fbpx

ಸಚಿವ ನಾಗೇಶ್ ಅವರಿಂದ ಗೋ ಶಾಲೆ ಉದ್ಘಾಟನೆ

ಮಡಿಕೇರಿ ಅ.10:-ನಗರದ ಕೆ.ನಿಡುಗಣೆ ಗ್ರಾಮದ 8 ಎಕರೆ ಪ್ರದೇಶದಲ್ಲಿ ರೂ.53 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಗೋ ಶಾಲೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಉದ್ಘಾಟಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು ಜಿಲ್ಲಾ ಪ್ರಾಣಿದಯಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ನಿಡುಗಣೆ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಸರ್ಕಾರಿ ಗೋ ಶಾಲೆಯ ಉದ್ಘಾಟನಾ ಕಾರ್ಯಕ್ರಮವು ಸೋಮವಾರ ನಡೆಯಿತು.

ಬಳಿಕ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ರೂ. ಒಂದು ಕೋಟಿ ಮೊತ್ತದ ಗೋಶಾಲೆಗಾಗಿ ರೂ.53 ಲಕ್ಷ ವ್ಯಯಿಸಲಾಗಿದೆ. ಇದರಲ್ಲಿ 50 ಜಾನುವಾರುಗಳನ್ನು ಕಟ್ಟಿಹಾಕಲು ಸ್ಥಳಾವಕಾಶ ಇರುವ ಶೆಡ್ ನಿರ್ಮಿಸಲಾಗಿದೆ. ಜೊತೆಗೆ ಭದ್ರತಾ ಸಿಬ್ಬಂದಿ, ಕಚೇರಿ ಕೊಠಡಿ, ನೀರಿನ ಟ್ಯಾಂಕ್, ಗೊಬ್ಬರದ ಗುಂಡಿಗಳನ್ನು ನಿರ್ಮಿಸಲಾಗಿದೆ ಇನ್ನುಳಿದ ಹಣವನ್ನು ಇತರೆ ಸೇವೆಗಳಿಗಾಗಿ ವ್ಯಯ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ದೇಶವು ಪ್ರಪಂಚದ ಜಿಡಿಪಿಯಲ್ಲಿ ಹಲವಾರು ವರ್ಷಗಳ ಕಾಲ ತನ್ನ ಛಾಪನ್ನು ಬೀರಿತ್ತೋ. ಪ್ರಪಂಚದಲ್ಲಿನ ಜಿಡಿಪಿ ಯಲ್ಲಿ ಶೇ.30 ರಷ್ಟು ತನ್ನ ಶೇರ್‍ನ್ನು ಹೊಂದಿತ್ತೋ. ಆ ದೇಶವು ತನ್ನ ದೇಶದ ಆರ್ಥಿಕತೆಯನ್ನು ಗೋವಿನ ಆಧಾರದ ಮೇಲೆ ಮಾಡಿತ್ತು ಎನ್ನುವಾಗ ಆಶ್ಚರ್ಯವಾಗುತ್ತದೆ ಎಂದರು.

1800 ರ ಈಚೆಗೆ ಪ್ರಪಂಚದ ಆರ್ಥಿಕ ವ್ಯವಸ್ಥೆಯನ್ನು ಅಧ್ಯಯನ ಮಾಡಿದ ತಜ್ಞರು ಹೇಳಿರುವ ವರದಿಯಾಗಿದೆ. ಭಾರತದ ಆರ್ಥಿಕ ವ್ಯವಸ್ಥೆಯು ಗೋವಿನ ಆಧಾರದ ಮೇಲೆ ನಿಂತಿತ್ತು ಎಂದು ಅವರು ಹೇಳಿದರು.
ದೇಶದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ಆ ನಿಟ್ಟಿನಲ್ಲಿ ಗೋವಿನ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪ್ರತಿಯೊಬ್ಬರೂ ಗೋವನ್ನು ಪೂಜ್ಯನೀಯ ಭಾವದಿಂದ ಕಾಣುವಂತಾಗಬೇಕು ಎಂದು ಅವರು ಹೇಳಿದರು. 

ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಪ್ರಸ್ತುತ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಿಂದಲೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ ಎಂದರು.

ಗೋಶಾಲೆ ನಿರ್ಮಾಣವಾಗಿರುವ ಜಾಗವು ಗೋಮಾಳವಾಗಿರುವುದರಿಂದ ಒಟ್ಟು 24 ಎಕರೆ ಜಾಗದಲ್ಲಿ 21 ಎಕರೆ ಜಾಗವನ್ನು ಗೋಶಾಲೆಗೆ ನೀಡುವಂತಾಗಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಹಿಂದಿನ ಕಾಲದಲ್ಲಿ ಹಸುವಿನ ಹಾಲನ್ನು ಮಾರಿ ಹಲವಾರು ಜನ ಮಕ್ಕಳ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಹಸುವಿನ ಹಾಲಿನ ಉತ್ಪನ್ನಗಳಾದ ಬೆಣ್ಣೆ, ಮೊಸರು, ತುಪ್ಪ ಇನ್ನಿತರ ಉತ್ಪನ್ನಗಳ ಉಪಯೋಗದಿಂದ ಉತ್ತಮ ಆರೋಗ್ಯದಿಂದ ಇರುತ್ತಿದ್ದರು. ಬದಲಾದ ಆಹಾರ ಪದ್ಧತಿಯಿಂದ ಇದು ಮರೆಯಾಗಿದೆ ಎಂದರು.
ಗೋವಿನ ಸಗಣಿಯೂ ಸಾವಯವ ಗೊಬ್ಬರವಾಗಿದ್ದು. ಸಗಣಿ ಗೊಬ್ಬರದಿಂದ ಸಸ್ಯಗಳಿಗೆ ಉತ್ತಮ ಪೋಷಕಾಂಶಗಳು ಸಿಗುತ್ತಿದ್ದು. ಇದರಿಂದ ಹಿಂದಿನವರು ಹಲವಾರು ವರ್ಷಗಳ ಕಾಲ ಆರೋಗ್ಯವಂತರಾಗಿ ಜೀವಿಸುತ್ತಿದ್ದರು. ಪ್ರಸ್ತುತ ರಾಸಾಯನಿಕ ಗೊಬ್ಬರಗಳನ್ನು ಬಳಸಿ ತಯಾರಾದ ಉತ್ಪನ್ನಗಳನ್ನು ನಾವು ಬಳಸುತ್ತಿದ್ದೇವೆ ಎಂದರು.

ವಾರಸುದಾರರು ಇಲ್ಲದೇ ರಸ್ತೆಯಲ್ಲಿ ಅಥವಾ ಅರಣ್ಯ ಪ್ರದೇಶದಲ್ಲಿ ಅನಾಥವಾಗಿ ಇರುವ ಗೋವುಗಳು ಕಂಡುಬಂದರೆ ಅವುಗಳನ್ನು ಗೋ ಶಾಲೆಗೆ ತಂದು ಸೇರಿಸಬಹುದು ಎಂದು ಅವರು ಹೇಳಿದರು.

ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿ ಕಾಳಪ್ಪ, ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷರಾದ ಡೀನ್ ಬೋಪಣ್ಣ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಕೆ.ಪ್ರಸನ್ನ, ತಹಶೀಲ್ದಾರ್ ಮಹೇಶ್. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಆರ್.ಜಿ.ಸಚಿನ್, ಸಂಘ ಸಂಸ್ಥೆಯ ಮುಖಂಡರು ಇತರರು ಇದ್ದರು.

error: Content is protected !!