fbpx

ಸೆಪ್ಟೆಂಬರ್ 29 ವಿಶ್ವ ಹೃದಯ ದಿನ

ಹೃದಯ ಎಂದೊಡನೆ ಪ್ರೀತಿ, ಪ್ರೇಮಗಳಲ್ಲಿ ಬಳಸುವ, ನೀನೇ ನನ್ನ ಹೃದಯ ಎಂದು ಪ್ರೀತಿಗೆ ಸಾಂಕೇತಿಸುವ ಬಗ್ಗೆ ಲೇಖನ ಇದೆ ಎಂದು ಓದಲು ಆರಂಭಿಸಿದರೆ ಖಂಡಿತ ಅಂಥವರಿಗೆ ಇದು ನಿರಾಸೆ ಉಂಟುಮಾಡಬಹುದು. ಏಕೆಂದರೆ ವಿಶ್ವ ಹೃದಯ ದಿನದ ಅಂಗವಾಗಿ ಮಾನವನ ಹೃದಯ ಮತ್ತು ವಿಶ್ವ ಹೃದಯ ದಿನದ ಕಿರುಮಾಹಿತಿಯನಷ್ಟೇ ಈ ಲೇಖನ ಹೊಂದಿದೆ…

ಹೃದಯ ಮಾನವನ ಅತೀ ಪ್ರಮುಖಅಂಗ. ಯಾವುದೇ ಭಾಗಗಳಿಗೆ ಹಾನಿಯಾದರೂ(ಸೂಕ್ಷ್ಮ ಅಂಗಗಳನ್ನು ಹೊರತು ಪಡಿಸಿ) ಬದುಕಬಹುದು ಆದರೆ ಹೃದಯಕ್ಕೆ ಹಾನಿಯಾದರೆ ಬದುಕುಳಿಯುವುದು ಬಹಳ ಕಷ್ಟ. ಮೆದುಳು ದೇಹದ ಅಂಗಾಂಗಗಳನ್ನು ನಿಯಂತ್ರಿಸಿದರೆ ಹೃದಯ ಆ ನಿಯಂತ್ರಣಕ್ಕೆ ಅಗತ್ಯವಾದ ಶಕ್ತಿಯನ್ನು ರಕ್ತಪರಿಚಲನೆಯ ಮೂಲಕ ಒದಗಿಸುತ್ತದೆ.. ಹೃದಯದ ಕಾರ್ಯದ ಬಗ್ಗೆ ಕೊಂಚ ತಿಳಿದುಕೊಳ್ಳೋಣ…

ರಕ್ತವನ್ನು ಅಭಿದಮನಿ(veins)ಯಿಂದ ಹೃದಯ ಮತ್ತು ಶ್ವಾಸಕೋಶಗಳಿಗೆ ಪಂಪ್ ಮಾಡಿ, ಅಪಧಮನಿ(arteries)ಗಳ ಮೂಲಕ ಆಮ್ಲಜನಕ ತುಂಬಿದ ಶುದ್ಧ ರಕ್ತವನ್ನು ದೇಹದ ಇತರಪೂರೈಕೆ ಮಾಡುವ ಕೆಲಸವನ್ನು ಹೃದಯವು ನಿರ್ವಹಿಸುತ್ತದೆ, ಹೃದಯ ಸಮರ್ಪಕವಾಗಿ ತನ್ನ ಕೆಲಸವನ್ನು ಮಾಡುತ್ತದೆ ಎಂಬುದರ ಸೂಚಕವೇ ಅದರ ಲಬ್ ಡಬ್ ಸದ್ದು.
ಮನುಷ್ಯನ ಹೃದಯವು ನಿಜವಾಗಿಯೂ ಒಂದು ಪಂಪ್‌ನಂತೆ ಕಾರ್ಯನಿರ್ವಹಿಸುತ್ತಿದ್ದು, ಹಿಡಿ ಮುಷ್ಟಿಯಷ್ಟು ದೊಡ್ಡದಾದ ಶಕ್ತಿಯುತವಾದ ಸ್ನಾಯುಗಳು ದೇಹದ ಲಕ್ಷಾಂತರ ಜೀವಕೋಶಗಳಿಗೆ ರಕ್ತವನ್ನು ಪೂರೈಕೆ ಮಾಡುತ್ತದೆ.

ಸಾಮಾನ್ಯ ವ್ಯಕ್ತಿಯ ಹೃದಯವು ಐದು ಲೀಟರಿನಷ್ಟು ರಕ್ತವನ್ನು ಪಂಪ್ ಮಾಡುತ್ತದೆ, ಅದು ನಿರಂತರವಾಗಿ ಇಡೀ ದೇಹದಲ್ಲಿ ಹರಿಯುತ್ತಿರುತ್ತದೆ.
ರಕ್ತವು ಹೃದಯದಿಂದ ಅಪಧಮನಿ(Arteries) ಎಂಬ ರಕ್ತನಾಳಗಳಿಗೆ ಸಂಚರಿಸಿ, ನಂತರ ಲೋಮನಾಳ(capillaries)ಗಳೆಂಬ ಸಣ್ಣ ರಕ್ತನಾಳಗಳಿಗೆ ಹರಿದು ಕೊನೆಯಲ್ಲಿ ಅಭಿಧಮನಿಗೆ ಸಂಚರಿಸಿ ಹೃದಯಕ್ಕೆ ಮರಳುತ್ತದೆ.

ಸುಮಾರು 60 ಸೆಕೆಂಡುಗಳಲ್ಲಿ ನಡೆದು ಹೋಗುವ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ರಕ್ತವು ನಮ್ಮ ದೇಹದ ಮೂಳೆಗಳಿಗೆ, ಮಾಂಸಖಂಡಗಳಿಗೆ, ಜೀವಕೋಶಗಳಿಗೆ ಮತ್ತು ಇತರ ಎಲ್ಲಾ ಅವಯವಗಳಿಗೆ ಶುದ್ಧರಕ್ತ ಸಹಿತ ಆಮ್ಲಜನಕದೊಂದಿಗೆ ಸಂಪೂರ್ಣ ಆರೈಕೆಯನ್ನು ನೀಡುತ್ತದೆ.

ವಿಶ್ವ ಹೃದಯ ದಿನ
1999ರಿಂದ ಪ್ರತಿ ವರ್ಷದ ಸೆಪ್ಟೆಂಬರ್ ನಲ್ಲಿ ಕೊನೆಯ ಭಾನುವಾರ ವಿಶ್ವ ಹೃದಯ ದಿನವನ್ನು (World Heart Day) ವಿಶ್ವ ಹೃದಯ ಸಂಸ್ಥೆ (ವರ್ಲ್ಡ್ ಹಾರ್ಟ್ ಫೆಡರೇಷನ್ ) ಯು ಆಯೋಜಿಸುತಿತ್ತು.ಆದರೆ 2011 ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರದ ಬದಲಾಗಿ ಸೆಪ್ಟೆಂಬರ್29ರಂದು ಆಚರಿಸಲಾಗುತ್ತದೆ. ವಿಶ್ವ ಹಾರ್ಟ್ ಫೆಡರೇಶನ್ ಸಂಸ್ಥೆಯು ಮುಖ್ಯ ಅಪಾಯಕಾರಿ ಅಂಶಗಳಾದ , ತಂಬಾಕು, ಅನಾರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆ ಇಲ್ಲದಿರುವಿಕೆ ಗಳನ್ನು ನಿಯಂತ್ರಿಸುವುದರಿಂದ ಹೃದಯ ರೋಗ ಮತ್ತು ಹೃದಯಾಘಾತಗಳಿಂದ ಅಕಾಲಿಕ ಮರಣಗಳನ್ನು ಕನಿಷ್ಠ ಪ್ರತಿಶತ ೮೦ರಷ್ಟರ ಮಟ್ಟಿಗೆ ತಪ್ಪಿಸಬಹುದಾಗಿದೆ ಎಂದು ಪ್ರಚಾರ ಮಾಡುತ್ತದೆ ಹಾಗೂ ಇದರ ಕುರಿತಾಗಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತದೆ.

ವಿಶ್ವ ಹೃದಯ ಸಂಸ್ಥೆಯು (ವರ್ಲ್ಡ್ ಹಾರ್ಟ್ ಫೆಡರೇಷನ್ ) ಹೃದಯ ಕಾಯಿಲೆಗಳ ತಡೆಗಟ್ಟುವಿಕೆಗಾಗಿ ಮೀಸಲಾಗಿರುವ ಜಾಗತಿಕ ಸಂಸ್ಥೆಯಾಗಿದೆ.ಮತ್ತು ಏಷ್ಯಾ ಫೆಸಿಫಿಕ್, ಯುರೋಪ್, ಪೂರ್ವ ಮೆಡಿಟರೇನಿಯನ್, ಅಮೆರಿಕಾ ಮತ್ತು ಆಫ್ರಿಕಾದ ಪ್ರದೇಶಗಳಲ್ಲಿರುವ ಸುಮಾರು 100 ದೇಶಗಳ ಹೃದಯ ಸಂಬಂದಿತ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದು ಸ್ವಿಜರ್ಲ್ಯಾಂಡ್ ನ ಜಿನೀವಾ ಮೂಲದ ಸರಕಾರೇತರ ಸಂಘಟನೆಯಾಗಿ ಗುರುತಿಸಿಕೊಂಡಿದೆ.

ಹೃದಯ ದಿನದ ಈ ಶುಭ ಸಂದರ್ಭದಲ್ಲಿ ಉತ್ತಮ ಆಹಾರ ಸೇವನೆ, ಹವ್ಯಾಸಗಳ ಮೂಲಕ ಹೃದಯವನ್ನು ಕಾಪಾಡಿಕೊಳ್ಳೋಣ,ಆ ಮೂಲಕ ನಾಳಿನ ಉತ್ತಮ ಆರೋಗ್ಯಯುತ ಜೀವನ ನಮ್ಮ ನಿಮ್ಮದಾಗಲಿ ಎಂದು ಹಾರೈಸುತ್ತ,ಸರ್ವರಿಗೂ ವಿಶ್ವ ಹೃದಯ ದಿನದ ಶುಭಾಶಯಗಳು…

ಮಾಹಿತಿ ಕೃಪೆ:ಅಂತರ್ಜಾಲ.

✍🏻 ಪ್ರತೀಕ್ ಪರಿವಾರ ಮರಗೋಡು

error: Content is protected !!