ಬದುಕು ಸಾಗಿಸಲು ದುಡಿಮೆಯ ದಾರಿ ದುರ್ಗಮಗೊಳಿಸದಿರಿ!

|ಹಸಿವು,ಬಡತನಕ್ಕಿಂತಲೂ ದೊಡ್ಡ ರೋಗ ಯಾವುದು…?|

|ಪ್ರವಾಸೋದ್ಯಮಕ್ಕೆ ಆಗಿಂದಾಗ್ಗೆ ಗುದ್ದು ಕೊಡವುದೇಕೆ…! |

ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಜನಸಾಗರ ಹರಿದು ಬರಲಾರಂಭವಾದ ಮೇಲೆ ಪ್ರವಾಸೋದ್ಯಮ ಜಿಲ್ಲೆಯಲ್ಲಿ ಉಛ್ರಾಯ ಸ್ಥಿತಿಯಲ್ಲಿತ್ತು. ಆಗ ಜಿಲ್ಲೆಯ ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದವರು ದುಡಿಯಲು ಹೊಸ ಪರ್ಯಾಯ ದಾರಿಯನ್ನು ಕಂಡುಕೊಂಡಿದ್ದರು. ಹಾಗಾಗಿ ಪ್ರವಾಸೋದ್ಯಮದ ಮೇಲೆ ಹೆಚ್ಚು ಹೆಚ್ಚು ಬಂಡವಾಳವನ್ನು ಜನತೆ ಹೂಡಲು ಶುರುವಿಟ್ಟರು.

ಹೊಟೆಲ್, ರೆಸಾಟ್೯, ಹೋಂ ಸ್ಟೇಗಳು ಹೆಚ್ಚಾದವು. ಕೃಷಿ ವಲಯದಿಂದ ಪ್ರವಾಸೋದ್ಯಮಕ್ಕೆ ಜನ ದುಡಿಯಲು ಮನಸ್ಸು ಮಾಡಿದರು. ಜನರ ತುತ್ತಿನ ಚೀಲ ಪ್ರವಾಸೋದ್ಯಮದಿಂದ ತುಂಬಲು ಆರಂಭವಾಯಿತು. ಆದರೆ ಕೊಡಗಿನಲ್ಲಾದ ಪ್ರಕೃತಿ ವಿಕೋಪ ಹಾಗು ಅದರ ಕುರಿತು ಟಿವಿ ದೃಶ್ಯ ಮಾಧ್ಯಮಗಳ ಮಾಡಿ ಉತ್ಪ್ರೇಕ್ಷಾತ್ಮಕ ಅಪಪ್ರಚಾರ ಪ್ರವಾಸೋದ್ಯಮದ ಬಿರುಸಿಗೆ ಬ್ರೇಕ್ ಹಾಕಿ ಬಿಟ್ಟಿತ್ತು.

ನಂತರ ಒಕ್ಕರಿಸಿಕೊಂಡ ಪರದೇಶಿ ರೋಗ ಕೊರೋನಾ ಪ್ರವಾಸೋದ್ಯಮವನ್ನೇ ಚಿಂತಾಜನಕ ಸ್ಥಿತಿಗೆ ತಳ್ಳಿತು. ವಾರಾಂತ್ಯದಲ್ಲಿ ಜನಜಂಗುಳಿಯೇ ಕಂಡು ಬರುತ್ತಿದ್ದ ಕೊಡಗಿನಲ್ಲಿ ಪ್ರವಾಸಿ ತಾಣಗಳು ಜನರೇ ಇಲ್ಲದೆ ಬಿಕೋ ಎನ್ನಲಾರಂಭಿಸಿತು. ಚೀನೀ ವೈರಾಣುವಿನ ಕಾಟಕ್ಕೆ ಕೊಡಗಿನ ಜನರು ತತ್ತರಿಸಿ ಹೋದರು. ಆರ್ಥಿಕ ಚಟುವಟಿಕೆಗಳು ತೀರಾ ಕುಂಟಿತವಾದವು.

ಹೀಗಿರುವಾಗಲೇ ಜಿಲ್ಲಾಡಳಿತವು ಆಗಿಂದಾಗ್ಗೆ ಕೊರೋನಾದ ಕಾರಣಕ್ಕೆ ಪ್ರವಾಸಿ ತಾಣಗಳನ್ನು ಬಂದ್ ಮಾಡುತ್ತಿರುವ ಕ್ರಮ ಜನರನ್ನು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತೆ ಮಾಡಿದೆ. ಈಗ ಮತ್ತೊಮ್ಮೆ ಏಪ್ರಿಲ್ 20ರ ತನಕ ಮುಂಜಾಗೃತಾ ಕ್ರಮವನ್ನು ಸರ್ವಾಧಿಕಾರಿ ಧೋರಣೆಯಂತೆ ತೆಗೆದುಕೊಂಡಿರುವುದು ಜನ ವಲಯದಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ.

ಕೊರೋನಾ ಎಂಬ ವಿಚಿತ್ರ ವೈರಾಣುವಿಗೆ ಈಗಾಗಲೇ ಸರಕಾರ ವ್ಯಾಕ್ಸಿನ್ ವಿತರಿಸುತ್ತಿದ್ದರೂ ಅದು ತೀರಾ ಪರಿಣಾಮಕಾರಿ ಎಂದೇನೂ ಅನಿಸುತ್ತಿಲ್ಲ. ಕೊರೋನಾ ಇನ್ನು ಹಲವು ವರ್ಷ ಬಾದಿಸಿತು ಅಂತಲೇ ಇಟ್ಟುಕೊಳ್ಳಿ ಅಲ್ಲಿಯ ತನಕ ಜನ ದುಡಿಯದೆ ಮನೆಯ ಕದ ಮುಚ್ಚಿಕೊಙಡು ಬದುಕಲು ಸಾಧ್ಯವಾ?

ಕೊರೋನಾದಿಂದ ಸತ್ತರೆ ಅದು ಕೇವಲ ರೋಗದಿಂದ ಸತ್ತಿದ್ದು ಎಂದಾಗುತ್ತದೆ. ಅದೇ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಕಾರಣ ನೋವು, ಹತಾಶೆ, ಅಸಹಾಯಕತೆ, ಹಸಿವೂ ಕಾರಣವಾಗಬಲ್ಲದು. ಸಾಲ-ಸೂಲ ಮಾಡಿ ಜನ ಪ್ರವಾಸೋದ್ಯಮಕ್ಕೆ ಬಂಡವಾಳ ಹಾಕಿ ದುಡಿಯಲು ಅಣಿಯಾಗಿದ್ದರು. ಆದರೆ ದುಡಿಯಲು ಅವಕಾಶ ಮಾಡಿಕೊಡದಿದ್ದರೆ ಆ ಸಾಲದ ಮರು ಪಾವತಿ ಹೇಗೆ ಮಾಡುತ್ತಾರೆ. ಹಾಗೆ ಸಾಲ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ಗಳು ಬಿಟ್ಟು ಬಿಡುತ್ತದೆಯೇ…? ಸಾಲಕ್ಕೆ ಅಡವಿಟ್ಟ ಮನೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಜನರನ್ನು ಬೀದಿ ಪಾಲು ಮಾಡುವುದಿಲ್ಲವೇ..? ಸರಕಾರಕ್ಕೆ ಜನ ತೆರಿಗೆ ಹಣ ಆದಾಯವೇ ಇಲ್ಲದಿದ್ದರೆ ಕಟ್ಟೋದು ಹೇಗೆ? ನೀತಿ ನಿಯಮವೆಂದು ದುಡಿಮೆಗೆ ನಿರ್ಬಂಧ ಹೇರುವ ಆಡಳಿತ ಯಂತ್ರ ತೆರಿಗೆ ವಿನಾಯಿತಿ ನೀಡಬೇಕಲ್ಲವೇ…!

ದುಡಿಮೆಗೆ ದಾರಿ ಇರದೆ ಖರ್ಚುಗಳು ನಿಭಾಯಿಸುವುದು ಸವಾಲಾದಾಗ ಅಸಾಧ್ಯವೆನಿಸಿದಾಗ, ಆತ್ಮ ಹತ್ಯೆಗಳ ಸಂಖ್ಯೆ ಖಂಡಿತವಾಗಿ ಹೆಚ್ಚುತ್ತದೆ. ರೋಗಕ್ಕಿಂತ ರೋಗಕ್ಕಾಗಿ ಹಾಕುವ ನಿರ್ಬಂಧಗಳೇ ಜನರಿಗೆ ಆಗ ಮಾರಕವಾಗುತ್ತದೆ. ಜನರು ಹಿಡಿ ಶಾಪ ಹಾಕಲು ಶುರು ಮಾಡುತ್ತಾರೆ. ಅದಕ್ಕಿಂತ ಮೊದಲು ಜಿಲ್ಲಾಡಳಿತ, ಆಡಳಿತ ಯಂತ್ರ ಎಚ್ಚರಗೊಳ್ಳಬೇಕಿದೆ.

ನಿರ್ಬಂಧ ಹೇರುವುದಕ್ಕಿಂತ ರೋಗಕ್ಕೆ ಸುಧಾರಣಾ ಕ್ರಮ, ಜಾಗೃತಿ ಮೂಡಿಸುವುದು ಒಳಿತು. ಬ್ಯಾಂಕ್ ಗಳೂ ಸಹ ಸಾಲ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡವೇಕು. ಆಡಳಿತ ಯಂತ್ರ ತೆರಿಗೆಗಳಿಗೆ ವಿನಾಯಿತಿ ನೀಡಬೇಕು.

ಆಡಳಿತ ವ್ಯವಸ್ಥೆ ಜನರ ಒಳಿತಿಗೆ ಇರುವುದೇ ವಿನಃ ದರ್ಪ ದರ್ಬಾರು ಮಾಡಲು ಅಲ್ಲ. ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸರಕಾರಿ ಕಾರಿನಲ್ಲಿ ಓಡಾಡುವ ಅಧಿಕಾರಿ ವರ್ಗ ಜನರ ಕಷ್ಟ-ಕಾರ್ಪಣ್ಯಗಳನ್ನು ಸಮಾಜಕ್ಕೆ ಇಳಿದು ಕಣ್ಣಾರೆ ಕಂಡಾಗ ಮಾತ್ರ ಜನ ಪರ ಆಡಳಿತ ಸಾಧ್ಯವಾಗುತ್ತದೆ.

error: Content is protected !!