ಇದು ಯಾರದ್ದೋ ಕಥೆ ಅಲ್ಲ…ನನ್ನ ಜೀವನದ ರಕ್ತ ಚರಿತ್ರೆ!
ಬರಹ: ಹೇಮಂತ್ ಸಂಪಾಜೆ
ಸದಾ ಬೇರೆಯವರ ಜೀವನದ ಕಷ್ಟಗಳ ಬಗ್ಗೆಯೇ ಬರೆಯುವ ನನಗೆ ಯಾಕೋ ನನ್ನದೇ ಜೀವನದ ಸತ್ಯ ಸಂಗತಿಗಳ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಸಿನಿಮಾ ಕಥೆಗೂ ಸ್ಫೂರ್ತಿಯಾಗಬಲ್ಲದು ನನ್ನ ಜೀವನ, ಪೂರ್ತಿ ಓದಿ ಮುಗಿಯುವಷ್ಟರಲ್ಲಿ ಪತ್ರಕರ್ತ ಹೇಮಂತ್ ಸಂಪಾಜೆ ಜೀವನದಲ್ಲಿ ಇಷ್ಟೆಲ್ಲ ನಡೆದಿತ್ತಾ? ಅಂತ ಅಚ್ಚರಿಯಾಗಲೂಬಹುದು, ಕೆಲವರ ಕಣ್ಣಂಚಿನಲ್ಲಾದರೂ ನೀರು ಜಿನುಗಬಹುದು. 29 ವರ್ಷಗಳ ಹಿಂದೆ ನನ್ನ ಮನೆಯಲ್ಲಾದ ಘನಘೋರ ದುರಂತ ಕಥೆಯಿದು.
ದಟ್ಟ ಕಾನನದ ನಡುವಿನ ಒಂಟಿ ಮನೆಯಲ್ಲಿ ಒಂದೂವರೆ ವರ್ಷದ ಪುಟ್ಟ ಮಗುವಾಗಿದ್ದ ನಾನು ತಡರಾತ್ರಿ ನೆತ್ತರ ಕೋಡಿಯ ನಡುವೆ ತೊಟ್ಟಿಲಲ್ಲಿದ್ದ 6 ತಿಂಗಳ ತಂಗಿಯ ಜತೆ ಅಳುತ್ತಾ ಕೂತಿದ್ದೆ, ನನ್ನ ಊರಿನ ಜನ ಈ ಕರಾಳ ರಾತ್ರಿಗೆ ಸಾಕ್ಷಿಯಾಗಿದ್ದಾರೆ. ಅವರ ಸಹಾಯದಿಂದ ಇತಿಹಾಸ ಪುಟಗಳ ಸೇರಿದ ವಿಚಾರವೊಂದನ್ನು ಕೆದಕಿ ಬರೆಯುತ್ತಿದ್ದೇನೆ. ನಿಮ್ಮೆದುರು ಈ ವಿಚಾರ ಬರೆಯುವಾಗ ನನ್ನ ಕೈಗಳು ನಡುಗುತ್ತಿವೆಯಾದರೂ ಗಟ್ಟಿ ಮನಸ್ಸು ಮಾಡಿ ಬರೆಯುವ ಸಾಹಸ ಮಾಡಿದ್ದೇನೆ….
1988, ಅಕ್ಟೋಬರ್ 15 ನನ್ನ ಜನನ, ಕೊಡಗು ಜಿಲ್ಲೆಯ ಸಂಪಾಜೆ ವಲಯದ ಚೆಂಬು ಗ್ರಾಮದ ಗಿರಿಯಪ್ಪ- ಪಾರ್ವತಿ ದಂಪತಿಗಳ ಏಕೈಕ ಪುತ್ರ. ನನ್ನೂರು ಕುಗ್ರಾಮ, ಕಡಿದಾದ ದಾರಿ ಬೆಟ್ಟ ಗುಡ್ಡಗಳ ನಡುವೆ ಇಲ್ಲಿನ ಜನರ ಜೀವನ, ಇತ್ತೀಚೆಗಿನ ವರ್ಷಗಳಲ್ಲಿ ಸೋಲಾರ್, ವಿದ್ಯುತ್ ಸಂಪರ್ಕ ಸಿಕ್ಕಿದೆಯಾದರೂ ಅಂದಿನ ದಿನಗಳಲ್ಲಿ ಚಿಮಣಿ ಎಣ್ಣೆಯ ದೀಪದಡಿಯೇ ಗ್ರಾಮದ ಜನರ ಬದುಕು..
ನನ್ನ ಅಜ್ಜ ಸೋಮಯ್ಯ- ಅಜ್ಜಿ ಪೂವಮ್ಮ, ಅವರಿಗೆ 8 ಜನ ಮಕ್ಕಳು, ಈ ಪೈಕಿ ಒಬ್ಬಳು ಹೆಣ್ಣು (ಮದುವೆ ಮಾಡಿ ಕೊಟ್ಟಾಗಿತ್ತು), ಜಗದೀಶ ಹಿರಿಯಣ್ಣ (ವಿಕಲಚೇತನ), ಹೊನ್ನಪ್ಪ, ಗಿರಿಯಪ್ಪ, ವಾಸುದೇವ, ನಾರಾಯಣ, ರವೀಂದ್ರ ಗಂಡು ಮಕ್ಕಳು, ದಂಪತಿಗೆ ಮತ್ತೊಬ್ಬ ಮಗನಿದ್ದ ಅವನೆ ಶೇಷಪ್ಪ….ನನ್ನಜ್ಜನ 3ನೇ ಮಗ.. ಸಕಲ ತಾಮಸ ದುಷ್ಟ ಗುಣಗಳನ್ನು ಹೊಂದಿದ್ದ, ಅತ್ಯಂತ ಕ್ರೂರ ವ್ಯಕ್ತಿ, ಈ ನೀಚನಿಂದಲೇ 1989-90ರ ಸಮಯದಲ್ಲಿ ನನ್ನ ಕುಟುಂಬದಲ್ಲಿ ನಡೆಯಬಾರದ ದುರಂತ ಸಂಭವಿಸಿಯೇ ಬಿಟ್ಟಿತ್ತು.
ದುರಂತಕ್ಕೂ ಮೊದಲು ನಮ್ಮ ಕುಟುಂಬ ಹಾಲು ಜೇನಿನಂತಿತ್ತು , ದಾನ ಧರ್ಮ ಹಬ್ಬಹರಿ ದಿನ ಎಲ್ಲವೂ ಜೋರಾಗಿತ್ತು. ನನ್ನ ಅಜ್ಜ ಸೋಮಯ್ಯರ ಮಾರ್ಗದರ್ಶನಲ್ಲಿ ಎಲ್ಲವು ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿತ್ತು., ಆದರೆ ವಿಧಿ ಹೆಚ್ಚು ಸಮಯ ಈ ಸಂತೋಷವನ್ನು ಉಳಿಸಲಿಲ್ಲ, ಆಸ್ತಿಗಾಗಿ ಅದಾಗಲೇ ಹೊಂಚು ಹಾಕುತ್ತಿದ್ದ 2ನೇ ಮಗ ಶೇಷಪ್ಪ ಕೊಲೆಯ ಸಂಚು ರೂಪಿಸಿದ್ದ, ಹೇಗಾದರೂ ಮಾಡಿ ತನ್ನವರನ್ನೆಲ್ಲ ಕೊಂದಾದರೂ ಸರಿ ಇಡೀ ಆಸ್ತಿಯನ್ನು ಕಬಳಿಸಬೇಕೆಂದು ತಂತ್ರ ಹೆಣೆದಿದ್ದ.
ಒಂದು ದಿನ ತಡ ರಾತ್ರಿ ದಟ್ಟವಾದ ಕಾಡಿನ ನಡುವೆ ತನ್ನವರ ಮನೆಗಳ ಮೇಲೆ ಮೃಗದಂತೆ ಎರಗಿದ್ದ. ಮೂರು ಕತ್ತಿ, ಒಂದು ನಾಡ ಪಿಸ್ತೂಲ್ ಬಳಸಿ ಅಟ್ಟಹಾಸ ಮೆರೆದಿದ್ದ, ಜನ್ಮಕೊಟ್ಟ ತಂದೆ ಸೋಮಯ್ಯ, ತಾಯಿ ಪೂವಮ್ಮ, ತಮ್ಮ ನಾರಾಯಣ, ಅತ್ತಿಗೆ ಪಾರ್ವತಿಯನ್ನು ಕತ್ತಿಯಿಂದ ಬರ್ಬರವಾಗಿ ಕಡಿದು ಹತ್ಯೆ ಮಾಡಿದ್ದ, ಮತ್ತೋರ್ವ ಸಹೋದರ ವಾಸುದೇವನಿಗೆ ನಾಡ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದ, ತಮ್ಮ ಗಿರಿಯಪ್ಪನಿಗೂ ಭೀಕರವಾಗಿ ಕಡಿದಿದ್ದ (ಇಬ್ಬರೂ ಪ್ರಾಣಾಪಾಯದಿಂದ ಪಾರಾದವರು). ಇಷ್ಟೆಲ್ಲವನ್ನು ಕತ್ತಲಾಗುವುದನ್ನೇ ಕಾದು ಸಂಚು ರೂಪಿಸಿದ್ದ ಶೇಷಪ್ಪ.. ಶೇಷಪ್ಪನ ಕತ್ತಿಯ ಏಟಿನ ಹೊಡೆತಕ್ಕೆ ಮನೆಯ ಮೇಲ್ಛಾವಣಿಗೆಲ್ಲ ನೆತ್ತರು ಚಿಮ್ಮಿತ್ತಂತೆ, ಅದರಲ್ಲೂ ಮಲಗಿದ್ದ ಸಹೋದರ ನಾರಾಯಣನ ಮೇಲಿನ ದಾಳಿ ಅತ್ಯಂತ ಭೀಕರವಾಗಿತ್ತು ಎಂದು ಹತ್ಯೆಯ ದಿನಕ್ಕೆ ಸಾಕ್ಷಿಯಾಗಿದ್ದ ಊರವರು ಹೇಳುತ್ತಾರೆ..
ಒಂದೇ ಮನೆಯಲ್ಲಿ ಇಷ್ಟೆಲ್ಲ ಹತ್ಯೆಗಳನ್ನು ಮಾಡಿ ಅಣತಿ ದೂರದಲ್ಲಿ ಪ್ರತ್ಯೇಕವಾಗಿ ವಾಸವಿದ್ದ ನಮ್ಮ ಮನೆಗೂ ಶೇಷಪ್ಪ ಹೆಜ್ಜೆ ಇಟ್ಟಿದ್ದಾನೆ, ಅವರನ್ನೆಲ್ಲ ಕೊಂದೆ ಇನ್ನು ನಿಮ್ಮನ್ನೂ ಬಿಡುವುದಿಲ್ಲ ಎಂದು ತಡರಾತ್ರಿ ಹರಿತವಾದ ಕತ್ತಿ ಝಳಪಿಸುತ್ತ ಬಂದಿದ್ದಾನೆ.
ನನ್ನ ಅಪ್ಪನನ್ನು ಮನೆಯಿಂದ ಹೊರಗೆ ಬರುವಂತೆ ಕೂಗಿದ್ದಾನೆ, ಮನೆಯ ಕಿಟಕಿಯಿಂದ ಇಣುಕಿ ನೋಡಿದ ನನ್ನ ಅಮ್ಮ ಪಾರ್ವತಿ….ಶೇಷಪ್ಪನ ಮೈಮೇಲಿದ್ದ ರಕ್ತದ ಕಲೆಗಳನ್ನು ನೋಡಿ ಗಾಬರಿಯಾಗಿದ್ದಾರೆ. ಅಪ್ಪನನ್ನು ಕರೆದಿದ್ದಾರೆ..ಅಪ್ಪ ಕಿಟಕಿಯ ಸಮೀಪ ಬರುತ್ತಿದ್ದಂತೆ ಶೇಷಪ್ಪ ನಾಟಕವಾಡಲು ಶುರು ಮಾಡಿದ್ದಾನೆ, ‘ನಮ್ಮ ಮನೆಯಲ್ಲಿ ವಾಸುದೇವ- ನಾರಾಯಣ ಸಹೋದರರ ನಡುವೆ ಜಗಳವಾಗುತ್ತಿದೆ, ಕತ್ತಿಯಿಂದ ಕಡಿದುಕೊಂಡಿದ್ದಾರೆ, ನೀನು ಬೇಗ ಮನೆಗೆ ಬಾ, ಜಗಳ ಬಿಡಿಸು’ ಎಂದಿದ್ದಾನೆ, ಶೇಷಪ್ಪ ಧರಿಸಿದ್ದ ವಸ್ತ್ರದ ಮೇಲಿದ್ದ ರಕ್ತದ ಕಲೆ ನೋಡಿ ಹೆದರಿದ್ದ ನನ್ನಮ್ಮ ಪಾರ್ವತಿ ಅಪ್ಪನಿಗೆ ‘ಬಾಗಿಲು ತೆಗೆಯಬೇಡಿ’ ಎಂದು ಕಾಲಿಗೆ ಬಿದ್ದು ಬೇಡಿಕೊಂಡಿದ್ದರು, ‘ಅಣ್ಣ-ತಮ್ಮಂದಿರು ಹೊಡೆದಾಡಿ ಪ್ರಾಣ ಹೋಗುವ ಸ್ಥಿತಿಯಲ್ಲಿರುವಾಗ ಹೋಗುವುದು ಬೇಡ ಅನ್ನುತ್ತೀಯಾ’ ಎಂದು ಅಮ್ಮನನ್ನು ತಳ್ಳಿ ಮನೆ ಬಾಗಿಲು ತೆಗೆದೆ ಬಿಟ್ಟರು ಅಪ್ಪ, ಇದೆ ಸಮಯಕ್ಕಾಗಿ ಕಾಯುತ್ತಿದ್ದ ಶೇಷಪ್ಪ ಹಿಂದೆ ಅಡಗಿಸಿ ಇಟ್ಟಿದ್ದ ಕತ್ತಿಯನ್ನು ಬೀಸಿಯೆ ಬಿಟ್ಟ, ಅಪ್ಪನ ಎದೆ ಭಾಗಕ್ಕೆ ಬಲವಾಗಿ ಕತ್ತಿಯ ಏಟು ಬಿದ್ದಿತ್ತು, ಮತ್ತೊಂದು ಸಲ ಶೇಷಪ್ಪ ಕತ್ತಿ ಬೀಸಿದಾಗ ಅಮ್ಮ ಅಪ್ಪನನ್ನು ತಳ್ಳಿ ಕತ್ತು ಕೊಟ್ಟರು, ಶೇಷಪ್ಪನ ಕತ್ತಿ ಏಟಿಗೆ ನನ್ನಮ್ಮ ಕುಸಿದು ನೆಲಕ್ಕೆ ಬಿದ್ದರು, ಪ್ರಾಣ ಹೋಗುವ ಸಂದರ್ಭದಲ್ಲೂ ಅಪ್ಪನಿಗೆ ‘ಓಡಿ ತಪ್ಪಿಸಿಕೊಳ್ಳಿ’ ಎಂದರು, ಕಾಡಿನ ನಡುವೆ ಅಪ್ಪ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಕತ್ತಲಿನಲ್ಲೇ ಓಡಿದರು, ಇತ್ತ ಅಮ್ಮನ ಶವದ ಪಕ್ಕದಲ್ಲಿ ರಕ್ತದ ಮಡುವಿನಲ್ಲಿ ಒಂದೂವರೆ ವರ್ಷದ ಮಗು ನಾನು, ತೊಟ್ಟಿಲಲ್ಲಿ ಆರು ತಿಂಗಳ ತಂಗಿ ಸುಜ್ಯೋತಿ ಬೆಳಗ್ಗಿನ ತನಕ ಅನಾಥರಾಗಿ ಬಿದ್ದಿದ್ದೆವು, ವಿಶೇಷವೆಂದರೆ ರಕ್ತದ ಮಡುವಿನಲ್ಲಿ ಅಮ್ಮನ ಶವದ ಪಕ್ಕದಲ್ಲಿ ಕುಳಿತಿದ್ದ ನಾನು ಆಟವಾಡುತ್ತಾ ಇದ್ದೆನಂತೆ (ಊರವರು ಕಣ್ಣಾರೆ ಕಂಡವರು ಹೇಳಿದ್ದು), ಮಡಿಕೇರಿಯಿಂದ ಕಾಲು ನಡಿಗೆ ಮೂಲಕ ಸಾಗುವ ಹಳ್ಳಿಗೆ ಪೊಲೀಸ್ ಬಂದು ಶವಗಳನ್ನು ತೆಗೆಯಲು ಸಾಕಷ್ಟು ಸಮಯ ಹಿಡಿದಿತ್ತು, ಕೊನೆಗೂ ಶೇಷಪ್ಪ ನನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದರು…
ಒಂದು ರಾತ್ರಿ ಬೆಳಗ್ಗೆ ಆಗುವಷ್ಟರಲ್ಲಿ ನಾಲ್ಕು ಹೆಣಗಳು ನಮ್ಮ ಮನೆಯಲ್ಲಿ ಬಿದ್ದಿದ್ದವು. ಬೆಳಗಾಗುತ್ತಿದ್ದಂತೆ ಹತ್ಯಾಕಾಂಡದ ಸುದ್ದಿ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯನ್ನು ನಡುಗಿಸಿತು, ಮರುದಿನ ಪ್ರಮುಖ ದಿನಪತ್ರಿಕೆಗಳ ಹೆಡ್ ಲೈನ್ ನಲ್ಲಿ ಭೀಕರ ಕೊಲೆಯ ಬಗೆಗಿನ ಸುದ್ದಿ ದಪ್ಪದಪ್ಪ ಅಕ್ಷರಗಳಲ್ಲಿ ಮುದ್ರಣವಾಗಿತ್ತು, ಅಂದಿನ ಕಾಲದಲ್ಲಿ ಇಂದಿನಂತೆ ಹೆಚ್ಚು ದೃಶ್ಯ ಮಾಧ್ಯಮಗಳಿದ್ದರೆ ಬಹುಶಃ ರಾಷ್ಟ್ರ ಮಟ್ಟದಲ್ಲಿ ಸದ್ದಾಗುತ್ತಿತ್ತು ಈ ಹತ್ಯಾಕಾಂಡ ಸುದ್ದಿ.
ಇತ್ತ ಅನಾಥರಾದ ನಾವಿಬ್ಬರು ಪ್ರತ್ಯೇಕವಾದೆವು, ತಂಗಿ ನನ್ನ ತಾಯಿ ಮನೆ ಸೇರಿದಳು, ನನ್ನನ್ನು ಸೋಮಯ್ಯರ 3ನೇ ಪುತ್ರ ಹೊನ್ನಪ್ಪ (ದೊಡ್ಡಪ್ಪ) ಸಂಪಾಜೆಯಲ್ಲಿದ್ದ ಅವರ ಮನೆಗೆ ಕರೆದುಕೊಂಡು ಬಂದರು, ಅವರ ಪತ್ನಿ ಪದ್ಮಾವತಿ (ದೊಡ್ಡಮ್ಮ), ದಂಪತಿಗೆ ಮಕ್ಕಳಿರಲಿಲ್ಲ, ನನ್ನಲ್ಲೇ ಅವರು ಮಗನನ್ನು ಕಂಡರು, ಮತ್ತೊಂದು ಕಡೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಸ್ವಂತ ಅಪ್ಪ ವಾಪಸ್ ಬಂದು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದರು, ಆದರೆ ದೊಡ್ಡಮ್ಮನಲ್ಲೇ ಅಮ್ಮನನ್ನು ಕಂಡಿದ್ದರಿಂದ ನಾನು ಅವರ ಜತೆ ಹೋಗಿರಲಿಲ್ಲವಂತೆ, ಒಂದೂವರೆ ವರ್ಷದಿಂದ ಅವರ ಜತೆ ಸಂಪಾಜೆಯಲ್ಲಿಯೇ ಬೆಳೆದೆ, ಕಷ್ಟದಲ್ಲಿದ್ದರೂ ಅವರು ನನ್ನನ್ನು ಚೆನ್ನಾಗಿ ಬೆಳೆಸಿದರು. ನಿಜ ಹೇಳ್ತೆನೆ …ನನ್ನ ಸ್ವಂತ ಅಮ್ಮನನ್ನು ನೋಡಿದ ನೆನಪೂ ನನಗಿಲ್ಲ, ಆದರೆ ಅಪ್ಪ-ಅಮ್ಮನ ಗುರುತು ಹಿಡಿಯುವ ವಯಸ್ಸಿಗೆ ನಾನು ಬಂದ ಸಂದರ್ಭದಲ್ಲಿ ಅವರೇ ನನಗೆ ಎಲ್ಲ ಆಗಿದ್ದರು. ಹೈಸ್ಕೂಲ್ ಗೆ ನಾನು ಹೋಗುವ ತನಕ ನನ್ನಿಂದ ಎಲ್ಲ ವಿಷಯಗಳನ್ನು ಮುಚ್ಚಿಟ್ಟಿದ್ದರು. ಆದರೆ ಮನೆಯಲ್ಲಿ ಬಚ್ಚಿಟ್ಟಿದ್ದ ಅಂದಿನ ಸುದ್ದಿ ಪತ್ರಿಕೆಗಳು, ನ್ಯಾಯಾಲಯದ ವಿವರಗಳುಳ್ಳ ಕಡತಗಳು ಸುಳ್ಳು ಹೇಳುವುದಿಲ್ಲ, ವಿಷಯ ಗೊತ್ತಾದ ನಂತರ ಅಮ್ಮನ ನೆನೆದು ಕಣ್ಣೀರಾದೆ, ಅಪ್ಪನಿಗಾಗಿ ಜೀವ ತ್ಯಾಗ ಮಾಡಿದ ನನ್ನ ಹೆತ್ತಮ್ಮ ಕರುಣಾಮಯಿ ಎನಿಸಿತು.
ಯಾವ ಆಸ್ತಿಯೂ ಬೇಡ ಬದುಕಿನಲ್ಲಿ ನೆಮ್ಮದಿ ಇದ್ದರೆ ಸಾಕು ಅನ್ನುವ ನನ್ನ ಸಾಕು ತಂದೆ ಹೊನ್ನಪ್ಪ- ಪದ್ಮಾವತಿ ಅದೆಷ್ಟೋ ನೋವುಗಳನ್ನು ನುಂಗಿ ನನ್ನನ್ನು ಸಾಕಿದ್ದಾರೆ, ದೊಡ್ಡಪ್ಪನನ್ನು ನಾನು ಪ್ರೀತಿಯಿಂದ ‘ಪೊಪ್ಪ’ ಅಂತ ಕರೆಯುತ್ತೇನೆ, ಸಂಪಾಜೆಯಲ್ಲಿ ರಿಕ್ಷಾ ಓಡಿಸಿ ಬಾಡಿಗೆ ಮನೆಯಲ್ಲಿದ್ದುಕೊಂಡು ನನ್ನ ಸಾಕಿದ್ದಾರೆ. ಘಟನೆಯಿಂದ ನೊಂದಿದ್ದ ಪೊಪ್ಪ ಊರಲ್ಲಿರುವ ಸ್ವಂತ ಆಸ್ತಿಯ ಬಗ್ಗೆ ಚಿಂತೆ ಮಾಡಲಿಲ್ಲ, ಆಸ್ತಿ ಹೋದರೆ ಹೋಯಿತು ನಮಗಾಗಿ ಒಬ್ಬ ಮಗನನ್ನು ಕೊಟ್ಟಿದ್ದಾನೆ, ಅವನನ್ನು ಚೆನ್ನಾಗಿ ಓದಿಸಬೇಕು ಎಂದು ಹಗಲು-ರಾತ್ರಿ ಕಷ್ಟಪಟ್ಟರು, ಈಗಲೂ ಊರಿನಲ್ಲಿ ನಮ್ಮದು ಅನ್ನುವ ಸ್ವಂತ ಮನೆಯಿಲ್ಲ, ನನ್ನ ಮಗ ಇಂದಲ್ಲ ನಾಳೆ ಮನೆ ಕಟ್ಟಿಸುತ್ತಾನೆ ಅನ್ನುವ ಕನಸು ಪೊಪ್ಪನದ್ದು, ರಿಕ್ಷಾದ ಕಿಕ್ಕರ್ ಎಳೆದು ನನ್ನ ಪೊಪ್ಪನ ಕೈ ತುಂಬಾ ಗುಳ್ಳೆಗಳು ನೋಡಿದಾಗ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಉಕ್ಕೇರುತ್ತಿತ್ತು, ನಾನೂ ಶಾಲೆ, ಕಾಲೇಜು ರಜಾ ದಿನಗಳಲ್ಲಿ ಬೇರೆಯವರ ತೋಟಗಳಿಗೆ ಕೆಲಸಕ್ಕೆ ಹೋಗಿ ಕಾಲೇಜು ಫೀಸ್ ಸಂಪಾದಿಸಿದ್ದೇನೆ, ಕಷ್ಟಗಳ ನಡುವೆ ನನ್ನ ಪೊಪ್ಪ ನನಗೆ ನ್ಯಾಯವಾಗಿ ಬದುಕುವುದನ್ನು ಕಲಿಸಿಕೊಟ್ಟಿದ್ದಾರೆ, ಇಂದಿಗೂ ಕಷ್ಟದಲ್ಲೇ ಇದ್ದೇವೆ, ಆದರೆ ಯಾರ ಎದುರು ಭಿಕ್ಷೆ ಬೇಡಿಲ್ಲ, ನ್ಯಾಯವಾಗಿ ಬದುಕಿದ್ದೇವೆ. ಸದ್ಯ ಬೆಂಗಳೂರಿನಲ್ಲಿರುವ ನನಗೆ ದಿನಕ್ಕೆ ಕನಿಷ್ಟ ಎಂದರೂ ನನ್ನ ಪೊಪ್ಪ ಎರಡು ಮೂರು ಸಲ ಫೋನ್ ಮಾಡುತ್ತಾರೆ, ನನ್ನನ್ನು, ಮೂರೂವರೆ ವರ್ಷದ ಮೊಮ್ಮಗ ಸಮನ್ಯು, ಸೊಸೆ ದಯಾಮಣಿಯನ್ನು ವಿಚಾರಿಸುತ್ತಾರೆ. ಬಹುಶಃ ಇವರು ನನ್ನನ್ನು ಸಾಕದಿದ್ದರೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ, ಜವಾಬ್ದಾರಿಯುತ ಪತ್ರಕರ್ತನಾಗಿ ನಿಮ್ಮ ಮುಂದೆ ಇಂದು ಎಲ್ಲವನ್ನು ಮುಕ್ತವಾಗಿ ಹೇಳಿಕೊಳ್ಳಲಾಗುತ್ತಿರಲಿಲ್ಲ. ನನ್ನನ್ನು ಇಲ್ಲಿ ತನಕ ನಡೆಸಿದ ಪೊಪ್ಪ- ಅಮ್ಮ ನನ್ನ ಪಾಲಿನ ದೇವರು, ಲಾಕ್ ಡೌನ್ ನಿಂದಾಗಿ ಕಳೆದ ಒಂದು ವರ್ಷದಿಂದ ಅವರನ್ನು ನೋಡಲು ಸಾಧ್ಯವಾಗಿಲ್ಲ, ಕೊರೊನಾ ತೀವ್ರತೆ, ಕೆಲಸದ ಒತ್ತಡದಿಂದಾಗಿ ಬೆಂಗಳೂರಿನಲ್ಲಿರುವ ನಾನು ಊರಿನ ಕಡೆ ಮುಖ ಮಾಡಿಲ್ಲ, ಅವರನ್ನು ಬೇಗ ಭೇಟಿಯಾಗಬೇಕು, ಮಾತಾಡಬೇಕು ಅನಿಸುತ್ತಿದೆ.
ಮಿಸ್ ಯೂ ಪೊಪ್ಪ-ಅಮ್ಮ
ಬರಹ: ಹೇಮಂತ್ ಸಂಪಾಜೆ