May 25, 2021

ಸೇವಂತಿ

ಹನಿಕಥೆ

ಎಂಟು, ಒಂಭತ್ತು, ಹತ್ತು. ಕೆನ್ನೆ, ಹಣೆ, ಮೂಗು, ಕಂಗಳು, ಹುಬ್ಬು, ತುಟಿಯನ್ನು ಮುಗಿಸಿ ಕತ್ತಿಗೆ ಸರಿಯಾಗಿ ಹತ್ತು. ಹನ್ನೊಂದು ಕೊಡಲು ನಾನು ಕೊಂಚ ಆತುರಾತುರವಾಗಿ ಚಡಪಡಿಸಿದೆ. ಅವಳ ಕತ್ತು ಸಣ್ಣಗೆ ಬೆವರಿತ್ತು. ಅವಳ ಎದೆ ಬಡಿತ ಲಯತಪ್ಪಿತ್ತು. ದಡಕ್ಕನೆ ತಳ್ಳಿದಳು. “ಸಾಕು…. ಸಾಕು… ಅಷ್ಟೇ..” ಎನ್ನುತ್ತಾ..
ಲೆಕ್ಕ ತಪ್ಪಿದೆ ಒಂಭತ್ತೇ ಮುತ್ತು ಕೊಟ್ಟಿದ್ದು ನಾನು. ನೀನು ಏಳನೇ ಮುತ್ತಿನ ನಂತರ ಒಂಭತ್ತಕ್ಕೆ ಹಾರಿದ್ದೀಯ. ಲೆಕ್ಕ ತಪ್ಪಿಸ್ತಿದ್ದೀಯ. ನಾನು ಪುನಃ ಮೊದಲಿನಿಂದ ಪ್ರಾರಂಭಿಸುತ್ತೇನೆ ಎಂದೆ. ಅವಳ ಮಡಿಲಲ್ಲಿ ಮಲಗಿ ಹೂವಿನ ಚಿತ್ತಾರವುಳ್ಳ ಅವಳ ಸೀರೆಯನ್ನು ಸಣ್ಣಗೆ ಸರಿಸಿ ಅವಳ ನಡುವಿನಿಂದ ಈ ಸಲ ಪ್ರಾರಂಭಿಸಿದೆ. ಒಂದನೇ ಮುತ್ತು, ಎರಡನೇ ಮುತ್ತು ನೀಡಲು ಅಣಿಯಾಗುತ್ತಿದ್ದಂತೆ, ನನ್ನ ತಲೆಯನ್ನು ಹೂವಿನಂತೆ ಸವರಿದಳು. ಏನು ? ಎಂಬಂತೆ ಅವಳ ಕಂಗಳನ್ನು ಕೇಳಿದೆ. ಹುಣ್ಣಿಮೆಯ ಚಂದಿರ ಅವಳ ಕಂಗಳಲ್ಲಿ ನಗುತ್ತಿದ್ದ.
ನೀನು ಈಗ ಕೊಟ್ಟಿದ್ದು ಸೇರಿ ಇದು ಮೂವತ್ಮೂರನೇಯದು. ನಾನಿನ್ನು ಲೆಕ್ಕ ಹಾಕಲ್ಲ ನೀನೆ ಎಣಿಸಿಕೋ ಎಂದು ಹುಸಿಯಾಗಿ ಸಿಡುಕಿದಳು.


ನನಗೆ ಸರಿಯಾಗಿ ಲೆಕ್ಕ ಬರಲ್ಲ, ಅದು ನಿನಗೂ ಗೊತ್ತು.. ಅಂದೆ. ಬೆಳಗಿನವರೆಗೂ ಹೀಗೆ ಮುತ್ತು ಕೊಡುತ್ತಾ ಕೂತರೆ, ಮಂಜಿನಲಿ ಮುಳುಗಿ ಸಾಯುತ್ತೇ.. ಅಂದಳು. ಪರವಾಗಿಲ್ಲ ಮಂಜಿನಲಿ ಮುಳುಗಿ ಸತ್ತರೆ ಸ್ವರ್ಗ ಪ್ರಾಪ್ತಿಯಾಗುತ್ತದೆಯಂತೆ ತುಂಟ ನಗುವಿನೊಂದಿಗೆ ಅವಳಿಗೆ ಹೇಳಿದೆ. ತಣ್ಣನೆಯ ಗಾಳಿ ಸವರಿ ಅವಳ ಕುತ್ತಿಗೆಯ ಬೆವರು ಕೂಡ ಮಂಜಾಗಿರಬಹುದು ಅನಿಸುತ್ತಿತ್ತು.
“ಎಷ್ಟು ದಿನ ಹೀಗೆ ಲೆಕ್ಕ ತಪ್ಪಿಸಿ ಮುತ್ತು ಕೊಡುತ್ತಾ ಸತಾಯಿಸುತ್ತೀಯ? ಮದುವೆ ಆಗು.” ಅಂದಳು. ಅವಳ ಧ್ವನಿಯಲ್ಲಿದ್ದ ಸಿಡುಕು, ಹತಾಶೆ, ಭಯ, ಸಂಕೋಚ ಎಲ್ಲವೂ ನನ್ನನ್ನು ಕೆಣಕುತ್ತಿತ್ತು. ನೋಡು ಆ ಚಂದಿರನ ಪಕ್ಕದ ನಕ್ಷತ್ರ ಚಲಿಸುತ್ತಿದೆ ಅಂದೆ. ಸಟಕ್ಕನೆ ಕತ್ತೆತ್ತಿ ನೋಡಿದಳು. ಎರಡನೇ ಮುತ್ತು ಅನ್ನುತ್ತಾ ಅವಳ ಕುತ್ತಿಗೆಗೆ ಕೊಟ್ಟೆ.
ಅವಳ ನಡುವನ್ನು ನನ್ನ ಬಲಗೈ ಸಣ್ಣಗೆ ಹಿಂಡಿತು. ಅವಳ ಕುತ್ತಿಗೆಯಲಿ ಮುತ್ತಿನಂತೆ ಮಿನುಗುತ್ತಿದ್ದ ಮಂಜು ಸೋಕಿತ ಬೆವರು ನನ್ನ ತುಟಿಯನ್ನು ಸವರಿ ನವಿರಾಗಿ ಚಳಿಯಾಯಿತು.
ಅವಳು ಮಾತ್ರ ಚಲಿಸದೆ ಹಾಗೇ ನಿಂತಿದ್ದ ಧ್ರುವತಾರೆಯನ್ನು ನೋಡಿ “ನನಗೆ ಭಯ, ನೀನು ನನ್ನನ್ನು ಬಿಟ್ಟರೆ? ಅಥವಾ ನನ್ನ ಮನೆಯವರು ನನ್ನನ್ನು ಬೇರೆಯವರಿಗೆ ಕಟ್ಟಿಕೊಟ್ಟರೆ? ನಿಜಕ್ಕೂ ನಾನು ಈ ಕೋಟೆಬೆಟ್ಟದ ತುದಿಯಿಂದ ಹಾರಿ, ಬುಡದಲ್ಲಿ ನನ್ನ ಹೆಣ….. ಅನ್ನುತ್ತಿದ್ದಂತೆ ಅವಳ ತುಟಿಯನ್ನು ಗಾಢವಾಗಿ ಚುಂಬಿಸಿ ಮೂರನೇ ಮುತ್ತಿನ ಮೂಲಕ ಅವಳನ್ನು ಸುಮ್ಮನಾಗಿಸಿದೆ.


ನಾನೊಬ್ಬ ಅರೆಕಾಲಿಕ ಅಲೆಮಾರಿ, ಮೈಸೂರಿನಲ್ಲಿ ಸಣ್ಣದೊಂದು ಫೋಟೋ ಸ್ಟುಡಿಯೋ ಇಟ್ಟುಕೊಂಡಿದ್ದೇನೆ. ಮನುಷ್ಯರನ್ನು ಹೊರತುಪಡಿಸಿ ಉಳಿದೆಲ್ಲವನ್ನು ಸೆರೆ ಹಿಡಿಯುವಲ್ಲಿ ನನಗೆ ಹುಚ್ಚು ಆಸಕ್ತಿ. ಊರೂರು ತಿರುಗಿ, ಕಾಡು-ಮೇಡು ಸುತ್ತಿ, ಕಂಡಿದ್ದೆಲ್ಲವನ್ನು ಫೋಟೋ ತೆಗೆಯುತ್ತಿರುತ್ತೇನೆ. ಅನಿವಾರ್ಯವಾಗಿ ವಾರಕ್ಕೆ ಮೂರು ದಿನ ಸ್ಟುಡಿಯೋ ತೆರೆದು ಮನುಷ್ಯರ ಮುಖ, ಮೂತಿಗಳನ್ನು ಸೆರೆಹಿಡಿಯುತ್ತೇನೆ. ಹಾಗೊಮ್ಮೆ ಹೀಗೊಮ್ಮೆ ಮದುವೆ, ಮುಂಜಿ, ಬಯಕೆ ಹಾಳು, ಮೂಳು ಅಂತ ಇರುತ್ತದೆ.

ನನ್ನ ಬೈಕು ಹೆಚ್ಚಾಗಿ ಕೊಡಗು, ಮಲೆನಾಡಿನ ಕಡೆ ಕಾಣಿಸಿಕೊಳ್ಳುತ್ತದೆ. ವಯಸ್ಸು ನಲವತ್ನಾಲ್ಕಾದರೂ ಓಡಾಟದ ಸಲುವಾಗಿಯೋ ಏನೋ, ನೋಡಲು ಅಷ್ಟೇನು ವಯಸ್ಸಾಗದವನಂತೆ ಕಾಣಿಸುತ್ತೇನೆ. ತಲೆ ಕೂದಲು ಕಪ್ಪಗೇ ಇವೆ. ಅಲ್ಲಿ ಇಲ್ಲಿ ಕೊಂಚ ಉದುರಿದೆಯಾದರೂ ಹೊಳೆಯ ಕಲ್ಲಿನಂತೆ ನೈಸಾಗಿಲ್ಲ.!

ಸ್ವಲ್ಪ ದಿನ ವಿಡಿಯೋಗ್ರಫಿ ಕಡೆಗೆ ಹೊರಳಿ. ಸಿನಿಮಾ, ಅದು, ಇದು ಅಂತ ಓಡಾಡಿದೆ. ಈ ಸಿನಿಮಾದವರಷ್ಟು ನಮಕ್ ಹರಾಮಿ ಜನ ರಾಜಕಾರಣದಲ್ಲೂ ಇಲ್ಲಾ ಅಂತ ತಿಳಿಯುವಷ್ಟರಲ್ಲಿ ಸ್ವಲ್ಪ ಲಾಸೂ ಆಯ್ತು. ನನ್ನ ಫೋಟೋಗ್ರಫಿ ಹುಚ್ಚು ಬಿಡಿಸೋ ಪ್ರಯತ್ನದಲ್ಲಿ ಮನೆಯವರು ನನಗೆ ಮದುವೆ ಮಾಡಿ ನೋಡಿದರು. ಕಟ್ಟಿಕೊಂಡವಳು ನಾನು ಗಂಡ್ಸೇ ಅಲ್ಲಾ ಅಂತ ಆರೇ ತಿಂಗ್ಳಲ್ಲಿ ಬಿಟ್ಟೋಗಿಬಿಟ್ಳು. ಅದೇ ಕೊರಗಲ್ಲಿ ನನ್ನ ತಂದೆ ತೀರಿಹೋದರೆ, ತಾಯಿ, ತಂಗಿ ಮನೆ ಸೇರ್ಕೊಂಡ್ಲು. ಅಲ್ಲಿಂದೀಚೆ ಹೀಗೆ ಕ್ಯಾಮರಾದೊಂದಿಗೆ ಅಲೆಯೋ ಖಯಾಲಿ. ಗಂಡ್ಸೆ ಅಲ್ದವ್ನು ಅಂತ ಊರೆಲ್ಲ ಸುದ್ದಿ ಆದಾಗಿಂದ ನನ್ನಮ್ಮನೂ ಮತ್ತೆ ಮದುವೆ ಮಾಡುವ ಪ್ರಯತ್ನಕ್ಕೆ ಅಂತ್ಯ ಹಾಡಿದ್ಲು.

ನಿಜವಾಗಿಯೂ ನಾನು ಗಂಡ್ಸಲ್ಲದವನಲ್ಲ. ಡೈವೋರ್ಸ್ ಪೇಪರ್ ಬಂದಾಗ್ಲೆ ಗೊತ್ತಾಗಿದು, ನನ್ನ ಗಂಡಸ್ತನದ ವಿಷಯ. ಒಳ್ಳೆ ಗಂಡಸ್ನನ್ನೇ ಹುಡುಕ್ಕೋ ಮಾರಯ್ತಿ ಅಂತ ಸೈನ್ ಮಾಡ್ಕೊಟ್ಟೆ ಅತ್ಲಾಗೆ.
ನಮ್ ಮೈಸೂರಲ್ಲಿ ಎಲ್ಲವೂ ಸುದ್ದಿ ಆಗುತ್ತೆ. ಹಾಗೆ ಮದುವೆ ಗಂಡಿಗೆ ಅದೇ ಇಲ್ಲ ಅನ್ನೋ ಸುದ್ದಿನೂ ಪ್ರಸಾರ ಆಯ್ತು. ಸಾಮಾನ್ಯವಾಗಿ ಕೊಡಗಿಗೆ ಹೋದ್ರೆ ನಾನು ಮಡಿಕೇರಿಯ ಸ್ಟೋನ್ ಹಿಲ್ ಲಾಡ್ಜಲ್ಲಿ ರೂಮ್ ಮಾಡ್ತಿದ್ದೆ. ಹಾಗಂತ ಅದು ಲಾಡ್ಜ್ ಏನೂ ಆಗಿರಲಿಲ್ಲ. ಅದೊಂದು ಗವರ್ನಮೆಂಟ್ ಅತಿಥಿ ಗೃಹ. ರಾಜಸೀಟಿನ ಗುಡ್ಡಕ್ಕಿಂತ ಸ್ವಲ್ಪ ಎತ್ತರದಲ್ಲೇ ಇತ್ತು. ನಾನು ಮಾಂಸ ಮುಟ್ತಿರ್ಲಿಲ್ಲ. ಈ ಕೊಡಗಿನವರ ಸಹವಾಸದಿಂದ ಹಂದಿ ತಿನ್ನೋದನ್ನೂ ಕಲ್ತೆ. ಇಲ್ ಉಳ್ಕೊಳ್ಳುವಾಗ್ಲೆಲ್ಲಾ ಎರಡೆರಡು ಪೆಗ್ ವಿಸ್ಕಿನೂ ಕುಡಿತಿದ್ದೆ. ಇಡೀ ಕೊಡಗನ್ನ ಬೈಕ್ನಲ್ಲಿ ಮೂರ್ ಮೂರ್ ದಿನ ಅಲಿತಿದ್ದೆ. ಹೆಚ್ಚಾಗಿ ಬೆಟ್ಟ ಹತ್ತೋ ಸಾಹಸ ಮಾಡ್ತಿದ್ದೆ. ಕೊಡಗಿನ ಬೆಟ್ಟದ ಮೇಲೆ ಕೆಲ ಆದಿವಾಸಿ ಜನಾಂಗದವ್ರು ವಾಸ ಮಾಡ್ತಾರೆ. ಆನೆ, ಹುಲಿ, ಹಾವು, ಜೇನುಗಳು ಮಾತ್ರ ವಾಸ ಮಾಡುವ ಜಾಗಕ್ಕೆ ಇವ್ರೆಂಗೆ ಹೋಗಿ ತಲ್ಪಿದ್ರೋ? ದೇವರೇ ಬಲ್ಲ. ಕೊಡಗಿನ ಬೆಟ್ಟಗಳ ತುದಿಯಲ್ಲೂ, ಬುಡದಲ್ಲೂ, ನಡುವಲ್ಲೂ ಈ ಆದಿವಾಸಿಗಳು ಕಾಣಸಿಗುತ್ತಾರೆ. ಇತ್ತೀಚೆಗೆ ಯಾಕೋ ನಾನೂ ಈ ಆದಿವಾಸಿಗಳ ಹಿಂದೆ ಬಿದ್ದಿದ್ದೀನಿ. ಇವ್ರಿಗೆ ಸ್ವಲ್ಪ ಪೇಟೆಯವರ ಸುಳಿವು ಸಿಕ್ರೆ ರಾಜಾತೀತ್ಯ ನೀಡುತ್ತಾರೆ. ನಾನು ಇವರ ದೆಸೆಯಿಂದಾಗಿ ನಾಡು ಹಂದಿಯಿಂದ. ಕಾಡಂದಿ, ಮುಳ್ಳಂದಿ, ಚಿಪ್ಪುಹಂದಿಗಳಿಗೆ ಬಡ್ತಿ ಹೊಂದಿದ್ದೀನೆ. ಅವರು ಕಾಯಿಸಿಕೊಡುವ ಭತ್ತದ ಸಾರಾಯಿ, ಗೇರುಹಣ್ಣಿನ ನೀರು ಹೆಚ್ಚು ರುಚಿಯೆನಿಸುತ್ತದೆ. ಕೆಲವೊಮ್ಮೆ ಅವರಲ್ಲೇ ಉಳಿಯುವುದೂ ಉಂಟು.
ಕೊಡಗಿನಲ್ಲಿ ಕೋಟೆಬೆಟ್ಟ ಎನ್ನುವ ಒಂದು ಕಲ್ಲಿನ ಬೆಟ್ಟವಿದೆ. ಅದರ ಬುಡದಲ್ಲೇ ಪುರಾತನ ಕಟ್ಟಡವೊಂದಿದೆ. ಆ ಕಟ್ಟಡ ಹಿಂದೆ ದೇವಸ್ಥಾನವಾಗಿತ್ತು ಅಂತಲೂ, ಸುಲ್ತಾನನೊಬ್ಬ ಅದನ್ನು ಮಸೀದಿ ಮಾಡಿದನೆಂದೂ, ಕೊನೆಗೆ ಬ್ರೀಟಿಷರು ಅದನ್ನು ಇಗರ್ಜಿ ಮಾಡಿದರು ಎಂಬಿತ್ಯಾದಿ ಸ್ವಾರಸ್ಯಕರ ಕಥೆಗಳಿವೆ. ಈಗ ಅದು ಕಾಲನ ಹೊಡೆತಕ್ಕೆ ನಲುಗಿ ಪಾಳುಬಿದ್ದು ಹೋಗಿದೆ.
ಆ ಕಟ್ಟಡದ ಹಿಂಬದಿಯಲ್ಲೊಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ.

ನಾನು ಈ ಪುರಾತನ ಕಟ್ಟಡದ ವಿಷಯವರಿತು ಅದರ ಪಳೆಯುಳಿಕೆಯನ್ನಾದರೂ ಫೋಟೋ ತೆಗೆದು, ಸಂರಕ್ಷಿಸಬೇಕೆನ್ನುವ ನಿಟ್ಟಿನಲ್ಲಿ ಅಲ್ಲಿಗೆ ಹೋಗಿದ್ದೆ. ಕಟ್ಟಡದ ಮರೆಯಲ್ಲಿ ಕದ್ದು ಕುಳಿತಂತಿದ್ದ ಶಾಲೆಯನ್ನು ಗುರುತು ಹಿಡಿಯಲೇ ಸ್ವಲ್ಪ ಸಮಯ ಹಿಡಿಯಿತು. ಒಂದರಿಂದ ಐದರವರೆಗೆ ತರಗತಿಗಳಿದ್ದರೂ ಅಲ್ಲಿ ಒಟ್ಟು ಇದ್ದದ್ದೇ ಹದಿನಾಲ್ಕು ಮಕ್ಕಳು. ಶಾಲೆಗೆ ಒಬ್ಬ ಹೆಡ್‌ಮಾಸ್ತರನ್ನು ಒಳಗೊಂಡಂತೆ ಎರಡು ಸಹಾಯಕ ಶಿಕ್ಷಕಿಯರಿದ್ದರು. ಹೆಡ್‌ಮಾಸ್ತರು ವಾರಕ್ಕೊಮ್ಮೆ ಮಾತ್ರ ಶಾಲೆ ಕಡೆ ಬಂದು ಹೋಗುತ್ತಿದ್ದ ಅನ್ನುವುದು ನಂತರ ತಿಳಿಯಿತು.

ಎರಡು ಸಹಾಯಕ ಶಿಕ್ಷಕಿಯರಲ್ಲದೆ ಶಾಲೆಗೊಬ್ಬಳು ಪೊನ್ನು ಎನ್ನುವ ಅಡಿಗೆ ಸಹಾಯಕಿಯೂ ಇದ್ದಳು. ಸಹಾಯಕ ಶಿಕ್ಷಕಿಯರಿಬ್ಬರಲ್ಲಿ ಒಬ್ಬಳೇ ಈ ತೇನ್ ಮಲೆ ಕುಡಿಯತಿ ಸೇವಂತಿ ಟೀಚರ್. ಪೂಮಲೆ ಕುಡಿಯರು, ತೇನ್ ಮಲೆಕುಡಿಯರು ಎನ್ನುವುದು ಕೊಡಗಿನ ಆದಿವಾಸಿ ಉಪ ಪಂಗಡಗಳು.
ಸೇವಂತಿ ಹುಡುಗಿಯೇನು ಆಗಿರಲಿಲ್ಲ. ಅವಳಿಗೆ ಮದುವೆಯೂ ಆಗಿರಲಿಲ್ಲ. ನೋಡಲು ಕೊಂಚ ಗುಂಡಕ್ಕಿದ್ದಳು, ಬೆಳ್ಳಗೂ ಇದ್ದಳು, ಅವಳ ಸಣ್ಣ ಮೂಗು, ಗೋಳದಂತಹ ಕಂಗಳು ಅವಳಿಗೆ ವಯಸ್ಸೇ ಆಗಿಲ್ಲ ಅನ್ನುವಂತಿತ್ತು. ಅವಳ ದೇಹಕ್ಕೆ ಮಾತ್ರ ಕೊಂಚ ವಯಸ್ಸಾದಂತೆ ಕಾಣಿಸುತ್ತಿತ್ತು. ಹಾಗಂತ ಅವಳು ಮುದುಕಿಯೇನು ಅಲ್ಲ, ಅವಳನ್ನು ಹೆಂಗಸೆನ್ನಲೂ ನನಗೆ ಮನಸ್ಸಿಲ್ಲ.
ಸೇವಂತಿಯ ಕುಟುಂಬ ಸ್ವಲ್ಪ ಫೇಮಸ್ಸು. ಅವರ ಅಪ್ಪ ಬುಡಕಟ್ಟು ಜನಾಂಗಗಳ ಹಕ್ಕಿಗಾಗಿ ಹಲವು ವರ್ಷಗಳಿಂದ ಹೋರಾಡಿ ಈಗ ದಣಿದು ಮನೆಯಲ್ಲೇ ಇದ್ದರು. ಈ ಸೇವಂತಿ ಕೂಡ ಒಮ್ಮೊಮ್ಮೆ ಹೋರಾಟಗಾರ್ತಿಯಂತೆ ಆಡುತ್ತಿದ್ದಳು. ಅವಳಿಗೆ ನನ್ನ ಕ್ಯಾಮರಾ ಕಂಡರೆ ಕೊಂಚ ಹೆಚ್ಚು ಇಷ್ಟವೆನಿಸುತ್ತಿತ್ತು. ನಾನು ಆ ಶಾಲೆಯ ಹದಿನಾಲ್ಕೂ ಆದಿವಾಸಿ ಮಕ್ಕಳ ಫೋಟೋ ತೆಗೆಯುವ ಸೋಗಿನಲಿ ಸೇವಂತಿಯ ಫೋಟೋವನ್ನೂ ತೆಗೆಯುತ್ತಿದ್ದೆ. ಮದುವೆ ವಯಸ್ಸು ಮೀರಿದ್ದರೂ ಅವಳ ಹೋರಾಟಗಾರ ಅಪ್ಪನಿಗೆ ಸೇವಂತಿಗೊಂದು ಮದುವೆ ಮಾಡಿಸಬೇಕು ಅನ್ನಿಸಲೇ ಇಲ್ಲವಂತೆ. ಆ ಕೊರಗಿನಲ್ಲಿ ಆಗಾಗ್ಗೆ ಈ ಸೇವಂತಿ ಒಬ್ಬಳೇ ಯಾರಿಗೂ ಕಾಣದಂತೆ ಕೋಟೆಬೆಟ್ಟದ ತುದಿಗೆ ಹೋಗಿ ಅಳುತ್ತಿರುತ್ತಾಳಂತೆ.

ಪಾಳು ಕಟ್ಟಡದ ಫೋಟೋ ತೆಗೆಯಲು ಹೋಗಿ, ಕೊನೆಗೆ ಮಕ್ಕಳೊಂದಿಗೆ ಸೇರಿ, ಕಾಡು ಕಡಿದು, ಶ್ರಮದಾನ ಮಾಡಿ ನೋಡಿದರೆ. ಆ ಕಡೆ ದೇವಸ್ಥಾನದಂತೆಯೂ ಇಲ್ಲದೆ, ಮಸೀದಿಯೂ ಅಲ್ಲದೇ, ಚರ್ಚಿನಂತೆಯೂ ಕಾಣಿಸದೇ ತೀರಾ ತಮಾಷೆಯಾಗಿ ಆ ಪುರಾತನ ಕಟ್ಟಡ ಕಾಣಿಸುತ್ತಿತ್ತು.
ಸೇವಂತಿ ಮಕ್ಕಳನ್ನು ವಾರಕ್ಕೊಮ್ಮೆ ಕೋಟೆಬೆಟ್ಟಕ್ಕೆ ಟ್ರಕ್ಕಿಂಗ್ ಕರೆದುಕೊಂಡು ಹೋಗುವಾಗ ನಾನು ಜೊತೆಗೆ ಒಂದೆರೆಡು ಬಾರಿ ಹೋಗಿ ಬೆಟ್ಟದ ಫೋಟೋವನ್ನು, ಮಕ್ಕಳ ಫೋಟೋವನ್ನು, ಸೇವಂತಿಯೊಂದಿಗೆ, ಬೆಟ್ಟದ ತುಂಬಾ ಅರಳಿ ನೀಲಿ ನೀಲಿಯಾಗಿ ಕಾಣಿಸುತ್ತಿದ್ದ ಕುರುಂಜಿ ಹೂವಿನ ಫೋಟೋವನ್ನೂ ತೆಗೆದಿದ್ದೆ. ಮೂರನೇ ಬಾರಿ ಮಾತ್ರ ಬೆಟ್ಟ ನೋಡಲು ಮಕ್ಕಳನ್ನು ಬಿಟ್ಟು ನಾನು ಮಾತ್ರ ಸೇವಂತಿಯೊಂದಿಗೆ ಹೋಗಿದ್ದೆ. ಕುರುಂಜಿ ಹೂವು ಆಗ ಪೂರ್ತಿಯಾಗಿ ಅರಳಿತ್ತು.
ಸೇವಂತಿಯಲ್ಲಿ ಅಂದು ನಾನೊಂದು ನಿವೇದನೆ ಹೇಳಿಕೊಂಡಿದ್ದೆ. ಕುರುಂಜಿ ಹೂವನ್ನು, ಕುರುಂಜಿಗಿಂತ ಸುಂದರಿಯಾದ ಸೇವಂತಿಯನ್ನು, ಸೇವಂತಿಯ ಮೊಗದಷ್ಟೇ ಚೆಂದದ ಪೂರ್ಣಚಂದ್ರನನ್ನೂ ತಿಂಗಳ ಇರುಳಿನಲ್ಲಿ, ಬೆಟ್ಟದ ಮೇಲೆ ನೋಡಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಇಲ್ಲಿ ಆನೆ, ಚಿರತೆ, ಹೆಜ್ಜೇನು ಇರುವುದಾಗಿಯು, ಹುಲಿ ಬಂದರೂ ಬರಬಹುದು ಎಂದು ನನ್ನನ್ನು ಸೇವಂತಿ ಹೆದರಿಸಲು ನೋಡಿದ್ದಳು. ಅವಳಿಗೆ ಎಲ್ಲಕ್ಕಿಂತ ಅವಳ ಹೋರಾಟಗಾರ ಅಪ್ಪನ ಹೆದರಿಕೆಯೇ ಹೆಚ್ಚು ಅನ್ನುವುದು ನನಗೆ ತಿಳಿದಿತ್ತು. ಮೂರು ತಿಂಗಳ ನನ್ನ ಸಂಕಟದ ನಂತರ ಅವಳು ನನ್ನೆಡೆಗೆ ಕರುಣೆ ತೋರಿಸಿ, ಅಪ್ಪನಿಗೆ ಗೇರು ಹಣ್ಣಿನ ಸರಾಯಿಯನ್ನು ಸ್ವಲ್ಪ ಹೆಚ್ಚೇ ಕುಡಿಸಿ, ನನ್ನ ಕೈ ಹಿಡಿದುಕೊಂಡೇ ಬೆಟ್ಟ ಹತ್ತಿ, ಬೆಟ್ಟದ ನೆತ್ತಿಯನು ತಲುಪಿ, ನನ್ನನ್ನು ಆವರಿಸಿಕೊಂಡು ಕುಳಿತಿದ್ದಳು. ನಾನು ಹೀಗೆ ತಪ್ಪುತಪ್ಪಾಗಿ ಮುತ್ತು ಎಣಿಸುತ್ತಾ ಆಟ ಆಡುತ್ತಿದ್ದೆ. ಅವಳು ಸಾಯುವ ಮಾತಾಡುತ್ತಿದ್ದಳು. ನಾನು ನಕ್ಷತ್ರ ತೋರಿಸಿದೆ, ಅವಳು ನೋಡಿದಳು. ನಾನು ಅವಳ ಕುತ್ತಿಗೆಯಲಿ ಮೂಡಿ, ಮಂಜಿನ ಹೊಡೆತಕ್ಕೆ ತಣ್ಣಗಾಗಿದ್ದ ಬೆವರ ಹನಿಯನ್ನು ಚುಂಬಿಸಿದೆ. ಸೇವಂತಿಗೆ ಹೂವಿನ ಅದೇ ಪರಿಮಳ ಇವಳ ಬೆವರಿಗೂ ಇದೆ ಅನಿಸಿತು. ಸಾಯುತ್ತೇನೆ ಅಂದಳು. ಅವಳ ತುಟಿಯನ್ನೂ ಸುಮ್ಮನಾಗಿಸಿದೆ. ರಾಣಿ ಜೇನೊಂದು ಹುಣ್ಣಿಮೆಯ ಚಂದಿರನ ಬಳಿಗೆ ಹಾರುತ್ತಿತ್ತು. ಅದು ದೂರಾಗುತ್ತಾ..ದೂರಾಗುತ್ತಾ, ಧ್ರುವ ತಾರೆ ಯಾವುದು, ರಾಣಿಜೇನು ಯಾವುದು ಎಂಬುದು ನನಗೆ ತಿಳಿಯುತ್ತಿರಲಿಲ್ಲ.
ದೂರದಲ್ಲೆಲ್ಲೋ ಬೈನೆ ಮರದ ಕೊಂಬೆಯನು ಒಂಟಿ ಸಲಗವೊಂದು ಮುರಿದಂತೆ ಕೇಳಿಸಿತು. ಹುಲಿಯ ನೆರಳೊಂದು ಹುಣ್ಣಿಮೆಯ ಬೆಳಕಿನಲಿ ಮೂಡಿ ಭಯವಾಗಿಸಿತು.

ಸೇವಂತಿಯ ತುಟಿಯನ್ನು ಮೆಲ್ಲಗೆ ಕಚಿ, ಕಣ್ಣುಬಿಟ್ಟು ನೋಡಿದೆ. ಅವಳು ಕಣ್ಣು ತೆರೆದೇ ಇದ್ದಳು. ಅವಳ ಕಂಗಳಲಿ ಹುಣ್ಣಿಮೆಯ ಚಂದ್ರ ಅಲುಗಾಡಿದಂತೆ ಕಾಣಿಸುತ್ತಿದ್ದ. ಕುರುಂಜಿ ಹೂವಿನ ಅದೇ ಗಂಧ ಈ ಸೇವಂತಿ ಹೂವಿನ ತುಟಿಗಳಿಗಿದೆ ಅನ್ನಿಸಿ ನಾನು ಕಣ್ಣು ಮುಚ್ಚಿದೆ. ಅವಳು ಚಂದ್ರನನ್ನೇ ದಿಟ್ಟಿಸುತ್ತಿದ್ದಳು.


error: Content is protected !!