ಕಾಡಿಂದ ನಾಡಿಗೆ ಸೇರಿದ ಕರಿ ಮರಿ…
ಅಭಿಮನ್ಯು ಪಡೆಗೆ ಛೋಟಾ ಪೈಲ್ವಾನ್!
ವಿಶೇಷ ವರದಿ: ರಜತ್ ರಾಜ್ ಡಿ.ಹೆಚ್
ಚಿತ್ರ ಕೃಪೆ: ಜಗದೀಶ್ ಜೋಡ್ಬೆಟ್ಟು
ಆನೆಗಳು ಕಾಡಿನಲ್ಲಿ ತಮಗೆ ಹೇಗೆ ಬೇಕೋ ಹಾಗೆ ಹಿಂಡಿನಲ್ಲಿ ಓಡಾಡಿಕೊಂಡಿರುವಾಗ ಕೆಲವೊಮ್ಮೆ ಕೆಲವು ಆನೆಗಳು ಅಕಸ್ಮಾತಾಗಿ ಹಿಂಡಿನಿಂದ ಬೇರ್ಪಟ್ಟು ನಗರದ ಆನೆ ಶಿಬಿರಕ್ಕೆ ಮನುಷ್ಯನಿಂದಾಗಿ ಸೇರುವ ನಿದರ್ಶನಗಳನ್ನು ಈ ಹಿಂದೆಯೂ ನೋಡಿದ್ದೇವೆ. ಅಂತೆಯೇ ಕಲವು ದಿನಗಳ ಹಿಂದೆಯಷ್ಟೇ ಆರು ತಿಂಗಳ ಕರಿ( ಆನೆ) ಮರಿಯೊಂದು ಹಿಂಡಿನಿಂದ ಹಿಂದುಳಿದು ಒಬ್ಬಂಟಿಯಾಗಿ ಬಿಟ್ಟಿತ್ತು. ನಂತರ ಮನುಷ್ಯರಿಂದ ಮತ್ತಿಗೋಡು ಕಂಠೀಪುರದ ಆನೆ ಶಿಬಿರ ಸೇರಿತು. ಅದೀಗ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ.
ಮಾವುತರ ಹಾಗು ಕಾವಾಡಿಗಳ ಅಕ್ಕರೆಯೊಂದಿಗೆ ಬೆಳೆಯುತ್ತಿದ್ದು, ಈ ಛೋಟಾ ಭೀಮ್ ಗೆ ಹೆಸರಿನ್ನೂ ಇಡಬೇಕಷ್ಟೆ. ಶಿಬಿರದ ಆಹಾರ ಪದ್ಧತಿಗೆ ಅಸ್ತು ಎನ್ನುತ್ತಾ ರಾಗಿ, ಹುರುಳಿ, ಹೆಸರುಕಾಳು, ಅಕ್ಕಿ, ಉದ್ದು ಮಿಶ್ರಣವನ್ನು ಬೇಯಿಸಿ ಮಾಡಿದ ಆಹಾರವನ್ನು ಘಡತ್ ಆಗಿಯೇ ತಿನ್ನುತ್ತಿದೆ.
ಮತ್ತಿಗೋಡು ಕಂಠಾಪುರದ ಆನೆ ಶಿಬಿರದಲ್ಲಿ ಗಜ ಗುಂಪಿಗೆ ಎರಡು ಕಂದಮ್ಮಗಳು ಒಂದು ವರ್ಷದ ಹಿಂದಷ್ಟೇ ಸೇರಿಕೊಂಡು, ಆ ಮೂಲಕ ಒಟ್ಟು ಆನೆಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ವಾರದ ಹಿಂದಷ್ಟೇ ಸಿಕ್ಕಿರುವ ಈ ಆರು ತಿಂಗಳ ಪುಟಾಣಿ ಇಲ್ಲಿನ ಒಂದೂವರೆ ವರ್ಷ ಹರೆಯದ ಭುವನೇಶ್ವರಿ, 6 ವರ್ಷದ ಚಾಮುಂಡೇಶ್ವರಿಯೊಂದಿಗೆ ಆಡುತ್ತಾ, ಓಡುತ್ತಾ ಕೀಟಲೆ ಮಾಡುತ್ತಿದೆ.
ಇಲ್ಲಿ ಒಟ್ಟು 5 ಹೆಣ್ಣು, 17 ಗಂಡು, 1 ಮಖ್ನಾ ಆನೆಗಳು ಇದ್ದು, ಇವುಗಳಲ್ಲಿ ಅಂಬಾರಿ ಹೊರುವ ಅಭಿಮನ್ಯು, ಕಾಡಾನೆ ಮತ್ತು ಹುಲಿ ದಾಳಿಗೆ ಬಳಸುವ ಗೋಪಾಲಸ್ವಾಮಿ, ಬಲರಾಮ ಆನೆಗಳು ಸ್ಟಾರ್ ವ್ಯಾಲ್ಯೂ ಹೊಂದಿರುವ ಗಣ್ಯ ಗಮನೀಯ ಗಜಗಳಾಗಿವೆ. ಶಿಬಿರದಲ್ಲಿ ಇಳಿ ವಯಸ್ಸಿನ ಮಾಸ್ತಿ, ಭೀಮ, ಕೃಷ್ಣ ಕ್ಯಾತ, ಗೋಪಾಲಸ್ವಾಮಿ, ಅಶೋಕ, ಸೋಮಶೇಖರ, ಗಣೇಶ, ಮಹೇಂದ್ರ, ಶ್ರೀರಂಗ, ರಾಮಯ್ಯ, ಧ್ರುವ, ಭೀಮ್ ಎಲ್ಲರೂ ಘನ ಗಂಭೀರವಾಗಿ ಪಡೆಯ ಕಿರಿಯ ಆನೆಗಳ ಮುತುವರ್ಜಿ ವಹಿಸುತ್ತಿವೆ.
ಈ ಹಿಂದೆ ಸೌದೆ ಒಲೆ ಬಳಸಿ ದೊಡ್ಡ ಪಾತ್ರೆಗಳಲ್ಲಿ ಆಹಾರ ಬೇಯಿಸಲಾಗುತ್ತಿತ್ತು. ಆದರೆ ಕಳೆದ 10 ತಿಂಗಳಿನಿಂದ ಆನೆಗಳ ಆರೋಗ್ಯ ಕೆಡದಿರಲಿ ಎಂಬ ಕಾಳಜಿಯಿಂದ ಅವುಗಳ ಆಹಾರವನ್ನು ಬಾಯ್ಲರ್ ಬಳಸಿ ತಯಾರಿಸಲಾಗುತ್ತಿದೆ. ಎಲ್ಲದರ ನಡುವೆ ಈ ಸಣ್ಣ ಪುಟ್ಟ ವಯಸ್ಸಿನ ತುಂಟಾಟ, ಚೇಷ್ಟೆಗಳು ಸುತ್ತಮುತ್ತ ನೋಡುಗರ ಹರ್ಷಕ್ಕೆ ಕಾರಣವಾಗಿದೆ.