‘ವೈದ್ಯ ಕಂಡ ವಿಸ್ಮಯ’…
ಕೊಡಗಿನ ಹೆಸರಾಂತ ವೈದ್ಯರಾದ ಡಾ.ಕೆ.ಬಿ ಸೂರ್ಯಕುಮಾರ್ ಅವರ “ವೈದ್ಯ ಕಂಡ ವಿಸ್ಮಯ” ಕುರಿತು ಒಂದಿಷ್ಟು…
ಇತ್ತೀಚೆಗೆ ನನ್ನನ್ನು ಅಸಿಡಿಟಿ ಸಮಸ್ಯೆ ಭಾದಿಸುತ್ತಿದೆ.ಅಸಿಡಿಟಿ ಎನ್ನುವ ಖಾಯಿಲೆ ನನ್ನನ್ನು ಆವರಿಸಿಕೊಳ್ಳಲು ಸಹಾಯಕವಾಗುವಂತೆ ಈ ಮೊದಲೇ ನನಗೆ ಬೇರೆ ಖಾಯಿಲೆಗಳಿದ್ದವು. ಅವು ನನ್ನ ಅತಿಯಾದ ಸಂಘಟನೆ ಕೆಲಸಗಳು. ಸಂಘಟನೆಗಾಗಿ ಜಿಲ್ಲೆಯಾದ್ಯಂತ ಸುತ್ತಾಡುವ ನಾನು ಬಹಳಷ್ಟು ದಿನ ಉಪವಾಸವಿದ್ದ ಉದಾಹರಣೆಗಳಿವೆ. ಇದೇ ನನ್ನ ಅಸಿಡಿಟಿ ಸಮಸ್ಯೆಗೆ ಕಾರಣ.
ಒಂದೆರಡು ತಿಂಗಳಿನಿಂದ ಈ ಸಮಸ್ಯೆ ನನ್ನನ್ನು ಬಹಳಷ್ಟು ಭಾದಿಸುತ್ತಿದ್ದು ನಾನು ಮನೆಯವರಲ್ಲಿ ಹೇಳಿಕೊಂಡಿರಲಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ತೊಂದರೆಯಾದರೂ ಮನೆಯವರೊಂದಿಗೆ ಹೇಳಿಕೊಳ್ಳುವ ರೂಢಿ ಮೊದಲಿನಿಂದಲೂ ನನಗೆ ಇಲ್ಲ.ಆದರೆ ಈ ಬಾರಿ ಹೀಗಾಗಲಿಲ್ಲ. ಮನೆಯ ಎಲ್ಲಾ ಸದಸ್ಯರೊಂದಿಗೆ ಕುಳಿತಿಕೊಂಡು ನನಗೇನೋ ಆಗಿದೆಯೆಂದು ಗಂಭೀರ ಚರ್ಚೆಗೆ ಕುಳಿತುಕೊಳ್ಳುವವರೆಗೂ ತಂದಿಟ್ಟುಬಿಟ್ಟಿತ್ತು. ಮನೆಯ ಎಲ್ಲಾ ಸದಸ್ಯರು ಒಬ್ಬೊಬ್ಬ ವೈದ್ಯರ ಹೆಸರನ್ನು ಹೇಳುತ್ತಾ ಅವರಿಂದ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಆದರೆ ನನ್ನ ತಂದೆಯ ಬಾಯಲ್ಲಿ ಬಂದ ಹೆಸರು ಹಿರಿಯ ವೈದ್ಯರು ಮತ್ತು ವಿಧಿವಿಜ್ಞಾನ ತಜ್ಞರಾದ ಡಾ.ಕೆ.ಬಿ.ಸೂರ್ಯಕುಮಾರ್ ಅವರದ್ದು.
ನಡೆದೇ ಬಿಡಲಿ ಚಿಕಿತ್ಸೆಯೆಂದು ಎರಡು ವಾರಗಳ ಹಿಂದೆ ಡಾ.ಸೂರ್ಯಕುಮಾರ್ ಅವರನ್ನು ಭೇಟಿಯಾದೆ. ಚಿಕಿತ್ಸೆಯೂ ಪಡೆದುಕೊಂಡೆ. ಚಿಕಿತ್ಸೆ ನಂತರ ಮಾತು ಮುಂದುವರೆಸುತ್ತಾ ನಾನು ಹಾಗು ರಂಜಿತ್ ಕವಲಪಾರ ಆತ್ಮೀಯ ಸ್ನೇಹಿತರು ಹಾಗೂ ನಿಮ್ಮ ಪುಸ್ತಕದ ಬಗ್ಗೆ ಆತ ಬರೆದ ಅಭಿಪ್ರಾಯವನ್ನು ಓದಿದ್ದೇನೆಂದು ಪೀಠಿಕೆ ಹಾಕಿದೆ. ಆದರೆ ಆ ಪುಸ್ತಕ ಎಲ್ಲಿ ಲಭ್ಯವಿದೆಯೆಂದು ನನಗೆ ತಿಳಿದಿಲ್ಲವೆಂದು ಅವರಲ್ಲಿ ಹೇಳಿದೆ. ಆಗವರು ಕಣ್ಣಲ್ಲೇ ಸನ್ನೆ ಮಾಡಿ, ನನ್ನ ಪಕ್ಕದಲ್ಲೇ ನನ್ನ ಎತ್ತರಕ್ಕೆ ಜೋಡಿಸಲಾಗಿದ್ದ ಪುಸ್ತಕದ ಅಟ್ಟಿಯಿಂದ ಒಂದನ್ನು ನನಗೆ ತೆಗೆದುಕೊಟ್ಟರು. ಡಾಕ್ಟರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟೆ. ಬಾಗಿಲ ಬಳಿ ಬರುವಷ್ಟರಲ್ಲಿ ಅವರು ಮತ್ತೆ ಕರೆದರು. ಓದಲು ಪುಸ್ತಕ ದೊರೆತರೆ ಎಲ್ಲವನ್ನು ಮರೆತುಬಿಡುತ್ತೀರಾ ಎಂಬ ಪ್ರಶ್ನೆ ಹಾಕಿ ನಾನು ತೆಗೆದುಕೊಳ್ಳಬೇಕಾದ ಔಷಧಿಗಳ ಚೀಟಿಯನ್ನು ಕೊಟ್ಟರು.ಔಷಧಿಗಳ ಚೀಟಿ ಮತ್ತು ಪುಸ್ತಕವನ್ನು ತೆಗೆದುಕೊಂಡು ನಾನು ಹೊರಟೆ .
ಈ ಘಟನೆಯಾಗಿ ಸು.ಹದಿನೈದು ದಿನಗಳಾಗಿದೆ. ಇವರ ಚಿಕಿತ್ಸೆಯಿಂದ ನನ್ನ ಅಸಿಡಿಟಿ ಸಮಸ್ಯೆ ಸಂಪೂರ್ಣ ಮಾಯವಾಗಿದೆಯಾದರೂ ಪುಸ್ತಕ ಓದಲು ಸಮಯವಾಗಿರಲಿಲ್ಲ.ಈಗೀಗ ನಾನು ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಂಡಿರುವುದರಿಂದ “ವೈದ್ಯ ಕಂಡ ವಿಸ್ಮಯ” ಕೊಳ್ಳುವ ಮೊದಲೇ ಖರೀದಿಸಿದ ಪುಸ್ತಕ ಓದಲು ಇದ್ದುದ್ದರಿಂದ ಮೊದಲು ಅದನ್ನು ಓದಿಮುಗಿಸುವ ಯೋಚನೆ ನನ್ನದಾಗಿತ್ತು.
ಇಂದು ಇದನ್ನು ಸಂಪೂರ್ಣವಾಗಿ ಒಂದೇ ಸಿಟ್ಟಿಂಗ್ ನಲ್ಲಿ ಓದಿಮುಗಿಸಿ ಅಭಿಪ್ರಾಯವನ್ನು ಬರೆಯುತ್ತಿದ್ದೇನೆ.ಕೆ.ಬಿ .ಸೂರ್ಯ ಕುಮಾರ್ ಅವರಿಗೆ ಈ ಮೊದಲೇ ನಾನು ರೋಗಿಯಾಗಿ ಭೇಟಿಯಾಗಿದ್ದೆನಾದರೂ ಅವರ ಇತರ ವಿವರಗಳು ನನಗೆ ತಿಳಿದಿರಲಿಲ್ಲ.ಆದರೆ ಈ ಪುಸ್ತಕದಲ್ಲಿ ಅವರ ವೈದ್ಯ ಜಗತ್ತಿನಲ್ಲಿ ನಡೆದ ಹಲವಾರು ರೋಚಕ ಕಥೆಗಳೊಂದಿಗೆ ಅವರೊಳಗೊಬ್ಬ ಸಾಹಿತಿ ಇದ್ದಾನೆಂದು ತಿಳಿದುಬರುತ್ತದೆ.ಇಲ್ಲಿ ಬರುವ ಎಲ್ಲಾ ಕಥಾ ಸಂಗ್ರಹಗಳು ಬರೀ ಕಥೆಯಾಗದೇ ಇತಿಹಾಸದ ಕೆಲವು ಪುಟಗಳನ್ನು ನಮ್ಮ ನಿಮ್ಮ ಮುಂದೆ ತೆರೆದಿಡುತ್ತದೆ.ನಾವು ಮಾಡುವ ವೃತ್ತಿಯೊಂದಿಗೆ ಸಾಹಿತ್ಯವನ್ನು ಹವ್ಯಾಸವನ್ನಿಟ್ಟುಕೊಳ್ಳುವುದು ಬಹಳಾ ಉತ್ತಮ ಬೆಳವಣಿಗೆ.(ವೈದ್ಯ ವೃತ್ತಿಯನ್ನು ತ್ಯಜಿಸಿ ಸಂಪೂರ್ಣವಾಗಿ ಸಾಹಿತಿಯಾದ ಡಾ.ಹೆಚ್ .ಎಸ್ ಅನುಪಮಾ ಅವರನ್ನು ನೋಡಿದ್ದೇನೆ.)ಸು.ಇಪ್ಪತ್ತೈದು ಕಥಾಸಂಗ್ರಹಗಳನ್ನು ಓದಿದ ಮೇಲೆ ಅವರ ಭಾಷೆಯ ಮೇಲಿನ ಹಿಡಿತ, ಕಥೆಯನ್ನು ವಿವರಿಸಿದ ರೀತಿ ನೋಡಿದರೆ ಎಂತವರಿಗೂ ಇದು ಅವರ ಮೊದಲ ಕೃತಿ ಎಂದೆನಿಸುವುದಿಲ್ಲ.ನನಗೂ ಕೂಡಾ.
ಏನೇ ಇರಲಿ ,ಇಂದಿನ ನನ್ನ ದಿನದೊಂದಿಗೆ ಜೊತೆಯಾಗಿದ್ದ “ವೈದ್ಯ ಕಂಡ ವಿಸ್ಮಯ” ಕ್ಕೆ ಮತ್ತು ಧನ್ಯವಾದಗಳು.ಅವರಿಂದ ಇನ್ನಷ್ಟೂ ಕೃತಿಗಳು ಮೂಡಿ ಬರಲೆಂಬ ಆಶಯದೊಂದಿಗೆ …
ದೀಪಕ್ ಪೊನ್ನಪ್ಪ