ಕೊಡಗಿನ ಭಕ್ತರಿಗೆ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ನೀಡಿ: ಅ.ಕೊ.ಸ
ಮೂಲನಿವಾಸಿಗಳ ಧಾರ್ಮಿಕ ಭಾವನೆಗಳೊಂದಿಗೆ ಆಟ ಬೇಡ ಅಖಿಲ ಕೊಡವ ಸಮಾಜ ಹಾಗೂ ಯೂಥ್ ವಿಂಗ್ ಎಚ್ಚರಿಕೆ!
ಕಾವೇರಿ ಮಾತೆಯ ನೈಜ ಭಕ್ತರನ್ನು ಕತ್ತಲೆಯಲ್ಲಿಟ್ಟು ಕಾವೇರಿ ತುಲಾಸಂಕ್ರಮಣ ಮಾಡುವ ಹುನ್ನಾರವನ್ನು ಅಖಿಲ ಕೊಡವ ಸಮಾಜ ಕೇಂದ್ರ ಸಮಿತಿ ಹಾಗೂ ಅಖಿಲ ಕೊಡವ ಸಮಾಜ ಯೂಥ್ ವಿಂಗ್ ತೀವ್ರವಾಗಿ ಖಂಡಿಸಿದ್ದು,ತೀರ್ಥೋದ್ಬವದಲ್ಲಿ ಮೂಲನಿವಾಸಿಗಳಿಗೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂಥ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಜಿಲ್ಲಾಡಳಿತ ಹಾಗೂ ಸರಕಾರದ ನಡೆಯನ್ನು ಖಂಡಿಸಿದ್ದಾರೆ.
ತೀರ್ಥೋದ್ಬವಕ್ಕೆ ಕಾಲಾವಕಾಶವಿದ್ದರೂ ಕೊನೆಯ ಗಳಿಗೆಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಅಧಿಕವಾಗಿ ಭಕ್ತರು ಬರುತ್ತಾರೆ ಎಂಬ ಹಿನ್ನಲೆಯಲ್ಲಿ ತೀರ್ಥೋದ್ಬವ ಸಂದರ್ಭ ಸೀಮಿತ ಜನರನ್ನು ಬಿಟ್ಟರೆ, ಇತರ ಯಾರಿಗೂ ಕ್ಷೇತ್ರದ ಒಳಗೆ ಪ್ರವೇಶವಿಲ್ಲ ಎನ್ನುವ ಆಜ್ಞೆ ಹೊರಡಿಸಿದ್ದು ಹಾಗೂ 9 ಅಥವಾ10 ಗಂಟೆಯ ನಂತರ ಕ್ಷೇತ್ರದ ಒಳಗೆ ಬಿಡುತ್ತಾರೆ ಎಂಬ ನಿಯಮ ಹೊರಡಿಸಿರುವುದು ಕಾವೇರಿಯ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಹುಟ್ಟಿನಿಂದ ಸಾವಿನವರೆಗೂ ಕುಲಮಾತೆ ಕಾವೇರಿಯೊಂದಿಗೆ ತಾಯಿ ಮಕ್ಕಳ ಸಂಬಂಧವಿದ್ದು, ತಾಯಿಯನ್ನು ನೋಡಲು ಮಕ್ಕಳನ್ನು ಬಿಡುವುದಿಲ್ಲವೆಂದರೆ ಹೇಗೆ ಎಂದು ಪ್ರಶ್ನೆ ಮಾಡಿರುವ ಅಖಿಲ ಕೊಡವ ಸಮಾಜ ಹಾಗೂ ಯೂಥ್ ವಿಂಗ್ ಸರಕಾರದ ಹಾಗೂ ಜಿಲ್ಲಾಡಳಿತದ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಡಿಯಲ್ಲಿ ಅನ್ಯಧರ್ಮದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗೆ ಹಾಗೂ ಅವರ ಸಹಾಯಕರಿಗೆ ಜವಬ್ದಾರಿಯನ್ನು ನೀಡದೆ ಆ ಅಧಿಕಾರಿಯನ್ನು ತಾತ್ಕಾಲಿಕವಾಗಿ ರಜೆ ಅಥವಾ ಆ ಹಬ್ಬದ ಉಸ್ತುವಾರಿಯನ್ನು ಅದೇ ಧರ್ಮದ ಅಧಿಕಾರಿಗಳಿಗೆ ನೀಡಬೇಕು ಎಂಬ ನಿಯಮವಿದೆ. ಸರಕಾರ ಹಾಗೂ ಸಂಬಂಧಪಟ್ಟವರು ಈ ನಿಯಮವನ್ನು ಏಕೆ ಪಾಲಿಸಿಲ್ಲ? ಕನಿಷ್ಠ ಪಕ್ಷ ಮೂಲನಿವಾಸಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಪರಿಜ್ಞಾನ ಸರಕಾರಕ್ಕೆ ಬೇಕು ಹಾಗೂ ಸಂಬಂಧಪಟ್ಟವರಿಗೂ ಬೇಕು ಅಲ್ಲವೆ? ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಂಡು ಕೊಡವರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ. ತೀರ್ಥೋದ್ಬವಕ್ಕೆ ಸಾಕಷ್ಟು ಕಾಲಾವಕಾಶವಿದ್ದರೂ, ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೆ ಕೊಡವರ ಮೇಲೆ ಗದಾಪ್ರಹಾರಕ್ಕೆ ನಿಂತಿರುವುದು ಎಷ್ಟು ಸರಿ? ದೇಶದಲ್ಲಿ, ರಾಜ್ಯದಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡಿದೆ ಎಂಬುದನ್ನು ಒಪ್ಪಿಕೊಳ್ಳೋಣ. ಇದಕ್ಕೆ ಯಾವ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಸದ್ಯದ ಮಟ್ಟಿಗೆ ಪ್ರಸ್ತುತ ವರ್ಷ ಹೊರಜಿಲ್ಲೆ ಹೊರ ರಾಜ್ಯದ ಭಕ್ತರಿಗೆ ಖಡಿವಾಣ ಜಿಲ್ಲೆಯ ನೈಜ ಭಕ್ತರಿಗೆ ಅವಕಾಶ ಮಾಡಿ ಕೊಡಿ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಜಿಲ್ಲೆಯ ರೆಸಾರ್ಟ್ ಹೋಂಸ್ಟೇ ಹಾಗೂ ಲಾಡ್ಜ್’ಗಳನ್ನು ಒಂದು ವಾರದ ಮಟ್ಟಿಗೆ ಮುಚ್ಚಿ ಪ್ರವಾಸಿಗರಿಗೆ ನಿರ್ಬಂಧ ಹಾಕಬೇಕಿತ್ತು. ಹಾಗೇ ಗಡಿಯಲ್ಲಿ ತಪಾಸಣೆ ಮಾಡಿ ಮೂಲನಿವಾಸಿ ಎನ್ನುವ ಯೋವುದಾದರೊಂದು ದಾಖಲೆ ಇದ್ದರೆ ಮಾತ್ರ ಬಿಡುವ ವ್ಯವಸ್ಥೆ ಮಾಡಬೇಕಿತ್ತು. ಇದ್ಯಾವುದನ್ನು ಮಾಡದೆ, ಇದೀಗ ಏಕಾ ಎಕಿ ಕೋವಿಡ್ ಸರ್ಟಿಫಿಕೇಟ್ ಖಡ್ಡಾಯ ಎಂದು ಅಥವಾ ಕ್ಷೇತ್ರದೊಳಗೆ ಬಿಡುವುದಿಲ್ಲ ಎನ್ನುವುದು ಎಷ್ಟು ಸರಿ. ಕೊನೆ ಗಳಿಗೆಯಲ್ಲಿ ಯಾವ ಸರಕಾರಿ ಆಸ್ಪತ್ರೆಯಲ್ಲಿ ಅಷ್ಟು ಬೇಗ ಕೋವಿಡ್ ಟೆಸ್ಟ್ ಮಾಡಿಕೊಡುತ್ತೆ ಒಂದು ಸಮಯ ಮಾಡಿಕೊಟ್ಟರು ನೂಕುನುಗ್ಗಲು ಹೆಚ್ಚಾಗಿ ಇಲ್ಲಿಯೂ ಕೋವಿಡ್ ಅಧಿಕವಾಗಲು ಕಾರಣವಾಗುವುದಿಲ್ಲವೇ. ಇನ್ನು ಖಾಸಗಿಯಲ್ಲಿ ಹಣವನ್ನು ಭರಿಸುವುದು ಯಾರು, ಕೊಡಗಿನ ಕಾವೇರಿ ಮಾತೆಯ ಭಕ್ತರೆಲ್ಲಾರು ಶ್ರೀಮಂತರೇ ಎಂದು ಚಿಂತಿಸಬೇಕಿದೆ. ಇದ್ಯಾವುದನ್ನು ಚಿಂತಿಸದೆ ಏಕಾಎಕಿ ತಲಕಾವೇರಿಗೆ ತೀರ್ಥೋದ್ಬವ ಸಮಯದಲ್ಲಿ ಬಿಡುವುದಿಲ್ಲವೆಂದರೆ ಹೇಗೆ, ಕೊಡವ ಧಾರ್ಮಿಕ ಭಾವನೆಯೊಂದಿಗೆ ಜಿಲ್ಲಾಡಳಿತವಾಗಲಿ ಅಥವಾ ಸರಕಾರವಾಗಲಿ ಆಟವಾಡುವುದು ಬೇಡ.
ಕೋವಿಡ್ -19 ಸೋಂಕು ಹರಡುವಿಕೆ ತಡೆಯುವ ಬಗ್ಗೆ ನೈಜ ಕಾಳಜಿಯಿದ್ದರೆ, ಜಿಲ್ಲೆಯ ಪ್ರವಾಸಿ ತಾಣ, ಹೋಂಸ್ಟೇ, ರೇಸಾರ್ಟ್ ಗಳಲ್ಲಿ ಪ್ರವಾಸಿಗರ ಜನಸಂದಣಿ ಕಳೆದ ಹಲವು ಸಮಯದಿಂದ ಅತೀ ಹೆಚ್ಚಾಗಿದೆ ಇವರನ್ನು ನಿಯಂತ್ರಿಸಿ . ಕೋವಿಡ್ 19 ನೆಪದಲ್ಲಿ ಕಾವೇರಿಗೆ ಕೊಡವರನ್ನು ನಿಯಂತ್ರಿಸುವ ಬಗ್ಗೆ ಅಥವಾ 144 ಸೆಕ್ಷನ್ ಚಿಂತನೆಯ ಕಾನೂನಿಗೆ ಮುಂದಾಗಿದ್ದು ಎಷ್ಟು ಸರಿ. ಮೊದಲು ಪ್ರವಾಸಿಗರ ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಾ.?
ಈಗಲೂ ಕಾಲ ಮಿಂಚಿಲ್ಲ ಕೂಡಲೇ 15ರಿಂದ ಜಿಲ್ಲೆಯ ರೆಸಾರ್ಟ್ ಹೋಂಸ್ಟೇ ಲಾಡ್ಜ್ ಬಂದ್ ಮಾಡಿ ಕಾವೇರಿಯ ನೈಜ ಭಕ್ತರಿಗೆ ತೀರ್ಥೋದ್ಬವಕ್ಕೆ ಮುಕ್ತ ಅವಕಾಶ ಮಾಡಿ ಕೊಡಿ ಎನ್ನುವುದು ನಮ್ಮ ಒತ್ತಾಯವಾಗಿದ್ದು ಕ್ಷೇತ್ರದ ಜನಪ್ರತಿನಿಧಿಗಳು ಈ ವಿಷಯದಲ್ಲಿ ಜಾರಿಕೊಳ್ಳುವುದು ಬೇಡ, ಮುಂದೆ ಇದಕ್ಕೆ ಬಹಳ ದಂಡ ತೆರಬೇಕಾಗುತ್ತೆ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮೋಜ ಯೂಥ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಜಂಟಿಯಾಗಿ ಹೇಳಿಕೆ ನೀಡಿ ಖಂಡಿಸಿದ್ದಾರೆ.