ವಿಶ್ರಾಂತಿಗೆ ಆರಾಮದಾಯಿಕ ಪ್ರವಾಸಿ ತಾಣ…
✍ ದೀಪಕ್ ಶರ್ಮಾ,
ಕೊಡಗು ಅತ್ಯಂತ ರಮಣೀಯ ರಮ್ಯ ಜಿಲ್ಲೆ. ಹತ್ತು ಹಲವು ತಾಣಗಳು ಈ ಜಿಲ್ಲೆಯಲ್ಲಿದೆ. ಅವುಗಳಲ್ಲಿ ಒಂದು ‘ಕೋಟೆ ಅಬ್ಬಿ’ ಜಲಪಾತ. ಕೋಟೆ ಅಬ್ಬಿ ಜಲಪಾತದ ವಾತಾವರಣ ವಿಶ್ರಾಂತವೆನಿಸುವಂತದ್ದು.
ಸೋಮವಾರಪೇಟೆಗೆ ಹೋಗುವ ಮಾದಾಪುರ ತಲುಪುವ ಮುನ್ನ ಸಿಗುವ ಹಟ್ಟಿಹೊಳೆ ಸೇತುವೆಯಿಂದ ಎಡಗಡೆಯ ರಸ್ತೆಯಲ್ಲಿ ಸಾಗಿದರೆ, ಏರು ತಗ್ಗು ದಾರಿಯಲ್ಲಿ ಪಯಣಿಸಿದ ನಂತರ ‘ಕೋಟೆ ಅಬ್ಬಿ’ ಜಲಪಾತಕ್ಕೆ ತಲುಪುತ್ತೇವೆ. ತಿಳಿ ನೀರಿನ ಜಲಪಾತ ಎಂಥವರನ್ನೂ ಸಹ ತನ್ನತ್ತ ಸೆಳೆಯುವ ಸೌಂದರ್ಯವನ್ನು ಹೊಂದಿದೆ.
ನೋಡಲು ಪುಟ್ಟ ವಿಸ್ತಾರದ ಅಬ್ಬಿ ಜಲಪಾತದಂತೆಯೇ ಇರುವ ಈ ಜಲಪಾತಕ್ಕೆ ಅದಕ್ಕೆ ‘ಕೋಟೆ ಅಬ್ಬಿ’ ಎಂಬ ಹೆಸರು ಇದಕ್ಕೆ ಬಂತು. ಈಗಲೂ ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರಿಂದ ಸ್ವಲ್ಪ ದೂರವೇ ಉಳಿದಿರುವ ಈ ತಾಣ ನಿಜಕ್ಕೂ ಸುಂದರ! ಇಲ್ಲಿನ ತಿಳಿ ನೀರು ಪರಿಶುದ್ಧವಾಗಿದ್ದು, ಮೀನುಗಳ ರಾಶಿಯೇ ಇಲ್ಲಿವೆ.
ಆದರೆ ಈ ಮೀನುಗಳನ್ನು ಯಾರೂ ಹಿಡಿಯುವಂತಿಲ್ಲ. ಕಾರಣ ಅವುಗಳು ದೇವರ ಮೀನುಗಳು ಎಂಬ ಬಲವಾದ ನಂಬಿಕೆ ಇದೆ. ಈ ಜಲಪಾತದ ತಾಣವಿರುವಲ್ಲಿಗೆ ರಸ್ತೆ, ಕುಡಿಯುವ ನೀರಿನ ಸೌಲಭ್ಯ, ಆಹಾರ ಗೃಹ, ಶೌಚಾಲಯ ಸೌಲಭ್ಯ ಸಿಕ್ಕಿದರೆ, ಪ್ರವಾಸೋದ್ಯಮ ಇಲ್ಲಿ ಗಮನಾರ್ಹವಾಗಿ ಬೆಳೆಯುವ ಸಾಧ್ಯತೆಗಳಿವೆ.