ಕೊಡಗಿನಲ್ಲಿ ಯಾವ ಪುರುಷಾರ್ತಕ್ಕೆ ಹೆಲಿ ಟೂರಿಸಂ!
ಕೊಡಗಿನಲ್ಲಿ ನೆಟ್ಟಗೆ ರೈಲು ಸಂಪರ್ಕವಿಲ್ಲ, ವಿಮಾನಯಾನದ ಸೌಲಭ್ಯವಿಲ್ಲ, ಹೋಗಲಿ ಕೊನೆ ಪಕ್ಷ, ಸರಿಯಾದ ಜೀವ ಉಳಿಸುವ ಆಸ್ಪತ್ರೆ ಇದೆಯಾ? ಅದೂ ಇಲ್ಲ. ಹೀಗಿರುವಾಗ ಜಿಲ್ಲಾಡಳಿತವು ಪ್ರವಾಸೋದ್ಯಮದ ಆಚರಣೆಗೆ ಹೆಲಿ ಟೂರಿಸಂ ಮಾಡಲು ‘ತುಂಬೈ ಆವಿಯೇಶನ್ ಪೈ.ಲಿಮಿಟೆಡ್’ ಎಂಬ ಖಾಸಗಿ ಕಂಪೆನಿಗೆ ಅನುಮತಿ ನೀಡಿದೆ.
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ, ಜಿಲ್ಲೆಯ ಜನ ಯಾರಾದರೂ ಸಾಯುವ ಸ್ಥಿತಿಯಲ್ಲಿ ಇದ್ದರೆ, ಅವರನ್ನು ಬದುಕಿಸಲು ಒಂದು ಸುಸಜ್ಜಿತ ಸೂಪರ್ ಸ್ಪಷಾಲಿಟಿ ಆಸ್ಪತ್ರೆ ಇಲ್ಲ. ಆದರೂ ಪ್ರವಾಸೋದ್ಯಮದ ಅಭಿವೃದ್ಧಿ ಹೆಸರಿನಲ್ಲಿ ಹೆಲಿ ಟೂರಿಸಂ ವಿಚಾರದಲ್ಲಿ ಕೊಡಗಿನ ಜನ ಬಾಯಿ ಮುಚ್ಚಿಕೊಂಡಿದ್ದಾರೆ. ಯಾರೋ ಸಿರಿವಂತ ಪ್ರವಾಸಿಗ ಬೇರೆಡೆಯಿಂದ ಬಂದು ಮೋಜು ಮಾಡಲು, ಯಾವುದೋ ಖಾಸಗಿ ಕಂಪೆನಿ ಬಂದು ಇಲ್ಲಿ ಹೆಲಿ ಟೂರಿಸಂ ನಡೆಸಿ ಹಣ ಮಾಡಲು ಬಂದಿದೆ. ನಾವು ಆ ಹೆಲಿಕಾಪ್ಟರ್ ಹಾರಾಟವನ್ನು ನೋಡಿಕೊಂಡು ಆನಂದಿಸುತ್ತಿದ್ದೇವೆ. ‘ಅಹಾ… ಏನು ಚಂದ’ ಎಂದು.ಕೊಡಗಿನ ವನ್ಯ ಜೀವಿ ಸಂಕುಲಕ್ಕೆ ಶಬ್ದ ಮಾಲಿನ್ಯವಾಗುತ್ತಿದೆ
ಹೆಲಿ ಟೂರಿಸಂ ಅಲ್ಲಿ ಹೆಲಿಕಾಪ್ಟರ್ ರೈಡ್ ಮಾಡುತ್ತಿರುವವರೆಲ್ಲಾ ಬಹುತೇಕ ಸ್ಥಿತಿವಂತರೇ. ಅದು ಬಿಡಿ ಜಿಲ್ಲಾಡಳಿತ ಖಾಸಗಿ ಕಂಪೆನಿಗೆ ಪ್ರವಾಸೋದ್ಯಮದ ಹೆಚ್ಚಿನ ಆಕರ್ಷಣೆಗಾಗಿ ಈ ಅನುಮತಿ ನೀಡಿತು ಎಂದು ಕೆಲವರು ವಾದಿಸುತ್ತಾರೆ ಅದನ್ನು ಒಪ್ಪಿಕೊಳ್ಳೋಣ. ಆದರೆ ಅದನ್ನು ಕ್ರೀಡಾಪಟುಗಳು ತಾಲೀಮು ನಡೆಸುವ ಕ್ರೀಡಾಂಗಣದಲ್ಲೇ ಏಕೆ ನಡೆಸಲು ಒಪ್ಪಿಗೆ ನೀಡಿರುವುದು? ಸ್ಟೋನ್ ಹಿಲ್ ಅಲ್ಲಿ ಮಾಡಬಹುದಿತ್ತು ಅಥವಾ ಸಿರಿವಂತರು ಆಡುವ ಗಾಲ್ಫ್ ಮೈದಾನದಲ್ಲಿ ನಡೆಸಬಹುದಿತ್ತು. ರಾಜ್ಯದಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಅಗ್ರ ಸಾಧನೆ ಮಾಡಿರುವ ಕೊಡಗು ಜಿಲ್ಲೆಯ ಕ್ರೀಡಾಪಟುಗಳ ಕುರಿತು ಜಿಲ್ಲಾಡಳಿತಕ್ಕೆ ಇರುವ ಕಾಳಜಿ ಇಷ್ಟೇನಾ?
ಒಟ್ಟಿನಲ್ಲಿ 23, ಡಿಸೆಂಬರ್ 2020ರಿಂದ 2 ಜನವರಿ 2021 ತನಕ ನಡೆಯುತ್ತಿರುವ ಈ ಶ್ರೀಮಂತರ ಟೂರಿಸಂ ಆಯಾಮವನ್ನು ನೋಡುತ್ತಾ ಹುಬ್ಬೇರಿಸುವುದು ಮಾತ್ರವೇ ಕೊಡಗಿನ ಜನರ ಪಾಲಿನದ್ದಾಗಿದೆ. ಅಚ್ಚರಿಯಿಂದ ಹೆಲಿಕಾಪ್ಟರ್ ಓಡಾಟವನ್ನು ನೋಡಬಹುದು. ಕಿರಿಕಿರಿ ಅನ್ನಿಸಿದರೆ, ಅದರ ಸದ್ದು ಕೇಳದಂತೆ ಕಿವಿಗೆ ಹತ್ತಿ ಇಟ್ಟುಕೊಳ್ಳಬಹುದು. ಕ್ರೀಡಾಪಟುಗಳು ಶ್ರೀಮಂತರ ಈ ಆಡಂಬರದ ಪ್ರವಾಸೋದ್ಯಮವನ್ನು ನೋಡುತ್ತಾ ಜಿಲ್ಲಾಡಳಿತ ಕ್ರೀಡಾ ಕ್ಷೇತ್ರವನ್ನು ನಿರ್ಲಕ್ಷಿಸುವ ಪರಿಯನ್ನು ಅರಿಯಬಹುದಾಗಿದೆ.