ಹಗಲುಗಳು ನಿಗೂಢವಾಗಿದೆ
ಅಲ್ಲಿ ಹಸಿವು ಕಳಚಿಡಲು
ದುಡಿಯುವ ದೇಹವೊಂದೆ
ಪ್ರತ್ಯಕ್ಷ ಸಾಕ್ಷಿ
ಬೆಳಕಿದೆ ಎಂಬ ಭ್ರಮೆಗೆ !

ಮೈ ಬಗ್ಗಿಸಿ ತಲೆ ಎತ್ತದೆ
ದಿನಗಳು ಸಾವಿರ ಮುಟ್ಟಿದೆ ;
ಆದರೂ ನಿರೀಕ್ಷೆ ಪೊರೆ ಬದಲಿಸಿಲ್ಲ !
ತನ್ನ ದಾಹ ತಣಿಸಿಕೊಂಡಿಲ್ಲ !

ಬದುಕು ಬದಲಾಯಿಸಲು
ತೊಟ್ಟಿಕ್ಕಿ ಧರೆ ಸೇರುವ
ಬೆವರ ಹನಿ…ಯೂ
ಆ ನಾಳೆಗಳನ್ನು ಎಣಿಸುತ್ತಿವೆ ;
ಹಿಂದಿನದು ಮರೆತು !

ಸಧ್ಯಕ್ಕೆ ಬದಲಾವಣೆ ಬಯಸಿ
ಭೂಮಿಯ ಎದೆ ಅಗೆಯುವ
ಬೆಂಡಾದ ದೇಹ
ವಿಶ್ರಾಂತಿಯನ್ನೂ ನಿರಾಕರಿಸಿ
ಮೌನವಾಗಿ
ಶಾಂತವಾಗಿ
ಕನಸುಗಳಿಗೆ ಕನಸುಗಳನ್ನು ಪೋಣಿಸುತ
ಧ್ಯಾನಸ್ಥವಾಗಿದೆ !

ಇದು ನಿರೀಕ್ಷೆಯ ಬಾಳು
ಒಂದೇ… ಎರಡೇ… ಹತ್ತೇ…?
ಒಂದಕ್ಕೊಂದು ಮಿಗಿಲಾದವು
ನೆನೆದು ಬಗ್ಗಿದ ಶರೀರ ಖಾಯದ
ನೆತ್ತಿಯ ಮೇಲಿಂದ ಮೂಗಿನ
ತುದಿ ಸೇರಿದ ಹನಿ ಜಾರಿ
ಭೂಗರ್ಭ ಸೇರಿ ಮಣ್ಣಾಯಿತು
ಹ್ಹಾ… ಹ್ಹ… ಅದು ಬೆವರ ಹನಿ !

✒️-ದೀಕ್ಷಿ ಪಟ್ಟಡ (ದೀ.ಪ)
ಕೊಡಗು ಜಿಲ್ಲೆ

error: Content is protected !!