ಚಾರ್ಲಿ 777 ಒಂದು ಸಿನಿಮಾ ಅಲ್ಲ ಭಾವನಾತ್ಮಕ ಪಯಣ
ಚಾರ್ಲಿ 777 ಸಿನಿಮಾ ನಾಯಿ ಹಾಗು ಮನುಷ್ಯನ ಅನ್ಯೂನ್ಯ ಸಂಬಂಧವನ್ನು ಅತ್ಯಂತ ಸಂವೇದನಾಶೀಲವಾಗಿ ತೆರೆ ಮೇಲೆ ತೋರಿಸಿರುವ ಸಿನಿಮಾ. ಗಾಢವಾದ ಭಾವನಾತ್ಮಕತೆ ಹೊಂದಿರುವ ಚಿತ್ರದ ಕಥೆ ಪ್ರೇಕ್ಷಕನ ಹೃದಯವನ್ನು ಸ್ಪರ್ಶಿಸಿ, ಮೃದುವಾಗಿಸಿ ಕಂಬನಿ ತರಿಸುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಪ್ರೇಕ್ಷಕ ನಾಯಿಯೊಂದನ್ನು ಸಾಕಿದವನಾಗಿದ್ದರಂತೂ ಅವನು ಮ್ಲಾನವಾಗುವುದರಲ್ಲಿ ಎರಡು ಮಾತಿಲ್ಲ.
ಸಿನಿಮಾ ಅಲ್ಲಿಲ್ಲಿ ಹಾಸ್ಯದ ಕಚಗುಳಿ ಇಟ್ಟರೂ, ಸಿನಿಮಾದ ಉದ್ದಕ್ಕೂ ಭಾವನೆಗಳ ಹೂರಣ ತುಂಬಿ ಹೃನ್ಮನವನ್ನು ಸ್ನಗ್ಧಗೊಳಿಸುವಂತಿದೆ. ಡಾ. ಅಶ್ವಿನ್ ಕುಮಾರ್ ಹೆಸರಿನಲ್ಲಿ ರಾಜ್ ಬಿ.ಶೆಟ್ಟಿ ಪಶು ವೈದ್ಯ ಆಗಿ ಹಾಸ್ಯದ ಹೊನಲು ಅಲ್ಲಲ್ಲೇ ಮೂಡಿಸಿದರೆ, ದೇವಿಕಾ ಪಾತ್ರದಲ್ಲಿ ಸಂಗೀತಾ ಶೃಂಗೇರಿ ಅಚ್ಚುಕಟ್ಟಾಗಿ ನಾಯಕಿಯೇ ಅಲ್ಲವೇನೋ ಎಂಬಂತೆ ಸ್ವಾಭಾವಿಕವಾಗಿ ನಟಿಸಿದ್ದಾರೆ. ತಮಿಳಿನ ಸುಪ್ರಸಿದ್ಧ ನಟ ಬಾಬಿ ಸಿಂಹ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ, ತಮಿಳು ಭಾಷೆಯನ್ನು ಬಳಸಿ, ಕರುನಾಡು-ತಮಿಳುನಾಡಿನ ನಡುವೆ ಸಾಮರಸ್ಯದ ಸಂದೇಶ ಸಾರುವಂತಹ ಸಾತ್ವಿಕವಾಗಿ ನಟಿಸಿದ್ದಾರೆ. ನಿರ್ದೇಶಕ ಕನಕರಾಜ್. ಕೆ ನಿದೇರ್ಶಕರಾಗಿ ತಮ್ಮ ಪ್ರಥಮ ಪ್ರಯತ್ನದಲ್ಲೇ ಸೈ ಎನಿಸಿಕೊಂಡಿದ್ದಾರೆ. ಸಿನಿಮಾದ ಕೇಂದ್ರಬಿಂದು ಶ್ವಾನ ಚಾರ್ಲಿ ಮನೋಜ್ಞವಾಗಿ ಅಭಿನಯಿಸಿದೆ.
Dog inbreeding ಮಾಡಿಸಿ ಕೆಲವು breeders ಹಣದ ದುರಾಸೆಯಿಂದ ಹೇಗೆ ನಾಯಿ ಮರಿಗಳನ್ನು ಮಾರಣಾಂತಿಕ ಕಾಯಿಲೆಗೆ ದೂಡುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ. ನಾಯಿ ಬಾಲ ಇಟ್ಟುಕೊಂಡು ಸಿನಿಮಾ ಮಾಡುತ್ತಾ ಇದ್ದಾರೆ ಎಂದು ಆಡಿಕೊಂಡು ಹಲ್ಲು ಕಿರಿದವರ ಹಲ್ಲು ಮುರಿಯುವಂತಹ ಗುದ್ದನ್ನು ಸಿನಿಮಾದ ಮೂಲಕವೇ ನೀಡಿದ್ದಾರೆ ರಕ್ಷಿತ್ ಮತ್ತು ಅವರ ತಂಡ.
ಚಲನಚಿತ್ರದಲ್ಲಿ ನಾಯಕ ರಕ್ಷಿತ್ ಶೆಟ್ಟಿ ಅವರ ಧರ್ಮನ ಪಾತ್ರ ನಿಜಕ್ಕೂ ಮೆಚ್ಚುವಂತಿದೆ. ಒಬ್ಬ ಮನುಷ್ಯ ಸಂಬಂಧಗಳ ಬಗ್ಗೆ ಅರಿವಿಲ್ಲದ ಅಂತಮುರ್ಖಿ, ಮುಖಗೇಡಿ ಮನೆಗೆ ಬಂದು ಶ್ವಾನವೊಂದು ಸೇರಿದ ಮೇಲೆ ಹೇಗೆ ಸಮಾಜ ಮುಖಿಯಾಗಿ ಜನಾನುರಾಗಿಯಾಗಿ ಬದಲಾಗುತ್ತಾನೆ. ಅತ್ಯಂತ ನೀರಸ ಬದುಕಿನಲ್ಲಿ ಹೇಗೆ ಭಾವನಾತ್ಮಕತೆಯ ತೀವ್ರತೆಗೆ ಒಳಪಡುತ್ತಾನೆ ಎಂಬುದನ್ನು ಸಖತ್ ಆಗಿಯೇ ದೃಶ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅಂತಹ ಹೇಳಿಕೊಳ್ಳುವ ಹಾಡುಗಳಿರದಿದ್ದರೂ, ಸಿನಿಮಾಗೆ ತಕ್ಕಂತೆ ಹಿನ್ನಲೆ ಸಂಗೀತ ಹಾಗು ಹಾಡುಗಳಿವೆ. ಆ ನಿಟ್ಟಿನಲ್ಲಿ ನೂತನ ಪ್ರಯತ್ನದಲ್ಲಿ ನೋಬಿನ್ ಪಾಲ್ ಅವರು ಯಶ ಕಂಡಿದ್ದಾರೆ.
ಇಡೀ ಸಿನಿಮಾದಲ್ಲಿ ಎಲ್ಲೂ lag ಅನ್ನಿಸದಂತೆ ಅನಾವಶ್ಯಕ ದೃಶ್ಯಗಳಿಡದಂತೆ ಸಂಕಲನವನ್ನು ಕೂಡ ಚೊಕ್ಕವಾಗಿ ಮಾಡಲಾಗಿದೆ. ಕಾಶ್ಮೀರದ ದೃಶ್ಯಗಳಂತೂ ಕ್ಲೈಮ್ಯಾಕ್ಸ್ ನಲ್ಲಿ ಚಲನಚಿತ್ರಕ್ಕೆ ಬೇರೆಯದ್ದೇ ತೂಕವನ್ನು ನೀಡಿದೆ. Simple star ರಕ್ಷತ್ ಶೆಟ್ಟಿ ಎಂಬ ಬಿರುದಿಗೆ ಚೂರೂ ಕೂಡ ಧಕ್ಕೆಯಾಗದಂತೆ ಒಂದು ಸರಳ subject ಮೂಲಕ ಗಾಢವಾದ ಚಿತ್ರಕಥೆಯಿಂದ ಗೆದ್ದಿದ್ದಾರೆ.
ಅವನೇ ಶ್ರೀಮನ್ನಾರಾಯಣದ ನಂತರ ಸೂಕ್ತವಾದ ಸಿನಿಮಾದ ಮೂಲಕ ಪ್ರೇಕ್ಷಕರ ಎದುರು ಬಂದಿರುವ ರಕ್ಷತ್ ಈ ಬಾರಿ ನಿಜಕ್ಕೂ pan India conceptಗೆ deserving ಎಂಬಂತಹ ಸಿನಿಮಾವನ್ನೇ ಮಾಡಿ ಗೆದ್ದಿದ್ದಾರೆ.
ಒಟ್ಟಿನಲ್ಲಿ ನಾವುಗಳು ಈ ಸಿನಿಮಾ ನೋಡಿದ ಮೇಲೆ ನಾರಾಯಣ ಸ್ವರೂಪವೆಂದು ನಂಬುವಂತಹ ನಾಯಿಗಳನ್ನು ಮತ್ತಷ್ಟು ಇನ್ನಷ್ಟು ಪ್ರೀತಿಸುವುದರಲ್ಲಿ ಎರಡು ಮಾತಿಲ್ಲ. ಸಿನಿಮಾದಿಂದ Dog adoptionಗೂ ನೀವು ಮುಂದಾದರೂ ಅತಿಶಯೋಕ್ತಿ ಇಲ್ಲ…
ಚಾರ್ಲಿ 777 ಸಿನಿಮಾದ ಮೂಲಕ ವಿಭಿನ್ನವಾಗಿಯೇ ರಕ್ಷತ್ ಶೆಟ್ಟಿ ಅವರು comeback ಮಾಡಿ, ಅವನೇ ಶ್ರೀಮನ್ನಾರಾಯಣದ ಸಾಧಾರಣ ಗೆಲುವಿನಿಂದ ಸ್ವಲ್ಪ ಮಟ್ಟಿಗೆ ಸೊರಗಿದ್ದ imageಅನ್ನು ಸರಿ ಮಾಡಿಕೊಂಡಿದ್ದಾರೆ.
*****
5/5
ಅತ್ಯುತ್ತಮ