“ಬಾ ನಲ್ಲೆ ಮಧುಚಂದ್ರಕೆ” ಪುಸ್ತಕದ ವಿಮರ್ಶೆ
1993ರಲ್ಲಿ ಬಿಡುಗಡೆಯಾದ “ಬಾ ನಲ್ಲೆ ಮಧುಚಂದ್ರಕೆ” ಚಿತ್ರವನ್ನು ಚಿಕ್ಕಂದಿನಿಂದಲೇ ಬಹಳಷ್ಟು ಬಾರಿ ವೀಕ್ಷಿಸಿದ್ದೆ.ಆದರೆ ಒಂದೊಂದು ತುಣುಕು ಕೂಡಾ ಮನದ ಪುಟಗಳಲ್ಲಿ ಅಚ್ಚುಳಿಯುವಂತೆ ವೀಕ್ಷಿಸಿದ್ದು ಮೊದಲ ಲಾಕ್ಡೌನ್ ನಲ್ಲಿ.ಕರೊನಾ ಮಹಾಮಾರಿಗೆ ತುತ್ತಾಗಿ ಇಡೀ ದೇಶವೇ ಬಂಧನಕ್ಕೆ ತುತ್ತಾಗಿದ್ದಾಗ ಮನೆಯಲ್ಲಿರಲಾರದೇ ಪ್ರತಿದಿನ ಕಛೇರಿಯಲ್ಲಿ ಕುಳಿತುಕೊಂಡು ಭವಿಷ್ಯದ ಬಗ್ಗೆ ಚಿಂತಿಸುತ್ತಿರುವಾಗ ಅದೊಂದು ದಿನ ಅಚಾನಕ್ಕಾಗಿ ಈ ಚಿತ್ರದ ಹೆಸರು ನೆನೆಪಿಗೆ ಬಂದು ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದೆ.ಕಳೆದ ವಾರದಲ್ಲಿ ಮನೆಯ ಸದಸ್ಯರೆಲ್ಲರೂ ಕುಳಿತು ವೀಕ್ಷಣೆ ಮಾಡಿದ್ದೆವು.ಅದೆಷ್ಟು ಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕೆನ್ನಿಸುವ ಕಥೆ, ಸಾಹಿತ್ಯ,ಸಂಗೀತವೆಲ್ಲವೂ ಈ ಚಿತ್ರದಲ್ಲಿದೆ.ಆದರೆ ಇಂದು 1987 ರಲ್ಲಿ ಪ್ರಕಟವಾದ “ಬಾ ನಲ್ಲೆ ಮಧುಚಂದ್ರಕೆ” ಪುಸ್ತಕ ಕೈ ಸೇರಿ ಓದಿಯೂ ಮುಗಿಸಿ ಇದೀಗ ಪ್ರೀತಿಯ ಅಮಲಿನಲ್ಲಿಯೇ ವಿಮರ್ಶೆ ಬರೆಯುತ್ತಿದ್ದೇನೆ.
ಕಥೆಯ ಶೀರ್ಷಿಕೆಯೇ ಹೇಳುವಂತೆ ಮಧುಚಂದ್ರಕ್ಕೆಂದು ನಾಯಕ ನಾಯಕಿ ರೊಥಾಂಗ್ ಪಾಸ್ ಪರ್ವತಕ್ಕೆ ತೆರಳುವಲ್ಲಿಂದ ಪ್ರಾರಂಭವಾಗಿ ಅಲ್ಲಿ ಸಂಭವಿಸುವ ನಾಯಕಿಯ ಮರಣಕ್ಕೆ ನೈಜ ಕಾರಣ ತಿಳಿದು ಆ ಕೃತ್ಯದ ಅಪರಾಧಿಯಾದ ನಾಯಕನನ್ನು ಪೋಲೀಸ್ ಅಧಿಕಾರಿ ಸಕ್ಸೇನಾ ಬಂಧಿಸುವುದರೊಂದಿಗೆ ದುಃಖಾಂತ್ಯವಾಗುತ್ತದೆ.ಬಹುಶಃ ಮದುವೆಯ ಎರಡು ದಿನಗಳ ಮುಂಚೆಯೇ ಮದುವೆಯ ಉಡುಗೊರೆಯನ್ನು ನೀಡಲು ನಾಯಕ ನಾಯಕಿಯ ಮನೆಗೆ ಹೋಗುವ ನಿರ್ಧಾರ ಮಾಡದೇ ಇದ್ದಿದ್ದರೆ ಈ ಕಥೆಯು ಮೂಡಿ ಬರುತ್ತಿರಲಿಲ್ಲವೇನೋ ಅಥವಾ ನಾಯಕ ನಾಯಕಿಯ ಮಧುಚಂದ್ರದೊಂದಿಗೆ ಸುಖಾಂತ್ಯವಾಗುತ್ತಿತ್ತೇನೋ.ತಿಳಿಯದು.
ನಾಗತಿಹಳ್ಳಿಯವರು ಹೇಳಿದಂತೆ ಈ ಕಥೆಯಲ್ಲಿ ಆಗಷ್ಟೇ ಅರಳಿದ ಹೂವುಗಳು ಉಸಿರುಗಟ್ಟಿ ಸತ್ತಿವೆ.ಆಗಷ್ಟೇ ಮೂಡಿದ ಪ್ರೀತಿ ಸಮಾಧಿಯೊಳಗೆ ಮಲಗಿದೆ.ಲೇಖಕರ ಪ್ರಕಾರ ಪ್ರೀತಿಯೆಂದರೆ ಸಾಲ ಮರುಪಾವತಿಯ ವ್ಯವಹಾರವಂತೆ .ಸಾಲ ಕೇಳಿದಾಗ ಬಾಕಿ ಕೊಡದಿದ್ದರೆ ಸಾಲ ಕೊಟ್ಟವನು ಸುಮ್ಮನೆ ಬಿಟ್ಟಾನೆಯೇ.ಪ್ರೀತಿಗೆ ಪ್ರೀತಿಯ ಗೋಪುರ ಕಟ್ಟಿ ಅವಳ ಆರಾಧಕನಾಗಿ ಭಕ್ತನಾಗಿ ಪ್ರೇಮದ ಸಾಲ ಕೊಟ್ಟವನು ನಾಯಕ ವಿವೇಕ್.ಮರುಪಾವತಿ ಸಾಧ್ಯವಾಗದಷ್ಟು ಪ್ರೀತಿಯ ಸಾಲ ನೀಡಿ ಮರುಪಾವತಿ ಆಗಲಿಲ್ಲವೆಂದು ದುಃಖದಲ್ಲೇ ಪ್ರೀತಿಯ ಪ್ರೀತಿಗೆ ಅಂತ್ಯ ಹಾಡಿದ.ಇಲ್ಲಿ ನಾಯಕ ಖಳನಾಯಕನೆಂದು ಸಕ್ಸೇನಾ ಅವರು ಸತ್ಯ ಶೋಧಿಸುವ ದೃಶ್ಯ ರೋಚಕಮಯವಾಗಿದೆ.ವಿವೇಕ್ ನಿರಪರಾಧಿ ಎಂದು ನಿರ್ಧರಿಸಿ ಹಿಂದಿರುಗಲು ಹೊರಟ ಅಧಿಕಾರಿಗೆ ರೈಲ್ವೇ ಸ್ಟೇಷನ್ ಬಳಿ ತಕ್ಷಣ ಅದೇನೋ ಹೊಳೆದಂತಾಗಿ ಅನುಮಾನ ಮೂಡಿ ರಿಸರ್ವೇಶನ್ ದಾಖಲೆ ಪರಿಶೀಲಿಸದೇ ಇದ್ದಿದ್ದರೆ ನಾಯಕ ಒಬ್ಬ ಅಮಾಯಕನಾಗಿಯೇ ಉಳಿಯುತ್ತಿದ್ದ ಕೊನೆಯವರೆಗೂ.ಮೈಸೂರಿನಿಂದ ದಿಲ್ಲಿಯವರೆಗೆ ಇಬ್ಬರಿಗೆ ಟಿಕೇಟ್ ರಿಸರ್ವ್ ಮಾಡಿ ಹಿಂದಿರುಗಲು ಅವನೊಬ್ಬನಿಗೇ ಟಿಕೇಟ್ ರಿಸರ್ವ್ ಮಾಡಿದ್ದೊಂದೇ ಆತನ ಆತುರದ ನಡೆ.ಸತ್ಯದಂತೆ ಕಾಣುವುದು ಅನೇಕ ಸಲ ಸುಳ್ಳಾಗಿರುತ್ತದೆ.ಮತ್ತು ಅನೇಕ ಸುಳ್ಳಿಗೆ ಸತ್ಯದ ಮುಖವಾಡವಿರುತ್ತದೆ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಯಿತು.
ಇನ್ನು ಲೇಖಕರ ಬರಹದ ಬಗ್ಗೆ ಹೇಳುವಷ್ಟು ತಿಳಿದವನಲ್ಲ ನಾನು.ಪದ್ಯಕ್ಕಿಂತಲೂ ಗದ್ಯದಲ್ಲಿ ಹೆಚ್ಚು ಆಸಕ್ತಿ ಇದೆ ಎಂದು ಹೇಳಿಕೊಳ್ಳುವ ಅವರು ಇಲ್ಲಿ ಒಬ್ಬ ಕವಿಯಾಗಿ ಲೇಖಕರಾಗಿ ಪ್ರೇಮದ ಆರಾಧಕರಾಗಿಯೂ ಒಂದೊಂದು ತುಣುಕನ್ನು ಅನುಭವಿಸಿ ಕಥೆ ಸೃಷ್ಟಿಸಿದ್ದಾರೆ.ಅದರ ತೀವೃತೆ ಎಷ್ಟೆಂದರೆ ಕಲ್ಲಿಗೂ ಪ್ರೀತಿಯಾಗಿ ಸುಂದರ ಶಿಲೆಯಾಗುವಷ್ಟು .ಸಣ್ಣ ಕೊಳ ಹರಿದು ಹರಿದು ಸರೋವರವಾಗುವಷ್ಟು ಮಾಂತ್ರಿಕತೆ ಅವರ ಬರಹದಲ್ಲಿದೆ.
ಅದೇನೇ ಇರಲಿ
ನಾನಂತೂ ಕಥೆಯನ್ನು ಓದಿದ ನಂತರ ನನ್ನ ನಿಲುವನ್ನು ನಾಯಕನ ಪರ ಹೊಂದಿದ್ದೇನೆ.ಏಕೆಂದರೆ ಪ್ರೀತಿಯಲ್ಲಿ ಗೊತ್ತಿದ್ದು ಮಾಡುವ ಮೋಸ ವಂಚನೆಗೆ ಶಿಕ್ಷೆಯೇ ಉತ್ತರ ಎನ್ನುವುದು ನನ್ನ ವಾದ .
ದೀಪಕ್ ಪೊನ್ನಪ್ಪ