fbpx

ಹುಲಿ ಉಗುರು

"ಮೂವತ್ತು ‌ಸಾವಿರ ಕೊಟ್ರೆ ಕೊಟ್ಬಿಡ್ತೀನಿ ಯಾರಾದ್ರು ಪಾರ್ಟಿ ಇದ್ರೆ ಹೇಳು, ತುಂಬಾ ಕಷ್ಟದಲ್ಲಿದ್ದೀನಿ, ಇಲ್ಲಂದ್ರೆ ಇಷ್ಟು ಕಡಿಮೆಗೆ ಇದನ್ನ ಕೊಡ್ತಾ ಇರ್ಲಿಲ್ಲ ಇದು ವರ್ಜಿನಲ್" ಎನ್ನುತ್ತಾ ತನ್ನ ಕುತ್ತಿಗೆಯಲ್ಲಿದ್ದ ಕಿರುಬೆರಳ ಗಾತ್ರದ ಬೆಳ್ಳಿ ಚೈನಿಗೆ ಸಿಕ್ಕಿಸಿದ್ದ ಒಂಟಿ ಉಗುರನ್ನು ತೋರಿಸಿದ. ನಾನು ತದೇಕ ಚಿತ್ತದಿಂದ ಉಗುರನ್ನೇ ಗಮನಿಸತೊಡಗಿದೆ. ****************************


ಬಾಂಬೆಯಿಂದ ಶರಣು ರಜೆಯಲ್ಲಿ ಬಂದದ್ದೇ ಊರಿನವರಿಗೆಲ್ಲಾ ವಿಶೇಷ. ಹೊಸ ಬಣ್ಣ, ಬಣ್ಣದ ಹೊಳೆಯುವ ಜುಬ್ಬ ತೊಟ್ಟು. ಉದ್ದನೇಯ ಕೆಂಪು ನಾಮ ಹಾಕಿಕೊಂಡ ಶರಣು‌ ರಸ್ತೆಯಲ್ಲಿ ‌ಎದುರಾದರೆ. ಆತನ ಬಾಂಬೆ ಕಥೆ ಕೇಳಲು ಜನ ಎಲ್ಲಾ ಕೆಲಸ ಬಿಟ್ಟು ರಸ್ತೆಯಲ್ಲೇ ನಿಂತು ಬಿಡುತ್ತಿದ್ದರು.

ಶರಣು ಬಾಂಬೆಯಲ್ಲಿ ಯಾವುದೋ ಗೋಲ್ಡ್ ಸ್ಮಗ್ಲರ್ ಗ್ಯಾಂಗಿಗೆ ಸೇರಿದ್ದಾ ಎನ್ನುವ ಸಣ್ಣ ಗುಮಾನಿಯೂ ಊರಿನಲ್ಲಿ ಗಸ್ತು ತಿರುಗುತ್ತಿತ್ತು.
ಗುಮಾನಿಗೆ ಪುಷ್ಟಿನೀಡುವಂತೆ ಆತನೂ ವರ್ತಿಸುತ್ತಿದ್ದ.ಅಲ್ಲಿ ಯಾವುದೋ ಪಾತಕ ಕೃತ್ಯದಲ್ಲಿ ಭಾಗಿಯಾಗಿ, ಪೋಲಿಸರಿಂದ ತಲೆಮರೆಸಿಕೊಳ್ಳಲು ಈತ ಐದು ವರ್ಷಗಳ ನಂತರ ಊರಿನ ಕಡೆ ಮುಖಮಾಡಿದ್ದ ಎನ್ನುವುದು ಹಲವರ ಅನುಮಾನ ಕೂಡ ಆಗಿತ್ತು.

ಐದು ಅಡಿ‌, ಮೂರು ಇಂಚಿನ ಕುಳ್ಳನೆಯ ಆಕೃತಿಯ ಶರಣು ಜುಬ್ಬಾ ತೊಟ್ಟು, ಜುಬ್ಬದ ಕೈಯನ್ನು ಬುಜದವರೆಗೂ ಮಡಚಿಕೊಂಡು, ಎರಡೂ ಕೈಯನ್ನು ಸ್ವಲ್ಪ ಅಗಲವಾಗಿಸಿ ನಡೆದಾಡುತ್ತಿದ್ದರೆ. ನಮಗೆಲ್ಲ ಮಲಯಾಳಂ ಸಿನಿಮಾಗಳಲ್ಲಿ ಬರುವ ಥೇಟ್ ‘ದಾದ’ನಂತೆ‌‌ ಕಾಣಿಸುತ್ತಿದ್ದ‌.

ಬಾಂಬೆಯಿಂದ ಬಂದ ಶರಣುವಿಗೆ ಈ ಕಾರಣಕ್ಕಾಗಿ ನಮ್ಮ ಊರಿನ ಕಾಕ ಹೋಟೆಲಿನಲ್ಲಿ ಬೆಳಗ್ಗಿನ ಪತ್ತಲ್, ಮೀನುಸಾರು ಹಾಗು ಕಾಲಿ ಟೀ ಉಚಿತವಾಗಿ ಅರ್ಪಣೆಯಾಗುತ್ತಿತ್ತು.
ಹೋಟೆಲ್ ಕಾಕನಿಗೆ ಈಗೀಗ ಕೊಂಚ ಅಹಂಕಾರವೂ ಬಂದಿತ್ತು.

ಶರಣು ಕೈಯಲ್ಲಿ ಪಿಸ್ತೂಲ್ ಇದೆ‌ ಹಾಗು ಈಗ ಆತ ಹೋಟೆಲ್ ಕಾಕನ ಖಾಸ ಖಾಸ‌ ದೋಸ್ತನಾಗಿದ್ದಾನೆ. ಎನ್ನುವ ಸುದ್ದಿ ಊರಲ್ಲಿ ಹರಡಿ, ಈ ಹಿಂದೆ ಕಾಕನಿಗೆ ಉಪಟಳ ನೀಡುತ್ತಿದ್ದ ಊರಿನ ಕೆಲ ಪುಡಿರೌಡಿಗಳು ಹೋಟೆಲ್ ಬಳಿ ಕಾಣಿಸಿಕೊಳ್ಳಲು ಹೆಣಗುತ್ತಿದ್ದರು.
ಹೀಗೆ ಬಾಂಬೆ ಶರಣುವಿನ ಕಥೆಗಳು ದಿನಕ್ಕೊಂದು ಟ್ವಿಸ್ಟ್ ಪಡೆದು, ಊರಿನಲ್ಲಿ ಆತನಿಗೆ ವಿಶೇಷ ಗೌರವ ಸೃಷ್ಟಿಯಾಗಿತ್ತು.

ಪಿ.ಯು.ಸಿ ಹುಡುಗನಾಗಿದ್ದ ನನಗೆ ಈ ಬಾಂಬೆ ಶರಣುವನ್ನು ಹೇಗಾಗದರೂ ಮಾಡಿ ಸಂಪರ್ಕಿಸಬೇಕು ಎನ್ನುವ ಇಂಗಿತ ಉಂಟಾಗಿತ್ತು. ಹಾಗೆ ಅನಿಸಲು ಬಲವಾದ ಕಾರಣವು ಇತ್ತು.
ಒಂದು ದಿನ ಕಾಲೇಜು ಮುಗಿಸಿ ಮರಳುವ ವೇಳೆ, ಕಾಕ ಹೋಟೆಲಿನೊಳಗೆ ಇಣುಕಿದೆ. ನನ್ನ ಅದೃಷ್ಟ ಎಂಬಂತೆ ಬಾಂಬೆ ದಾದ ಒಳಗೆ ಕುಳಿತು ಕಟ್ಟನ್ ಟೀ ಸವಿಯುತ್ತಿದ್ದ. ಸುಮಾರು ಮೂವತ್ತು ವಯಸ್ಸು ದಾಟದ ಆತನ ದೊಗಳೆ ಜುಬ್ಬ ಹಾಗು ಉದ್ದನೇಯ ಕೆಂಪು ನಾಮ ಆತನನ್ನು ಕೊಂಚ ಗಂಭೀರವಾಗಿ ಕಾಣಿಸುವಂತೆ ಮಾಡಿತ್ತು.

ಹೇಗೋ ಧೈರ್ಯ ಮಾಡಿ, ಹೋಟೆಲಿನ ಒಳಗೆ ಹೋಗಿ ಎರಡು ಐದು ರೂಪಾಯಿಯ ಟೈಗರ್ ಬಿಸ್ಕತ್ತು ಕೊಂಡು ಕೊಂಡೆ. ನಾನು ಹಾಗೆ ಒಳಗೆ ಹೋಗಿದ್ದು ಹಾಗು ಟೈಗರ್ ಬಿಸ್ಕತ್ತು ಕೊಂಡು ಕೊಂಡಿದ್ದು. ಬಾಂಬೆ ದಾದನ ಗಮ‌ಸೆಳೆಯುವ ಸಲುವಾಗಿಯಾದರೂ ದಾದ ನನ್ನೆಡೆಗೆ ಆಸ್ಥೆ ತೋರಿಸಿದಂತೆ ಕಾಣದಾಗಿ ನಿರಾಸೆ ಉಂಟಾಯ್ತು. ಮರಳುವಾಗ “ಸಲಾಂ ದಾದ” ಅಂದೆ. ಈ ಬಾರಿ ನನ್ನ ಸ್ಟ್ರಾಟರ್ಜಿ ವರ್ಕ್ಔಟ್ ಆಗಿತ್ತು. ದಾದ ಕಣ್ಣೆತ್ತಿ‌ ತೀಕ್ಷ್ಣನೋಟ ಬೀರಿದ್ದ. ನಾನು ನಕ್ಕೆ‌, ಅವನೂ ನಕ್ಕ. ಒಳಗಿನಿಂದ ಬಂದ ಹೋಟೆಲ್ ಕಾಕ “ಈ ಹುಡುಗನ ಗೊತ್ತಾಗಲಿಲ್ವ? ಇವನು ನಮ್ಮ ಬಾಬಣ್ಣನ ಮಗ” ಅಂದರು.

ಶರಣನ ಮುಖ ಭಾವ ದಿಢೀರ್ ಬದಲಾಯ್ತು, ನನ್ನೆಡೆಗೆ ನೋಡಿ “ನಮ್ಮ ಬಾಬು‌‌ ಅಂಕಲ್ ಮಗ. ನಾನು ಬಾಂಬೆಗೆ ಹೋಗುವಾಗ ಇವನು ಸಣ್ಣವನು, ಈಗ ಏನು ಮಾಡಿಕೊಂಡಿದ್ದೀಯಾ?” ಎಂದು ನನ್ನನ್ನು ಉದ್ದೇಶಿಸಿ ಕೇಳಿದ.
ನನಗೂ ಅದೇ ಬೇಕಿತ್ತು. ಕಾಕನಿಗೆ ಅರ್ಧ ಕಾಲಿ‌ ಟೀ ಆರ್ಡರ್ ಮಾಡಿ, ನಾನು ದಾದನ ಮುಂದೆ ಮರದ ಬೆಂಚಿನಲ್ಲಿ ಆಸೀನನಾದೆ.

“ನಾನು ದ್ವಿತೀಯ ಪಿ.ಯು.ಸಿ ದಾದ” ಅಂದೆ. ನಾನು ಹಾಗೆ ಪದೇ ಪದೇ ‘ದಾದ’ ಎಂದು ಸಂಭೋಧಿಸುತ್ತಿದ್ದದ್ದು ಶರಣುವಿಗೆ ಸ್ವಲ್ಪ ಖುಷಿ ನೀಡುತ್ತಿತ್ತು ಎನ್ನುವುದನ್ನು ಅರ್ಥಮಾಡಿಕೊಂಡು ಹಾಗೆ ಮುಂದುವರೆಸಿದೆ.
ಉಭಯ ಕುಶಲೋಪರಿ ಮಾತನಾಡಿ, ಕಾಕ ತಂದುಕೊಟ್ಟ ಟೀ‌ ಕುಡಿದು, ಹೊರಡುವಾಗ ನನಗೂ‌‌‌ ಕಾಕನಷ್ಟೇ ಅಹಂಕಾರ ಮನಸ್ಸಿನಾಳದಲ್ಲಿ ಬೇರೂರಿತ್ತು.

ಬಾಂಬೆ ದಾದನೊಂದಿಗೆ ಟೀ ಕುಡಿದೆ ಎನ್ನುವುದು ಆ ಕಾಲಕ್ಕೆ ಕಡಿಮೆ ಮಾತೆ?
ಹೀಗೆ ನಾನು‌ ಕಾಲೇಜು ಬಿಟ್ಟು. ದಿನಾ ಸಂಜೆ‌, ಕಾಕ ಹೋಟೆಲಿನಲ್ಲಿ ಬಾಂಬೆ ದಾದನನ್ನು ಸಂಧಿಸಿ, ನಂತರ ಮನೆಗೆ ಹೋಗುತ್ತಿದ್ದೆ. ಒಂದೆರೆಡು ವಾರದಲ್ಲಿ ನನಗು ದಾದನಿಗೂ ಆಪ್ತತೆ ಬೆಳೆಯಿತು.
ಆ ರಾತ್ರಿಯೇ “ಹೇಗಾದರೂ ‌ಮಾಡಿ‌ ವಿಷಯವನ್ನು ನಾಳೆ ಸಂಜೆ ದಾದನಿಗೆ ತಿಳಿಸಿ, ಸಹಾಯ ಕೇಳಬೇಕು” ಎಂದು ಸಂಕಲ್ಪ ಮಾಡಿಕೊಂಡೆ. ಎಂದಿನಂತೆ ಅಂದು ಕೂಡ ಕಾಕ ಹೋಟೆಲಿನಲ್ಲಿ ಟೀ ಕುಡಿದೆ, ದಾದನೊಂದಿಗೆ ಅದು ಇದು‌ ಮಾತನಾಡಿದ್ದೆನಾದರು, ಅವರ ಬಾಂಬೆ ಪರಾಕ್ರಮದ ಕುರಿತು‌ ನಾನು ಎಂದೂ ಮಾತನಾಡಿರಲಿಲ್ಲ. "ದಾದ ನಿಮ್ಮೊಡನೆ ಸ್ವಲ್ಪ ಮಾತನಾಡಬೇಕಿತ್ತು" ಎಂದೆ.

ಕಾಕ‌ ಒಳಗೆ ಟೀ ಮಾಡುತ್ತಿದ್ದರು. “ಆದರೇ ಇಲ್ಲಿ ಬೇಡ ನೆಲ್ಲಿಮೊಟ್ಟೆಗೆ ಹೋಗೋಣಾ” ಅಂದೆ, “ಸರಿ‌ ನೀನು ಟೀ‌ ಕುಡಿದು ಅಲ್ಲಿಗೆ ಹೋಗಿರು ನಾನು ಬರುತ್ತೇನೆ” ಎಂದ ದಾದ.
‌‌‌ ಆಜ್ಞೆಯಂತೆ ಟೀ ಕುಡಿದು, ಮನೆಯಿಂದ ಸ್ವಲ್ಪವೇ ದೂರದಲ್ಲಿದ್ದ ನೆಲ್ಲಿಮೊಟ್ಟೆ ಬೆಟ್ಟವನ್ನು ತಲುಪಿ, ದಾದನಿಗಾಗಿ ಕಾಯುತ್ತಾ ನಿಂತೆ.
ದಾದ ಅಲ್ಲಿಗೆ ಬಂದರು ಹಾಗು ಜೇಬಿನಿಂದ ಬೀಡಿ ಒಂದನ್ನು ತಡವಿ ತೆಗೆದು ಬೆಂಕಿ‌ ಹಚ್ಚಿದರು. ಬಾಂಬೆ ದಾದ ಕೇವಲ ಬೀಡಿ ಎಳೆಯುವುದನ್ನು ಗಮನಿಸಿ ಇರುಸುಮುರುಸಾದ ನನ್ನ‌ ಮುಖವನ್ನು ಗಮನಿಸಿದ ಅವರು. ಇದು ಬರೀ ಬೀಡಿ ಅಲ್ಲ ಮರಿ.‌‌ ಇದು ಗಾಂಜ ಬೀಡಿ ಎಂದರು.
‌ನನ್ನ ಅಂತಃ ಕರಣದಲ್ಲಿ ಸಂಚಲನ ಮೂಡಿತು.‌ ಅಷ್ಟೇ ಭಯವೂ ಆಯಿತು.
ಹಾಗೆ ಒಂದೆರೆಡು ಪಪ್ ಎಳೆದ ದಾದ‌ ನಿನಗೆ ಬೇಕಾ ಎಂದರೂ? ನಾನು ತಡಬಡಿಸಿ “ನನಗೆ ಬೇಡ” ಎಂದೆ.
“ಏನು ವಿಷಯ” ಹೇಳು ಎಂದರು‌.
“ದಾದ ನನಗೊಬ್ಬಳು ಪ್ರೇಯಸಿ ಇದ್ದಾಳೆ, ಅವಳೂ ನಾನು ಒಂದೇ ಬಸ್ಸಿನಲ್ಲಿ ಬರುವುದು. ಅವಳ‌ ಊರಿನ ಕೆಲ ಹುಡುಗರು ನಮಗೆ ಬಸ್ಸಿನಲ್ಲಿ ತೊಂದರೆ ಮಾಡುತ್ತಿದ್ದು. ನೀವು ಒಂದು ದಿನ ನನ್ನ ಜೊತೆ ಬಸ್ಸಿನಲ್ಲಿ ಬರಬೇಕು” ಎಂದೆ.
ಅದಾಗಲೇ ‌ಈ‌ ಬಾಂಬೆ ದಾದನ ವಿಷಯ ಊರಿನಿಂದ ನಮ್ಮ ಕಾಲೇಜಿಗೂ ಪಸರಿಸಿ, ಅಲ್ಲೆಲ್ಲ ದಾದನ ಹೆಸರಿಗೆ ಒಂದು ತೆರೆನಾದ ಮರೆಯಾದೆ ಉಂಟಾಗಿತ್ತು.
“ಸರಿ‌ ಬರುತ್ತೇನೆ” ಎಂದ ದಾದನಿಗೆ ಈ‌ ಕೆಲಸಕ್ಕಾಗಿ ನಾನು ನನ್ನ ಕೈಲಿದ್ದ ಏಳುನೂರು ರೂಪಾಯಿಯನ್ನು ಅಡ್ವಾನ್ಸ್ ಕೊಟ್ಟು. “ಇನ್ನು ಮುನ್ನೂರು ನೀವು ಬಂದ ದಿನ ಕೊಡುತ್ತೇನೆ. ನನ್ನ ಬಳಿ ಇಷ್ಟೇ ಇರುವುದು ಈಗ” ಎಂದೆ.
‌‌‌‌ ದಾದ ಕೇವಲ ಏಳುನೂರನ್ನು ರಭಕ್ಕನೆ ಕೈಯಿಂದ ಕಸಿದುಕೊಂಡು ಬೇಜಿಗೆ ಇಳಿಸಿಕೊಂಡಿದ್ದು. ನನಗೆ‌‌ ಕೊಂಚ ಆಶ್ಚರ್ಯ ಅನಿಸಿದರು, ಅಲ್ಲಿ ನಾನು ಅದನ್ನು ತೋರಿಸಿಕೊಳ್ಳಲಿಲ್ಲ.
‌‌

ಮುಂದಿನ ಶುಕ್ರವಾರ ಸಂಜೆಯ ಬಸ್ಸಿನಲ್ಲಿ ನನ್ನೊಡನೆ‌ ದಾದ ಬರುವುದಾಗಿ ಹೇಳಿ, ಅಲ್ಲಿಂದ ಹೊರಟು ಹೋದರು. ಕೊಟ್ಟ ಮಾತಿನಂತೆ ಶುಕ್ರವಾರ ಸಂಜೆ ನಾನು ಕಾಲೇಜು ಮುಗಿಸಿ ಬಸ್ಸು ನಿಲ್ದಾಣಕ್ಕೆ ಬಂದಾಗ. ಅಲ್ಲಿ ಅವರು ಮತ್ತೊಬ್ಬರೊಂದಿಗೆ, ನನಗಾಗಿ ಕಾಯುತ್ತಿದ್ದರು. ಪಕ್ಕದಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿ ನಿಜಕ್ಕೂ ಭಯಾನಕವಾಗಿದ್ದ. ಗುಂಗರು ಕೂದಲಿನ ಆ ವ್ಯಕ್ತಿ ದಾದನಿಗಿಂತಲೂ ಎತ್ತರದ ಆಸಾಮಿ. ಮುಖದ ಮೇಲಿದ್ದ ಹಳೆಯ ಗಾಯದ ಕಲೆಯೇ ಅವನೊಬ್ಬ ಕುಖ್ಯಾತ ಎಂಬುದನ್ನು ಸಾರುತ್ತಿತ್ತು.
‌‌‌

ನಾನು ಅವರ ಹತ್ತಿರಾಗುತ್ತಿದ್ದಂತೆ. ದಾದ ನನ್ನನ್ನು ಹತ್ತಿರ ಕರೆದು. “ಇವರು ‘ಜಿಂಗಾ’ ಅಂತ ನನ್ನ ಆತ್ಮೀಯರು, ಬಾಂಬೆಯಲ್ಲಿ ನಾವೆಲ್ಲ ಜೊತೆಗೆ ಇದ್ದೊ” ಅಂದರು. ನಾನು ಅವರೆಡೆಗೆ ಮುಗುಳ್ನಕ್ಕೆ. ಅವರು ನನ್ನನ್ನೇ ಮೇಲಿನಿಂದ ಕೆಳಗೆ ಉಡಾಫೆಯಿಂದ ನೋಡಿ, ಮುಖವನ್ನು ಬೇರೆಡೆಗೆ ತಿರುಗಿಸಿದರು.

ನಾನು ಬನ್ನಿ ದಾದ ಜ್ಯೂಸ್ ಕುಡಿಯೋಣ, ಎಂದು ಪಕ್ಕದಲ್ಲಿದ್ದ ‘ಸ್ವರ್ಣ’ ಬೇಕರಿಗೆ ಅವರಿಬ್ಬರನ್ನು ಕರೆದೊಯ್ದೆ‌. ಅಲ್ಲೂ ಕುರೂಪಿ ‘ಜಿಂಗಾ’ ಹಾಗೆ ಗಂಭೀರಾವಾಗೆ ಇದ್ದ.‌‌
ಜಿಂಗ ತನಗೆ ಜ್ಯೂಸ್ ಬೇಡ ಎಂದು ಖಡಕ್ಕಾಗಿ ಹೇಳಿ. ಒಂದು ಪಪ್ಸ್ ಅನ್ನು‌ ತರಿಸಿಕೊಂಡು ವಿಚಿತ್ರವಾಗಿ ಹಸಿದ ಕರಡಿ ತಿನ್ನುವಂತೆ ಸದ್ದು ಮಾಡುತ್ತಾ ತಿನ್ನ ತೊಡಗಿದರು.
ತಿಂದು ಮುಗಿಸಿ ದೊಡ್ಡದಾಗಿ ತೇಗಿ.
ಪೇಪರ್‌ನಿಂದ ಬಾಯಿ ಒರಸಿಕೊಂಡು “ಎಲ್ಲಿಯ ಹುಡುಗರು?” ಎಂದು‌ ತೀಕ್ಷ್ಣ ಧ್ವನಿಯಲ್ಲಿ ಕೇಳಿದ. ನಾನು ಅವರು ಇಂತಿಂತ ಊರಿನ ಹುಡುಗರು ಎಂದೇ. “ಮೀಟರ್ ಇಲ್ದಿದ್ರೆ ಲವ್ ಮಾಡೋಕೆ ಯಾಕೆ ಹೋಗ್ತಾರೆ ಇಂತಹ ಚಿಲ್ಟುಗಳು” ಎಂದು ನನ್ನ ಮುಖ ನೋಡಿ ವ್ಯಂಗ್ಯ ಮಾಡುವಂತೆ ನಕ್ಕ.‌ ನಾನು ಮುದುಡಿಹೋಗಿದ್ದೆ.
ನಮ್ಮ ಪ್ರಯಾಣ ಅಲ್ಲಿಂದ ಬಸ್ ನಿಲ್ದಾಣಕ್ಕೆ‌ ಹೊರಟಿತು. ನಾವು ಮೂವರು ನಿಲ್ದಾಣ ತಲುಪುವಾಗ ನನ್ನ ಟಾರ್ಗೆಟಿನ ಹುಡುಗರು ಅಲ್ಲೇ ಗುಂಪಾಗಿ ನಿಂತಿದ್ದರು.
‌ನಾನು ಜಿಂಗಣ್ಣನನ್ನು ಉದ್ದೇಶಿಸಿ “ಅವರೇ” ಎಂದು ಹೇಳಿದೆ

ಜಿಂಗಣ್ಣ ಅವರನ್ನು ತೀಕ್ಷ್ಣವಾಗಿ ನೋಡಿ “ಹೋಗು ಅವರಿಗೆ ಹೇಳು, ಇನ್ನು ನನ್ನ ಹಾಗು ನನ್ನ ಹುಡುಗಿಯ ತಂಟೆಗೆ ಬರಬಾರದು ಎಂದು” ಹೇಳಿದರು. ನಾನು ಅವಕ್ಕಾಗಿ ಜಿಂಗಣ್ಣನನ್ನೇ ನೋಡಿದೆ “ಹೆದರ ಬೇಡ‌, ನೀನು ದೈರ್ಯವಾಗಿ ಹೋಗು ನಾನಿದ್ದೀನಿ” ಎಂದರು.
ನಾನು ದಾದನ ಮುಖ ನೋಡಿದೆ. ದಾದ ಕೂಡ ಕಣ್ಸನ್ನೇಯಲ್ಲಿ ಹೋಗು ಅಂದರು.
ನಾನು ನಿಟ್ಟುಸಿರನ್ನು ಹೊರಹಾಕಿ, ಸೀದಾ ಸೀದಾ ಆ ಹುಡುಗರ ಗುಂಪಿನೆಡೆಗೆ ನಡೆದು ಹೋಗಿ, ಗುಂಪಿನ ನಾಯಕನನ್ನು ಕರೆದು “ನೋಡು ಅವಳು ನನ್ನ ಹುಡುಗಿ ನಮ್ಮ ತಂಟೆಗೆ ಬರಬೇಡ” ಎಂದು ಖಡಕ್ ಆಗಿ ಹೇಳಿದೆ. ಇಷ್ಟೂ‌ ದಿನ ಇಲ್ಲದ ದೈರ್ಯ ‌ಈಗ ಹೇಗೆ ಇವನಿಗೆ ಬಂತು‌ ಎಂದು ಆತ ಯೋಚಿಸುವಷ್ಟರಲ್ಲಿ ಪಕ್ಕದಲ್ಲಿ ನಿಂತಿದ್ದ ಆತನ ಸಹಚರ ನನ್ನನ್ನು ಕೆಣಕು ವಂತೆ ” “ಬಂದರೇ?” ಎಂದು ನುಡಿದು ವ್ಯಂಗ್ಯವಾಗಿ ನಕ್ಕ.
ದಿಢೀರ್ ನಾನು ಹೋಗಿ ಹಾಗೆ ಖಡಕ್ ಆಗಿ ಹೇಳಿದಕ್ಕೋ‌ ಏನೋ‌? ಶಿಲೆಯಂತೆ ನಿಂತಿದ್ದ ಗ್ಯಾಂಗ್ ಲೀಡರಿನ ಕಪಾಳಕ್ಕೆ ನಾನು ಏಕಾಏಕಿ ಅಷ್ಟೂ ಬಲಹಾಕಿ ಬೀಸಿ ಹೊಡೆದು ಬಿಟ್ಟಿದ್ದೆ.
‌ ಜಿಂಗಣ್ಣ ಹಾಗು ದಾದ ಚಂಗನೆ ಹಾರಿ‌ ನನ್ನನ್ನು ಅವರೆಡೆಗೆ ಎಳೆದುಕೊಂಡರು.
***

ನಿಜಕ್ಕೂ ಅವರಿಬ್ಬರು ನನ್ನ ಈ ದಿಢೀರ್ ಗೂಂಡಾವರ್ತನೆಗೆ ಕಕ್ಕಾಬಿಕ್ಕಿಯಾಗಿದ್ದರು. ಹೇಗೋ ಹರಸಾಹಸ ಮಾಡಿ‌, ದಾದ‌ ಹಾಗು ಜಿಂಗ ನನ್ನನ್ನು ಉದ್ರಿಕ್ತ ಗುಂಪಿನಿಂದ ಒಂದು ಆಟೋದೊಳಗೆ ತುಂಬಿಕೊಂಡು ಸ್ಥಳದಿಂದ ಸಾಗಿಸಿ,ಪಾರು ಮಾಡಿದ್ದರು.

ಆಟೋ ನಗರದ ಹೊರವಲಯಕ್ಕೆ ತಲುಪಿ, ಯಾವುದೇ ಅಪಾಯ ಇಲ್ಲ ಎನ್ನುವ ಸ್ಥಳದಲ್ಲಿ ನಿಂತುಕೊಂಡಿತು.
ಏಕಾಏಕಿ ನನ್ನ ಮೇಲೆ ಕೋಪಕೊಂಡ ಜಿಂಗಾ ” ಈ ಹುಡುಗನ ದೆಸೆಯಿಂದ ನಾವು ಪೋಲಿಸ್ ಕೈಯಿಂದ ಒದೆತಿನ್ನುವಂತೆ ಆಗುತ್ತಿತ್ತು. ಸದ್ಯ ಬಚಾವ್ ಆದೋ” ಎನ್ನುತ್ತಾ ನನಗೆ ಬೈಯ್ಯತೊಡಗಿದ.
” ನಿನಗೆ ಕೊಂಚವಾದರೂ ಬುದ್ದಿ ಬೇಡವೆ? ಅಷ್ಟು ಜನ ಒಟ್ಟಿಗೇ ಇದ್ದಾರೆ, ಹೋಗಿ ಹಾಗೆ ಹೊಡೆದು ಬಿಟ್ಟೆ ಅಲ್ಲ, ಅದೂ ಪಬ್ಲಿಕ್ ಬಸ್ ಸ್ಟಾಂಡ್ ಅಲ್ಲಿ. ಅಲ್ಲೇ ಪೊಲೀಸರು ಇದ್ದರು. ಸ್ವಲ್ಪ ಆಗಿದ್ರೆ ನಾವು ಮೂರು ಜನ ಈಗ ಪೊಲೀಸ್ ಸ್ಟೇಷನ್ ಅಲ್ಲಿ ಚಡ್ಡಿಯಲ್ಲಿ ನಿಲ್ಲಬೇಕಿತ್ತು‌” ಎಂದು ದುಗುಢ ವ್ಯಕ್ತ‌ಪಡಿಸಿದ. ನಾನು ದಾದನ ಮುಖ ನೋಡಿದೆ. ದಾದ ಕಷ್ಟಪಟ್ಟು ಮುಖದಲ್ಲಿ ಆಗಿದ್ದ ಆತಂಕವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದನಾದರೂ ಆತನ ಕಾಲ್ಗಳ ನಡುಕವನ್ನು ಆತನಿಂದ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ ಹಾಗು ಜಿಂಗನ ಬಳಿ ದಾದ ಮಾತನಾಡುವಾಗ ಬಲಕಿವಿಯ ಬಳಿ ಬಂದು ಸ್ವಲ್ಪ ಜೋರಾಗಿ ಮಾತನಾಡುತ್ತಿದ್ದ.
ನಂತರ ತಿಳಿಯಿತು. ಜಿಂಗನಿಗೆ ಎಡದ ಕಿವಿ ಕಿವುಡು ಎಂದು.

ಈ‌‌ ಜಿಂಗ ಸಣ್ಣ ಪ್ರಮಾಣದ ಗಂಧಕಳ್ಳ. ಅರಣ್ಯ ಇಲಾಖೆಯ ಪೊಲೀಸರು ಹಿಡಿದಾಗಲೆಲ್ಲಾ ಕಪಾಲಕ್ಕೆ ಭಾರಿಸುತ್ತಿದ್ದ ಪರಿಣಾಮ ಆತನ ಎಡಭಾಗದ ಕಿವಿಗೆ ಶಾಶ್ವತ ಕಿವುಡು ಆವರಿಸಿತ್ತು ಹಾಗು ಒಂದು ದಿನ ಗಂಧದೊಂದಿಗೆ ಬೈಕಿನಲ್ಲಿ ಪರಾರಿ ಆಗುತ್ತಿದ್ದಾಗ ಸ್ಕಿಡ್ ಆಗಿ ಬಿದ್ದು‌, ಮುಖ ಮೂತಿ ಕಿತ್ತು‌ ಹೋಗಿ ಮುಖದ ತುಂಬಾ ಗಾಯದ ಕಲೆಗಳು ಉಳಿದು ಹೋಗಿತ್ತು.

“ಜಿಂಗ ಎಷ್ಟು ಧೈರ್ಯ ಶಾಲಿಯೋ. ಪೊಲೀಸರು, ಅದರಲ್ಲೂ ಫಾರೆಸ್ಟಿನವರ ವಾಸನೆ ಮೂಗಿಗೆ ಬಡಿದರೆ ದೌಡಾಯಿಸಿ ಪರಾರಿಯಾಗುತ್ತಿದ್ದ” ಎನ್ನುವುದು ನನಗೆ ನಂತರದ ದಿನಗಳಲ್ಲಿ ಗಮನಕ್ಕೂ ಬಂತು.

ಊರವರಿಗೆ ಗೋಲ್ಡ್ ಸ್ಮಗ್ಲರ್ ಎನಿಸಿಕೊಂಡಿದ್ದ ಶರಣನ ಬಳಿ ಅಸಲಿಗೆ ಆಟಿಕೆಯ ಪಿಸ್ತೂಲೂ ಇರಲಿಲ್ಲ. ಆತ ಬಾಂಬೆಯಲ್ಲಿ ಗೋಬಿಮಂಚೂರಿ ಮಾಡುತ್ತಿದ್ದ ಶೆಟ್ಟಿಯೊಬ್ಬರ ತಳ್ಳುಗಾಡಿಗೆ ಸಹಾಯಕ ಆಗಿದ್ದ ಎನ್ನುವುದನ್ನು ಆತನೇ ಕಾಲಕ್ರಮೇಣ ನನ್ನ ಬಳಿ ಒಪ್ಪಿಕೊಂಡಿದ್ದಾ.

ಅಂದಹಾಗೆ‌‌ ಈ ಶರಣ ಒಮ್ಮೆ ಮಿಸ್ಸ್ ಆಗಿದ್ದ. ಸ್ವಲ್ಪದ್ದರಲ್ಲೇ ಅವನ ಮಿಸ್ಸಿಂಗ್ ಕೇಸಿಗೆ ಸಂಬಂಧ ಪಟ್ಟಹಾಗೆ ಅವರ‌ ಮನೆಯವರು‌ ನನ್ನ ಮೇಲೆ ಕೇಸ್ ದಾಖಲಿಸುವವರಿದ್ದರು. ಪುಣ್ಯಕ್ಕೆ ಶರಣು ಕಾಣಿಸಿಕೊಂಡು ನನ್ನನ್ನು ಪಾರುಮಾಡಿದ್ದ. ಮಿಸ್ ಆಗುವಾಗ ಶರಣು ಒಬ್ಬನೇ ಮಿಸ್ ಆಗಿದ್ದ ಹಾಗು ಕಾಣಿಸಿಕೊಂಡಾಗ ಯುವತಿ ಹಾಗು ಒಂದು ಗಂಡುಮಗುವಿನೊಂದಿಗೆ ಪ್ರತ್ಯಕ್ಷನಾಗಿದ್ದ.
ಬಾಂಬೆ ಶರಣು ಪರಾರಿ ಆಗುವ ಮುನ್ನ ನನ್ನ ಬಳಿ ಮೂರುಸಾವಿರ ಹಣವನ್ನು ಸಾಲವಾಗಿ ಪಡೆದಿದ್ದ. ನಾನು ಕಾಲೇಜು ದಿನಮಾನಗಳಲ್ಲಿ ಬಿಡುವಿದ್ದಾಗ ಕೆಲಸ ಮಾಡುತ್ತಿದ್ದ ಕಾರಣ, ಕೈಯಲ್ಲಿ ಸ್ವಲ್ಪ ಹಣ ಚಾಲ್ತಿಯಲ್ಲಿತ್ತು.

ಹೀಗೆ ಹಣಪಡೆದುಕೊಂಡು ಕಾಣೆಯಾದ ಶರಣು, ಸುಮಾರು ಎರಡುವಾರ ಊರಿನಲ್ಲಿ ಕಾಣಿಸದೇ ಇದ್ದಾಗ. ಶರಣುವಿನ ಮಿಸ್ಸಿಂಗ್ ಕೇಸಿಗೂ ನನಗು ಲಿಂಕನ್ನು ಏರ್ಪಡಿಸಿ ಊರಿನವರು ನನ್ನ ಮೇಲೆ ಸಂಶಯ ತೋಡಿಕೊಂಡಿದ್ದರು. ಆ ವಿಷಯ ನನ್ನ ಕಿವಿಗೆ ಬಿದ್ದು ನಾನು ಸ್ವಲ್ಪ ಹೆದರಿ ಹೋಗಿದ್ದೆ.
ಹೀಗೆ ಮಿಸ್ಸಾದ ಶರಣು ನಗರದ ಒಂದು ಮೂಲೆಯ ಬಾಡಿಗೆ ಮನೆಯಲ್ಲಿ ಇದ್ದಾನೆ ಎನ್ನುವ ಸುದ್ದಿ‌‌ ನನಗೆ ತಲುಪಿ, ನಾನು ಆತನನ್ನು‌ ನೋಡಲು ಹೋದರೆ.
‌ಆ ಮನೆಯಲ್ಲಿ ಶರಣು ಇದ್ದ. ಜೊತೆಗೆ ಒಬ್ಬಳು ಮಹಿಳೆ ಹಾಗು ಸಣ್ಣ ಮಗುವೂ ಇತ್ತು.
ಗಮನಿಸಿದ ಕೂಡಲೇ ಆಕೆ ಬಾಂಬೆ ಅವಳಲ್ಲ‌ ಎನ್ನುವುದು ನನಗೆ ಮನವರಿಕೆ ಆಗಿತ್ತು ಹಾಗು ಶರಣನಿಗೆ ಈ ಹಿಂದೆ ಮದುವೆ ಆಗಿರುವ ಕುರಿತು ನನಗೆ ಮಾಹಿತಿಯೂ ಇರಲಿಲ್ಲ.

ಶರಣು ನನ್ನನ್ನು ಮನೆಯಿಂದ ಕೊಂಚ ದೂರಕ್ಕೆ ತಂದು‌‌ ನಿಲ್ಲಿಸಿ‌ ವಿಷಯವನ್ನು ವಿಸ್ತಾರವಾಗಿ ಹೇಳಿದ.‌
ಆ ಮಹಿಳೆ ಹಾಗು ಈ ಶರಣು ಹೈಸ್ಕೂಲ್‌ನಲ್ಲಿ ಪ್ರೇಮಿಗಳು. ನಂತರ ಶರಣನೂ ಆಕೆಯೂ ಶಾಲೆಬಿಟ್ಟು. ಬೇರೆ ಬೇರೆ ಆಗಿದ್ದರು. ಶರಣು ಬಾಂಬೆಗೆ ಹೋಗಿ ಗೋಬಿ ಅಂಗಡಿ ಸೇರಿಕೊಂಡರೆ, ಪ್ರೇಯಸಿ ‘ಲೈಲಾ’ ಇಲ್ಲೇ ಒರ್ವನನ್ನು‌ ಮದುವೆ ಆಗಿದ್ದಳು. ಮದುವೆ ಆಗಿ ಎರಡೇ ವರ್ಷದಲ್ಲಿ ಆಕೆಯ ಗಂಡ ಅನಿರೀಕ್ಷಿತವಾಗಿ ತೀರಿ ಹೋಗಿ ವಿಧವೆಯೂ ಆಗಿದ್ದಳು.

ನನ್ನ ಹೊಡೆದಾಟ ಪ್ರಕರಣದ ಅದೇ ದಿನ ಸಂಜೆ‌. ಬಸ್ಸು ನಿಲ್ದಾಣದಲ್ಲಿ ಎಂಟುತಿಂಗಳ ಕೈಗೂಸಿನೊಂದಿಗೆ ಶರಣುವಿಗೆ ಎದುರಾದ ಲೈಲಾ ಇದನ್ನೆಲ್ಲಾ ಅನಿರೀಕ್ಷಿತವಾಗಿ ಎದುರಾಗಿದ್ದ ಶರಣುವಿನ ಬಳಿ ಹೇಳಿಕೊಂಡಿದ್ದಳು. ಅದೇ ಜಾಗದಲ್ಲಿ “ಲೈಲಾ ನಾನು ನಿನ್ನ ಮದುವೆ ಆಗಲಾ?” ಎಂದು ಶರಣು ಕೇಳಿದ್ದಾನೆ.‌” ಅವಳು ನಿನಗೆ ಹುಚ್ಚಾ? ನಾನು ಮದುವೆ ಆದವಳು” ಎಂದಿದ್ದಾಳೆ. ಶರಣು “ನಿನ್ನ ಮಗ ಇನ್ನು ನನಗೂ ಮಗ” ಎಂದು ಲೈಲಾಳ ಕಂಗಳನ್ನು ನೋಡಿದ್ದಾನೆ. ಅವಳ ಕಂಗಳು ತುಂಬಿಕೊಂಡಿದೆ.

ಹೀಗೆ ಎರಡು ಮೂರು ತಿಂಗಳ ನಂತರ ಅವಳನ್ನೇ ಮದುವೆ ಆಗುವ ತೀರ್ಮಾನ ಮಾಡಿದ ಶರಣು ನನಗೂ ಹೇಳದೆ. ಬೇರೆ ಏನೋ ಕಾರಣ ಹೇಳಿ, ನನ್ನ ಬಳಿ ಮೂರು ಸಾವಿರ ಸಾಲ ಪಡೆದು ಕಾಣೆಯಾದ್ದ. ಈಗ ನೋಡಿದರೆ ಮದುವೆ ಆಗಿ ಬಂದು, ನಗರದ ಮೂಲೆಯ ಒಂಟಿ ಕೋಣೆಯ ಬಾಡಿಗೆ ಮನೆಯಲ್ಲಿ ಕಾಣಿಸಿಕೊಂಡು ನನಗೆ ಆಘಾತ ನೀಡಿದ್ದ. ಹಾಗು ಅವನು ಕಥೆ ಹೇಳಿದ‌ ನಂತರ ಬಾಂಬೆ ದಾದ ಶರಣು ನನಗೆ ಕನ್ನಡ ಸಿನಿಮಾದ ಹೀರೋನಂತೆಯೂ ಕಂಡಿದ್ದ.

ಹೀಗೆ ಸಿಕ್ಕ ಶರಣು ನನಗೆ ಅವನ ರಿಜಿಸ್ಟರ್ ಆಫಿಸ್‌ನಲ್ಲಾದ ಮದುವೆ ಕಥೆ ಹೇಳಿ‌, ನಂತರ ಬಾಡಿಗೆ ಮನೆಗೆ ಕರೆದೊಯ್ದು ಕೂರಿಸಿ, ಅವನ ಹೆಂಡತಿ‌ ಕೈಯಿಂದಲೇ ಒಂದು ಗ್ಲಾಸ್ನಲ್ಲಿ ಕಟ್ಟನ್ ಟೀ ಮಾಡಿಸಿ ಕುಡಿಸಿದ್ದ.”ಸ್ವಾರಿ ಶರಣು ಅಣ್ಣ, ಮಗು ಇರುವುದು ನನಗೆ ಗೊತ್ತಿರಲಿಲ್ಲ ನಾನು ಏನೂ ತಂದಿಲ್ಲ” ಎಂದೇ “ನೀನು ಈಗ ಮಾಡಿರುವ ಉಪಕಾರವೇ ದೊಡ್ಡದು‌ ಬಿಡು ಏನೂ ಬೇಡ” ಎಂದು ಕಳುಹಿಸಿಕೊಟ್ಟಿದ್ದ.
ನಾನು ಮಿಸ್ಸಿಂಗ್ ಕೇಸಿನಿಂದ ಪಾರಾದ ಖುಷಿಯಲ್ಲಿ ಅಂದು ಮನೆ ತಲುಪಿದ್ದೆ.


ಇದೆಲ್ಲ ಆಗಿ ಸುಮಾರು ಎಂಟು ವರ್ಷಗಳು‌ ಕಳೆದು. ಶರಣುವಿನ ಮನೆಯವರು ಹಾಗು ಲೈಲಾಳ ಮನೆಯವರು ಒಂದಾಗಿ, ಶರಣು ಸಣ್ಣದೊಂದು ಮನೆ‌ ಕಟ್ಟಿಕೊಂಡು ನಮ್ಮ ಊರಲ್ಲೇ ವಾಸವಾಗಿದ್ದ.‌ ಬಾಂಬೆ ಬುಜ್ಜಗಳೆಲ್ಲ ಹಾಳಾಗಿ, ಊರಿನಲ್ಲಿ ನಾವು ಹಾಕುವಂತಹಾ ಬಟ್ಟೆ ಹಾಕಿಕೊಂಡು ಪೈಯಿಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದ. ಶರಣುವಿಗೆ ಈ ನಡುವೆ ಇನ್ನೊಬ್ಬ ಗಂಡು ಮಗುವೂ ಆಗಿತ್ತು. ನನ್ನ ಪ್ರೇಯಸಿಗೂ ಮದುವೆ ಆಗಿ ಅವಳು ಅವಳ‌ ಪಾಡಿಗೆ ಅದೇ ಬಸ್ ಸ್ಟಾಂಡಿನಲ್ಲಿಯೇ ನನಗೆ ಟಾಟಾ ಮಾಡಿ ಹೋಗಿದ್ದಳು. ಅವಳಿಗಾಗಿ ನನ್ನ ಕೈಯಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದ ಪುಡಿ ರೌಡಿ ಹಾಗು ಆತನ ಗ್ಯಾಂಗು ಅಲ್ಲಿ ಇಲ್ಲಿ ನನಗೆ ಎದುರಾಗುತ್ತಿದ್ದರಾದರು ಅವರಿಗೆ ನನ್ನ ಮೇಲೆ ಹಳೆಯ ಸೇಡೇನೂ ಇರಲಿಲ್ಲ. ಅಸಲಿಗೆ ಅವಳೇ ನಮ್ಮಗಳ ನಡುವೆ ಕಾಂಪಿಟೇಷನ್ನಿಗೆ ಇರಲಿಲ್ಲ. ಈಗ ಅವಳಿಗೂ ಎರಡು ಮಕ್ಕಳಾಗಿರಬಹುದು.

ಜಿಂಗಣ್ಣ ಆಗಾಗ್ಗೆ ನಗರದ ಹಲವು ಬಾರಿನ ಎದುರು‌‌ ನನಗೆ ಕಾಣಿಸುತ್ತಿದ್ದರು. ಈಗೀಗ ಕುಡಿದು‌ ಕುಡಿದೂ ಪೇಲಾವ ಆಗಿದ್ದರು. ಅವರ ಮುಖದ ಮೇಲಿನ ಹಳೆಯ ಗಾಯದ ಕಲೆಗಳು ಮಾತ್ರ ಹಾಗೇ ಇತ್ತು.

ಎಲ್ಲವೂ ಸರಿಯಾಗಿದ್ದರೆ. ಎಲ್ಲವೂ ಚಂದವಾಗಿರುತ್ತಿತ್ತು. ಆದರೇ ಈ ಕಥಾನಾಯಕ ಶರಣು‌ ಅಲಿಯಾಸ್ ಬಾಂಬೆ ದಾದ ಕಳೆದ ತಿಂಗಳು ಮೈಸೂರಿನಲ್ಲಿ ತೀರಿಹೋಗುವಾಗ ಅವನಿಗೆ ಅಷ್ಟೇನೂ ವಯಸ್ಸಾಗಿರಲಿಲ್ಲ.
ತೀವ್ರ ಉಸಿರಾಡದ ತೊಂದರೆ ಕೊಟ್ಟ ಕೋವಿಡ್. ಆತನಿಗೆ ಸಾವಿನ ಶಿಕ್ಷೆ ವಿಧಿಸಿತ್ತು.

ಬಾಂಬೆ ದಾದ ಶರಣುವಿನ‌ ಫೋಟೋ ಒಂದು ಫ್ಲೆಕ್ಸ್ ಆಗಿಸಿ, ನಮ್ಮೂರಿನ ಯುವಕ ಸಂಘದ ಹುಡುಗರು ಬಸ್ಸು ತಂಗುದಾಣದ ಗೋಡೆ ಮೇಲೆ ಶ್ರದ್ಧಾಂಜಲಿ ಹಾಕಿದ್ದರು. ಎರಡು ವಾರಗಳ ನಂತರ ಅದನ್ನೂ ತೆಗೆದರು.
ಕೊನೆ ಕೊನೆಗೆ ಅತಿವೃಷ್ಠಿ, ಕೋವಿಡ್‌ನಿಂದಾಗಿ ಕೆಲಸ ಸರಿ ಸಿಗದೆ, ಆರ್ಥಿಕವಾಗಿ ತತ್ತರಿಸಿದ್ದ ಶರಣು.
ಹಲವು ವರ್ಷಗಳ ಹಿಂದೆ ಗೆಳೆಯ ಜಿಂಗ ಶರಣುವಿಗೆ ಕೊಡುಗೆಯಾಗಿ ನೀಡಿದ್ದ ಒಂಟಿ‌ ‘ಹುಲಿ ಉಗುರೊಂದನ್ನು’ ಯಾರಿಗಾದರೂ ಮಾರಿಸಿಕೊಡುವಂತೆ ನನ್ನನ್ನು ಕಂಡಾಗಲೆಲ್ಲ ಪದೇ ಪದೇ ಕೋರಿಕೊಳ್ಳುತ್ತಿದ್ದ.

‌ ಆ ಹುಲಿ ಉಗುರು ನಿಜವಾದ ಹುಲಿ ಉಗುರು ಅಲ್ಲ‌ ಎನ್ನುವುದನ್ನು ಅರಿತಿದ್ದ ನಾನು, “ನೋಡೋಣ ಯಾರಿಗಾದರೂ ಬೇಕಾದರೆ ತಿಳಿಸುತ್ತೇನೆ” ಎನ್ನುತ್ತಿದ್ದೆ ಹೊರತು. ಎಂದೂ ಅವನಿಗೆ ನಿರಾಸೆ ಮಾಡಿರಲಿಲ್ಲ.
ಈಗ ಅವನೊಂದಿಗೆ ಹುಲಿ ಉಗುರೂ ಅಗ್ನಿಗೆ ಆಹುತಿ ಆಗಿರಬಹುದೇ? ಗೊತ್ತಿಲ್ಲ.
ಲೈಲಾ ಮಾತ್ರ ಎರಡನೇ ಬಾರಿ ವಿಧವೆಯಾದರೆ, ಮಕ್ಕಳಿಬ್ಬರಿಗೆ ತಂದೆ ಶರಣು ಇನ್ನು ನೆನಪು ಮಾತ್ರ.

ರಂಜಿತ್ ಕವಲಪಾರ

error: Content is protected !!