fbpx

“ಹೆಬ್ಬುಲಿಯ ದೇಹ ಉರುಳಿತ್ತು…ಊರಲ್ಲಿ ಸಂಭ್ರಮ ಹಾಸಿತ್ತು”

ಅಂತರಾಷ್ಟ್ರೀಯ ಹುಲಿಗಳ ದಿನಾಚರಣೆ ವಿಶೇಷ

ಬರಹ: ಶಿರಿನ್ ವಿಶ್ವನಾಥ್

ತನ್ನದೇ ಆದ ಪ್ರಕೃತಿ ಸೌಂದರ್ಯ ಮತ್ತು ವಿಶಿಷ್ಟ ಸಂಸ್ಕೃತಿಯನ್ನೊಳಗೊಂಡ ಪುಟ್ಟ ಜಿಲ್ಲೆ ಕೊಡಗು. ನಮಗೆಲ್ಲಾ ಗೊತ್ತಿರುವಂತೆ ಕೊಡಗು, ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಬೆಟ್ಟ ಗುಡ್ಡ ಹಾಗೂ ಸಮೃಧ್ದ ಅರಣ್ಯಗಳಿಂದ ಕೂಡಿರುವ ಪ್ರದೇಶವಾಗಿದ್ದು, ವನ್ಯ ಜೀವಿಗಳ ಆವಾಸ ಸ್ಥಾನವಾಗಿದ್ದುದರಲ್ಲಿ ಆಶ್ಚರ್ಯವಿಲ್ಲ.ಆಗಿನ ಕಾಲದಲ್ಲಿ ಜನರು ಇಂತಹ ದಟ್ಟ ಅರಣ್ಯಗಳ ಮಧ್ಯೆ, ಕಾಡು ಮೃಗಗಳ ಆಕ್ರಮಣದ ಭೀತಿಯೊಂದಿಗೆ ಜೀವಿಸಬೇಕಾದ ಅನಿವಾರ್ಯತೆ.

ಚಿಕ್ಕ- ಪುಟ್ಟ ಮೃಗಗಳಾದರೆ ಪರವಾಗಿಲ್ಲ ಆದರೆ ಹುಲಿ- ಸಿಂಹ ಗಳಂತಹ ಪ್ರಾಣಿಗಳೇ ಬಂದು ಆಕ್ರಮಣ ಮಾಡಿದರೇನು ಗತಿ?? ಹೆಬ್ಬುಲಿಯನ್ನೆ ಹೊಡೆದುರುಳಿಸುವಂತಹ ಶೂರರು- ಧೀರರು ನಮ್ಮ ಪೂರ್ವಜರಾಗಿದ್ದರು ಎನ್ನುವುದನ್ನು ಕೇಳಿ ಪಟ್ಟಿದ್ದೆ ಹಾಗು ಚಿಕ್ಕಮ್ಮನ ಮನೆಯಲ್ಲಿ ಹುಲಿಯೊಂದಿಗೆ ಒಂದು ಕುಟುಂಬದ ಫೋಟೊ ನೋಡಿದ್ದೆ, ಇಂದು “ಅಂತರರಾಷ್ಟ್ರೀಯ ಹುಲಿ ದಿನ” ತಕ್ಷಣವೇ ಆ ಫೋಟೊದಲ್ಲಿ ಹೆಮ್ಮೆಯಿಂದ ಕುಳಿತಿದ್ದ ಶ್ರೀಮತಿ ಅಯ್ಯಂಡ್ರ ಸೀತಮ್ಮ ( ಈಗ ನಮ್ಮ ಪ್ರೀತಿಯ ಅವ್ವ ) ರಿಗೆ ಕರೆ ಮಾಡಿದೆ. ಅವರ ಪ್ರಕಾರ ” ಆಗ ೧೯೫೩ ನೇ ಇಸವಿ, ಸ್ವಾತಂತ್ರ್ಯ ಬಂದು ಬೆರಳಿಕೆಯಷ್ಟು ವರ್ಷಗಳು ಕಳೆದಿತ್ತಷ್ಟೇ..

ಕೊಡಗಿನ ಈಗಿನ ನಂಜರಾಯಪಟ್ಟಣ, ಚೆಟ್ಟಳ್ಳಿ ಆಸುಪಾಸೆಲ್ಲಾ ದಟ್ಟ ಅರಣ್ಯ.. ಇದರ ಮದ್ಯೆಯೇ ಬದುಕು ನಡೆಯುತ್ತಿತ್ತು.ತಮ್ಮ ಹಾಗು ತಾವು ಸಾಕಿದ ಜಾನುವಾರುಗಳ ರಕ್ಷಣೆಗಾಗಿ ನಾಯಿಗಳನ್ನು ಸಾಕಿಕೊಂಡಿದ್ದರೂ ವನ್ಯ ಮೃಗಗಳ ಆಕ್ರಮಣ ನಿರಂತರ ವಾಗಿದ್ದು ಭಯ- ಆತಂಕಗಳ ನಡುವೆಯೇ ಜೀವನ ನಡೆಸುವ ಪರಿಸ್ಥಿತಿ. ಹೀಗಿರುವಾಗಲೇ ಅಲ್ಲಿದ್ದ ಸಾಕು ಪ್ರಾಣಿಗಳ ಮೇಲೆ “ಹುಲಿರಾಯ”ನ ಕಣ್ಣು ಬಿದ್ದಿತ್ತು. ಹುಲಿಯ ನಿರಂತರ ಆಕ್ರಮಣದಿಂದ ಜನರೆಲ್ಲಾ ಭೀತಿಗೊಂಡು ಜೀವ ಭಯದೊಂದಿಗೆ ಬದುಕಬೇಕಾದ ಪರಿಸ್ಥಿತಿ. ತಮ್ಮ ಮತ್ತು ಸಾಕು ಪ್ರಾಣಿಗಳ ರಕ್ಷಣೆಗೋಸ್ಕರ ಜನರೆಲ್ಲಾ ಒಟ್ಟುಗೂಡಿ ನಿರ್ಧಾರ ಮಾಡಿ, ಒಂದು ದಿನ, ಬಡಿಗೆ- ದೊಣ್ಣೆಗಳನ್ನು ಸಜ್ಜುಗೊಳಿಸಿ, ಸಾಕಿದ್ದ ಬೇಟೆ ನಾಯಿಗಳೊಂದಿಗೆ, ಬಂದೂಕು ಹಿಡಿದು ಕಾಡಿಗೆ ಹೊರಟೇಬಿಟ್ಟರು. ಇವರಲ್ಲಿ ಮುಂದಾಳತ್ವವಹಿಸಿದ್ದವರು ನಮ್ಮ ಕೊಡಗಿನ ವೀರ- ಧೀರ ಪರಾಕ್ರಮಿಯಾಗಿದ್ದ ” ಅಯ್ಯಂಡ್ರ ದಿ// ಬೆಳ್ಯಪ್ಪ ರವರು. ದಟ್ಟಾರಣ್ಯದೊಳಗೆ ನುಗ್ಗಿದ ತಂಡಕ್ಕೆ ಕೊನೆಗೂ “ಹುಲಿರಾಜ” ದರ್ಶನ ನೀಡಿದ್ದ.ತಮ್ಮ ಹಾಗೂ ನೆರೆ-ಹೊರೆಯವರ ಭೀತಿಗೆ ಕಾರಣವಾಗಿದ್ದ ಹುಲಿಯನ್ನು ಗಮನಿಸಿದ ಶ್ರೀಮಾನ್ ಬೆಳ್ಯಪ್ಪ ರವರು ಕೋವಿಯನ್ನು ಎದೆಗೊರಗಿಸಿ ಗುಂಡು ಹಾರಿಸಿಯೇಬಿಟ್ಟರು.

ನಂತರ ಹೋಗಿ ನೋಡಿದರೆ “ಹೆಬ್ಬುಲಿ” ಯ ದೇಹ ಉರುಳಿಬಿದ್ದಿತ್ತು. ಊರ ಜನರೆಲ್ಲಾ ಹರ್ಷೊದ್ಗಾರಗಳೊಂದಿಗೆ ಹುಲಿಯನ್ನು ಕಾಡಿನಿಂದ ಹೊತ್ತು ತಂದರು. ಊರಿನ ವರಿಗೆಲ್ಲಾ ಸಂಭ್ರಮ.ಮನೆಯ ಮುಂದಿದ್ದ ಚಪ್ಪರದಡಿಯಲ್ಲಿ ಮೃತ ಹುಲಿಯನ್ನಿರಿಸಿ, ಕೊಂದ ವೀರನನ್ನು ಜೊತೆಯಲ್ಲಿ ಕೂರಿಸಿ ಕುಟುಂಬಸ್ಥರು, ನೆಂಟರೆಲ್ಲಾ ಸೇರಿ ವಿಜೃಂಭಣೆಯಿಂದ ಮದುವೆಯಂತೆ ಸಮಾರಂಭ ಮಾಡಲಾಯಿತು. ಊರ ಜನರು ಭಯ ಬಿಟ್ಟು ನಿಟ್ಟುಸಿರುಬಿಡಲು ಕಾರಣರಾದ ಶ್ರೀಮಾನ್ ಅಯ್ಯಂಡ್ರ ಬೆಳ್ಯಪ್ಪ ರವರ ಹೆಸರು ಧೀರತ್ವಕ್ಕೆ ಸಾಕ್ಷಿಯಾಗಿ ಉಳಿಯಿತು.ಇದಕ್ಕೆಲ್ಲಾ ಜ್ವಲಂತ ಸಾಕ್ಷಿಯೇ ನಾವೆಲ್ಲರೂ ಜೊತೆಯಲ್ಲಿ ತೊಡಗಿಸಿಕೊಂಡ ಈ ಫೋಟೊ “ಎಂದು ಹೆಮ್ಮೆಯಿಂದ ಹೇಳುತ್ತಾ ಮಾತು ಮುಗಿಸಿದರು ಅವ್ವ. ಇಂದು “ವನ್ಯ ಮೃಗಗಳ ಹತ್ಯೆ ಅಪರಾಧ”ವಾಗಿದ್ದರೂ ಅಂದಿನ ಕಾಲದ ಕೊಡಗಿನಲ್ಲಿ ಅದೊಂದು ಸಡಗರದ ಹಬ್ಬವಾಗಿ ಆಚರಿಸಲ್ಪಡುತ್ತಿತ್ತು. “ಕೊಡಗಿನ ವೀರರು-ಹುಲಿ ಕೊಂದ ಧೀರರು” ಎನ್ನುವ ಮಾತು ಇನ್ನೂ ಚಾಲ್ತಿಯಲ್ಲಿರುವುದಕ್ಕೆ ಮೇಲಿನ ನಿದರ್ಶನಗಳೇ ಸಾಕ್ಷಿ. ‌ ವಿಷಯದ ವಿಶೇಷ ಮಾಹಿತಿ ಮತ್ತು ಫೋಟೊ ಕೃಪೆಗೆ ಮನಃಪೂರ್ವಕ ಕೃತಜ್ಞತೆಗಳು

ಕೃತಜ್ಞತೆಗಳು ಶ್ರೀಮತಿ ಅಯ್ಯಂಡ್ರ ಸೀತಮ್ಮ                                    
( ಅಯ್ಯಂಡ್ರ ದಿ|| ಬೆಳ್ಯಪ್ಪ ರವರ ಧರ್ಮಪತ್ನಿ). ‌ ‌‌‌‌‌‌ ‌‌‌‌‌‌

ಶಿರಿನ್ ವಿಶ್ವನಾಥ್
error: Content is protected !!