್ದಾಗಲೇ ಜಿಲ್ಲಾಡಳಿತ ಹಾಗು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯ ಕುರಿತು ಅಕ್ಷೇಪ ವ್ಯಕ್ತಪಡಿಸಿದ್ದರು ಜಿಲ್ಲೆಯ ಖ್ಯಾತ ವಕೀಲರಾದ ಕೃಷ್ಣ ಮೂರ್ತಿರವರು.


ಈ ಹಿಂದೆ ಕೊರೋನಾ ಸೊಂಕು ಸಂಬಂಧಿಸಿದಂತೆ ಗ್ರೀನ್ ಜ಼ೋನ್ ಆಗಿ ಕೊಡಗು ಜಿಲ್ಲೆ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಹಳೆಯ ಕೇಸ್ ಗಳೂ ಸೇರಿ,ಒಟ್ಟು 22 ಕೇಸುಗಳಿಗೆ ಕೊರೋನಾ ಏರಿಕೆಯಾಗಿದೆ.


ಅಂದು ಕೋವಿಡ್-19 ಕೊರೋನಾ ಸೊಂಕು ನಿಯಂತ್ರಣ ಮಾಡಬಹುದಾದ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಶಾಸಕರುಗಳು, ಸಂಸದರು, ಅಧಿಕಾರಿ ವರ್ಗದ ದಿವ್ಯ ನಿರ್ಲಕ್ಷ್ಯದ ಧೋರಣೆಯನ್ನು ವಿರೋಧಿಸಿ ಸಕಾರಾತ್ಮಕವಾದ ಖಂಡನೆಯನ್ನು ಮಾಡಿದ್ದರು ಕೊಡಗಿನ ಖ್ಯಾತ ವಕೀಲರಾದ ಕೃಷ್ಣ‌ಮೂರ್ತಿಯವರು. ಅದನ್ನು ನೆನಪಿಸಿಕೊಳ್ಳಲೇ ಬೇಕಿದೆ ಈ ಸಂದರ್ಭ
ಪರ ಜಿಲ್ಲೆಯ, ಅನ್ಯ ರಾಜ್ಯದ ಕಾರ್ಮಿಕರನ್ನು ಕೊಡಗಿನೊಳಗೆ ಪ್ರವೇಶಿಸಲು ಅನುಮತಿ‌ ನೀಡಲಾಯಿತು.

ಪ್ರವಾಸೋದ್ಯಮಕ್ಕೂ ಅವಕಾಶ ನೀಡಲಾಯಿತು. ಅದೇ ಸಂದರ್ಭ ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದೆ, ಸರಕಾರದ್ದೇ ಮಾರ್ಗಸೂಚಿಯನ್ನು ಕಡೆಗಣಿಸಿ, ಕೊರೋನಾ ವಾರಿಯಸ್೯ ಎಂದು ಕರೆಯಲಾಗುತ್ತಿರುವ ಅಧಿಕಾರಿಗಳಿಗೆ, ಪೊಲೀಸರಿಗೆ ಔತಣಕೂಟದ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಆಯೋಜಿಸಿ, ಕಾನೂನುಗಳನ್ನೆಲ್ಲಾ ಗಾಳಿಗೆ ತೂರಿದ್ದರು. ಮದುವೆ‌, ಪ್ರತಿಭಟನೆ ಹಾಗು ಇತರೆ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.

ಈ ಕುರಿತು ಪ್ರಶ್ನಿಸಿ, ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ವಕೀಲರಾದ ಕೃಷ್ಣಮೂರ್ತಿ ಅವರು ಲಿಖಿತ ದೂರನ್ನು ಸಲ್ಲಿಸಿದ್ದರು. ಅಗತ್ಯ ಬಿದ್ದರೆ ಕಾನೂನು ಹೋರಾಟವನ್ನೂ ಮಾಡುವುದಾಗಿ ಎಚ್ಚರಿಸಿದ್ದರು. ಅದರಲ್ಲಿ ವಕೀಲ ಕೃಷ್ಣಮೂರ್ತಿ ಅವರ ಸಾಮಾಜಿಕ ಕಾಳಜಿ, ಹಾಗು ರೋಗ ತಡೆಗಟ್ಟುವ ನಿಜವಾದ ಜನತಾ ಹಿತಾಸಕ್ತಿ ಇತ್ತು.

ಕೊಡಗಿನ ಖ್ಯಾತ ವಕೀಲರಾದ ಕೃಷ್ಣಮೂರ್ತಿ ಅವರು

ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯ ಎಂಬಂತೆ ನಡೆದಿದ್ದ ಉಸ್ತುವಾರಿ ಸಚಿವರ ಔತಣ ಕೂಟದ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಮಂದಿ ಮುಖ ಗವಸುಗಳಿಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗಿಜಿಗುಟ್ಟುವಂತೆ ಜನ ಜಂಗುಳಿಯಂತೆ ಸೇರಿದ್ದು, ವಕೀಲರ ಆತಂಕಕ್ಕೆ ಮುಖ್ಯ ಕಾರಣವಾಗಿತ್ತು.
ಹಾಗೆ ವಕೀಲರು ವಿರೋಧ ವ್ಯಕ್ತ ಪಡಿಸಿ, ಅಧಿಕಾರಿ ಹಾಗು ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದಾಗ, ಕೆಲವರು ವಕೀಲರ ಕುರಿತಾಗಿಯೇ ಮುಖ ಮುರಿದುಕೊಂಡಿದ್ದರು.

ಆದರೆ ಕೊರೋನಾ ಸೊಂಕಿನ ಪರಿಸ್ಥಿತಿಯ ಗಂಭೀರತೆ ಈಗ ಅವರಿಗೆಲ್ಲಾ ಅರ್ಥವಾಗುತ್ತಿದೆ.ಪರಿಸ್ಥಿತಿ ಕೈ ತಪ್ಪುವ ಹಂತಕ್ಕೆ ತಲುಪಿದೆ. ಕೆಟ್ಟ ಮೇಲೆ ಬುದ್ಧಿ ಬಂದ ಹಾಗೆ ಕೊರೋನಾ ಸೊಂಕಿನ ವ್ಯಾಪಕ ಸಾಂಕ್ರಾಮಿಕತೆಯಿಂದಾಗಿ ಕೊಡಗು ಜಿಲ್ಲೆಯ ಹಲವೆಡೆ ಸೀಲ್ ಡೌನ್‌ ಪರಿಸ್ಥಿತಿ ಎದುರಾಗಿದೆ.

ಪ್ರವಾಸೋದ್ಯಮವನ್ನು 21 ದಿನಗಳ ಕಾಲ ನಿರ್ಬಂಧಿಸಲಾಗಿದೆ. ಇಡೀ ಜಿಲ್ಲೆಯೇ ಲಾಕ್ ಡೌನ್ ಆಗುವ ಹಂತ ತಲುಪಿದೆ. ವೈದ್ಯಕೀಯ ಸಿಬ್ಬಂದಿಗಳಲ್ಲೂ ಕೊರೋನಾ ಸೊಂಕು ಕಂಡು ಬಂದಿದೆ.


ಅಗತ್ಯ ಮುಂಜಾಗೃತೆಗಳನ್ನು ತೆಗೆದುಕೊಂಡು, ಜಿಲ್ಲೆಯ ಸುರಕ್ಷತೆಯ ಬಗ್ಗೆ‌ ಹೆಚ್ವಿನ ಗಮನ ನೀಡಿದ್ದರೆ, ಪರಿಸ್ಥಿತಿ ಈ ಮಟ್ಟಕ್ಕೆ ವಿಷಮವಾಗುತ್ತಿರಲಿಲ್ಲ. ಇದಕ್ಕೆಲ್ಲಾ ಜನಪ್ರತಿನಿಧಿಗಳು, ಜಿಲ್ಲಾಡಳಿತವೇ ಮೂಲ ಕಾರಣ. ಒಂದು ಅತೀ ಪುಟ್ಟ ಜಿಲ್ಲೆಯ ಸುರಕ್ಷತೆಯನ್ನೇ ಕಾಪಾಡಲು ಆಗದೆ ಇರುವ ಇಂತಹ ಅಧಿಕಾರಶಾಹಿ ವರ್ಗ ಇನ್ನೇನನ್ನು ಸಮರ್ಥವಾಗಿ ಮಾಡಿಯಾರು ಎಂದು ವಕೀಲರು ಪ್ರಶ್ನಿಸಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಹಾಗು ಜನಪ್ರತಿನಿಧಿಗಳು ಎಚ್ಚರದಿಂದ ಗಮನಕೊಟ್ಟು, ಜಿಲ್ಲೆಯಲ್ಲಿನ ಈ ಕೊರೋನಾ ವ್ಯಾಧಿಯ ಸಂಪೂರ್ಣ ಶಮನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ. ಈ ನಿರ್ಲಕ್ಷ್ಯ ಧೋರಣೆ, ನಿರಾಶಾದಾಯಕ ಆಡಳಿತ ವೈಖರಿ ಬದಲಾಗಬೇಕಿದೆ ಎಂದು ಆಶಯವನ್ನು ಅವರು ಸುದ್ದಿ ಸಂತೆ ಮಾಧ್ಯಮದೊಂದಿಗೆ ವ್ಯಕ್ತಪಡಿಸಿದ್ದಾರೆ.

error: Content is protected !!