“ಸರ್ಪ ಸಂಬಂಧ”

ಪುಸ್ತಕ ಲೋಕ

ಇದು ನನ್ನ ಮೂರನೇ ವಿಮರ್ಶೆ. ಮೊದಲನೆಯ ಅಂದರೆ “ನೀ ಹೀಂಗ ನೋಡಬ್ಯಾಡ ನನ್ನ” ಕೃತಿಯ ವಿಮರ್ಶೆಯಲ್ಲಿ ಹೇಳಿರುವ ಹಾಗೆ‌‌ ಸಾಹಿತ್ಯದ ಪರಿಚಯವಾಗುವ ಮೊದಲೇ ಬೆಳಗೆರೆಯವರ “ಹೇಳಿ ಹೋಗು‌ಕಾರಣ” ಮತ್ತು “ಮಾಟಗಾತಿ” ಯನ್ನು ಓದಿಕೊಂಡಿದ್ದೆ. ಮಾಟಗಾತಿಯ ಮುಂದುವರಿದ ಭಾಗವೇ “ಸರ್ಪಸಂಬಂಧ”.
ಈ ಕೃತಿಯ ಮೊದಲ ಮುದ್ರಣ 2000ಇಸವಿಯಲ್ಲಿಯೇ ಆಗಿದ್ದರೂ ನನ್ನ ಕೈ ಸೇರಿದ್ದು ಇತ್ತೀಚಿನ ದಿನಗಳಲ್ಲಿ . ಬಹುಶಃ ಮೊದಲ ಮುದ್ರಣದ ಸಮಯದಲ್ಲಿ ಇಂತಹ ಕೃತಿಗಳನ್ನು‌ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರೆ ಬಹಳಷ್ಟು ಜ್ಞಾನವನ್ನು ನನ್ನದಾಗಿಸಿಕೊಳ್ಳುತ್ತಿದ್ದೆನೇನೋಅನಿಸುತ್ತದೆ.
ಅದೇನೆ ಇರಲಿ.ಈಗ “ಸರ್ಪಸಂಬಂಧ”ದ ವಿಚಾರಕ್ಕೆ ಬರೋಣ.

ಈ‌ ಕೃತಿಯನ್ನು ಓದಿ ವಿಮರ್ಶೆ ಬರೆಯಲು‌ ಕುಳಿತಿರುವ ನಾನು ಸು.1ಗಂಟೆಯ ಏನು ಬರೆಯಬೇಕೆಂದು ತೋಚದೇ ಯೋಚಿಸಿ ಬರೆಯುತ್ತಿದ್ದೇನೆ.ಏಕೆಂದರೆ ಮಾಟ,ಮಂತ್ರ,ತಂತ್ರ ಮತ್ತು ಅರ್ಥವಿಲ್ಲದ ಆಚರಣೆಗಳನ್ನು ಮೌಡ್ಯಗಳನ್ನು ನಂಬದೇ ವಿರೋಧಿಸುತ್ತಾ ಬಂದಿರುವ ನನ್ನನ್ನೇ ಅಚ್ಚರಿಗೊಳಿಸುವಂತೆ ,ಒಂದು‌ಕ್ಷಣ ಭಯಪಡುವಂತೆ ವಾಮಲೋಕದ ಪರಿಚಯವನ್ನು ಇಲ್ಲಿ ಎಳೆಎಳೆಯಾಗಿ ಮಾಡಿಕೊಟ್ಟಿದ್ದಾರೆ. ಈ ಕೃತಿಯ ಓದುತ್ತಿರುವಾಗ ಒಂದೆರಡು ದಿನ
ಸರ್ಪಸ್ವಪ್ನ ಬೀಳುವಷ್ಟು ಈ ಕಥೆ ನನ್ನನ್ನು ಆವರಿಸಿಕೊಂಡಿತ್ತು.

ಹೆಸರೇ ಸೂಚಿಸುವಂತೆ ಸರ್ಪಸಂಕುಲ ಮತ್ತು ಮಾನವ ಸಂಬಂಧವನ್ನು ಈ ಕೃತಿಯಲ್ಲಿ‌ ಬೊಚ್ಚುಬಾಯಿ ಜೋಗತಿಯ ಮಗ ನಾಗಮಂಜಿರ ಅರ್ಧ ಮಾನವ ಮತ್ತು ಅರ್ಧ ಸರ್ಪಶಿಶುವಾದ ಇನಿಯ ಜನ್ಮಕ್ಕೆ ಕಾರಣವಾಗಲು ಶೀರಹುಣಸಿಯ ಸೀತಾರಾಮು ಮತ್ತು ಗುಣಶಾರಿಯ‌ ಮನೆಗೆ ಬಂದು ನೆಲೆಸುವಲ್ಲಿಂದ ಹಿಡಿದು ಜೋಗೇರಗುಡ್ಡದ ತುತ್ತತುದಿಯಲ್ಲಿ ಮಾಟಗಾತಿ ತೇಜಾಬಾಯಿಯ ಮೇಲಿನ ಸ್ತಂಭನ ಪ್ರಯೋಗವನ್ನು ಬಿಡುಗಡೆ ಮಾಡಿ ವಾಮಲೋಕದ ರಾಕ್ಷಸಿಯಾದ ಅವಳನ್ನು ಕೊನೆಯುಸಿರೆಳೆವಂತೆ ಮಾಡುವವರೆಗೂ ಓದುಗನ ಏಕಾಗ್ರತೆಯನ್ನು ತಮ್ಮ ಬರಹಗಳಲ್ಲಿ ಹಿಡಿದಿಡಲು ಸಾಧ್ಯವಾಗುವಂತೆ ಬರೆದಿದ್ದಾರೆ.

ಲಾಕ್ಡೌನ್ ಸಮಯದಲ್ಲಿ ಸಮಯಕಳೆಯಲು ಕೆಲವೊಂದಿಷ್ಟು‌ ಪುಸ್ತಕಗಳು ಸಿಕ್ಕಿದ್ದವಾದರೂ ಲಾಕ್ಡೌನ್ ಮುಂಚಿತವಾಗಿ ಗೆಳೆಯ ರಂಜಿತ್ ಕವಲಪಾರ ಓದಲು ನೀಡಿದ್ದ ಈ ಕಾದಂಬರಿಯನ್ನು ಓದಿ ಇದೀಗ ವಿಮರ್ಶೆ ಬರೆಯುತ್ತಿದ್ದೇನೆ.

396 ಪುಟಗಳನ್ನೊಳಗೊಂಡ ಈ ಕಥೆಯನ್ನು ಸತತ ಅಧ್ಯಯನ ಮಾಡಿದ ಬಳಕ ಸೃಷ್ಟಸಿದ್ದಾರೇನೋ ಅನ್ನಿಸುತ್ತದೆ.ಕೇಳೋಣವೆಂದರೆ ಕರ್ತೃ ಪಣ್ಯಾತ್ಮ ಇಂದು ನಮ್ಮೊಂದಿಗಿಲ್ಲ.

ಅವರ ಮಾತಿನಂತೆಯೇ ಪ್ರೇಮ, ಕಾಮ ,ಇತಿಹಾಸ, ಯುದ್ಧ, ಭಾನಾಮತಿ, ಭಯೋತ್ಪಾದನೆ, ಅಂಡರ್ವರ್ಲ್ಡ್ ಇನ್ನು ಹಲವಾರು ಕ್ಷೇತ್ರಗಳ ಬಗ್ಗೆ ಬರೆದಿದ್ದರೂ ಅವರ ಲೇಖನಿ ಪಳಗಿರುವುದು ಮಾನವ ಸಂಬಂಧಗಳ ಕುರಿತು ಗೀಚುವಿದರಲ್ಲಿಯೇ.ಮತ್ತು ಅದನ್ನು ಈ ಮೇಲೆ ಹೇಳಿರುವ ಎಲ್ಲಾ ಕ್ಷೇತ್ರಗಳ ಕುರಿತಾಗಿ ಬರೆದ ಪುಸ್ತಕಗಳಲ್ಲಿ ಕಾಣಬಹುದಾಗಿದೆ.

ಆದರೆ ಅದು ಸಾಬೀತಾಗಿದ್ದು ಸರ್ಪಶಿಶು ಇನಿಯ ಮರಣ ಸಂಭವಿಸಿದಾಗ.ಇನಿಯ ಜನ್ಮಕ್ಕೆ ಕಾರಣವಾಗದಿದ್ದರೂ ಅನಂತರ ಇಡೀ ಶೀರಹುಣಸಿಯ ಗ್ರಾಮದ ಜನತೆಗೆ ಆಕೆಯ ತಂದೆಯಾಗಿ ಕಾಣಿಸಿಕೊಂಡು ಅವಳನ್ನು ಸಾಕಿಸಲಹಿ ಬೆಳೆಸಿದ ಸೀತಾರಾಮುವಿನಿಂದ ಅವಳ ಪ್ರಾಣಪಕ್ಷಿ ಹಾರಿಹೋದಾಗ.377 ಪುಟಗಳವರೆಗೂ ಬಹಳ ಕುತೂಹಲದಿಂದ ಓದುತ್ತಿದ್ದ ನಾನು 378 ಪುಟವನ್ನು ಓದಿಮುಗಿಸುವ ಹೊತ್ತಿಗೆ ಕಣ್ಣಂಚಿನಲ್ಲಿ ಕಾವೇರಿ ಹರಿದಿದ್ದಳು.ಆಗಲೇ ಬೆಳಗೆರೆಯವರ ಲೇಖನಿಗೆ ಸಂಬಂಧಗಳ ಕುರಿತು ಬರಯುವಲ್ಲಿ ಎಷ್ಟು ಶಕ್ತಯಿದೆಯೆಂಬುದು ಅರಿವಾಗಿದ್ದು ನನಗೆ.

ಕಾದಂಬರಿಯ ನಾಯಕನಾದ ಅಘೋರರ ಅಧಿಪತಿ ಅಗ್ನಿನಾಥ ಮತ್ತವನ ಪತ್ನಿ ನಿಹಾರಿಕ ,ಅವರಿಬ್ಬರಿಗೂ ಗುರುಒಡೆಯರಾಗಿದ್ದ ಶೇಷಾಸುಬ್ಬಶಾಸ್ತ್ರಿ, ಸೀತಾರಾಮು ಮತ್ತವನ ಪತ್ನಿ ಗುಣಶಾರಿ, ಸರ್ಪತಜ್ನ ವಿಶ್ವನಾಥ ಹಾಗು ಚಿತ್ರಾಳ ಪ್ರೇಮ ಹಾಗೆಯೇ ಸರ್ಪದ್ವೇಷಕ್ಕೆ ಮೊದಲು ಬಲಿಯಾದ ಚಿದಾನಂದ ಸ್ವಾಮಿ,ವಿರೂಪಾಕ್ಷ ಸನ್ಯಾಸಿ ಇವರೆಲ್ಲರ ಪಾತ್ರವು ಒಂದು ತೆರನಾದ ಕುತೂಹಲತೆಯನ್ನು ಮೂಡಿಸಿತ್ತಾದರೂ ಬೊಜ್ಜುಬಾಯಿ ಜೋಗತಿ ,ಅವಳ ಮಗನಾದ ಮಂಜ್ರ ,,ಪಾಲನೇತ್ರ, ಶೇಷಸುಬ್ಬಶಾಸ್ತ್ರಿಗಳ ಮಗ ರಾಮು ಮತ್ತವನ ಮಡದಿ ಸಮಧನಿ,ಅತೀ ಎಳೆಯದರಲ್ಲಿ ಬಲಿಯಾದ ಪಿಳ್ಳೆ, ಏಕನಾರಾಯಣ ಶರ್ಮ,ಅಘೋರಿ ನೀಲೋತ್ಪಲನ ಪಾತ್ರವು ಬಹಳಷ್ಟು ಅಚ್ಚರಿಯನ್ನು ಮತ್ತು ವಾಮಲೋಕದ ಕಡೆ ಆಸಕ್ತಿಯನ್ನು ಮೂಡಿಸಿದೆ.

ಲೇಖಕರ ಮಾತಿನಂತೆ “ಭಗವಂತ ಇದ್ದಾನಾ?,ಪ್ರೇತಾತ್ಮ ಇವೆಯಾ?” ಈ ವಿಷಯಗಳಲ್ಲಿ ಈ ಮೊದಲೇ ಬಹಳಷ್ಟು ಪ್ರಶ್ನೆಗಳನ್ನು ಬೆಳೆಸಿಕೊಂಡಿರುವ ನನಗೆ “ಸರ್ಪಸಂಬಂಧ” ಉತ್ತರವೋ ಅಥವಾ ಮರುಪ್ರಶ್ನೆಯೋ ತಿಳಿಯದಾಗಿದೆ.

ದೀಪಕ್ ಪೊನ್ನಪ್ಪ, ಯುವ ನಾಯಕರು ಹವ್ಯಾಸಿ ಬರಹಗಾರರು
error: Content is protected !!