ಮೊಗ್ಗು ಮತ್ತು ಬಿಗಿ ಅಂಗಿ
ಸಣ್ಣ ಕಥೆ
ನರಳುವ ಕಂಗಳಿಗೆ ಕಣ್ಕಟ್ಟು ತಿಳಿಯುವುದಿಲ್ಲ. ಎಷ್ಟೇ ಪ್ರಯತ್ನಿಸಿದರು ಅದರೊಳಗಿನ ನೋವನ್ನು ತೋರ್ಪಡಿಸಿ ಬಿಡುತ್ತದೆ. ನಿಸ್ಸಹಾಯಕ ಗಂಡಸಿನಂತೆ ಅದು ಸದಾ ನಿಶ್ಚಲ. ಕಣ್ಣೊಳಗಿನ ಸಂಕಟವನ್ನು ಹಿಡಿದಿಡುವುದಾದರೂ ಹೇಗೆ?
ನಾನು ಸಣ್ಣವಳಿದ್ದಾಗಲೂ ಗುಂಡುಗುಂಡಕಿದ್ದೆ, ಕೊಂಚ ಕುಳ್ಳಗೂ ಇದ್ದೆ…
ಚಿತ್ರಕೃಪೆ: ಅಂತರ್ಜಾಲ
ಶಾಲಾ ದಿನಮಾನವಷ್ಟನ್ನೂ ನಾನು ಮುಂದಿನ ಬೆಂಚಿನಲ್ಲೇ ಕಳೆದೆ, ಹೈಸ್ಕೂಲು ಮೆಟ್ಟಿಲು ಏರುತ್ತಿದ್ದಂತೆ. ನನ್ನ ಎತ್ತರದಲ್ಲೇನೂ ಬದಲಾವಣೆ ಆಗಿರಲಿಲ್ಲ. ಆದರೆ ನನ್ನ ಸ್ತನಗಳು, ಪೃಷ್ಠಭಾಗವು ನನ್ನ ದೇಹಕ್ಕಿಂತಲೂ ಉಬ್ಬಿ ನನಗಿಂತ ಭಿನ್ನವಾಗಿ ಕಾಣಿಸುತ್ತಿತ್ತು. ನಮಗೆಲ್ಲ ಆಗ ಈಗಿನಂತೆ ಹೈಸ್ಕೂಲಿನಲ್ಲಿ ಚೂಡಿದಾರ್ ತೊಡುವ ಭಾಗ್ಯ ಇರಲಿಲ್ಲ. ನಮ್ಮ ಕಾನ್ವೆಂಟ್ ಶಾಲೆಯಲ್ಲಿ ಹತ್ತರವರೆಗೂ ಆಗ ಮಿಡ್ಡಿ ಶರ್ಟೇ ಯೂನಿಫಾರಮೂ. ನಮ್ಮ ಮನೆ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ, ಐದರವರೆಗೂ ಆಂಗ್ಲಮಾಧ್ಯಮದಲ್ಲಿ ಓದಿದ ನನಗೆ ಆರರಿಂದ ಕನ್ನಡ ಮಾಧ್ಯಮಕ್ಕೆ ಸೇರಿಕೋ ಅಂದಿದ್ದರು ಅಪ್ಪ. ನಾನು ಒಪ್ಪಿಕೊಂಡಿದ್ದೆ. ಕಾರಣ ಕೇಳಿರಲಿಲ್ಲ.
ಏಳನೇ ತರಗತಿವರೆಗೂ ವರ್ಷಕ್ಕೊಂದು ಯೂನಿಫಾರಂ ಹೊಲಿಸಿಕೊಟ್ಟಿದ್ದ ಮನೆಯವರು ಎಂಟಕ್ಕೆ ಬರುವಾಗ ಯಾಕೋ “ಇದೊಂದ್ ವರ್ಷ ಹೋದ್ ವರ್ಷದ್ದೇ ಹಾಕ್ಕೋ” ಅಂದಿದ್ದರು.
ಅಷ್ಟರಲ್ಲಾಗಲೇ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿದೆ ಅನ್ನುವುದನ್ನು ಅರಿಯಲು ನನಗೆ ಸಾಧ್ಯವಾಗಿತ್ತು. ಆದರೇ ನನ್ನ ದೇಹ ನನ್ನ ಊಹೆ ಮೀರಿ ಬೆಳೆದಿತ್ತು. ಹೈಸ್ಕೂಲಿಗೆ ಬಂದರೂ ನನಗೆ ಒಳಗೆ ಹಾಕಲು ಸಿಮೀಸೆ ಇತ್ತು. ಹಾಕುತ್ತಿದ್ದ ಶರ್ಟು ಬಿಗಿಯಾಗಿ ಎದೆಯ ಭಾಗ ನೋಡುವವರಿಗೆ ನನಗಿಂತ ಮೊದಲು ಕಾಣುವಂತೆ ಆಕಾರ ಪಡೆದಿತ್ತು.
ಪೃಷ್ಠಭಾಗದ ಬೆಳವಣಿಗೆಯಿಂದಾಗಿ ಹಾಕುತ್ತಿದ್ದ ಮಿಡ್ಡಿಯ ಹಿಂಭಾಗ ಮೀನಖಂಡವನ್ನು ಕಾಣುವಂತೆ ಮಾಡುತ್ತಿತ್ತು. ನಾನು ಮೊದಲಿನಂತೆ ಆಟಕ್ಕೆ ಹೋಗುವುದನ್ನು ನಿಲ್ಲಿಸಿ ಬಿಟ್ಟೆ. ಗೆಳೆತಿಯರನ್ನು ಕಡಿಮೆ ಮಾಡಿಕೊಂಡೆ. ನನ್ನಂತೆ ಗೆಳೆತಿಯರು ಕಷ್ಟಪಡುತ್ತಿದ್ದಾರಾ ಎಂದು ಅವರ ಎದೆ ಭಾಗವನ್ನು, ಅವರ ಹಿಂದಿನ ಭಾಗವನ್ನು ಅವರ ಅರಿವಿಗೆ ಬಾರದಂತೆ ಗಮನಿಸುತ್ತಿದ್ದೆ. ನನ್ನ ಗೆಳತಿಯೊಬ್ಬಾಕೆ ಕೊಂಚ ನನ್ನನ್ನೇ ಹೋಲುತ್ತಿದ್ದಳಾದರೂ ನನಗಿಂತ ಆಕೆ ಕೊಂಚ ಎತ್ತರ ಇದ್ದ ಕಾರಣಕ್ಕೋ ಏನೋ ನನ್ನಷ್ಟು ಅವಳ ದೇಹ ಅಸಹ್ಯವಾಗಿ ಕಾಣಿಸುತ್ತಿರಲಿಲ್ಲ.
ಪಿ.ಟಿ ಮಾಸ್ತರು, ಹತ್ತನೇ ತರಗತಿ ಹುಡುಗರು, ಶಾಲೆಯ ಮುಂದಿನ ಅಂಗಡಿಯಾತ ಹೀಗೆ ಎಲ್ಲರೂ ಎಂದರೆ ಎಲ್ಲಾ ಗಂಡಸರ ಮೇಲೂ ನನಗೆ ಒಂದು ತೆರನಾದ ಸಿಟ್ಟು ಬರುತ್ತಿತ್ತು. ಅವರೆಲ್ಲರೂ ನನ್ನ ಮುಖ ನೋಡಿ ಮಾತನಾಡುವ ಮುಂಚೆ. ಅರೆಕ್ಷಣ ನನ್ನ ಎದೆಯನ್ನು ಗಮನಿಸಿ ನಂತರ ನನ್ನನ್ನು ಮಾತನಾಡಿಸುವಾಗ ನನಗೆ ಮೈ ಉರಿ ಹತ್ತುತ್ತಿತ್ತು. ನಾನು ಅವರ ಸನಿಹದಿಂದ ಹೊರಟ ನಂತರವು ಅವರು ನನ್ನ ಹಿಂಬದಿಯನ್ನು ನೋಡಿ ಒಂದು ಕ್ಷಣ ಹಾಗೇ ನಿಂತು ಬಿಡುತ್ತಿದ್ದರು. ಆದು ನನಗೆ ತಿಳಿಯುತ್ತಿತ್ತು. ನಾನು ಆ ಸ್ಥಳದಿಂದ ಆದಷ್ಟು ಬೇಗನೆ ಮರೆಯಾಗುತ್ತಿದ್ದೆ. ಹಾಗು ಸಿಟ್ಟಿನಿಂದ ಕೆಂಪಗಾಗುತ್ತಿದ್ದೆ. ಹೀಗೆ ಒಂದು ದಿನ ನಾನು ನನ್ನ ಗೆಳತಿ ಗುಲಾಬಿ, ಶಾಲೆಯ ಆವರಣದಲ್ಲಿರುವ ಮರವೊಂದರ ಕೆಳಗಿನ ಕಟ್ಟೆ ಮೇಲೆ ಸುಮ್ಮನೆ ಕುಳಿತಿದ್ವಿ. ಗುಲಾಬಿ ತುಂಬಾ ಸಪೂರದ ಹುಡುಗಿ. ಎಷ್ಟು ಸಪೂರ ಎಂದರೆ ಅವಳು ಹುಡುಗರ ಹಾಗೆ ಕಾಣಿಸುತ್ತಿದ್ದಳು. ಎಲ್ಲವೂ ಮಟ್ಟಸ ಮಟ್ಟಸ. ಈ ಗುಲಾಬಿ ಹುಡುಗರ ಹಾಗೆ ಹೇರ್‌ಕಟ್ ಮಾಡಿಸಿ, ಕಿವಿಯಲ್ಲಿರುವ ಸಣ್ಣ ಓಲೆಯನ್ನು ಬಿಚ್ಚಿಟ್ಟರೇ ಥೇಟ್ ಹುಡುಗನ ಹಾಗೆ ಕಾಣಿಸ್ತಾಳಲ್ವ? ಅನಿಸಿತು. ಮರುಕ್ಷಣವೇ ಅವಳ ಸಪೂರದ ಕೈಗಳನ್ನು ನೋಡಿ ಇವಳು ಹುಡುಗನಾದರೇ ತುಂಬಾ ಪೇಲವ ಆಗಿ ಬಿಡ್ತಾನೆ ಅಂತ ಅನಿಸಿ ಜೋರಾಗಿ ನಕ್ಕುಬಿಟ್ಟೆ
“ಯಾಕೇ?… ಯಾಕೆ ನಗ್ತಿದ್ಯಾ? ಅಂತ ಗುಲಾಬಿ ಕೇಳಿದಾಗ. ಏನೂ ಇಲ್ಲ ಅಂತ ಸುಮ್ಮನಾದೆ. ಈ ಗುಲಾಬಿಯೂ ಕೆಲವೊಮ್ಮೆ ಹಾಳು ಗಂಡಸರಂತೆ ಆಡುತ್ತಿದ್ದಳು. ಕದ್ದು ಮುಚ್ಚಿ ನನ್ನ ಎದೆಭಾಗವನ್ನೇ ಅವಳು ವಿಚಿತ್ರವಾಗಿ ನೋಡುತ್ತಿದ್ದಳು. ಆಗೆಲ್ಲ ನನಗೆ ಗುಲಾಬಿಯ ಮೇಲೆ ವಿಪರೀತ ಸಿಟ್ಟು ಬರುತ್ತಿತ್ತು. ಅವಳಿಗೆ ಇಲ್ಲದ್ದು ನನ್ನಲ್ಲಿ ಏನೋ ಇದೆ ಅನ್ನುವ ಸಣ್ಣ ಸಂತೋಷವೂ ಮನಸ್ಸಿನಲ್ಲಿ ಆಗುತ್ತಿತ್ತು. ಹೀಗೆ ನನ್ನ ದೇಹದ ಬೆಳವಣಿಗೆಯೂ, ನನ್ನ ಕುಳ್ಳತನವೂ ಅದನ್ನು ಗಮನಿಸಿ ಮಜಾ ತೆಗೆದುಕೊಳ್ಳುತ್ತಿದ್ದ ಗಂಡಸರು, ಎಲ್ಲರೂ ನೆನಪಾಗಿ ನನಗೆ ತುಂಬಾ ಸಂಕಟ ಆಗುತ್ತಿತ್ತು. ಆಗೆಲ್ಲ ನಾನು ಶಾಲೆಯ ಬಾತ್‌ರೂಮಿಗೆ ಹೋಗಿ ಚಿಲಕ ಹಾಕಿಕೊಂಡು ಅತ್ತು ಬಿಡುತ್ತಿದ್ದೆ. ಮನಸ್ಸಿಗೆ ತುಂಬಾ ನೋವಾದಾಗ ಗೋಡೆಯ ಮೇಲೆ ಉಗುರಿನಿಂದ ಗೀಚುತ್ತಿದ್ದೆ. ನಮ್ಮ ಕಾನ್ವೆಂಟಿನಲ್ಲಿ ಉಗುರು ಬಿಡುವ ಹಾಗೆಯೂ ಇರಲಿಲ್ಲ. ಇತ್ತೀಚೆಗೆ ಹೀಗೆ ಸಿಟ್ಟು ಬಂದಾಗ ಬಾತ್‌ರೂಮಿನ ಗೋಡೆಯನ್ನು ಗೀಚುವುದು ನನಗೆ ಸಮಾಧಾನವನ್ನು ನೀಡುತ್ತಿತ್ತು. ಹಾಗಾಗಿ ನಾನು ಕಾನ್ವೆಂಟ್ ಸಿಸ್ಟರ್ಸ್‌ಗಳ ಕಣ್ಣು ತಪ್ಪಿಸಿ ಬಲಗೈಯ್ಯ ಐದೂ ಬೆರಳುಗಳಲ್ಲು ಸಣ್ಣಗೆ ಉಗುರು ಬಿಟ್ಟಿದ್ದೆ.
ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಹಾಗು ಕನ್ನಡ ಮಾಧ್ಯಮಗಳೆರಡೂ ಇತ್ತು ಎಂದು ಹೇಳಿದೆನಲ್ಲಾ, ಆಂಗ್ಲ ಮಾಧ್ಯಮದಲ್ಲಿ ಗಂಡುಮಕ್ಕಳು ಏಳನೇ ತರಗತಿವರೆಗೆ ಮಾತ್ರ ಇದ್ದರು. ಆದರೆ ನಮ್ಮ ಕನ್ನಡ ಮಾಧ್ಯಮದಲ್ಲಿ ಹತ್ತರವರೆಗೂ ಗಂಡು ಮಕ್ಕಳಿರುತ್ತಿದ್ದರು.
ಅಂದಹಾಗೆ ನನ್ನ ಹೆಸರು ರೋಹಿಣಿ ಅಂತಾ. ಒಂದು ದಿನ ನಮ್ಮ ಬೋರ್ಡಿನಲ್ಲಿ ಯಾರೋ ರೋಹಿಣಿ ಲವ್ಸ್ ಸುಬ್ರಮಣ್ಯ ಅಂತ ಬರೆದು ಬಿಟ್ಟಿದ್ದರು. ಆಗ ನಾನು ಎಂಟನೇ ತರಗತಿ ಮುಗಿಸಿ ಒಂಬತ್ತಕ್ಕೆ ಪಾಸ್ ಆಗಿದ್ದೆ. ಒಂಬತ್ತನೇ ಕ್ಲಾಸಿಗೆ ಬಂದು ನ್ಯೂ ಇಯರ್ ದಿನ ಹೀಗೆ ಯಾರೋ ಬಂದು ಬೋರ್ಡ್‌ನಲ್ಲಿ ಬರೆದು ಬಿಟ್ಟಿದ್ದರು. ನನಗಿಂತ ಮುಂಚೆ ಬಂದಿದ್ದ ಸುಬ್ರಮಣ್ಯ ಇದನ್ನು ನೋಡಿ ಅವನ ಡೆಸ್ಕ್ಗ್‌ಗೆ ತಲೆಕೊಟ್ಟು ಜೋರಾಗಿ ಅಳುತ್ತಾ ಇದ್ದ. ಕ್ಲಾಸಿನ ಎಲ್ಲಾ ಮಕ್ಕಳು ಅವನನ್ನು ಸಮಾಧಾನ ಮಾಡುತ್ತಿದ್ದರು. ನನ್ನನ್ನು ನೋಡಿ ಎಲ್ಲರೂ ಸ್ತಬ್ಧಚಿತ್ರಗಳ ಹಾಗೆ ಆಗಿ ಬಿಟ್ಟರು. ನನಗೆ ಯಾಕೋ ಅವತ್ತು ಅಳುವೇ ಬರಲಿಲ್ಲ, ಸುಬ್ರಮಣ್ಯನನ್ನು ನೋಡಿ ನನಗೆ ಬೇಸರ ಆಯ್ತು, ಅಂದ್ಹಾಗೆ ಇದು ಮೊದಲೇನು ಆಗಿರಲಿಲ್ಲ. ನನ್ನ ಹೆಸರನ್ನು ಬರೆದಿರುವುದು ಮೊದಲಾದರೂ, ಸುಬ್ರಮಣ್ಯ ನಮ್ಮ ಕ್ಲಾಸ್ ಮಕ್ಕಳಿಗೆಲ್ಲರಿಗೂ ಒಂದು ತರಹದ ಬಿಟ್ಟಿ ಆಸಾಮಿ ಅಂತ ಹೇಳಬಹುದು. ಅವನು ಈ ವರ್ಷವಷ್ಟೇ ನಮ್ಮ ಶಾಲೆಗೆ ಬಂದಿದ್ದ. ಉತ್ತರ ಕರ್ನಾಟಕದವನು. ನಮ್ಮದು ಪುತ್ತೂರು ಅವರ ಅಪ್ಪ ರೆವಿನ್ಯೂ ಡಿಪಾರ್ಟ್‌ಮೆಂಟಿನಲ್ಲಿ ಇದ್ದು ಟ್ರಾನ್ಸ್ಫ್‌ರ್ ಆಗಿ ಇಲ್ಲಿಗೆ ಬಂದಿದ್ರು. ಹಾಗಾಗಿ ಅವನು ಬಂದು ನಮ್ಮ ಶಾಲೆಗೆ ಸೇರಿದ್ದ. ಸಪೂರದ ಹುಡುಗ, ಯಾವಾಗಲೂ ಹಣೆಗೆ ಮೂರು ಪಟ್ಟೆನಾಮ ಹಾಕಿಕೊಂಡೇ ಶಾಲೆಗೆ ಬರುತ್ತಿದ್ದ. ಅವನ ಕೂದಲು ಎಷ್ಟು ಬಾಚಿದರೂ ಮುಳ್ಳು ಮುಳ್ಳಾಗೆ ನಿಲ್ಲುತ್ತಿತ್ತು. ಅವನು ನಡೆಯುವುದು, ಮಾತನಾಡುವುದು ಎಲ್ಲವೂ ಹುಡುಗಿಯರ ಹಾಗೆ ಇತ್ತು. ಅವನೂ ಅಷ್ಟೇ, ಗಂಡು ಹುಡುಗರ ಜೊತೆ ಸೇರುತ್ತಲೇ ಇರಲಿಲ್ಲ. ಗುಲಾಬಿಯಂತೂ ಅವನು ಬಂದಮೇಲೆ ಅವನಿಗೇ ಅಂಟಿಕೊಂಡು ಬಿಟ್ಟಿದ್ದಳು. ಅವನು ಗುಲಾಬಿ ಜೊತೆ ಮಾತ್ರ ಸ್ವಲ್ಪ ಮಾತನಾಡುತ್ತಿದ್ದ. ಅವಳ ಅಪ್ಪ ಪೋಲಿಸ್ ಪೇದೆ, ಅವರೂ ಉತ್ತರ ಕರ್ನಾಟಕದವರು. ಹಾಗಾಗಿ ಏನೋ ಅವರಿಬ್ಬರೂ ಬಾರಿ ಫ್ರೆಂಡ್ಸ್ ಆಗಿ ಬಿಟ್ಟಿದ್ದರು. ನನ್ನ ಹೆಸರನ್ನು ಅವನ ಹೆಸರಿನ ಜೊತೆ ಬೋರ್ಡಿನಲ್ಲಿ ಬರೆದ ದಿನ ಅವನ ಜೊತೆ ಅವಳೂ ಅತ್ತಿದ್ದಳು. ಅಂದಿನಿಂದ ಗುಲಾಬಿ ನನ್ನ ಜೊತೆ ಮಾತೇ ಅಡಲಿಲ್ಲ.
ಪಿ.ಟಿ ಮಾಸ್ತರು, ಶಾಲೆಯ ಮುಂಭಾಗದ ಅಂಗಡಿಯಾತ, ನನಗಿಂತ ದೊಡ್ಡ ಹುಡುಗರು, ಪಕ್ಕದ ಮನೆಯ ಅಂಕಲ್ಲೂ ಹೀಗೆ ಇವರೆಲ್ಲ ನನ್ನ ಎದೆಯನ್ನು ಆಸೆಯಿಂದ ನೋಡುವಾಗ ನನಗೆ ಸಿಟ್ಟು ಬರುತ್ತಿತ್ತಾದರೂ ಅವರನ್ನು ಎದುರಿಸಲು ಸಾಧ್ಯವಾಗದೆ ಅಲ್ಲಿಂದ ಆದಷ್ಟು ಬೇಗನೆ ಹೋಗಿ ಬಿಡುತ್ತಿದ್ದೆ. ನಮ್ಮ ಶಾಲೆಯ ಆವರಣಕ್ಕೆ ಅಪರೂಪಕ್ಕೆ ಒಬ್ಬಾತ ಸೈಕಲಿನಲ್ಲಿ ಬಾಕ್ಸ್ ಇಟ್ಟುಕೊಂಡು ಐಸ್ ಕ್ಯಾಂಡಿ ಮಾರುತ್ತಾ ಬರುತ್ತಿದ್ದ. ನನ್ನ ಗೆಳೆತಿಯರೆಲ್ಲರೂ ಅವನ ಬಳಿ ಐಸ್ ಕ್ಯಾಂಡಿ ಕೊಳ್ಳಲು ಮುಗಿಬಿದ್ದು ಓಡುತ್ತಿದ್ದರು. ನಾನು ಓಡುವುದನ್ನು ಮರೆತು ವರ್ಷಗಳೇ ಆಗಿ ಹೋಗಿತ್ತು. ಆಗ ನಮಗೆ ಹತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯ ಸಮಯ ನಮ್ಮ ಶಾಲೆಯಲ್ಲಿ ಅರ್ಧವಾರ್ಷಿಕ ಪರೀಕ್ಷೆಗಳು ದಿನಕ್ಕೆರಡರಂತೆ ಆಗುತ್ತಿದ್ವು. ಬೆಳಗ್ಗೆ ೧೦ರಿಂದ ೧೨ ಹಾಗು ಮಧ್ಯಾಹ್ನ ೨ರಿಂದ ಸಂಜೆ ನಾಲ್ಕರವರೆಗೆ ಪರೀಕ್ಷೆ ಇರುತ್ತಿತ್ತು. ಮಧ್ಯಾಹ್ನ ಲಂಚ್ ಬ್ರೇಕ್ ಸಮಯದಲ್ಲಿ ಈ ಐಸ್ ಕ್ಯಾಂಡಿ ಮಾರುವವನು ಬರುತ್ತಿದ್ದ. ಕಾಲೇಜಿನ ಫಾದರ್ ಆತನನ್ನು ಕಂಡರೆ ಬೈಯ್ಯುತ್ತಿದ್ದ ಕಾರಣ ಅವನು ಬೇಗನೆ ವ್ಯಾಪಾರ ಮುಗಿಸಿ ಅಲ್ಲಿಂದ ಹೋಗಿಬಿಡುತ್ತಿದ್ದ. ಶಾಲಾ ಆವರಣದಲ್ಲಿ ಹಾಗೆ ಬಂದು ವ್ಯಾಪಾರ ಮಾಡುವುದು ನಿಷಿದ್ಧವಾಗಿತ್ತು. ಅದಕ್ಕಾಗಿ ಅವನು ಬಂದ ಕೂಡಲೇ ಮಕ್ಕಳು ಅವನ ಸೈಕಲ್ ಸುತ್ತಾ ಮುಗಿ ಬಿದ್ದು ಬಿಡುತ್ತಿದ್ದರು. ನನಗೆ ಅವರಂತೆ ಓಡಲು ಮುಜುಗರ ಆಗುತ್ತಿತ್ತು. ಗೆಳೆಯರು ಕೇಳಿದರೆ ಅವನು ಚೆರಂಡಿ ನೀರಿನಲ್ಲಿ ಐಸ್‌ಕ್ಯಾಂಡಿ ಮಾಡುವುದಾಗಿ ಮನೆಯಲ್ಲಿ ಹೇಳಿರುವುದಾಗಿಯೂ ಹಾಗೆ ಅವನು ಐಸ್‌ಕ್ಯಾಂಡಿ ಮಾಡುವುದನ್ನು ಹಲವರು ನೋಡಿರುವುದಾಗಿಯೂ ನೆಪ ಹೇಳಿ ಐಸ್‌ಕ್ಯಾಂಡಿ ನನಗೆ ಬೇಡ ಎಂದು ಹೇಳುತ್ತಿದ್ದೆ. ನಾನು ಹಾಗೆ ಸುಳ್ಳು ನೆಪ ಹೇಳಿದರೂ ಅವರು ಅದಕ್ಕೆ ತಲೆಕೆಡಿಸಿಕೊಳ್ಳದೆ ಓಡಿ, ಮುಗಿಬಿದ್ದು ಐಸ್‌ಕ್ಯಾಂಡಿಯನ್ನು ಗಿಟ್ಟಿಸಿಕೊಂಡು ಚಪ್ಪರಿಸುತ್ತಿದ್ದರು. ನನಗೆ ಆಸೆಯಾಗುತ್ತಿತ್ತಾದರೂ ಉಗುಳು ನುಂಗಿಕೊಂಡು ಸುಮ್ಮನಿರುತ್ತಿದ್ದೆ. ಒಂದು ದಿನ ಹೇಗೋ ಧೈರ್ಯಮಾಡಿ ಸ್ವಲ್ಪ ನಡಿಗೆಯನ್ನು ವೇಗ ಮಾಡಿಕೊಂಡು, ಐಸ್‌ಕ್ಯಾಂಡಿಗಾಗಿ ಮುಗಿಬಿದ್ದಿದ್ದ ಗೆಳೆತಿಯರ ನಡುವೆ ನುಗ್ಗಿ ಹೋಗಿ. ಅಣ್ಣಾ ನಂಗೊಂದು ಕ್ಯಾಂಡಿ ಅಂದೆ ಅವನು ನನ್ನ ಮುಖವನ್ನು ಒಮ್ಮೆ ನೋಡಿ ಮುಗುಳ್ನಕ್ಕು ಐಸ್‌ಕ್ಯಾಂಡಿಯನ್ನು ನನಗೆ ಕೊಟ್ಟ. ಸಾಮಾನ್ಯವಾಗಿ ಎಲ್ಲಾ ಗಂಡಸರನ್ನು ಒಂದು ವರ್ಗಮಾಡಿ ದ್ವೇಷಿಸುತ್ತಿದ್ದ ನನಗೆ ಅವನ ನಿಷ್ಕಲ್ಮಶ ನಗು ಇಷ್ಟವಾಯಿತು. ಐಸ್ ಕ್ಯಾಂಡಿಗೆ ಐದು ರೂಪಾಯಿಯನ್ನು ಕೊಟ್ಟು ಅವನಿಗೆ ಥ್ಯಾಂಕ್ಯೂ ಅಂತ ಹೇಳಿ ಅಲ್ಲಿಂದ ಹಿಂತಿರುಗಿದೆ. ಸುಮ್ಮನೆ ಅವನನ್ನು ತಿರುಗಿ ನೋಡಬೇಕು ಅನ್ನಿಸಿತು. ನಿಧಾನಕ್ಕೆ ನಿಂತು ಅವನನ್ನು ಹಿಂತಿರುಗಿ ನೋಡಿದೆ, ಅವನು ಎಲ್ಲರಂತೆ ನನ್ನ ಹಿಂಭಾಗವನ್ನು ಗಮನಿಸದೆ ಅವನ ಪಾಡಿಗೆ ಅವನು ತಲೆ ತಗ್ಗಿಸಿಕೊಂಡು ಇತರ ಗಿರಾಕಿಗಳಿಗೆ ಐಸ್‌ಕ್ಯಾಂಡಿ ಕೊಡುವುದರಲ್ಲಿ ನಿರತನಾಗಿದ್ದ. ಅದರೊಂದಿಗೆ ಅವನ ಮೇಲೆ ಒಂದಿಷ್ಟು ಗೌರವವೂ ಮೂಡಿತು. ಅಲ್ಲಿಂದಾಚೆ ಆತನ ಸೈಕಲಿಗಾಗಿ ಕಾಯುತ್ತಾ ಇರುತ್ತಿದ್ದೆ, ಅವನೆಡೆಗೆ ಹೋಗಿ ಐಸ್‌ಕ್ಯಾಂಡಿ ಕೊಳ್ಳುವ ನೆಪಮಾಡಿ ಅವನು ನನ್ನ ಎದೆಯ ಭಾಗವನ್ನು ನೋಡುತ್ತಾನಾ… ಎನ್ನುವ ಕುತೂಹಲದಿಂದ ಆತನನ್ನು ಮೆಲ್ಲಗೆ ಗಮನಿಸುತ್ತಿದ್ದೆ. ಆತ ಮಾತ್ರ ಗಂಭೀರನಾಗಿ ಇರುತ್ತಿದ್ದ ಹಾಗು ಐಸ್‌ಕ್ಯಾಂಡಿಯನ್ನು ಕೈಗಿಡುವಾಗ ಮಾತ್ರ ನನ್ನ ಮುಖನೋಡಿ ಸಣ್ಣಗೆ ನಗುತ್ತಿದ್ದ, ನನಗೆ ಖುಷಿಯಾಗುತ್ತಿತ್ತು. ನನ್ನ ಚರಂಡಿ ನೀರಿನ ಐಸ್‌ಕ್ಯಾಂಡಿಯ ಕಥೆಯನ್ನು ಹಲವು ಬಾರಿ ನನ್ನ ಬಾಯಿಯಿಂದಲೇ ಕೇಳಿದ್ದ ಗೆಳೆಯರಿಗೆ ಮಾತ್ರ ನನ್ನ ಈ ವರ್ತನೆ ವಿಚಿತ್ರವಾಗಿ ಕಂಡಿರಬೇಕು.
ನಾವು ಹತ್ತನೇ ತರಗತಿ ಮುಗಿಸಿದ ನಂತರ ಗುಲಾಬಿ ಹಾಗು ಸುಬ್ರಮಣ್ಯ ಅವರವರ ಊರಿಗೆ ಹೋಗಿ ಬಿಟ್ಟರು. ನಾನು ಪುತ್ತೂರಲ್ಲೇ ಪಿ.ಯು.ಸಿ ಸೇರಿದೆ. ನನ್ನ ಎತ್ತರ ಕೊಂಚ ಸುಧಾರಣೆ ಕಂಡಿತ್ತು. ನಡುವೆ ಡೆಂಗ್ಯೂ ಜ್ವರ ಬಂದು ನಾನು ಸ್ವಲ್ಪ ಸಣ್ಣಗೂ ಆಗಿದ್ದೆ. ಎಲ್ಲಕ್ಕಿಂತಲೂ ನನ್ನ ಗೆಳೆತಿಯರು ಸ್ವಲ್ಪ ದಪ್ಪ ಆಗಿ ಅವರ ನಡುವೆ ನಾನೂ ಒಬ್ಬಳಂತೆ ಆಗಿದ್ದೆ. ಈಗ ಗಂಡಸರು ನನ್ನ ಎದೆಯನ್ನು ಮಾತ್ರ ನೋಡುತ್ತಿರಲಿಲ್ಲ.