ಒಂದು ಎಡವಟ್ಟು, ಮುಗಿಯದ ಬಿಕ್ಕಟ್ಟು
ಅಂಕಣ-ವಾಸ್ತವ ಜಗತ್ತು
ವರ್ಚಸ್ವಿ, ಅಂಕಣಕಾರರು
ಯುನೈಟೆಡ್ ಕಿಂಗ್ಡಮ್ ಗೂ ಬಿಕ್ಕಟ್ಟುಗಳಿಗೂ ಅದೇನೋ ಅವಿನಾಭಾವ ಸಂಬಂಧವಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಇಂದಿಗೂ ಬಗೆಹರಿಯದ ಗಡಿ ವಿವಾದದ ಬಗ್ಗೆ ನಮಗೆಲ್ಲ ಚೆನ್ನಾಗೇ ತಿಳಿದಿದೆ. ಆದರೆ ಇದೇ ಬ್ರಿಟಿಷರು ಸೃಷ್ಟಿಸಿದ ಇನ್ನೊಂದು ಬಗೆಹರಿಯದ ಬಿಕ್ಕಟ್ಟಿದೆ. ಅದುವೇ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ದಶಕಗಳಿಂದ ಆರದೆ ಉಳಿದಿರುವ ವೈರತ್ವದ ಕಿಚ್ಚು.
ಅದು ೧೯೧೭, ಆರ್ಥರ್ ಜೇಮ್ಸ್ ಬಾಲ್ಫೋರ್ ಎಂಬ ಬ್ರಿಟಿಷ್ ಅಧಿಕಾರಿ ಪ್ರಖ್ಯಾತ ಬಾಲ್ಫೋರ್ ಡಿಕ್ಲಾರೇಶನ್ ಅಡಿಯಲ್ಲಿ ಯೆಹೂದಿಗಳ ಪುಣ್ಯಕ್ಷೇತ್ರವಾದ ಪ್ಯಾಲೆಸ್ಟೈನ್ ನಲ್ಲಿ ಯೆಹೂದಿಗಳಿಗೆ ಒಂದು ರಾಷ್ಟ್ರೀಯ ನೆಲೆ ಕಲ್ಪಿಸುವ ಮಾತುಗಳನ್ನಾಡಿತ್ತು.
ಆದರೆ ಪ್ಯಾಲೆಸ್ಟೈನ್ ನಲ್ಲಿ ಅಲ್ಲಿವರೆಗೂ ವಾಸಿಸುತ್ತಿದ್ದ ಪ್ಯಾಲೆಸ್ಟೈನ್ ಮುಸಲ್ಮಾನರನ್ನು ಪರಿಗಣಿಸದೆ ಇದ್ದದ್ದು ಒಂದು ಬಹುಕಾಲಕ್ಕೂ ಬಗೆಹರಿಯದ ಬಿಕ್ಕಟ್ಟಿಗೆ ಭದ್ರ ಅಡಿಪಾಯ ಹಾಕಿದ ಎಡವಟ್ಟಾಗಿತ್ತು. ವರ್ಷಗಳು ಉರುಳಿದಂತೆ ಯೆಹೂದ್ಯ ಸ್ವಾಸ್ಥ್ಯ ಚಳುವಳಿ(Zionism) ಬಲಗೊಂಡಂತೆ ಮತ್ತು ಯೂರೋಪ್ ನಲ್ಲಿ ಯೆಹೂದಿಗಳ ಮಾರಣಹೋಮ ಶುರುವಾದಂತೆ ಪ್ಯಾಲೆಸ್ಟೈನ್ ಗೆ ಯೆಹೂದಿಗಳು ದೊಡ್ಡ ಸಂಖ್ಯೆಯಲ್ಲಿ ಬಂದು ನೆಲೆ ನಿಂತರು.
೧೯೪೭ರ ಸುಮಾರಿಗೆ ಯೆಹೂದಿಗಳು ಮತ್ತು ಪ್ಯಾಲೆಸ್ಟೈನಿಗಳ ನಡುವೆ ತಿಕ್ಕಾಟ ತೀವ್ರವಾದಾಗ ಬ್ರಿಟೀಷರು ಎಲ್ಲಾ ಜವಾಬ್ದಾರಿಯನ್ನು ವಿಶ್ವಸಂಸ್ಥೆಗೆ ವಹಿಸಿ ಮೆಲ್ಲಗೆ ಕೈ ತೊಳೆದುಕೊಂಡರು. ಈ ಬಿಕ್ಕಟ್ಟನ್ನು ಸರಿ ಮಾಡಲು ಹೊರಟ ವಿಶ್ವಸಂಸ್ಥೆ ಎರಡು ರಾಷ್ಟ್ರಗಳನ್ನು ಸೃಷ್ಠಿಸಿ ಇದಕ್ಕೆ ಒಂದು ಶಾಶ್ವತ ಪರಿಹಾರ ಹುಡುಕುವ ಪ್ರಯತ್ನ ಮಾಡಿತು. ಇದಕ್ಕೆ ಹೆಚ್ಚಿನ ಯೆಹೂದಿಗಳು ಒಪ್ಪಿದರೂ ಪ್ಯಾಲೆಸ್ಟೈನಿಯರು ವಿರೋಧ ವ್ಯಕ್ತಪಡಿಸಿದರು.
೧೯೪೮ ರ ಸುಮಾರಿಗೆ ಯಾವಾಗ ಇಸ್ರೇಲ್ ತನ್ನನ್ನು ಸ್ವತಂತ್ರ ಯೆಹೂದಿಗಳ ದೇಶ ಎಂದು ಘೋಷಿಸಿತೋ ಅರಬ್ ರಾಷ್ಟ್ರಗಳು ಇಸ್ರೇಲ್ ಮೇಲೆ ಯುದ್ಧ ಸಾರಿದವು. ಯುದ್ಧದ ಅಂತ್ಯದ ಹೊತ್ತಿಗೆ ಇಸ್ರೇಲ್ ವಿಶ್ವ ಸಂಸ್ಥೆ ತೀರ್ಮಾನಿಸಿದ ಪ್ರದೇಶಕ್ಕಿಂತ ೫೦%ಕ್ಕೊ ಹೆಚ್ಚು ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು.
೧೯೬೪ರಲ್ಲಿ ಸ್ಥಾಪನೆಯಾದ ಪ್ಯಾಲೆಸ್ಟೈನ್ ಲಿಬರೇಷನ್ ಪಾರ್ಟಿ ಮತ್ತು ೧೯೮೭ರಲ್ಲಿ ಹುಟ್ಟಿಕೊಂಡ ಹಮಾಸ್ ಎಂಬ ಉಗ್ರ ಸಂಘಟನೆಯು ಪ್ಯಾಲೆಸ್ಟೈನಿ ಮತ್ತು ಇಸ್ರೇಲಿಗಳ ನಡುವೆ ಹೋರಾಟವನ್ನು ಇನ್ನಷ್ಟು ತಾರಕಕ್ಕೇರಿಸಿತು. ೧೯೯೩ರ ಸುಮಾರಿಗೆ ಗೋಲನ್ ಪ್ರದೇಶ , ವೆಸ್ಟ್ ಬ್ಯಾಂಕ್ ಪ್ರದೇಶ ಸೇರಿದಂತೆ ಇಸ್ರೇಲ್ ೭೮% ಪ್ರದೇಶವನ್ನು ವಶಪಡಿಸಿಕೊಂಡಾಗಿತ್ತು.
೧೯೯೩ರಲ್ಲಿ ಎರಡು ಕಡೆಯವರು ಸಹಿ ಮಾಡಿದ ಓಸ್ಲೋ ಒಪ್ಪಂದ ಮತ್ತು ಎರಡು ರಾಷ್ಟ್ರಗಳು ಒಬ್ಬರನ್ನೊಬ್ಬರು ಗುರುತಿಸಿದ್ದು ಮತ್ತು ಅದಾದ ನಂತರ ಇಸ್ರೇಲ್ ಕೆಲವು ಪ್ರದೇಶಗಳಿಂದ ಹಿಂದೆ ಸರಿದದ್ದು ಒಂದು ಹೊಸ ಪರಿಹಾರದ ಆಶಾಕಿರಣದ ರೀತಿ ಕಂಡಿತ್ತಾದರು ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸಿದರೆ ಇದಕ್ಕೆ ಸದ್ಯಕ್ಕೆ ಅಂತ್ಯವಿದ್ದಂತೆ ಕಾಣುತ್ತಿಲ್ಲ.
ಇದಕ್ಕೆ ಕಾರಣ ಇತ್ತೀಚೆಗೆ ಅಮೆರಿಕ ಜೆರುಸಲೇಮ್ ನ್ನು ಇಸ್ರೇಲ್ ನ ಅಧಿಕೃತ ರಾಜಧಾನಿಯಾಗಿ ಗುರುತಿಸಿ ತನ್ನ ರಾಯಭಾರ ಕಛೇರಿಯನ್ನು ಅಲ್ಲಿ ಸ್ಥಾಪಿಸಿರುವುದು. ಅದಲ್ಲದೇ, ಇತ್ತೀಚೆಗೆ ಟ್ರಂಪ್ ಸರ್ಕಾರ ಪಶ್ಚಿಮ ಏಷ್ಯಾ ದಲ್ಲಿ ಶಾಂತಿ ಸ್ಥಾಪನೆಗಾಗಿ ಹೊರಡಿಸಿರುವ
ಸಮೃದ್ಧಿಗಾಗಿ ಶಾಂತಿ ಪ್ರಸ್ತಾಪಗಳನ್ನು ಗಮನಿಸಿದರೆ ಅದು ಅಮೆರಿಕಾ ಇಸ್ರೇಲ್ ಪರವಾಗಿ ಪ್ಯಾಲೆಸ್ಟೈನಿಗಳ ಮೇಲೆ ಒತ್ತಾಯ ಪೂರಕವಾಗಿ ಹೇರಲು ಹೊರಟಿರುವ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತದೆ. ಇದರ ನಡುವೆ ಭಾರತವೂ ಕೂಡ ಎರಡು ದೇಶಗಳನ್ನು ಸೂಕ್ಷ್ಮವಾಗಿ ಪರಿಗಣನೆಗೆ ತೆಗೆದುಕೊಂಡು ತನ್ನ ವಿದೇಶಾಂಗ ನೀತಿಯನ್ನು ಅನುಸರಿಸಿದೆ. ಭಾರತ ಪ್ಯಾಲೆಸ್ಟೈನ್ ಅನ್ನು ಒಂದು ದೇಶವಾಗಿ ಗುರುತಿಸಿ ಅದರ ಸ್ವಾತಂತ್ರ್ಯಕ್ಕೆ ದೊಡ್ಡ ದ್ವನಿಯಲ್ಲಿ ಬೆಂಬಲಿಸಿದ್ದರೂ ಅದೇ ರೀತಿಯಲ್ಲಿ ಇಸ್ರೇಲ್ ರಾಷ್ಟ್ರದೊಂದಿಗೆ ಸಂಬಂಧ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದೆ.
ಇದು ಕಳೆದ ಕೆಲವು ದಶಕಗಳಿಂದ ಹಲವಾರು ಕ್ಷೇತ್ರಗಳಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಸಂಬಂಧವನ್ನು ಗಮನಿಸಿದರೆ ತಿಳಿಯುತ್ತದೆ. ವಿಶ್ವಸಂಸ್ಥೆ ಮತ್ತು ಬಹುತೇಕ ರಾಷ್ಟ್ರಗಳು ಒಪ್ಪಿರುವಂತೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎಂಬ ಎರಡು ರಾಷ್ಟ್ರಗಳನ್ನು ಸ್ಥಾಪಿಸಿ ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ನೆಲೆಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ ಎಂಬುದಷ್ಟೇ ಸದ್ಯದ ವಾಸ್ತವ.
ವರ್ಚಸ್ವಿ