May 20, 2021

ರವಿ ಬೆಳಗೆರೆ ಅವರ ‘ನೀ ಹಿಂಗ ನೋಡಬ್ಯಾಡ ನನ್ನ’ ಪುಸ್ತಕದ ವಿಮರ್ಶೆ

ರವಿ ಬೆಳಗೆರೆಯವರ “ಹೇಳಿ ಹೋಗು ಕಾರಣ” ಕಾದಂಬರಿಯನ್ನು ಸತತ 8 ಬಾರಿ ಓದಿಕೊಂಡಿದ್ದೆ. ಅಸಲಿಗೆ ಆ ಕಥೆಯನ್ನು ನಾನು ಓದಿದ್ದಲ್ಲ, ರವಿಯವರ‌ ಅಕ್ಷರ ನನ್ನನ್ನು ಓದಿಸಿದ್ದು! ಎಂದರೆ ತಪ್ಪಾಗಲಾರದು. ಅದರಂತೆಯೇ ಓದುಗರನ್ನು ಕಥೆಯಲ್ಲಿ‌ ತಲ್ಲೀನನಾಗಿಸುವ ಮತ್ತೊಂದು ಕಥೆಯೇ “ನೀ ಹೀಂಗ ನೋಡಬ್ಯಾಡ ನನ್ನ” .

‘ಹಾರ್ಡಿ ಜೇಮ್ಸ್‌ ‘ಕಾಲೇಜಿನಿಂದ ಶುರುವಾಗಿ ‘ಸೀಜರ್ಸ್ ಕ್ಯಾಸಲ್’ ಹೋಟೆಲ್ನ ಒಂಭತ್ತನೇ ಮಹಡಿಯಲ್ಲಿ ನಾಯಕ ಶಿಶಿರ ಚಂದ್ರ ಮತ್ತು ನಾಯಕಿ ಶ್ರಾವಣಿ ಒಂದಾಗುವವರೆಗೂ‌ ಓದುಗರ‌ ಮನಸ್ಸು ವಿಚಲಿತರಾಗದಂತೆ ರವಿಯವರು ಕಥೆಯನ್ನು ಚನ್ನಾಗಿ ಪೋಣಿಸಿದ್ದಾರೆ.ಒಬ್ಬ ಚ್ಯೈನ್ ಸ್ನಾಚರ್ ಮನಸ್ಸಿನಲ್ಲಿ ಪ್ರೀತಿ ಎಂಬ ಬಯಕೆ ಮೂಡಿದಾಗ ಅವನ ಜೀವನದಲ್ಲಿ ಆಗಬಹುದಾದ ಬದಲಾವಣೆಯನ್ನು ಮತ್ತು ಆ ಪ್ರೀತಿಯ ಗಳಿಕೆಗಾಗಿ ಅವನು ಬೆಳೆಸುವ ಪ್ರಯಾಣವನ್ನು ಭಾವಪೂರ್ಣವಾಗಿ ವ್ಯಕ್ತಪಡಿಸಿದ್ದಾರೆ.

“ಪವರ್ ಟವರ್ಸ್” ಕಂಪನಿಯನ್ನು ಕಟ್ಟಿ ಬೆಳೆಸಲು ಜಗನ್ ಮೋಹನ್ರ ಪರಿಶ್ರಮ ಹಾಗು ವ್ಯವಹಾರದಲ್ಲಿನ ಎದುರಾಳಿಗಳನ್ನು ಆತ ಎದುರಿಸುತ್ತಿದ್ದ ರೀತಿ, ಆತನ‌ ಪತ್ನಿ ಮೃಣಾಲಿನಿ ಹಾಗು ಪ್ರೇಯಸಿ ಶರ್ಮಿಳೆಯರ ಪಾತ್ರ ಎಲ್ಲವೂ ಚನ್ನಾಗಿ ಮೂಡಿ ಬಂದಿದೆ.
ಮೃಣಾಲಿನಿ ಅಸಲಿಗೆ ಜಗನ್ ಮೋಹನ್ ರ ಮಡದಿಯಾದರೂ ಅವನ ವ್ಯವಹಾರದಲ್ಲಿ ಪ್ರತಿ ಹೆಜ್ಜೆಗು ಜೊತೆಯಾಗಿ ನಿತ್ತು “ಪವರ್ ಟವರ್ಸ್ ಎನ್ನುವ ಸಾಮ್ರಾಜ್ಯ ಎದ್ದುನಿಲ್ಲಲು ಕಾರಣಕರ್ತೆಯಾದವಳು ಶರ್ಮಿಳೆ .
ಏಕೆಂದರೆ ಮೃಣಾಲಿನಿಗೆ ನೈಜ ಗಂಡನ ಸ್ಥಾನ ನೀಡಿ ಶ್ರಾವಣಿಯ ಜನ್ಮಕ್ಕೆ ಕಾರಣನಾದವನು ಚಂದ್ರ ಬಾಬು ನಾಯ್ಡು.ಅದು ತಿಳಿದಿದ್ದರಿಂದಲೇ ಶ್ರಾವಣಿ ಜನಿಸಿದ‌ ದಿನವೇ ಜಗನ್ಮೋಹನ್ ಚಂದ್ರಬಾಬುನಾಯ್ಡುವಿ‌ನ ಕೊಲೆ ಮಾಡಿಸಿದ್ದು.
ಅನಂತರವೇ ಸಿಕ್ಕಿದ್ದು ಹಳೆಯ ಪ್ರಿಯತಮ ಗಿರಿಬಾಬು ,ತಂದೆಯಿಲ್ಲದ ಶ್ರಾವಣಿಗೆ ತಂದೆಯಾಗಿದ್ದು,ಪ್ರೀತಿ ನೀಡಿ ಸಾಕಿ ಸಲಹಿದ್ದು,
ದೇವತೆಗಳು ಮಾತ್ರ ಕುಡಿಯುವಂತ ಕಾಫಿ ಮಾಡಿ ಕುಡಿಸಿದ್ದು.

ಗಿರಿಬಾಬುವಿಗೆ ಪವರ್ ಟವರ್ಸ್ನ ಒಡೆಯನಾಗಬೇಕೆಂಬ ಆಸೆ ಮೂಡಿದಾಗಿನಿಂದಲೇ ಜಗನ್ ಮೋಹನ್ನ ಕ್ಷಣಗಣನೆ ಪ್ರಾರಂಭವಾಗಿದ್ದು ,ಚಂಗಳರಾಯ್ಡುವಿನಿಂದ ಕೊಲೆ ಮಾಡಿಸಿ ಆತ‌ ಹೆಣೆದ ಬಲೆಗೆ ಶಿಶಿರಚಂದ್ರ ಸಿಕ್ಕಿ ಜೈಲುಪಾಲಾಗಿದ್ದು, ಆದರೆ ತಾನು ನಿರಪರಾಧಿ ಎಂದು ಸಾಬೀತು ಮಾಡಲು ತಾನೇ ನ್ಯಾಯಾಲಯದಲ್ಲಿ ವಾದ ಮಾಡಿ ಗೆದ್ದಾಗ‌ ಇಡೀ ಹಾರ್ಡಿ ಜೇಮ್ಸ್ ಕಾಲೇಜೇ ಸಂಭ್ರಮಿಸಿತ್ತು.ಅವನಿಗೆ ಸಹಾಯ ಮಾಡಿದವನು ಆತನ ಬೆಟ್ಟಿಂಗ್ ಗೆಳೆಯ ಚಿರಂತ್.ಅಸಲಿಗೆ ಚಿರಂತ್ನೊಂದಿಗೆ 3ವರ್ಷದಲ್ಲಿ ಶ್ರಾವಣಿಯನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿಕೊಳ್ಳುತ್ತೀನೆಂದು ಬೆಟ್ ಕಟ್ಟದೇಹೋಗಿದ್ದರೆ ಈ ಕಥೆ ಹುಟ್ಟಿಕೊಳ್ಳುತ್ತಿರಲಿಲ್ಲ.

ಹಾಗೆಯೇ ಶಿಶಿರಚಂದ್ರನ ತಾಯಿ ಪ್ರಶಾಂತನಿ, ಗೋಮತಿ , ವಳ್ಳಿ. ಫಾದರ್ ದೈವಸಹಾಯಂ ಎಲ್ಲರೂ ಅವರವರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಈ ಕಥೆಯಲ್ಲಿ ಪ್ರೇಮ ,ಕಾಮ, ದ್ವೇಷ, ಅದಕ್ಕಿಂತ ಹೆಚ್ಚಾಗಿ ಮಾನವ ಸಂಭಂದಗಳ ನಡುವಿನ ರಾಜಕೀಯವನ್ನು ನಾವಿಲ್ಲಿ ಕಾಣಬಹುದು.
ಕಥೆಯನ್ನು ಓದುತ್ತಾ ಓದುತ್ತಾ ನನ್ನೊಳಗಿನ ಶಿಶಿರಚಂದ್ರ ಕಂಡನಾದರೂ ಶ್ರಾವಣಿಯಂತಹ ಟಫ್ ಗರ್ಲ್ ನನ್ನ ಬದುಕಿನಲ್ಲಿನ್ನೂ ಕಾಲಿಟ್ಟಿಲ್ಲ.
ಸಾಹಿತ್ಯ ಲೋಕದಲ್ಲಿ ಪ್ರತಿಯೊಬ್ಬರೂ ಬೆಳಗೆರೆಯವರ ಕಥೆ ಕಾದಂಬರಿಯನ್ನು ಓದದೇ ಮುಂದುವರಿಯುವುದು ಸಾಧ್ಯವಿಲ್ಲವಾದರೂ ಓದದಿರುವವರು ಓದಬೇಕೆಂಬುದೇ ನನ್ನ ವಿಮರ್ಶೆಯ ಆಶಯ.

ದೀಪಕ್ ಪೊನ್ನಪ್ಪ, ಹವ್ಯಾಸಿ ಬರಹಗಾರರು
error: Content is protected !!