ಮಾನವಿ ಬಂದೋಪಾಧ್ಯಾಯ ಅವರ ಕೃತಿ”ಗಂಡು ಜೀವ ಹೆಣ್ಣು ಭಾವ” ಕುರಿತು…
ದೀಪಕ್ ಪೊನ್ನಪ್ಪ
ಭಾರತದ ಪ್ರಪ್ರಥಮ ಲಿಂಗಪರಿವರ್ತಿತ ಪ್ರಾನ್ಶುಪಾಲರಾದ ಮಾನವಿ ಬಂದೋಪಾಧ್ಯಾಯ ಅವರ ಈ ಕೃತಿಯನ್ನು ಬಹಳಾ ಇಚ್ಛೆಪಟ್ಟು ತರಿಸಿಕೊಂಡಿದ್ದೆ. ಏಕೆಂದರೆ ಮಂಗಳ ಮುಖಿಯರೊಂದಿಗಾಗಲೀ ಲಿಂಗ ಪರಿವರ್ತಿತರೊಂದಿಗಾಗಲೀ ಈವರೆಗೂ ಯಾವುದೇ ಸಂಪರ್ಕ ಇಲ್ಲದ ನಾನು ಅವರ ಜೀವನಕ್ರಮವನ್ನು ತಿಳಿದುಕೊಳ್ಳುವ ಕುತೂಹಲವನ್ನು ಸಹಜವಾಗಿಯೇ ಬೆಳೆಸಿಕೊಂಡಿದ್ದೆ.
ಮುಚ್ಚುಮರೆ ಇಲ್ಲದೇ ಬಿಚ್ಚಿಡುವೆ ಎಲ್ಲವನು ಎನ್ನುವ ಮೊದಲ ಸಾಲಿನಲ್ಲೇ ಈ ಕೃತಿಯಲ್ಲಿ ಏನಿರಬಹುದೆಂಬ ಊಹೆಯಿಂದಲೇ ಓದಲು ಪ್ರಾರಂಬಿಸಿದ ನನಗೆ ಮೊದಲ (ಗಂಡಾಗಿ ಹುಟ್ಟಿದೆ ಹೆಣ್ಣಾಗಿ ಬೆಳೆದೆ)ಅಧ್ಯಾಯದಲ್ಲಿಯೇ ಇಡೀ ಕೃತಿಯ ನೈಜಚಿತ್ರಣ ಅರಿಯಿತು.ಪ್ರಸ್ತುತ ರೋಗಗ್ರಸ್ತ ಸಮಾಜದಲ್ಲಿ ಹೆಣ್ಣುಮಕ್ಕಳಿಗೇ ಬಹಳಷ್ಟು ರೀತಿಯಲ್ಲಿ ಶೋಷಣೆಯಾಗುತ್ತಿರುವಾಗ ಸಿಗುವ ಅವಕಾಶದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಆಶಯದಲ್ಲಿರುವ ಗಂಡೂ ಅಲ್ಲದ ಹೆಣ್ಣೂ ಅಲ್ಲದ ಮನುಷ್ಯರನ್ನು ಇನ್ನೆಷ್ಟರ ಮಟ್ಟಿಗೆ ನಮ್ಮ ಸಮಾಜ ಶೋಷಣೆಗೊಳಪಡಿಸಿರಬಹುದು ಎಂದು ನಾನು ಊಹಿಸಬಲ್ಲೆ.ಆದರೆ ಆ ಎಲ್ಲಾ ಸವಾಲುಗಳನ್ನು ಕಥೆಯ ನಾಯಕ(ಕಿ) ಎದುರಿಸಿದ ಪರಿ ನನ್ನನ್ನು ಬಹಳಷ್ಟು ಮೆಚ್ಚುವಂತೆ ಮಾಡಿದೆ.ತಾನು ಹುಟ್ಟಿಬೆಳೆದ ಮನೆಯಿಂದ ಹಿಡಿದು ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಲೆ ಮತ್ತು ಕಾಲೇಜಿನಲ್ಲಿಯೂ ವೃತ್ತಿಸಹಚರರಿಂದ ಎದುರಿಸಿದ ಸಂಕಷ್ಟಗಳು ಅಮಾನವೀಯವಾಗಿದೆ .
ಕೆಟ್ಟ ಮನುಷ್ಯರ ಜೊತೆಜೊತೆಯಲ್ಲಿಯೇ ಒಳ್ಳೆಯವರೂ ಇರುವಂತೆ ಲೇಖಕರ ಜೀವನದಲ್ಲಿಯೂ ಅವರ ಹೋರಾಟಕ್ಕೆ ಬೆಂಬಲವಾಗಿ ನಿಂತವರು ಹಲವಾರು.ಅದರಲ್ಲಿ ಪ್ರಮುಖ ಪಾತ್ರ ವಹಿಸಿದವರು ಮೊದಲಿಗೆ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆ ಮಾಡಿ ಒಬ್ಬ ಗಂಡಾಗಿದ್ದ ಸೋಮನಾಥನನ್ನು ಮಾನವಿ ಬಂದೋಪಾಧ್ಯಾಯ ಎನ್ನುವ ಹೆಣ್ಣಾಗಿಸಿದ್ದ ಡಾ.ಮನೋಜ್ ಖನ್ನಾ.ನಂತರದಲ್ಲಿ ಲಿಂಗ ಪರಿವರ್ತಿತರ ಬಗ್ಗೆಯೇ ಪಿ ಎಚ್ ಡಿ ಮಾಡಲು ಸಹಕರಿಸಿದ ಕಲ್ಯಾಣಿ ವಿಶ್ವ ವಿದ್ಯಾಲಯದ ಕಲ್ಯಾಣಿ ಶಂಕರ್ ಘಟಕ್ ಮತ್ತು ಅಲ್ಲಿನ ಉಪಕುಲಪತಿಗಳಾದ ಅಲೋಕ್ ಬ್ಯಾನರ್ಜಿಯವರು.ಅವರೆಲ್ಲರಿಗಿಂತ ಬಹುಮುಖ್ಯ ಪಾತ್ರ ವಹಿಸಿದ್ದು ಬಂಗಾಳದ ದೀದಿ ಮಮತಾ ಬ್ಯಾನರ್ಜಿಯವರು .ಅವರಿಂದಲೇ ಲೇಖಕರು ಪಿ.ಎಚ್.ಡಿ ಪದವಿಯನ್ನು ಸ್ವೀಕರಿಸಲು ಸಾಧ್ಯವಾಗಿದ್ದು ಮತ್ತು ಕೃಷ್ಣಗಢದಲ್ಲಿರುವ ಮಹಿಳಾ ಕಾಲೇಜಿನಲ್ಲಿ ಪ್ರಾನ್ಶುಪಾಲರ ಹುದ್ದೆ ಸ್ವೀಕರಿಸಿದ್ದು .ಅದೇನೆ ಇರಲಿ ಲೇಖಕರ ಜೀವನದಲ್ಲಿ ನಡೆದ ಘಟನೆಗಳು ಸಮಾಜದ ಅಮಾನವೀಯತೆಯ ಕೃತ್ಯಕ್ಕೆ ಸಾಕ್ಷಿಯಾಗಿದೆ. ಇಡೀ ಕೃತಿಯಲ್ಲಿ ಲೈಂಗಿಕತೆ ಬಗ್ಗೆ ಹೆಚ್ಚಾಗಿ ಬರೆದು ಕೆಲವೊಂದು ಕಡೆಯಲ್ಲಿ ತೀರಾ ಮುಜುಗರವಾಗುವಂತಹ ಬರಹಗಳಿದ್ದರೂ ಓದಿನ ನಂತರ ಮಂಗಳಮುಖಿಯರೆಡೆಗೆ ಮತ್ತು ಲಿಂಗ ಪರಿವರ್ತಿತರೆಡೆಗೆ ಒಂದು ಅನುಕಂಪ ಸೃಷ್ಟಿಯಾಗುವುದಂತೂ ನಿಜ. ತಮ್ಮ ತಮ್ಮ ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಲಾಗದೇ ಅವಕಾಶವನ್ನು ಕೈ ಚೆಲ್ಲುವವರಿಗೆ ಈ ಕೃತಿ ಆದರ್ಶವಾಗಬೇಕೆನ್ನುವುದು ನನ್ನ ವಿಮರ್ಶೆಯ ಆಶಯ.