ಟೂರಿಸಂ ಉದ್ಯಮವೇ ಹೊರತು ಮಾಫಿಯಾ ಅಲ್ಲ: ಚೀಯಂಡಿರ ಕಿಶನ್ ಉತ್ತಪ್ಪ
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಟೂರಿಸಂ ವಿರುದ್ಧ ಕೆಲವು ಹಳದಿ ಕಣ್ಣುಗಳ ದೃಷ್ಟಿ ಬೀಳುತ್ತಿದೆ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೃಷಿ ಚಟುವಟಿಕೆಗಳು ಕುಂಟಿತವಾಗಿರುವುದರಿಂದ ಜನರು ತಮ್ಮ ಜೀವನೋಪಾಯಕ್ಕೆ ಪ್ರವಾಸೋದ್ಯಮವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಗೆ ಪ್ರವಾಸೋದ್ಯಮ ಆದಾಯದ ಮುಖ್ಯ ಮೂಲವೇ ಆಗಿದೆ ಎಂದು ಸಮಾಜವಾದಿ ಪಕ್ಷದ ಕೊಡಗು ಅಧ್ಯಕ್ಷ ಹಾಗು ಯುವ ನಾಯಕರಾದ ಚೀಯಂಡಿರ ಕಿಶನ್ ಉತ್ತಪ್ಪ ಹೇಳಿದರು.
ಕೊರೋನಾ ಸಾಂಕ್ರಾಮಿಕ ಸೊಂಕಿನಿಂದಾಗಿ 2-3 ತಿಂಗಳ ಕಾಲ ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತಗೊಂಡು ಬಾರಿ ನಷ್ಟ ಉಂಟಾಗಿತ್ತು. ಈಗ ಮತ್ತೆ ಪುನರಾರಂಭವಾಗುವ ಲಕ್ಷಣಗಳು ಕಂಡು ಬರುತ್ತಿದ್ದು, ಜಿಲ್ಲಾಡಳಿತವೂ ಮಾರ್ಗಸೂಚಿಯನ್ನು ಪಾಲಿಸಿ ಪ್ರವಾಸೋದ್ಯಮ ನಡೆಸುವಂತೆ ಹೇಳಿದೆ. ಪ್ರವಾಸೋದ್ಯಮ ಇಲಾಖೆಯು ಅಧಿಕೃತ ರೆಸಾಟ್೯ಗಳಿಗೆ, ಹೋಂಸ್ಟೇಗಳಿಗೆ ಆಗಿರುವ ನಷ್ಟದಿಂದ ಚೇತರಿಸಿಕೊಳ್ಳಲು ಇಂತಿಷ್ಟು ಪರಿಹಾರ ಧನವನ್ನು ಕೂಡ ನೀಡಬೇಕು.
ಜಿಲ್ಲೆಯ ಜನರು ಹೀಗೆ ಪ್ರವಾಸೋದ್ಯಮವನ್ನು ಮತ್ತೆ ಆರಂಭಿಸಿ, ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಾರೆ ಎನ್ನುವ ಹೊತ್ತಿಗೆ ಕೆಲವು ಪೂರ್ವಾಗ್ರಹ ಪೀಡಿತ ಸಂಘಟನೆಗಳು ಟೂರಿಸಂ ಉದ್ಯಮವನ್ನು ‘ಟೂರಿಸಂ ಮಾಫಿಯಾ’ ಎಂದು ಕರೆದು ವಿರೋಧಿಸುತ್ತಿರುವುದು ನಿಜಕ್ಕೂ ವಿಪರ್ಯಾಸ ಎಂದು ಬೇಸರ ಪಟ್ಟರು.
ಪ್ರವಾಸೋದ್ಯಮದ ಹೆಸರಿನಲ್ಲಿ ಎಲ್ಲಿಯಾದರೂ ಅಕ್ರಮ, ಅನಾಚಾರ, ಅನೈತಿಕ ಚಟುವಟಿಕೆಗಳು ಮತ್ತು ಅನಧಿಕೃತ ಹೋಂ ಸ್ಟೇಗಳು ನಡೆಯುತ್ತಿದ್ದರೆ, ಅವುಗಳನ್ನು ಗುರುತಿಸಿ, ನೇರವಾಗಿ ಅವುಗಳ ವಿರುದ್ಧವೇ ನಿರ್ದಿಷ್ಟವಾಗಿ ಹೋರಾಡಿ ಅವುಗಳನ್ನೆಲ್ಲಾ ನಿಲ್ಲಿಸಲಿ ಈ ಸಂಘಟನೆಗಳು.
ಅದನ್ನು ಬಿಟ್ಟು ಜಿಲ್ಲೆಯ ಜನ ಅವಲಂಭಿತವಾಗಿರುವ ಪ್ರವಾಸೋದ್ಯಮವನ್ನೇ ಇಡೀಯಾಗಿ ಖಂಡಿಸುವುದು ಮತ್ತು ‘ಟೂರಿಸಂ ಮಾಫಿಯಾ’ ಎಂದು ಕರೆಯುವುದು ಸರಿಯಲ್ಲ ಎಂದು ಕಿಶನ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಅದರೊಂದಿಗೆ ಪ್ರವಾಸೋದ್ಯಮ ಶುರುವಾಗಿದ್ದೇ ತಡ ಸಿಕ್ಕಿದ ಎಲ್ಲಾ ಪ್ರವಾಸಿಗರಿಗೆ ಹೇಳದೆ ಕೇಳದೆ ಆಶ್ರಯ ನೀಡಿ ಸತ್ಕರಿಸಿ ದುಡಿಯುವುದನ್ನು ಜಿಲ್ಲೆಯ ಜನ ಬಿಟ್ಟು ಬಿಡಬೇಕು.
ಅಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಜವಾಬ್ದಾರಿಯಿಂದ ಮೆಲ್ಲಗೆ ಪ್ರವಾಸೋದ್ಯಮವನ್ನು ಆರಂಭಿಸಬೇಕಿದೆ. ಇಲ್ಲವಾದರೆ ಜಿಲ್ಲೆಗೆ ಕೊರೋನಾದಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕಿಶನ್ ಉತ್ತಪ್ಪ ಅವರು ಆತಂಕ ಕೂಡ ಪಟ್ಟರು…!