fbpx

ಕೊಡಗಿನ ಉದಯೋನ್ಮುಖ ಷಟಲ್ ಬ್ಯಾಡ್ಮೆಂಟನ್ ಆಟಗಾರ್ತಿ ಬೊಪ್ಪಂಡ ದಿಯಾ ಭೀಮಯ್ಯ

ತನ್ನ ಮೂರು ವರ್ಷ ಪ್ರಾಯಕ್ಕೇ ಮೆರಥಾನ್ʼನಂತಹ ಓಟದೊಂದಿಗೆ ಕ್ರೀಡಾಂಗಳಕ್ಕಿಳಿದಿರುವಂತಹ ದಿಯಾಭೀಮಯ್ಯ ಕ್ರೀಡಾಪಟುಗಳಾದ ತಂದೆ ಬೊಪ್ಪಂಡ ಪಿ ಭೀಮಯ್ಯ ತಾಯಿ ಶ್ರೀಮತಿ ಕುಸುಮ ಅವರ ಮುದ್ದಿನ ಮಗಳು ಬ್ಯಾಡ್ಮಿಂಟನ್ ಕ್ರೀಡಾ ಕಣ್ಮಣಿ. ಈಕೆಗೆ ಒಬ್ಬ ತಮ್ಮನಿದ್ದಾನೆ, ಹೆಸರು ವಿಶಾಲ್ ಉತ್ತಪ್ಪ. ಆತನೂ ಅಕ್ಕನ ಜೊತೆಯಲ್ಲಿಯೇ ಕ್ರೀಡಾ ತರಬೇತಿ ಪಡೆಯುತ್ತಿದ್ದು, ಈಗಾಗಲೇ ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾನೆ.

ತಾಯಿ ಕುಸುಮ ಅಂತರಾಷ್ಟ್ರೀಯ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತೆ, ತಂದೆ ವಿಶು ಭೀಮಯ್ಯ ಕೂಡ ಅನೇಕ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿಗಳಿಸಿದಂತವರು ಒಟ್ಟಿನಲ್ಲಿ ಕ್ರೀಡೆಗೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವಂತಹ ಕ್ರೀಡಾ ಕುಟುಂಬ. ಇವರು ಮೂಲತಃ ಮಡಿಕೇರಿಯ ದೇಚೂರು
ನಿವಾಸಿಯಾಗಿದ್ದು, ಸದ್ಯ ಕ್ರೀಡೆಯ ಕಾರಣದಿಂದಲೇ ಮೈಸೂರಿನಲ್ಲಿ ನೆಲೆನಿಂತಿದ್ದಾರೆ.

ಲೇಖನ: ಮಾಳೇಟಿರ ಸೀತಮ್ಮ ವಿವೇಕ್, ಸಾಹಿತಿ  ಹಾಗು ಬರಹಗಾರರು

ದಿಯಾ ಭೀಮಯ್ಯ ಪ್ರಗತಿ ಇಲೈಟ್‌ ಪಬ್ಲಿಕ್‌ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮೂರನೇ ತರಗತಿಯಲ್ಲಿರುವಾಗ ತಂದೆಯ ಪ್ರೋತ್ಸಾಹದಿಂದ ಬ್ಯಾಡ್ʼಮೆಂಟನ್ ತರಬೇತಿ ಆರಂಭಿಸಿದರು. ಕಾಲ ಕ್ರಮೇಣ ಈ ಆಟದಲ್ಲಿ ಆಸಕ್ತಿ ಹೆಚ್ಚಿದರಿಂದ ಮೊದಲು ಮಡಿಕೇರಿ ನಂತರ ಈಗ ಮೈಸೂರಿನಲ್ಲಿ ಮೇದುರ ಅರುಣ್‌
ಪೆಮ್ಮಯ್ಯನವರ ಬಳಿಯಲ್ಲಿಯೆ ತರಬೇತಿ ಮುಂದುವರೆಸಿದ್ದಾರೆ. ಇವರೊಂದಿಗೆ ಅಂತರಾಷ್ಟ್ರೀಯ ಮಾಸ್ಟರ್ಸ್ ಕ್ರೀಡಾಪಟು, ದೈಹಿಕ ಶಿಕ್ಷಕಿ, ಸಾಯಿಯ ಕ್ರೀಡಾಪಟು ಆಗಿದ್ದ ತಾಯಿ ಕುಸುಮಳ
ಮಾಗದರ್ಶನದಲ್ಲಿ ದಿಯಾ ಫಿಟ್ನೆಸ್ʼನ ಕಡೆಗೂ ಹೆಚ್ಚಿನ ಗಮನ ಹರಿಸಿಕೊಳ್ಳುತ್ತಿದ್ದಾರೆ.

ಈಕೆ ಚಿಕ್ಕ ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ʼನಲ್ಲಿ ಆಸಕ್ತಿ ತೋರಿದ್ದರಿಂದ ಇವಳ ತಂದೆ ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದ ಅನೇಕ ರಾಂಕಿಂಗ್
ಟೂರ್ನಮೆಂಟ್ʼಗಳಲ್ಲಿ ಭಾಗವಹಿಸಲು ತಾವೇ ಖುದ್ದಾಗಿ ಕರೆದುಕೊಂಡು ಹೋಗುತ್ತಿದ್ದರ ಪರಿಣಾಮವಾಗಿ ಇಂದು ಸಾಕಷ್ಟು ಬಿರುದುಗಳು ಆಕೆಯ ಮುಡಿಗೇರಿವೆ.
2019ರಲ್ಲಿ ನಡೆದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಯೋನೆಕ್ಸ್ ಸನ್‌ರೈಸ್ ರಿಲಾಯನ್ಸ್ ಸಬ್‌ಜೂನಿಯರ್‌ ರಾಂಕಿಂಗ್‌( Ranking) ಬ್ಯಾಡ್ಮಿಂಟನ್ 13 ವರ್ಷದೊಳಗಿನವರ ಸಿಂಗಲ್ಸ್ ಮತ್ತು ಡಬ್ಬಲ್ಸ್ ವಿಭಾಗದಲ್ಲಿ ಮೂರನೇ ಸ್ಥಾನಗಳಿಸಿದ್ದರು. ಮೇ ತಿಂಗಳಿನಲ್ಲಿ ಸಬ್‌ಜೂನಿಯರ್‌ ರಾಂಕಿಂಗ್‌ ಟೂರ್ನಮೆಂಟ್ ಸಿಂಗಲ್ ಮತ್ತು
ಡಬಲ್ ಮೂರನೇ ಸ್ಥಾನ, ಯೋನೆಕ್ಸ್ ಸನ್‌ರೈಸ್ ರಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಮೆಂಟ್ ಸಿಂಗಲ್ಸ್ ಮತ್ತು ಡಬ್ಬಲ್ಸ್ ಮೂರನೇ ಸ್ಥಾನ. ಬೆಂಗಳೂರು ಹನ್ನೆರಡು ವರ್ಷದೊಳಗಿನ ಬ್ಯಾಡ್ಮಿಂಟನ್ ರಾಂಕಿಂಗ್ ಟೂರ್ನಮೆಂಟ್ʼನಲ್ಲಿ ಪ್ರಥಮ. ರಾಜ್ಯ ರಾಂಕಿಂಗ್‌ ಟೂರ್ನಮೆಂಟ್‌ ಬೆಂಗಳೂರು ಹದಿಮೂರು ವರ್ಷದೊಳಗಿನವರ ಸಿಂಗಲ್ಸ್ ತೃತೀಯ. ಡಬ್ಬಲ್ಸ್ʼನಲ್ಲಿ ಬೆಂಗಳೂರಿನ ಅಮೂಲ್ಯ ಕಶ್ಯಪ್ ಅವರೊಂದಿಗೆ ಜೋಡಿಯಾಗಿ ಆಡಿ ಪ್ರಥಮ ಶ್ರೇಯಾಂಕಿತ
ಆಟಗಾರರಾದ ರುಜುಲಾ ರಾಮ್‌ ಹಾಗು ಮೇಘಶ್ರೀ ಅವರನ್ನು ಮಣಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ರಾಜ್ಯ ಮಟ್ಟದ ರಾಮಯ್ಯ ರಾಜ್ ಮೆಮೋರಿಯಲ್ ‌ರಾಂಕಿಂಗ್‌ ಟೂರ್ನಮೆಂಟ್ ‌ ಹದಿಮೂರು ವರ್ಷಗಳ ಒಳಪಟ್ಟವರಲ್ಲಿ ದ್ವಿತೀಯ. ಐ.ಸಿ.ಎಸ್.ಸಿ. ಶಾಲಾ
ಕ್ರೀಡಾಕೂಟದಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಥಮ ಜೊತೆಗೆ
ಕರ್ನಾಟಕ ಐ.ಸಿ.ಎಸ್.ಸಿ. ತಂಡವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುತ್ತಾರೆ.

ಕಿರಿಯ ಸಹೋದರ ವಿಶಾಲ್ ಜೊತೆಗೆ ದಿಯಾ ಭೀಮಯ್ಯ
ತರಬೇತುದಾರರಾದ ಅರುಣ್ ಪೆಮ್ಮಯ್ಯ ಅವರೊಂದಿಗೆ ದಿಯಾ ಭೀಮಯ್ಯ

ಕರ್ನಾಟಕ ಐ.ಸಿ.ಎಸ್. ಸಿ . ತಂಡವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಸಿಂಗಲ್ಸ್ʼನಲ್ಲಿ ಮಹಾರಾಷ್ಟ್ರದ ವೈಭವ್
ಪರಾಭವಗೊಂಡು ದ್ವಿತೀಯ ಸ್ಥಾನ ಪಡೆದಿದ್ದರು. 14 ವರ್ಷಗದೊಳಗಿನ ಬಾಲಕಿಯರ ಐ. ಸಿ. ಎಸ್. ಸಿ . ರಾಷ್ಟ್ರದ ತಂಡವನ್ನು ಎಸ್.ಜಿ.ಎಫ್‌.ಐ
ಕ್ರೀಡಾಕೂಟದಲ್ಲಿ 2019ರಲ್ಲಿ ಪ್ರತಿನಿಧಿಸಿದ ಕರ್ನಾಟಕದ ಏಕೈಕ ಬಾಲಕಿ ಎಂಬ ಹಿರಿಮೆ ಗಳಿಸಿದ್ದಾಳೆ. ಈ ವರ್ಷ ಕಳೆದ ತಿಂಗಳು ನಡೆದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ 14 ವರ್ಷದೊಳಗಿನ 2ನೇ ಮಿನಿ ಒಲಂಪಿಕ್ಸ್ʼನಲ್ಲಿ
ಸಿಂಗಲ್ಸ್ ತೃತೀಯ ,ಡಬ್ಬಲ್ಸ್ʼನಲ್ಲಿ ದ್ವಿತೀಯ ಸ್ಥಾನಗಳಿಸಿರುತ್ತಾರೆ.

ಕೊಡಗು, ಶಿವಮೊಗ್ಗ, ಮೈಸೂರು,ಬೆಂಗಳೂರಿನಲ್ಲಿ ಹಲವಾರು ಟೂರ್ನಮೆಂಟ್ʼಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿರುತ್ತಾಳೆ. ಹೀಗೆ ಈಕೆಯ ಸಾಧನೆಯನ್ನು ಗುರುತಿಸಿ ಮತ್ತು ನಿರಂತರ ಕ್ರೀಡಾ ಭಾಗವಹಿಸುವಿಕೆ ಹಾಗು ಪ್ರಶಸ್ತಿಗಳಿಕೆಯನ್ನು ಗುರುತಿಸಿ ಅನೇಕ ತಾಲೂಕು ಜಿಲ್ಲಾ ಹಾಗು ರಾಜ್ಯ ಸಂಘ ಸಂಸ್ಥೆಗಳು ವಿಶೇಷವಾಗಿ ಸನ್ಮಾನಿಸಿ ಗೌರವಿಸುತ್ತಿದ್ದಾರೆ.

2018ರಲ್ಲಿ ಗಮಾಟಿಕ್ಸ್ ಸಂಸ್ಥೆ “ಕರ್ನಾಟಕದ ವರ್ಷದ ಕ್ರೀಡಾ ಪ್ರತಿಭೆ” ಎಂದು ಗುರುತಿಸಿ ಗೌರವಿಸಿದೆ. ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ‌ಅವರು ಗೌರವಿಸಿ ಸನ್ಮಾನಿಸಿದ್ದಾರೆ. ರೋಟರಿ ಸಂಸ್ಥೆ ಹಾಗು ಹಲವಾರು ಸಂಘ ಸಂಸ್ಥೆಗಳಿಂದ ಪ್ರೋತ್ಸಾಹ ಪುರಸ್ಕಾರ ಮತ್ತು 2021-22ಸಾಲಿನ ಕೊಡಗು ಜಿಲ್ಲಾ ಮಟ್ಟದ ಮಕ್ಕಳಿಗೆ ನೀಡುವ ಅಸಾಧಾರಣ ಪ್ರತಿಭಾ ಪ್ರಶಸ್ತಿ ಪುರಸ್ಕಾರ ಈಕೆಗೆ ಲಭಿಸಿದೆ. 2022-23ನೇ ಸಾಲಿನ ರಾಜ್ಯಮಟ್ಟದ 15ವರ್ಷದೊಳಗಿನ ಅಗ್ರಶ್ರೇಯಾಂಕಿತ ಆಟಗಾರ್ತಿ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಘೋಷಿಸಿದೆ.

ಇಂತಹ ಅಮೋಘ ಸಾಧನೆಯ ಬೆನ್ನು ಹತ್ತಿರುವ ದಿಯಾ ಭಾರತದ ಧ್ವಜವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸಬೇಕೆಂಬ ಗುರುತರವಾದ ಆಸೆಯನ್ನು ಹೊಂದಿದ್ದಾರೆ. ಇವುಗಳಿಗೆ ಪೂರಕವಾಗಿ ದಿಯಾ ತಮ್ಮ ತಂದೆ, ತಾಯಿ, ಶಾಲಾ ಆಡಳಿತ ಮಂಡಳಿ, ಬಂಧು ಮಿತ್ರರು, ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ನೀಡುತ್ತಿರುವ ಪ್ರೋತ್ಸಾಹ ಮತ್ತು ತರಬೇತುದಾರರಾದ ಅರುಣ್ ಪೆಮ್ಮಯ್ಯ ಅವರ ಪರಿಶ್ರಮವನ್ನು ಅರಿತು ತನ್ನ ಗುರಿಮುಟ್ಟಲೇ ಬೇಕೆಂಬ ಛಲ ಹಾಗೂ ಬದ್ಧತೆಯೊಂದಿಗೆ ದಿಯಾ ಭೀಮಯ್ಯ ಬಲವಾಗಿ ಮುಂದಡಿಡುತ್ತಿದ್ದಾರೆ. ಹೀಗೆ ಕ್ರೀಡಾಸಕ್ತಿ ಹಾಗೂ ಓದಿನಲ್ಲೂ ಮುಂದಿರುವಂತಹ ಈ ಅಪೂರ್ವ ಪ್ರತಿಭೆಗೆ ಸುದ್ಧಿಸಂತೆ ಕುಟುಂಬ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸುತ್ತ ಈಕೆಯ ಮಗದಷ್ಟು ಸಾಧನೆಗಳು ಕೊಡಗಿನ ಗರಿಮೆಯನ್ನು ಹೆಚ್ಚಿಸುತ್ತಿರಲಿ ಎಂದು ಹಾರೈಸುತ್ತದೆ.

error: Content is protected !!