ಸುದ್ದಿ ಸಂತೆ ಶುರುವಾದ ದಿನಗಳನ್ನು ನೆನೆಯುವುದಾದರೆ…

ಅಂಕಣ: ಅಳೆದು ತೂಗಿ

ಜೀವನ್ ಅಚ್ಚಲ್ಪಾಡಿ,

ಅದು ಮೇ ತಿಂಗಳ 3ನೇ ತಾರಿಕು 2020, ನಾವು ಸುದ್ದಿಸಂತೆ ಆರಂಭಿಸಿದ ಸುದಿನ. ಕಾಪಿ ಪೇಸ್ಟ್ ಸುದ್ದಿಗಳನ್ನು ಮಾಡುವುದಿಲ್ಲ. 10ರಲ್ಲಿ 11ನೇ ಸುದ್ದಿ ಸಂಸ್ಥೆಯಾಗುವುದಿಲ್ಲ ಎಂದು ನಿಮಗೆ ಅಂದರೆ ಓದುಗರಿಗೆ ಭರವಸೆ ಕೊಟ್ಟಿದೆವು. ಅಂತೆಯೇ ಈಗಲೂ ನಡೆದುಕೊಳ್ಳುತ್ತಿದ್ದೇವೆ.

ಮಡಿಕೇರಿಯಲ್ಲಿ ಪದವಿ ಪೂರ್ವ ವ್ಯಾಸಂಗ ಮಾಡುತ್ತಿದ್ದಾಗ ಇಲ್ಲಿನ ಸ್ಥಳೀಯ ಚಾನಲ್ ಒಂದರಲ್ಲಿ ನಿರೂಪಣೆ ಮಾಡುತ್ತಿದ್ದೆ. ಆಮೇಲೆ ಸುದ್ದಿ ಸಂಸ್ಥೆಗಳ ಸಹವಾಸ ಬಿಟ್ಟು ಹೋಗಿತ್ತು. ಬೆಂಗಳೂರಿನಲ್ಲಿ ಐ.ಟಿ ಕ್ಷೇತ್ರದಲ್ಲಿ ಹಲವು ಕಂಪೆನಿಗಳಲ್ಲಿ ಉದ್ಯೋಗಿಯಾಗಿದ್ದ ನಾನು ಕೊರೋನಾ ಸಾಂಕ್ರಾಮಿಕ ಸೊಂಕು ಅಲ್ಲಿ ಉಲ್ಭಣವಾಗಿದ್ದರಿಂದ ‘Work From Home’ ಮಾಡಲು ನನ್ನ ಊರಾದ ಕೊಡಗಿನ ಮಡಿಕೇರಿಗೆ ಬಂದೆ. ಪದವಿ ಪೂರ್ವ ಶಿಕ್ಷಣದ ಸಮಯದಲ್ಲಿ ಸಹಪಾಠಿಯಾಗಿದ್ದ ಮಿತ್ರ ರಜತ್ ರಾಜ್ ಅವರು ನನಗೆ ಫೇಸ್ ಬುಕ್ ಮುಖಾಂತರ ಮತ್ತೆ ಪರಿಚಯವಾಗಿ ನಾನು ಅವರು ಪತ್ರಿಕೆಗಳಿಗೆ ಬರೆಯುತ್ತಿದ್ದ ಬರಹಗಳನ್ನು ಮೆಚ್ಚಿ, ನನಗಿದ್ದ ಸಿನಿಮಾ ಉದ್ಯಮದ ಕಲಾವಿದರನ್ನು ಅವರಿಗೆ‌ ಪರಿಚಯಿಸಿ, ಅವರುಗಳ ಸಂದರ್ಶನ ಮಾಡಿ ಎಂದು ಸಲಹೆ ನೀಡಿದ್ದೆ. ಅವರೂ ಆ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅವುಗಳನ್ನೆಲ್ಲಾ ಚೆಂದವಾಗಿ ಬರೆದು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಿದರು.

ಅಲ್ಲಿಂದ ಶುರುವಾಗಿತ್ತು ಮತ್ತೆ ಸ್ನೇಹ. ನಾನು ಲಾಕ್ ಡೌನ್ ಆದ ಕಾರಣ ಬಿಡುವಿದ್ದಾಗೆಲ್ಲಾ ಕರೆ ಮಾಡಿ ಮಾತನಾಡುತ್ತಿದ್ದೆ. ಆಗ ಅವರು ವೆಬ್ ಸೈಟ್ ಒಂದನ್ನು ಆರಂಭಿಸಬೇಕೆಂಬ ಆಶಯ ವ್ಯಕ್ತ ಪಡಿಸಿದರು. ವೆಬ್ ವಿನ್ಯಾಸ ಮಾಡಿಸಿ ಆರಂಭಿಸಿಯೇ ಬಿಟ್ಟೆವು. ನಮ್ಮೊಂದಿಗೆ ತಾಂತ್ರಿಕ ಮುಖ್ಯಸ್ಥರಾಗಿ ಗೆಳೆಯ ತೇಜಸ್ ಸೇರಿಕೊಂಡರು. ಯುವ ಪ್ರತಿಭೆಗಳ ಬಗ್ಗೆ ಹಾಗು ಅವರ ಸಾಧನೆಗಳ ಪರಿಚಯ ಮಾಡುವ ಲೇಖನ, ಸಂದರ್ಶನಗಳಿಂದ ಆರಂಭವಾಗಿ ನಂತರ ಇತಿಹಾಸ, ರಾಜಕೀಯ, ಅಂತರಾಷ್ಟ್ರೀಯ ವಿಚಾರಗಳು, ಅಂಕಣಗಳನ್ನು ಆರಂಭಿಸಿದೆವು. ಪ್ರಮುಖವಾಗಿ ಕೊಡಗಿನ ಪ್ರಾದೇಶಿಕ ಜನಾಂಗಗಳ ಭಾಷೆಯಾದ ಅರೆಭಾಷೆ ಹಾಗು ಕೊಡವ ಭಾಷೆಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಎರಡು ವಿಭಾಗಗಳನ್ನು ಶುರು ಮಾಡಿದೆವು. ಈಗ ಸ್ಥಳೀಯ ಕೊಡಗಿನ ಸ್ಥಳೀಯ ಸುದ್ದಿಗಳನ್ನೂ ಆರಂಭಿಸಿದ್ದೇವೆ.

ಈಗ ಸುದ್ದಿ ಸಂತೆ ಸದ್ದು ಮಾಡುತ್ತಿದೆ. ಜನರಿಗೆ ಹತ್ತಿರವೂ ಆಗುತ್ತಿದೆ. ದಿನ ಕಳೆದಂತೆ ಓದುಗರು ಹೆಚ್ವುತ್ತಿದ್ದಾರೆ. ಅಚಾನಕ್ ಆಗಿ ಪ್ರಾರಂಭಿಸಿದ ಸುದ್ದಿ ಸಂತೆ ಯಶಸ್ಸಿನ ಪಥದಲ್ಲಿ ಸಾಗುತ್ತಿರುವುದನ್ನು ಕಂಡಾಗ ಸಂತೋಷವಾಗುತ್ತದೆ. ಕೆಲ ದಿನಗಳ ಹಿಂದಷ್ಟೇ ಅನುಭವಿ ವರದಿಗಾರರಾದ ಪತ್ರಕರ್ತ ಗಿರಿಧರ್ ಕೊಂಪುಳೀರ ಅವರು ನಮ್ಮ ತಂಡ ಸೇರಿದ್ದು, ಅವರಿಂದಲೂ ನಮ್ಮ ಧೈರ್ಯ ದುಪ್ಪಟ್ಟಾಗಿದೆ.

ಜೊತೆಗೆ ಸುದ್ದಿಸಂತೆಯಿಂದ ಹಲವಾರು ಹೊಸ ಯುವ ಬರಹಗಾರರನ್ನು ಸಮಾಜಕ್ಕೆ ಪರಿಚಯಿಸುತ್ತಿದ್ದೇವೆ ಎಂಬ ಸಂತೋಷವೂ ನಮ್ಮ ತಂಡಕ್ಕೆ ಇದೆ. ಸುದ್ದಿ ಸಂತೆ ಸುದ್ದಿ ಅಷ್ಟೆ ಪ್ರಕಟಿಸದೆ ಸ್ವಾರಸ್ಯವನ್ನು ಕೂಡ ಕಾಪಾಡಿಕೊಳ್ಳುತ್ತಿರುವುದರಿಂದ ನಮ್ಮ ಅಡಿ ಬರಹ ‘ಸುದ್ದಿ ಸಾಮಾನ್ಯ, ಸ್ವಾರಸ್ಯವೇ‌ ಮಾನ್ಯ’. ನಿಮ್ಮ ಆಶೀರ್ವಾದ ಹೀಗೆ‌ ಇರಲಿ. ಸುದ್ದಿಸಂತೆಯನ್ನು ಖಾಯಂ ಆಗಿ ಓದಿ ನಮ್ಮನ್ನು ಪ್ರೋತ್ಸಾಹಿಸಿ!

ಜೀವನ್ ಅಚ್ಚಲ್ಪಾಡಿ, ಸಹ ಸಂಪಾದಕರು
error: Content is protected !!