fbpx

ತೊರೆನೂರುವಿನಲ್ಲಿ ಜಿಲ್ಲೆಯ ಏಕೈಕ ಖಾಸಗಿ ಗ್ರಂಥಾಲಯ

ಪ್ರಶಾಂತ್ ಕಲ್ಲೂರ್ ಗ್ರಾಮೀಣ ಗ್ರಂಥಾಲಯದ ಮೂಲಕ ಸಾಗರ್ ಗಡಿ ಗ್ರಾಮದಲ್ಲಿ 6 ವಷ೯ಗಳಿಂದ ಮಾಡಿದ್ದು ಪುಸ್ತಕ ಕ್ರಾಂತಿ…!

ಕೃಪೆ: ಹೆಚ್.ಟಿ ಅನಿಲ್, ಪತ್ರಕರ್ತರು

ಕೊಡಗು ಜಿಲ್ಲೆಯ ಗಡಿ ಗ್ರಾಮವಾದ ತೊರೆನೂರಿನಲ್ಲಿ ಹಳೇ ಕಾಲದ ಒಂದು ಮನೆ…
ಈ ಮನೆಯೊಳಗೆ ಹೋದರೆ ಅಲ್ಲಿನ ಕೋಣೆಯೊಂದರಲ್ಲಿ ನೂರಾರು ಪುಸ್ತಕಗಳ ರಾಶಿ ಕಣ್ಣಿಗೆ ಬೀಳುತ್ತದೆ.

ಇದು ಪುಸ್ತಕ ರಾಶಿ ಮಾತ್ರವಲ್ಲ.. ಇದು ಸಾಹಿತ್ಯ ಕಾಶಿ..
ಕೊಡಗು ಜಿಲ್ಲೆಯ ಏಕೈಕ ಖಾಸಗಿ ಗ್ರಂಥಾಲಯ ಇದು.
ತೊರೆನೂರು ಎಂಬ 2 ಸಾವಿರ ಜನಸಂಖ್ಯೆಯಿರುವ ಪುಟ್ಟ ಗ್ರಾಮದಲ್ಲಿ ಜನರಿಗೆ ಸಾಹಿತ್ಯ ಕೖಷಿ ಮೂಲಕ ಜ್ಞಾನಾಜ೯ನೆಗೆ ಕಾರಣನಾದ ಯುವಕನ ಹೆಸರು ಸಾಗರ್ ತೊರೆನೂರು.

20 ವಷ೯ದ ಸಾಗರ್ ತನ್ನ ಯೌವನದಲ್ಲಿಯೇ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಸಾಹಿತ್ಯ ಭಂಡಾರವನ್ನೇ ಮನೆಯಲ್ಲಿ ಪ್ರಾರಂಭಿಸಿದ್ದಾನೆ.

ಯುವಕ ಸಾಗರ್ ನಡೆಸುತ್ತಿರುವ ಪ್ರಶಾಂತ್ ಕಲ್ಲೂರ್ ಗ್ರಾಮೀಣ ಗ್ರಂಥಾಲಯ

ಸಾಗರ್ ತೊರೆನೂರಿನಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ದಿನಗಳಲ್ಲಿ ಅನೇಕ ಹಳೇ ವಿದ್ಯಾಥಿ೯ಗಳು ಬಂದು ಶಾಲಾ ವಿದ್ಯಾಥಿ೯ಗಳ ಬಳಿ ಪುಸ್ತಕಗಳಿಗಾಗಿ ವಿನಂತಿಸುತ್ತಿದ್ದರಂತೆ. ಹಾಗೇ ಗ್ರಾಮದಲ್ಲಿ ಅನೇಕ ಯುವಕ, ಯುವತಿಯರು ಸ್ಪಧಾ೯ತ್ಮಕ ಪರೀಕ್ಷೆಗಳಿಗೆ ಓದಿಕೊಳ್ಲಲು ಅಗತ್ಯವಾದ ಸಂಪಮ್ಮೂಲ ಗ್ರಂಥಗಳಿಗಾಗಿ ಹುಡುಕಾಡುತ್ತಿದ್ದರಂತೆ. ಇದನ್ನು ಗಮನಿಸಿದ ಸಾಗರ್ ಇಂಥವರಿಗೆ ತನ್ನಿಂದಾದ ನೆರವು ನೀಡಬೇಕೆಂದು ಪುಸ್ತಕಗಳ ಸಂಗ್ರಹಕ್ಕೆ ಮುಂದಾದ.

ನೂರಾರು ಸಂಖ್ಯೆಯಲ್ಲಿ ಪುಸ್ತಕಗಳು ಸಂಗ್ರಹವಾದ ಬಳಿಕ ಇವುಗಳನ್ನೆಲ್ಲಾ ಕಪಾಟಿನಲ್ಲಿ ಜೋಡಿಸಿಟ್ಟು ತನ್ನ ಮನೆ ಪಕ್ಕದಲ್ಲಿರುವ ಬಂಧುಗಳಿಗೆ ಸೇರಿದ ಹಳೇ ಕಾಲದ ಮನೆಯನ್ನೇ ಗ್ರಂಥಾಲಯವಾಗಿ ಪರಿವತಿ೯ಸಿದ. ಇದಕ್ಕೆ ತನ್ನ ಮಾಗ೯ದಶಿ೯ಯಾದ ಪ್ರಶಾಂತ್ ಕಲ್ಲೂರು ಗ್ರಾಮೀಣ ಗ್ರಂಥಾಲಯ ಎಂಬ ಹೆಸರಿಟ್ಟ.

ಈ ಗ್ರಂಥಾಲಯದಲ್ಲಿ ಸ್ಪಧಾ೯ತ್ಮಕ ಪರೀಕ್ಷಾ ಸಿದ್ದತೆಗೆ ಅತ್ಯಗತ್ಯವಾದ ಅನೇಕ ಪುಸ್ತಕಗಳಿದೆ. ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ಕವನ, ಜಾನಪದ ಪುಸ್ತಕಗಳ ಜತೆಗೇ ಮಹಿಳೆಯರಿಗಾಗಿ ಅಡುಗೆ, ಕರಕುಶಲ ಕಲೆ, ಮೆಹಂದಿ ರಚನೆಯ ಮಾಹಿತಿಯುಳ್ಳ ಪ್ರತ್ಯೇಕ ವಿಭಾಗವಾಗಿ ಗ್ರಹಿಣಿ ಪುಸ್ತಕ ಸಂಗ್ರಹ ಕೂಡ ಇದೆ.

ತೊರೆನೂರಿನ ಅನೇಕ ಮಹಿಳೆಯರು, ಮಕ್ಕಳು ಈ ಗ್ರಂಥಾಲಯದ ಖಾಯಂ ಸಂದಶ೯ಕರು. ಗ್ರಾಮದ ಇಬ್ಬರು ಸಾಗರ್ ತೊರೆನೂರು ನೀಡಿದ ಸ್ಪಧಾ೯ತ್ಮಕ ಪುಸ್ತಕಗಳ ನೆರವಿನಿಂದ ಪೊಲೀಸ್ ಇಲಾಖಾ ಪರೀಕ್ಷೆ ಬರೆದಿದ್ದರು. ಈ ಪೈಕಿ ಒಬ್ಬರಿಗೆ ಉದ್ಯೋಗ ಕೂಡ ದೊರಕಿತ್ತು.

ತೊರೆನೂರು ಮಾತ್ರವಲ್ಲದೇ ಅಕ್ಕಪಕ್ಕದ ಗ್ರಾಮಗಳು ಜತೆಗೇ ಪಕ್ಕದ ಹಾಸನ, ಮೈಸೂರು ಜಿಲ್ಲೆಯ ಗಡಿ ಗ್ರಾಮಗಳ ನೂರಾರು ಓದುಗರು ಕೂಡ ಸಾಗರ್ ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದಾರೆ.

ವಿಶೇಷ ಎಂದರೆ ದೂರದೂರದ ಆಸಕ್ತ ಓದುಗರು ಪುಸ್ತಕಕ್ಕಾಗಿ ವಿನಂತಿಸಿಕೊಂಡಲ್ಲಿ ಅಂಚೆ ಮೂಲಕ ಸ್ವಂತ ಹಣದಲ್ಲಿ ಸಾಗರ್ ಅಂಥವರಿಗೆ ಪುಸ್ತಕಗಳನ್ನು ಕಳುಹಿಸಿಕೊಡುತ್ತಾರೆ. 1 ತಿಂಗಳಲ್ಲಿ ಓದುಗರು ಪುಸ್ತಕವನ್ನು ಮರಳಿ ಕಳುಹಿಸಬೇಕು. ಹಾಗೇ ಶಾಲೆ , ಕಾಲೇಜುಗಳಿಗೆ ತೆರಳಿ ವಿದ್ಯಾಥಿ೯ಗಳಿಗೆ ಅಗತ್ಯವಾದ ಪುಸ್ತಕಗಳನ್ನೂ ಸಾಗರ್ ನೀಡುತ್ತಾರೆ. ಅವನ್ನು 1 ತಿಂಗಳ ನಂತರ ಮತ್ತೆ ಸಾಗರ್ ಗೆ ವಿದ್ಯಾಥಿ೯ಗಳು ಮರಳಿಸಬೇಕು.

ಲಾಕ್ ಡೌನ್ ದಿನಗಳಲ್ಲಿ ಗ್ರಂಥಾಲಯಕ್ಕೆ ಬರಲಾಗದ ಹಲವರಿಗೆ ಸಾಗರ್ ಅಂಥವರ ಮನೆಗಳಿಗೇ ತೆರಳಿ ಪುಸ್ತಕಗಳನ್ನು ನೀಡಿದ್ದಾರಂತೆ. ಲಾಕ್ ಡೌನ್ ನ ಸಂದಭ೯ ಕಳೆದ ವಷ೯ ಈ ರೀತಿ ನೀಡಿದ್ದ ಸಾವಿರಾರು ರು ಮೌಲ್ಯದ 30 ಪುಸ್ತಕಗಳನ್ನು ಇನ್ನೂ ಓದುಗರು ನೀಡಿಲ್ಲ. ಇಂಥವರೂ ಇರುತ್ತಾರೆ ಎಂದು ಸಾಗರ್ ಬೇಸರದಿಂದ ಹೇಳಿದರು.

ತಾನು ನೀಡುವ ಪುಸ್ತಕಗಳಿಗೆ ಸಾಗರ್ ಕಿಂಚಿತ್ತೂ ಹಣ ಪಡೆಯುವುದಿಲ್ಲ. ಗ್ರಂಥಾಲಯಕ್ಕೆ ಸದಸ್ಯರಾಗಬಯಸುವವರು ತಮ್ಮ ಫೋಟೋ ಮತ್ತು ಆಧಾರ್ ಕಾಡ್೯ ನೀಡಿದರೆ ಸದಸ್ಯತ್ವದ ಕಾಡ್೯ ಕೂಡ ಉಚಿತವಾಗಿಯೇ ನೀಡುತ್ತಾರೆ. ತನ್ನ ಗ್ರಂಥ ಬಂಡಾರದಿಂದ ಕೆಲವರಿಗಾದರೂ ಜ್ಞಾನ ಸಿಕ್ಕಿದರೆ ಅದೇ ಸಂತೋಷ ಎಂಬ ಮನೋಭಾವ ಸಾಗರ್ ನದ್ದು. 8 ನೇ ತರಗತಿಯಲ್ಲಿ 14 ನೇ ವಷ೯ದಲ್ಲಿ ಪುಟ್ಟದಾಗಿ ಪ್ರಾರಂಭವಾದ ಮನೆ ಗ್ರಂಥಾಲಯ ಇದೀಗ 6 ನೇ ವಷ೯ ಪೂರೈಸಿ ಸಾವಿರಾರು ಪುಸ್ತಕಗಳ ಬಂಡಾರವೇ ಆಗಿಬಿಟ್ಟಿದೆ. ಇದಲ್ಲವೇ ಸಾಹಿತ್ಯಿಕ ಕ್ರಾಂತಿ.

ಈ ರೀತಿ ಪುಸ್ತಕಗಳ ವಿತರಣೆಯನ್ನು ಸಾಮಾಜಿಕ ಸೇವಾ ಮನೋಭಾವದಿಂದ ಸಾಗರ್ ತೊರೆನೂರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೈಗೊಂಡಿದ್ದಾರೆ.

ಎಲ್ಲಾ ಸರಿ ಸಾಗರ್, ಪುಸ್ತಕಗಳ ಖರೀದಿಗೆ ಹಣ ಬೇಕು. ಗ್ರಂಥಾಲಯ ನಿವ೯ಹಣೆಗೂ ದುಡ್ಡು ಬೇಕು. ಹೇಗೆ ಹೊಂದಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರೆ, ತಾನು ಕೂಲಿ ಮಾಡಿ ಗಳಿಸುವ ಅಲ್ಪಸ್ವಲ್ಪ ಹಣವನ್ನೆಲ್ಲಾ ಗ್ರಂಥಾಲಯಕ್ಕೆ ಅಗತ್ಯವಾದ ಪುಸ್ತಕಗಳ ಖರೀದಿಗೆ ವಿನಿಯೋಗಿಸುತ್ತೇನೆ. ಮನೆಯಲ್ಲಿ ಅಪ್ಪ, ಅಮ್ಮ ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ. ಕಲಾವಿದನೂ ಆಗಿರುವ ತಾನು ಈವರೆಗೆ 200 ಕ್ಕೂ ಹೆಚ್ಚು ಬೀದಿ ನಾಟಕದಲ್ಲಿ ಕಲಾವಿದನಾಗಿ ಪಾಲ್ಗೊಂಡಿದ್ದು ಅದರಲ್ಲಿ ಸಿಕ್ಕಿದ ಹಣದಲ್ಲಿಯೂ ಪುಸ್ತಕಗಳನ್ನು ಖರೀದಿಸಿದ್ದಾಗಿ ಸಾಗರ್ ಹೇಳಿದರು. ಕುಶಾಲನಗರದ ಕಾಲೇಜಿನಲ್ಲಿ ಅಂತಿಮ ವಷ೯ದ ಬಿಕಾಂ ಓದುತ್ತಿರುವ ಸಾಗರ್ ಆಥಿ೯ಕವಾಗಿ ಸ್ಥಿತಿವಂತರಲ್ಲದಿದ್ದರೂ ಗುಣದಲ್ಲಿ ಸಿರಿವಂತ ಎಂಬುದನ್ನು ನಿರೂಪಿಸಿದ್ದಾರೆ.

ಸಾಗರ್ ಅವರಿಗೆ ಪುಸ್ತಕ, ಸಾಹಿತ್ಯದ ಮೇಲಿನ ಒಲವು ಗಮನಿಸಿ ಇತ್ತೀಚಿಗೆ ಕೆಲವು ದಾನಿಗಳು ಇಂಜಿನಿಯರಿಂಗ್ ಸೇರಿದಂತೆ ಹಲವಾರು ವಿಚಾರಗಳ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮನೆಗಳಲ್ಲಿ ಓದಿಯಾದ ಬಳಿಕ ಮೂಲೆಯಲ್ಲಿಟ್ಟ ಉತ್ತಮ ಪುಸ್ತಕಗಳನ್ನು ತನಗೆ ನೀಡಿ. ಅವುಗಳನ್ನು ಸಾವಿರಾರು ಓದುಗರಿಗೆ ನೀಡಿ ಜ್ಞಾನಾಜ೯ನೆಗೆ ಕಾರಣನಾಗುವೆ ಎಂದು ಸಾಗರ್ ತೊರೆನೂರು ವಿನಮ್ರರಾಗಿ ಹೇಳಿದರು. ವಿದ್ಯಾಥಿ೯ಗಳು ಕೂಡ ತಮ್ಮ ಓದು ಮುಗಿದ ಮೇಲೆ ತಮ್ಮಲ್ಲಿನ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದರೆ ಅಂಥ ಪುಸ್ತಕಗಳು ಅದೆಷ್ಟೋ ವಿದ್ಯಾಥಿ೯ಗಳ ನೆರವಿಗೆ ಬರುತ್ತದೆ ಎಂದೂ ಸಾಗರ್ ಲೆಕ್ಕಾಚಾರ ಹಾಕಿದರು.

ಮಳೆಗಾಲದಲ್ಲಿ ಪುಸ್ತಕಗಳ ಸಂರಕ್ಷಣೆ ಕಷ್ಟ. ಹಾಗೇ ಪುಸ್ತಕಗಳನ್ನು ಗೆದ್ದಲಿನಿಂದ ರಕ್ಷಿಸುವುದೂ ಕಷ್ಟ. ಎಲ್ಲಾ ಕಷ್ಟಗಳನ್ನು ಛಲದಿಂದ ಎದುರಿಸುತ್ತಾ ಗ್ರಾಮಸ್ಥರಿಗೆ, ಆಸಕ್ತ ಓದುಗರ ಜ್ಞಾನಾಜ೯ನೆಗೆ ಸಾಗರ್ ಮುಂದಾಗಿದ್ದಾರೆ.

ಪುಸ್ತಕಗಳನ್ನು ಈ ಗ್ರಾಮೀಣ ಗ್ರಂಥಾಲಯಕ್ಕೆ ನೀಡಲು ಇಚ್ಚಿಸುವ ಪುಸ್ತಕ ಪ್ರೇಮಿಗಳು, ಪ್ರಕಾಶಕರು, ಲೇಖಕರು ಸಂಪಕಿ೯ಸಬೇಕಾದ ಸಾಗರ್ ಮೊಬೈಲ್ ಸಂಖ್ಯೆ – *8861518747

error: Content is protected !!
satta king chart