ಭಾರತದೊಂದಿಗೆ ಯುದ್ಧಕ್ಕೆ ಸಿದ್ಧವಾಗುತ್ತಿದೆಯೇ ಬದ್ಧ ವೈರಿ ಚಂಗ್ಲು ಚೀನಾ..?
ಕೆಂಪು ಕಮ್ಯುನಿಷ್ಟ್ ರಾಷ್ಟ್ರ ಚೀನಾ ಇಡೀ ಜಗತ್ತಿಗೇ ಕೊರೋನಾ ಸಾಂಕ್ರಾಮಿಕ ವೈರಾಣು ಸೊಂಕಿನ ಆತಂಕ ಹರಡಿ ಮಜಾ ನೋಡುತ್ತಿದೆ. ಕೊರೋನಾ ಸೊಂಕು ಹರಡಿಸಿ, ಯಮಧರ್ಮನ ಏಜೆಂಟ್ನಂತೆ ಆಡುತ್ತಿರುವ ಚೀನಾ ನಿಜಕ್ಕೂ ಹೀನ. ಯಮಧರ್ಮ ರಾಯನಂತೂ ಪ್ರಾಣಗಳ ಹರಣದಲ್ಲಿ ಈಗ ಫುಲ್ಲು ಬ್ಯುಸಿ ಆಗಿಬಿಟ್ಟಿದ್ದಾನೆ.
ಕ್ರೂರಿ ಕೆಂಪು ರಾಷ್ಟ್ರ ಚೀನಾ ಈ ಕೊರೋನಾ ವಿಷಮ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿದೆ. ಅದಕ್ಕೆ ಲಡಾಕ್ ಪ್ರಾಂತ್ಯದ ಗಡಿಯಲ್ಲಿ ಅತಿಯಾದ ಸೇನಾ ಜಮಾವಣೆ ಮಾಡಿ, ಯುದ್ಧದ ಮುನ್ಸೂಚನೆಯನ್ನು ನೀಡುತ್ತಿರುವುದರಿಂದ ಭಾರತ ಕೂಡ ತನ್ನ ಸೇನೆಯನ್ನು ನಿಯೋಜನೆ ಮಾಡಿದೆ.
ಗಡಿಯಲ್ಲಿ ಚೀನಾದ ಕಾಟ ಭಾರತಕ್ಕೆ ಇದೇ ಮೊದಲೇನಲ್ಲ. ಹಿಂದೆ ಡೋಕ್ಲಾಂನಲ್ಲಿಯೂ ಚೀನಿ ಸೈನಿಕರು ಕಾಲು ಕೆರೆದುಕೊಂಡು ಖ್ಯಾತೆ ತೆಗೆದು ಭಾರತದ ಯೋಧರೊಂದಿಗೆ ಕೋಳಿ ಜಗಳ ಮಾಡಿ ಕೋಲಾಹಲ ಎಬ್ಬಿಸಿದ್ದರು.
ಇತಿಹಾಸವನ್ನು ಒಮ್ಮೆ ತಿರುವಿ ನೋಡಿದರೆ, ಚೀನಾ ತಪ್ಪಗೆ ಬಾಲ ಮುದುರಿಕೊಂಡು ಇದ್ದ ನಿದರ್ಶನಗಳೇ ಇಲ್ಲ. ಯಾವುದಾದರೊಂದು ಕಿರಿಕ್ ಸದಾ ಮಾಡುತ್ತಾ ವಿಕೃತಾನಂದ ಪಡುವುದೇ ಅದರ ಜಾಯಮಾನ. ಇತ್ತೀಚೆಗೆ ಚೀನಾ ತನ್ನ ಸೇನೆಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು, ಸೈನಿಕರನ್ನು ಕಡಿಮೆ ಮಾಡಿತ್ತು. ಸೇನೆಯಲ್ಲಿ ನವೀಕರಣ ಮಾಡಿ, ರೋಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತು. ಮತ್ತೂ ಶಕ್ತಿಶಾಲಿಯಾಗಿ ಮಾನವ ಸಂಪನ್ಮೂಲವನ್ನು ಕಡಿಮೆ ಮಾಡಿಕೊಂಡಿತ್ತು.
1962ರಲ್ಲಿ ಚೀನಾದ ಎದುರು ಭಾರತ ವೀರಾವೇಷದಿಂದ ಹೋರಾಡಿದರೂ, ಸರಿಯಾದ ಪೂರ್ವ ತಯಾರಿ, ಆಧುನಿಕ ಶಸ್ತ್ರಾಸ್ತ್ರ, ಸರಕಾರದ ಬೆಂಬಲದ ಕೊರತೆಯಿಂದ ಭಾರತ ಸೋಲು ಅನುಭವಿಸಬೇಕಾಯಿತು.
ಆದರೆ ಈವಾಗ ಯುದ್ಧ ನಡೆದರೆ, ಇತಿಹಾಸ ಮರುಕಳಿಸಲು ಸಾಧ್ಯವೇ ಇಲ್ಲ. ಏಕೆಂದರೆ ಭಾರತ ಸೇನೆ ಅತಿ ಹೆಚ್ಚಿನ ಪಾಲು ಸದೃಢವಾಗಿದೆ. ಅಷ್ಟಲ್ಲದೆ ಅಮೇರಿಕಾ, ಇಸ್ರೇಲ್, ಜಪಾನಿನ ಆಪ್ತಮಿತ್ರನೂ ಆಗಿದೆ ಭಾರತ.
ಯುದ್ಧ ಸಂಭವಿಸಿದರೆ, ಅಪಾರ ಸಾವು-ನೋವು, ನಷ್ಟ-ಕಷ್ಟ ಆಗುವುದಂತೂ ಖಚಿತ. ಮತ್ತು ಎರಡೂ ರಾಷ್ಟ್ರಗಳು ಅಣು ಶಕ್ತಿ, ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಕೂಡ ಬಾರಿ ಭಯ ಉಂಟು ಮಾಡುತ್ತಿದೆ.