ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಪ್ರಯುಕ್ತ ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ವೀರಾಜಪೇಟೆಯಲ್ಲಿ ಬೃಹತ್ ಪಂಜಿನ ಮೆರವಣಿಗೆ
ಕೊಡಗು ಜಿಲ್ಲೆಯ ವೀರಾಜಪೇಟೆಯ ಪಟ್ಟಣದ ಮುಖ್ಯ ಬೀದಿಗಳಲ್ಲಿ ಅಖಂಡ ಭಾರತ ಸಂಕಲ್ಪದಿನದ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ಬಳಿಕ ತಾಲ್ಲೂಕು ಮೈದಾನದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. 1947 ರ ಆಗಸ್ಟ್ 14 ರ ಮಧ್ಯರಾತ್ರಿ ನಮ್ಮ ದೇಶ ವಿಭಜನೆಗೊಂಡಿರುವುದು ಇತಿಹಾಸದ ಕರಾಳ ಸತ್ಯವಾಗಿದೆ. ಸಾವಿರಾರು ದೇಶಭಕ್ತರ ತ್ಯಾಗ – ಬಲಿದಾನ – ಹೋರಾಟಗಳಿಂದ ಪಡೆದ ಅಖಂಡ ಭಾರತದ ಸ್ವಾತಂತ್ರ್ಯವನ್ನು ಮತೀಯ ನೆಲೆಗಟ್ಟಿನಲ್ಲಿ ಚೂರು ಚೂರು ಮಾಡಿದ ಅಂದಿನ ಅವಕಾಶವಾದಿಗಳ ನಿಜ ಬಣ್ಣವನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ತಿಳಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಂದು ಕಳೆದುಕೊಂಡಿರುವ ಭಾರತದ ಭೂಭಾಗಗಳನ್ನು ಮತ್ತೆ ಪಡೆಯುವ ಮೂಲಕ ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಎಲ್ಲ ಸ್ವಾತಂತ್ರ್ಯ ಯೋಧರಿಗೆ ಗೌರವ ಸಮರ್ಪಣೆ ಮಾಡಬೇಕಾಗಿದೆ. ಈ ಉದ್ದೇಶಕ್ಕಾಗಿಯೇ ಹಿಂದು ಜಾಗರಣ ವೇದಿಕೆಯು ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವನ್ನು ನಡೆಸುತ್ತಿದೆ. ಮುಂದೊಂದು ದಿನ ಅಖಂಡ ಭಾರತ ನಿರ್ಮಾಣ ಶತಸಿದ್ಧ ಎಂದು ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಪ್ರಮುಖರಾದ ಶ್ರೀ ಜಗದೀಶ್ ಕಾರಂತ್ ತಮ್ಮ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಕೊಟ್ಟುಕತ್ತಿರ ಶ್ರೀ ಸೋಮಣ್ಣರವರು ವಹಿಸಿದ್ದರು. ಹಿಂ.ಜಾ.ವೇ.ಪ್ರಾಂತ ಸಮಿತಿಯ ಜೀವನ್ ಪೊನ್ನಂಪೇಟೆ, ಜಿಲ್ಲಾ ಸಮಿತಿಯ ಪ್ರಮುಖರಾದ ಶ್ರೀ ಚೇತನ್ ಶಾಂತಿನಿಕೇತನ್, ಮಂಜುನಾಥ್, ಸುನಿಲ್ ಮಾದಾಪುರ,ಯೋಗೇಶ್ ಬಿಟ್ಟಂಗಾಲ, ವಿನಯ್ ಮಡಿಕೇರಿ, ಹಾಗೂ ತಾಲ್ಲೂಕು ಸಮಿತಿಯ ಪ್ರಮುಖರಾದ ಅನಿಲ್ , ನಾಗೇಶ್ , ಸೋಮಣ್ಣ,ದಿನೇಶ್ ನಾಯರ್ ,ಗಿರೀಶ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮಾತೆಯರು ಸುರಿಯುತ್ತಿರುವ ಮಳೆಯ ನಡುವೆಯೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹನಿಮೋಳ್ ಪ್ರಾರ್ಥನೆ,ದಿನೇಶ್ ನಾಯರ್ ಸ್ವಾಗತಿಸಿ, ಸುನಿಲ್ ಮಾದಾಪುರ ನಿರೂಪಿಸಿ, ವಿನಯ್ ಮಡಿಕೇರಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಂದೇ ಮಾತರಂ ಗೀತೆ ಗಾಯನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಲಾಯಿತು.