April 16, 2021

ರಗಡ್ ಚಾಟ್


ಚಾಟ್ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ…ಒಂದು ಸುಲಭವಾದ ಮನೆಯಲ್ಲಿಯೇ ಲಭ್ಯವಿರುವ ತರಕಾರಿಗಳಿಂದ ಮಾಡಿರುವಂತಹ ಸುಲಭವಾದ ಚಾಟ್!

ಬೇಕಾಗುವ ಪದಾರ್ಥಗಳು: ಕಾಬುಲ್ ಟೊಮೇಟೊ ನಾಲಕ್ಕು, ದೊಡ್ಡ ಈರುಳ್ಳಿ 4, ಶುಂಠಿ ಒಂದು ತುಂಡು, ಬೆಳ್ಳುಳ್ಳಿಯ ತೊಳೆಗಳು 6, ಕೊತ್ತಂಬರಿ ಸೊಪ್ಪು ಶುಚಿಗೊಳಿಸಿ ಸಣ್ಣಗೆ ಹೆಚ್ಚಿದ್ದು 1 ಕಪ್, ಎರಡು ಕ್ಯಾರೆಟ್ ತುರಿದದ್ದು, 1 ಕಪ್ ಬಟಾಣಿ, ಒಂದು ಆಲೂಗೆಡ್ಡೆ, ಸೇವ್ ಪ್ಯಾಕೆಟ್ ಒಂದು, ಅಚ್ಚಕಾರದ ಪುಡಿ, ಚಾಟ್ ಮಸಾಲ, ಗರಂ ಮಸಾಲ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ನಿಂಬೆ ಹಣ್ಣು, ಅರಿಸಿನ ಪುಡಿ, ಒಗ್ಗರಣೆಗೆ 4 ಚಮಚ ಎಣ್ಣೆ,ಬ್ಲ್ಯಾಕ್ ಸಾಲ್ಟ್, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಬಟಾಣಿಯನ್ನು ಸ್ವಚ್ಛಗೊಳಿಸಿ ನೆನೆಸಿಕೊಳ್ಳಿ, ನೆಂದ ಬಟಾಣಿಯನ್ನು ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಹೋಳುಗಳನ್ನಾಗಿ ಮಾಡಿ ಚಿಟಿಕೆ ಅರಸಿನ ಪುಡಿ ಮತ್ತು ಉಪ್ಪು ಹಾಕಿ ಸಾಕಷ್ಟು ನೀರಿನಲ್ಲಿ ಬೇಯಿಸಿಕೊಳ್ಳಿ. ಒಂದು ಪ್ಯಾನ್ ನಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ, ಸಣ್ಣಗೆ ಕಟ್ ಮಾಡಿದ ಈರುಳ್ಳಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಬಾಡಿಸಿಕೊಳ್ಳಿ, ನಂತರ ಸಣ್ಣಗೆ ಹೆಚ್ಚಿದ ಟೊಮೆಟೊವನ್ನು ಹಾಕಿ ಹುರಿದುಕೊಳ್ಳಿ, ನಂತರ ಒಂದೊಂದಾಗಿ ಅರಸಿನ ಪುಡಿ ಅರ್ಧ ಚಮಚ, ಖಾರದ ಪುಡಿ 1 ಚಮಚ ಕೊತ್ತಂಬರಿ ಪುಡಿ 1 ಚಮಚ ಜೀರಿಗೆ ಪುಡಿ 1 ಚಮಚದಷ್ಟು ಹಾಕಿ ಚೆನ್ನಾಗಿ ಹುರಿದುಕೊಳ್ಳಿ, ಎರಡು ನಿಮಿಷ ಚೆನ್ನಾಗಿ ಹುರಿದುಕೊಂಡ ನಂತರ ಬೇಯಿಸಿಕೊಂಡ ಬಟಾಣಿ ಮತ್ತು ಆಲೂಗೆಡ್ಡೆ ಹೋಳುಗಳನ್ನು ಸೌಟಿನಲ್ಲಿ ಸ್ವಲ್ಪ ಸ್ಮ್ಯಾಶ್ ಮಾಡಿಕೊಂಡು ಬೆರೆಸಿ. ಒಂದು ಚಿಕ್ಕ ಚಮಚ ಗರಂ ಮಸಾಲಾ ಪುಡಿಯನ್ನು ಹಾಕಿ, ಚೆನ್ನಾಗಿ ಕುದಿಸಿಕೊಳ್ಳಿ ಇಲ್ಲಿಗೆ ರಗಡ್ ರೆಡಿಯಾಯಿತು.

ಒಂದು ತಟ್ಟೆಯಲ್ಲಿ ಈ ರಗಡ್ ಅನ್ನು 2 ಸೌಟು ಹಾಕಿ, ಒಂದು ಚಮಚ ಹುಣಸೆ ಹಣ್ಣಿನ ಸಿಹಿ ಚಟ್ನಿ, ಪುದಿನ ಕೊತ್ತಂಬರಿ ಸೊಪ್ಪಿನ ಗ್ರೀನ್ ಚಟ್ನಿ, ಬೇಕಿದ್ದಲ್ಲಿ ಸಿಹಿಮೊಸರು 1 ಚಮಚ, ಟೊಮೆಟೊ ಸಣ್ಣಗೆ ಹೆಚ್ಚಿದ್ದು, ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸೇವ್ ಎಲ್ಲವನ್ನು ವೃತ್ತಾಕಾರವಾಗಿ ಹಾಕಿ, ಮೇಲಿನಿಂದ ಅಲಂಕರಿಸಿ, ಕೊತ್ತಂಬರಿ ಸೊಪ್ಪಿನ ತಿಲಕವನ್ನಿಟ್ಟು ಸಂಜೆಯಲ್ಲಿ ಸರ್ವ್ ಮಾಡಿ… ನೀವು ಸವಿಯಲು ಮರೆಯದಿರಿ… ಗ್ರೀನ್ ಚಟ್ನಿ:🍀🍀 ಶುಚಿಗೊಳಿಸಿದ ಒಂದು ಹಿಡಿ ಪುದಿನ ಒಂದು ಹಿಡಿ ಕೊತ್ತಂಬರಿ ಸೊಪ್ಪು, ಖಾರಕ್ಕೆ ತಕ್ಕಷ್ಟು ಹಸಿಮೆಣಸಿನಕಾಯಿ, ಹುರಿಗಡಲೆ 2 ಚಮಚ, ಬೆಳ್ಳುಳ್ಳಿಯ ನಾಲ್ಕು ಎಸಳುಗಳು, ಕಾಲು ಚಮಚದಷ್ಟು ಜೀರಿಗೆ ಇಷ್ಟನ್ನೂ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಂಡು ಮೇಲಿನಿಂದ ನಿಂಬೆರಸವನ್ನು ಹಿಂಡಿಕೊಳ್ಳಿ ಇಲ್ಲಿಗೆ ಗ್ರೀನ್ ಚಟ್ನಿ ರೆಡಿ.


ಹುಣಸೆಹಣ್ಣಿನಸಿಹಿ ಚಟ್ನಿ

ಒಂದು ಕಿತ್ತಳೆ ಗಾತ್ರದಷ್ಟು ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಕೊಳ್ಳಿ, ಆರಿದ ನಂತರ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಿವಿ ಚಿಕೊಂಡು, ರಸವನ್ನು ಶೋಧಿಸಿ ಕೊಳ್ಳಿ, ಈ ರಸಕ್ಕೆ ಹುಣಸೆಹಣ್ಣಿನ ಎರಡರಷ್ಟು ಬೆಲ್ಲ, ಒಂದು ಚಮಚ ಉಪ್ಪು, 1 ಚಮಚ ಅಚ್ಚ ಕಾರದ ಪುಡಿ, ಒಂದು ಚಮಚ ಬ್ಲಾಕ್ ಸಾಲ್ಟ್, ಮತ್ತು ಚಾಟ್ ಮಸಾಲವನ್ನು ಹಾಕಿ ಚೆನ್ನಾಗಿ ಸ್ವಲ್ಪ ಮಂದ ವಾಗುವಂತೆ ಕುದಿಸಿ ಕೊಳ್ಳಿ. ಇದು ಹುಣಸೆಹಣ್ಣಿನಸಿಹಿ ಚಟ್ನಿ .

ಈ ಎರಡು ಚಟ್ನಿಗಳು ಆಪತ್ಬಾಂಧವ ರಂತೆ ಕೆಲಸ ಮಾಡುತ್ತದೆ. ಈ ಎರಡು ಚಟ್ನಿಗಳು ಯಾವಾಗಲೂ ರೆಡಿ ಮಾಡಿ ಫ್ರಿಜ್ಜಿನಲ್ಲಿ ಇಟ್ಕೊಂಡ್ರೆ ಮ ಮಸಾಲ್ ಪುರಿ, ಪಾನಿಪುರಿ, ಸಮೋಸ, ಕಚೋರಿ, ವೆಜ್ ಸ್ಯಾಂಡ್ವಿಚ್ ಎಲ್ಲದಕ್ಕೂ ಬಳಸಬಹುದು.

🖋 ಅಶ್ವಿನಿ ಅಶು, ಮೈಸೂರು

error: Content is protected !!