fbpx

ಗಾಂಧಿ ಹತ್ಯೆ ಮತ್ತು ಗೋಡ್ಸೆ

(ಪುಸ್ತಕ ವಿಮರ್ಶೆ)

9/6/2021 ರಂದು ಮಾದಾಪುರ ಸಮೀಪದ ಜಂಬೂರುಬಾಣೆಯಲ್ಲಿ ವಾಸವಿರುವ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿರುವ ಜೋಸೆಫ್ ಎಂಬುವವರ ಮನೆಗೆ ಅವರ ಯೋಗಕ್ಷೇಮ ವಿಚಾರಿಸುವ ಸಲುವಾಗಿ ಗೆಳೆಯರಾದ ವಿನು ಅಣ್ಣ ,ಸಮೀರ್ ,ಮನ್ಸೂರ್ ಮತ್ತು ರಂಜಿತ್ ನೊಂದಿಗೆ ಭೇಟಿ ನೀಡಿದ್ದೆ. ಅವರ ಯೋಗಕ್ಷೇಮ ವಿಚಾರಣೆಯ ನಂತರ ಅಲ್ಲೇ ಇರುವ ರಂಜಿತ್ ಕವಲಪಾರ ಅವರ ಮನೆಗೂ ಭೇಟಿ ನೀಡುವುದೆಂದು ದಿಢೀರ್ ನಿರ್ಧಾರವಾಯಿತು. ಮಳೆಯ ಜೊತೆಗೆ ಚಳಿಯೂ ಸ್ವಲ್ಪ ಇದ್ದುದರಿಂದ ಬಿಸಿ ಕಾಫಿಯನ್ನು ಸೇವಿಸಿದೆವು.ಭೇಟಿಯ ನೆನಪಿಗಾಗಿ ಗೆಳೆಯ ರಂಜಿತ್ ಕವಲಪಾರ ಒಂದು ಪುಸ್ತಕವನ್ನು ಬೇಗ ಮರಳಿಸಬೇಕೆಂಬ ಷರತ್ತಿನೊಂದಿಗೆ ನೀಡಿದ್ದನು. ಅದನ್ನು ಈ ಮೊದಲೇ ನಿಮ್ಮೊಂದಿಗೆ ನಾನು ಹೇಳಿಕೊಂಡಿದ್ದೆ.ಅದನ್ನೀಗ ಓದಿಮುಗಿಸಿ ವಿಮರ್ಶೆ ಬರೆಯಲು ಕುಳಿತಿದ್ದೇನೆ.ಆ ಪುಸ್ತಕದ ಹೆಸರು ” ಗಾಂಧೀ ಹತ್ಯೆ ಮತ್ತು ಗೋಡ್ಸೆ

ಈ ಪುಸ್ತಕದಲ್ಲಿ ದೇಶದ ಮೂರು ಐತಿಹಾಸಿಕ ಮತ್ತು ರಾಜಕೀಯ ನಾಯಕರುಗಳ ಹತ್ಯೆಯ ಬಗ್ಗೆ ಲೇಖಕರು ಬರೆದಿದ್ದಾರೆ.ನಾನು ಸಂಘಟನೆ ಮತ್ತು ರಾಜಕೀಯದ ಬಗ್ಗೆ ಅತಿಹೆಚ್ಚು ಆಸಕ್ತಿಯುಳ್ಳವನಾದ್ದರಿಂದ ರಂಜಿತ್ ರಾಜಕೀಯ ಮತ್ತು ಸಂಘಟನೆಗೆ ಸಂಬಂಧಿಸಿದ ಪುಸ್ತಕಗಳನ್ನೇ ಹೆಚ್ಚಾಗಿ ಸಜೆಸ್ಟ್ ಮಾಡುತ್ತಾರೆ.ಅಂತಹ ಪುಸ್ತಕಗಳಲ್ಲಿ ಇದೂ ಒಂದು.ಅಂದ ಹಾಗೆ ಈ ಕಥೆಯಲ್ಲಿ ಹೇಳಿರುವ ಹತ್ಯೆಗೊಳಗಾದ ರಾಜಕೀಯ ನಾಯಕರು ಬೇರೆ ಯಾರು ಅಲ್ಲ,ಅವರೇ ಮಹಾತ್ಮಾಗಾಂಧಿ, ಇಂಧಿರಾಗಾಂಧಿ ಹಾಗು ರಾಜೀವ್ ಗಾಂಧಿ.ಲೇಖಕರು ಕಥೆಯನ್ನು ಬರೆದಿರುವ ರೀತಿಯಲ್ಲೇ ನನ್ನ ವಿಮರ್ಶೆಯನ್ನು ಕೂಡ ಮೂರು ಭಾಗಗಳಾಗಿ ವಿಂಗಡಿಸುತ್ತೇನೆ.ಅದರಲ್ಲಿ ಮೊದಲನೆಯದೇ
ಗಾಂಧೀ ಹತ್ಯೆ

ಸ್ವತಂತ್ರ ಹೋರಾಟದ ಸಮಯದಲ್ಲಿ ದೇಶಕಂಡ ಅಹಿಂಸಾ ಚಳುವಳಿಯ ನೇತಾರರಾದ ಮಹಾತ್ಮಾ ಗಾಂಧಿಯವರ ಹತ್ಯೆ 30/1/1948ರಂದು ಬಿರ್ಲಾಭವನದಲ್ಲಿ ಸಂಜೆ 5 ಗಂಟೆಗೆ ನಡೆಯಿತು.ಗಾಂಧಿಯನ್ನು ಕೊಲೆಗೈದಿದ್ದು “ಹಿಂದೂರಾಷ್ಟ್ರ ದಳ” ಮತ್ತು “ಹಿಂದೂ ಮಹಾಸಭೆ” ಯ ನಾಯಕರಾದ ನಾಥೂರಾಮ್ ಗೂಢ್ಸೆ.ಈ ಪುಸ್ತಕವನ್ನು ಓದುವ ಮೊದಲು ಬರೀ ಗಾಂಧಿ ಬಗೆಗಿನ ಕೆಲವು ವಿಚಾರಗಳನ್ನು ಮಾತ್ರ ತಿಳಿದುಕೊಂಡಿದ್ದ ನನಗೆ ಗಾಂಧಿ ಮತ್ತು ಗೂಢ್ಸೆ ಇಬ್ಬರ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳೆರಡನ್ನೂ ತಿಳಿದುಕೊಳ್ಳಲು ಸಹಾಯಕವಾಯಿತು. ಗಾಂಧಿಜಿಯವರು ಸ್ವತಂತ್ರ ಹೋರಾಟಕ್ಕಾಗಿ ಇಡೀ ದೇಶದ ಜನರನ್ನು ಒಗ್ಗೂಡಿಸಲು ಅಹಿಂಸಾ ಮಾರ್ಗವನ್ನು ಆಯ್ಕೆಮಾಡಿ ಅಖಂಡ ಭಾರತ ದೇಶ ಬ್ರಿಟಿಷರ ವಿರುದ್ಧ ಹೋರಾಟ ಮಾಡಬೇಕೆಂದುಕೊಂಡಿದ್ದು ಒಳ್ಳೆಯ ವಿಚಾರವಾದರೆ ಅವರ ಈ ಸಿದ್ಧಾಂತವನ್ನು ದುರುಪಯೋಗ ಪಡಿಸಿಕೊಂಡ ಮಹಮ್ಮದ್ ಅಲಿ‌ ಜಿನ್ನಾರಂತಹ ನಾಯಕರುಗಳು ಮುಸ್ಲಿಂ ರಾಷ್ಟ್ರದ ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸಿ ದೇಶವನ್ನು ಇಬ್ಬಾಗ ಮಾಡಲು ಹವಣಿಸಿದರು. ಅದರಲ್ಲಿ‌ ಯಶಸ್ವಿಯಾದರು ಕೂಡ. ಆದರೆ ಈ ಸಂಧರ್ಭದಲ್ಲಿ ಅನೇಕರು ನಿರ್ಗತಿಕರಾದರು. ಪಾಕಿಸ್ತಾನದ ಉಗಮದ ನಂತರವಂತೂ ದೇಶದಲ್ಲಿ ನರಮೇದಗಳೇ ನಡೆದು‌ಹೋಯಿತು. ಅನೇಕ ಕುಟುಂಬಗಳು ಬೀದಿಗೆ ಬಂದವು ಎಂಬುದು ಅದರ ಅನಾನುಕೂಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಇದೇ ವಿಚಾರವಾಗಿ‌ ಅನೇಕ ಹಿಂದೂಪರ ಸಂಘಟನೆಗಳು ಗಾಂಧಿಯವರನ್ನು ದ್ವೇಷಿಸಲು ಶುರುಮಾಡಿತ್ತು.ಅದರಲ್ಲಿ ಗೂಢ್ಸೆಯೂ ಒಬ್ಬರು.ಗೂಢ್ಸೆಗೆ ಮತ್ತು ಗಾಂಧಿ ಹತ್ಯೆಯಲ್ಲಿ ಮುಖ್ಯ ಪಾತ್ರ ವಹಿಸಿದ ನಾರಾಯಣ ಆಪ್ಟೆಯವರಿಗೆ ಮರಣದಂಡನೆ ಶಿಕ್ಷೆ ದೊರೆತರೆ ಮದನ್ ಲಾಲ್ ಪವಾಹಗೆ ಜೀವಾವದಿ ಶಿಕ್ಷೆಯಾಯಿತು.ಇನ್ನೂ ಕೆಲವರು ನ್ಯಾಯಾಲಯದ ಕಣ್ಣಿಗೆ ಸಿಗದೇ ಮರೆಯಾದರು.ಎಂತಹ ದೇಶಪ್ರೇಮಿಯಾದರೂ ಒಬ್ಬ ವ್ಯಕ್ತಿಯನ್ನು ಕೊಲೆಗೈಯುವುದು ಕಾನೂನಿನ‌ ಪ್ರಕಾರ ಅಪರಾಧ.ಆ ನಿಟ್ಟನಲ್ಲಿ ಗಾಂಧಿಹತ್ಯೆಯ ಹಂತಕರನ್ನು ಅಪರಾಧಕ್ಕೆ ತಕ್ಕಂತೆ ಶಿಕ್ಷೆಗೊಳಪಡಿಸಿದ್ದನ್ನು ಶ್ಲಾಘಿಸಲೇಬೇಕು.

ಇಂಧಿರಾ ಗಾಂಧಿಯವರ ಹತ್ಯೆ
ಅಮೃತಸರದ ಸ್ವರ್ಣಮಂದಿರದ ಮೇಲೆ ‘ ಆಪರೇಷನ್ ಬ್ಲೂ ಸ್ಟಾರ್’ ಮೂಲಕ ದಿಲ್ಲಿಯಿಂದ ಬಂದ CRPF ಸೇನೆ ದಾಳಿ ನಡೆಸಿದ್ದೇ ಇಂದಿರಾಗಾಂಧಿ ಯವರ ಹತ್ಯೆಗೆ ಮುಖ್ಯ ಕಾರಣ.ಈ ದಾಳಿಯು ಸಿಖ್ ಸಮುದಾಯದ “ದಮ್ ದಮಿ ತಕ್ಸಲ್ ” ಎಂಬ ಧಾರ್ಮಿಕ ಪೀಠದ ಮುಖ್ಯಸ್ಥರಾದ ‘ಭಿಂದ್ರನ್ ವಾಲೆ’ ಯ ಹತ್ಯೆಯಾಯಿತು.ಇಡೀ ಸಿಖ್ ಸಮುದಾಯವನ್ನು ಪ್ರತ್ಯೇಕಿಸಿ ಖಲಿಸ್ತಾನ್ (ಸಿಖ್ಕರ ಪ್ರತ್ಯೇಕ ದೇಶ) ನಿರ್ಮಿಸುವುದು ಆತನ ಉದ್ದೇಶವಾಗಿತ್ತು.ಆದ್ದರಿಂದ ಇಡೀ ದೇಶದ ಸಿಖ್ಕರು ಅವನನ್ನು ಬೆಂಬಲಿಸಿದ್ದರು.ಅಮೇರಿಕಾದಲ್ಲಿ ನೆಲೆಸಿದ್ದ ಸಿಖ್ಕರು ಕೂಡ.ಆದರೆ ಇವರ ತಂತ್ರವನ್ನು ಹಿಮ್ಮೆಟ್ಟಿಸಲು ಸ್ವರ್ಣಮಂದಿರದ ಮೇಲೆ ದಾಳಿ ನಡೆದಿತ್ತು.ಈ ದಾಳಿಯಲ್ಲಿ ‘ಭಿಂದ್ರನ್ ವಾಲೆ’ ಸಾವನ್ನಪ್ಪಿದ್ದ.ಅಲ್ಲಿಂದ ಶುರುವಾಯುತು ಇಂಧಿರಾ ಗಾಂಧಿಯ ಸಾವಿನ ಕ್ಷಣಗಣನೆ.ಅದಕ್ಕೆ ದೇಶದ ಉನ್ನತ ಹುದ್ದೆಗಳಲ್ಲಿದ್ದ ಅನೇಕ ಸಿಖ್ಕರ ಬೆಂಬಲವೂ ಇತ್ತು.ಆ ಹತ್ಯೆಯ ಬಹುಮುಖ್ಯ ಪ್ಲಾನರ್ ಗಳಾದ ನಿವೃತ್ತ ಐ ಪಿ ಎಸ್ ಅಧಿಕಾರಿ ಸಿಮರಂಜಿತ್ ಸಿಂಗ್ ,ಐ ಎ ಎಸ್ ಅಧಿಕಾರಿ ಹರೀಂದರ್ ಸಿಂಗ್ ಮತ್ತು ಅಮೇರಿಕಾದ ಶ್ರೀಮಂತ ಸಿಖ್ಕನಾದ ಜಗಜಿತ್ ಸಿಂಗ್ .ಅವರ ಉಪಾಯದ ಪ್ರಕಾರ ಹತ್ಯಾಕಾರ್ಯವನ್ನು ಕಾರ್ಯರೂಪಕ್ಕೆ ತಂದವರು ಕಾವಲುಗಾರರಾದ ಸತ್ವಂತ್ ಸಿಂಗ್‌,ಕೇಹರ್ ಸಿಂಗ್.ಬಹಳಷ್ಟು ಘಟಾನುಗಟಿ ಸಿಖ್ಕರು ಇದರಲ್ಲಿ ಪಾಲ್ಗೊಂಡಿದ್ದರಾದರೂ ನೇಣುಗಂಬಕ್ಕೇರಿದ್ದು ಸತ್ವಂತ್ ಸಿಂಗ್ ಮತ್ತು ಕೇಹರ್ ಸಿಂಗ್ ಮಾತ್ರ.ಜಾತಿ ,ಮತ ,ಧರ್ಮದ ಮೇಲಿನ ಅತಿಯಾದ ಒಲವು‌ ಎಂತಹ ಘೋರ ಕೃತ್ಯಕ್ಕೆ ಪ್ರೇರೇಪಿಸುತ್ತದೆಂಬುದಕ್ಕೆ ಭಾರತದ ಉಕ್ಕಿನ ಮಹಿಳೆಯಾದ ಇಂದಿರಾಗಾಂಧಿ ಹತ್ಯೆ ಒಂದು ಉದಾಹರಣೆಗೆಯಾಗಿದೆ.

ರಾಜೀವ್ ಗಾಂಧಿ ಹತ್ಯೆ
ಇಂದಿರಾಗಾಂಧಿ ಹತ್ಯೆಯ ನಂತರ ಸಿಂಪತಿಯಿಂದಲೇ ಪ್ರಧಾನಮಂತ್ರಿ ಹುದ್ದೆ ಗಿಟ್ಟಿಸಿಕೊಂಡವರು ರಾಜೀವ್ ಗಾಂಧಿ.ಇವರೂ ಕೂಡ ದೇಶದ ಏಳಿಗೆಗೆ ಅನೇಕ ಕೊಡುಗೆಗಳನ್ನು ನೀಡಿದ್ದರಾದರೂ LTTE ಯ ಕೆಂಗಣ್ಣಿಗೆ ಗುರುಯಾಗಿ ಪ್ರಾಣ ಕಳೆದುಕೊಳ್ಳಬೇಕಾಯಿತು.LTTE ಮತ್ತು ರಾಜೀವ್ ಗಾಂಧಿಯವರ ನಡುವಿನ ಸಂಬಂಧ, ದ್ವೇಷ ಅಥವಾ ಅವರ‌ ಕೊಲೆಗೆ ಕಾರಣ ಈ ಪುಸ್ತಕದಲ್ಲಿ ಪ್ರಕಟಿಸಿಲ್ಲವಾದರೂ ಬೆಳಗೆರೆಯವರೇ ಬರೆದಿರುವ “ರಾಜೀವ್ ಗಾಂಧಿ ಹತ್ಯೆ ಏಕಾಯಿತು? ಹೇಗಾಯಿತು?” ಎಂಬ ಪುಸ್ತಕವನ್ನು ಓದಿ ತಿಳಿದುಕೊಳ್ಳಬೇಕೆಂದುಕೊಂಡಿದ್ದೇನೆ. LTTEಯ ‘ವುಮೆನ್ಸ್ ವಿಂಗ್ ಟೈಗರ್’ ಎನಿಸಿಕೊಂಡಿದ್ದ LTTE ಯ ಪ್ರಮುಖರಾದ ರಾಜರತ್ನಂ ಮಗಳಾದ ಧನು ಮಾನವ ಬಾಂಬ್ ಆಗಿ ರಾಜೀವ್ ಗಾಂಧಿಯನ್ನು ಹತ್ಯೆಮಾಡಿದಾಗ ತಾನೂ ಪ್ರಾಣ ಕಳೆದುಕೊಂಡಿದ್ದರಿಂದ ಈ ಹತ್ಯೆಗೆ ಸಂಚು ರೂಪಿಸಿದ ಮತ್ಯಾರು ನ್ಯಾಯಾಲಯಕ್ಕೆ ಸಿಗಲಿಲ್ಲ.

ಏನೇ ಆದರೂ ದೇಶ ಮತ್ತು ಕೋಮುವಿನೆಡೆಗಿನ ಅಂಧ ಪ್ರೇಮ ದೇಶದ ಮೂರು ನಾಯಕರನ್ನು ಬಲಿ ತೆಗೆದುಕೊಂಡಿದ್ದಂತೂ ನಿಜ.ಈ‌ಮೂರು ಹತ್ಯೆಗಳ‌ ಕುರಿತಾದ ಈ ಕಥೆಯನ್ನು ಓದಿದ ನಂತರ ಅನೇಕ ವಿಚಾರಗಳನ್ನು ತಿಳಿದುಕೊಂಡೆ ಹಾಗೆ ದೇಶಭಕ್ತರ ಮೇಲೆ ಭಯವೂ ಉಂಟಾಗಿದೆ.ಏಕೆಂದರೆ ಪ್ರಸ್ತುತ ಸಮಾಜದಲ್ಲಿ ಅಂತದ್ದೇ ಮನಸ್ಥಿತಿಯುಳ್ಳ ಅನೇಕ ಯುವಜನರು ಕಾಣುತ್ತಿರುವುದು ಅಪಾಯಕಾರಿ..

ದೀಪಕ್ ಪೊನ್ನಪ್ಪ

error: Content is protected !!